ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಮಾಜಿ ಸಚಿವರೂ ಆಗಿದ್ದ ದಿವಂಗತ ಜಿ.ಪುಟ್ಟಸ್ವಾಮಿ ಗೌಡರ ಮೊಮ್ಮಕ್ಕಳ ನಡುವೆ ಭಾರೀ ಸಮರವೇ ನಡೆದಿದೆ.
ಎಚ್.ಟಿ.ಮೋಹನ್ ಕುಮಾರ್
ಹಾಸನ (ಏ.18): ರಾಜ್ಯ ರಾಜಕಾರಣದ ಜಿದ್ದಾಜಿದ್ದಿನ ಕ್ಷೇತ್ರಗಳ ಪೈಕಿ ಹಾಸನ ಜಿಲ್ಲೆ ಕೂಡ ಒಂದು. ಸದಾ ಸುದ್ದಿಯಲ್ಲಿರುವ ಈ ಜಿಲ್ಲೆಯಲ್ಲಿ ಮೊಮ್ಮಕ್ಕಳ ರಾಜಕೀಯ ಶುರುವಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಮಾಜಿ ಸಚಿವರೂ ಆಗಿದ್ದ ದಿವಂಗತ ಜಿ.ಪುಟ್ಟಸ್ವಾಮಿ ಗೌಡರ ಮೊಮ್ಮಕ್ಕಳ ನಡುವೆ ಭಾರೀ ಸಮರವೇ ನಡೆದಿದೆ. ಹಾಲಿ ಲೋಕಸಭಾ ಸದಸ್ಯ, ದೇವೇಗೌಡರ ಮೊಮ್ಮಗ, ಪ್ರಜ್ವಲ್ ರೇವಣ್ಣ ಅವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ.
ಸಾಲದ್ದಕ್ಕೆ ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದೊಂದಿಗೆ ಮೈತ್ರಿ ಮಾಡಿಕೊಂಡು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಹಾಗೆಯೇ ತಮ್ಮ ತಾತನ ಕಾಲದ ಗತವೈಭವವನ್ನು ಮರುಕಳಿಸಲು ಕಾಂಗ್ರೆಸ್ ಅಭ್ಯರ್ಥಿಯಾಗಿ ಪುಟ್ಟಸ್ವಾಮಿಗೌಡರ ಮೊಮ್ಮಗನಾದ ಶ್ರೇಯಸ್ ಪಟೇಲ್ ಕೂಡ ರಣಕಣದಲ್ಲಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ-ಜೆಡಿಎಸ್ -ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಇರು ತ್ತಿತ್ತು. ಆದರೆ, ಈ ಬಾರಿ ಕಾಂಗ್ರೆಸ್ ಹಾಗೂ ಎನ್‌ಡಿಎ ಮೈತ್ರಿ ಅಭ್ಯರ್ಥಿಗಳ ನಡುವೆ ಮಾತ್ರ ವೇ ನೇರ ಹಣಾಹಣಿ ಇದೆ.
ಏ.23, 24ಕ್ಕೆ ರಾಜ್ಯಕ್ಕೆ ಶಾ, ಯೋಗಿ ಆಗಮನ: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಬೃಹತ್ ಸಮಾವೇಶ
ಪ್ರಚಾರದ ಅಬ್ಬರ: ಎರಡೂ ಅಭ್ಯರ್ಥಿಗಳು ಅಬ್ಬರದ ಪ್ರಚಾರದಲ್ಲಿ ತೊಡಗಿವೆ. ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಈಗಾಗಲೇ ಒಮ್ಮೆ ಸಂಸದರಾಗಿದ್ದಾರೆ. ಈ ಬಾರಿಯೂ ತಮ್ಮ ಯಥಾಸ್ಥಿತಿ ಕಾಪಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಪ್ರಜ್ವಲ್ ಪರ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಸೇರಿ ಜೆಡಿಎಸ್ ನಾಯಕರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಜೊತೆಗೆ, ಮೋದಿಯ ವರ್ಚಸ್ಸು, ಬಿಜೆಪಿಯ ಮೈತ್ರಿ ಇವರಿಗೆ ವರದಾನವಾಗುತ್ತಿದೆ. ಆದರೆ, ಬಿಜೆಪಿ ನಾಯಕ ಪ್ರೀತಂಗೌಡ ಜೊತೆಗಿನ ಮುನಿಸು ಸ್ವಲ್ಪ ಮಟ್ಟಿಗೆ ತೊಡಕಾಗುವ ಸಾಧ್ಯತೆಯಿದೆ.
