ಸಿದ್ದು ಸಂಪುಟ ಟೇಕಾಫ್‌ಗೆ ಸಿದ್ಧ: ಕ್ಲಿಷ್ಟವಾದ ಸವಾಲು ನಿಭಾಯಿಸಿದ ಸಿಎಂ..!

By Kannadaprabha NewsFirst Published May 30, 2023, 5:21 AM IST
Highlights

ಸಣ್ಣಪುಟ್ಟ ಬದಲಾವಣೆಯೊಂದಿಗೆ ಖಾತೆ ಹಂಚಿಕೆ ಪೂರ್ಣ, ಅಧಿಕಾರಕ್ಕೆ ಬಂದ ಹತ್ತೇ ದಿನದಲ್ಲಿ ಪರಿಪೂರ್ಣ ಸಚಿವ ಸಂಪುಟ ಅಸ್ತಿತ್ವಕ್ಕೆ, ರಾಮಲಿಂಗಾರೆಡ್ಡಿ ಮನವೊಲಿಕೆ, ಕರಡು ಖಾತೆ ಹಂಚಿಕೆ ಪಟ್ಟಿಯಲ್ಲಿ ಸಣ್ಣ ಬದಲಾವಣೆ ಮಾಡಿ ಅಂತಿಮಗೊಳಿಸಿದ ಸರ್ಕಾರ

ಬೆಂಗಳೂರು(ಮೇ.30): ನಿರೀಕ್ಷೆಯಂತೆ ಸಣ್ಣಪುಟ್ಟ ಬದಲಾವಣೆಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾತೆ ಹಂಚಿಕೆ ಪೂರ್ಣಗೊಳಿಸಿ ಎಲ್ಲ 34 ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