ಇನ್ನು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಚ್.ಡಿ.ರೇವಣ್ಣ ಎದುರು ಕೇವಲ 2,380 ಮತಗಳ ಅಂತರದಲ್ಲಿ ಸೋತ ಶ್ರೇಯಸ್ ತಮ್ಮ ಮೇಲಿರುವ ಅನುಕಂಪದ ಲಾಭ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ ಜೊತೆಗೆ, ಈ ಹಿಂದೆ ಶಿವಲಿಂಗೆಗೌಡ ಜೆಡಿಎಸ್‌ನಲ್ಲಿದ್ದ ಕಾಂಗ್ರೆಸ್‌ನಲ್ಲಿದ್ದು ಇವರ ಬೆಂಬಲಕ್ಕೆ ನಿಂತಿದ್ದಾರೆ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ತಮ್ಮ ಈಗ ಗೆಲುವಿಗೆ ಸಹಕರಿಸುವ ಆಶಯ ಇವರದು.
ಕ್ಷೇತ್ರದ ಕಿರು ಪರಿಚಯ: ಜಿಲ್ಲೆಯ ರಾಜ ಕೀಯ ಇತಿಹಾಸದಲ್ಲಿ ಜೆಡಿಎಸ್‌ನದ್ದೇ ಪ್ರಾಬಲ್ಯ. ಒಂದು ಕಾಲಕ್ಕೆ ಎಚ್.ಡಿ.ದೇವೇ ಗೌಡರು ಹಾಗೂ ಪುಟ್ಟಸ್ವಾಮಿಗೌಡರು ಸ್ನೇಹಿತರೇ ಆಗಿ ದ್ದರು. ನಂತರದಲ್ಲಿ ರಾಜಕೀಯ ದ್ವೇಷಿಗಳಾ ದರು. ಹಾಗಾಗಿ, ದೇವೇಗೌಡರು ಕೂಡ ಒಮ್ಮೆ ಪುಟ್ಟಸ್ವಾಮಿಗೌಡರ ಮುಂದೆ ಸೋಲನ್ನು ಅನು ಭವಿಸಬೇಕಾಯಿತು. ಹಾಗಾಗಿ ಜಿಲ್ಲೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಎರಡೂ ಪಕ್ಷಗಳು ಸಂಸದ ಸ್ಥಾನದ ಅಧಿಕಾರ ಅನುಭವಿಸಿವೆ. ಆದರೆ, ಬಿಜೆಪಿಗೆ ಈವರೆಗೂ ತನ್ನ ಸಂಸದರನ್ನು ಲೋಕಸಭೆಗೆ ಕಳುಹಿಸಲಾಗಿಲ್ಲ.
ಪ್ರಜ್ವಲ್ ರೇವಣ್ಣ - ಜೆಡಿಎಸ್: ಬಹುತೇಕ ನಾಯಕರೆಲ್ಲಾ ಸ್ಥಳೀಯ ಸಂಸ್ಥೆಗಳ ಒಂದೊಂದೇ ಮೆಟ್ಟಿಲುಗಳನ್ನು ಹತ್ತಿ ಕಡೆಗೆ ಸಂಸತ್ ಮೆಟ್ಟಿಲು ಹತ್ತಿದವರು. ಆದರೆ, ಜೆಡಿಎಸ್ ಅಭ್ಯರ್ಥಿಯಾದ ಪ್ರಜ್ವಲ್ ನೇರ ಲೋಕಸಭೆಗೆ ಕಾಲಿಡುವ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದರು. ತಮ್ಮ ತಾತ, ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರ ರಾಜಕೀಯ ಪಟ್ಟುಗಳು ಹಾಗೂ ತಮ್ಮ ತಂದೆ ರೇವಣ್ಣ ಅವರ ಕಾರ್ಯಕ್ಷಮತೆ ಜತೆಗೆ ತಮ್ಮ ಇಡೀ ಕುಟುಂಬವೇ ರಾಜಕೀಯದಲ್ಲಿ ತಲ್ಲೀನವಾಗಿರುವುದರಿಂದ ಪ್ರಜ್ವಲ್‌ಗೆ ರಾಜಕೀಯ ಒಳ ಹೊರಗುಗಳನ್ನು ಅರಿಯಲು ಹೆಚ್ಚು ಸಮಯವೇನೂ ಬೇಕಾಗಲಿಲ್ಲ.
ಶ್ರೇಯಸ್ ಪಟೇಲ್, ಕಾಂಗ್ರೆಸ್: ಮಾಜಿ ಸಚಿವರು ಹಾಗೂ ಸಂಸದರೂ ಆಗಿದ್ದ ಜಿ. ಪುಟ್ಟಸ್ವಾಮಿಗೌಡರ ಮೊಮ್ಮಗನಾದ ಶ್ರೇಯಸ್ ಎಂ. ಪಟೇಲ್‌ಗೂ ರಾಜಕೀಯ ಹೊಸದೇನೂ ಅಲ್ಲ. ರಾಜಕೀಯ ಕುಟುಂಬದಿಂದಲೇ ಬಂದಿರುವ ಅವರು ಜಿಲ್ಲಾಪಂಚಾಯಿತಿ ಸದಸ್ಯರೂ ಆಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರದಲ್ಲಿ ಎಚ್.ಡಿ.ರೇವಣ್ಣ ಎದುರು 2,380 ಮತಗಳ ಅಂತರದಲ್ಲಿ ಸೋತರು. ಜಿಲ್ಲೆಯ ಜನರು ತಮ್ಮ ಹಾಗೂ ತಮ್ಮ ಕುಟುಂಬದ ಮೇಲೆ ಇನ್ನೂ ಇಷ್ಟೊಂದು ಭರವಸೆ ಇಟ್ಟಿದ್ದಾರೆ ಎನ್ನುವ ವಿಶ್ವಾಸದೊಂದಿಗೇ ಈ ಬಾರಿ ಲೋಕಸಭಾ ಚುನಾವಣೆಗೆ ಧುಮುಕಿದ್ದಾರೆ.
ಜಾತಿ-ಮತ ಲೆಕ್ಕಾಚಾರ: ಒಕ್ಕಲಿಗರು ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಹೊಂದಿದ್ದು, ಅಭ್ಯರ್ಥಿಯ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸ ಲಿದ್ದಾರೆ. ಒಕ್ಕಲಿಗರು 4.10 ಲಕ್ಷ, ಲಿಂಗಾಯಿತರು 2.90 ಲಕ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತದಾರರು 2.10 ಲಕ್ಷ ಕುರುಬರು 1.50 ಲಕ್ಷ ಮುಸ್ಲಿಮರು 1.20 ಲಕ್ಷ ಹಾಗೂ ಇತರರು ಸುಮಾರು 20 ಸಾವಿರದಷ್ಟಿದ್ದಾರೆ.
ಕೇಂದ್ರ ಸರ್ಕಾರ ಉದ್ಯಮಿಗಳಿಂದ ಹಫ್ತಾ ಸುಲಿಗೆ: ರಾಹುಲ್ ಗಾಂಧಿ ಗಂಭೀರ ಆರೋಪ
ಕ್ಷೇತ್ರದ ಮತದಾರರ ವಿವರ
ಪುರುಷರು 8,63,727
ಮಹಿಳೆಯರು 8,72,840
ಇತರರು 43
ಒಟ್ಟು 17,36,610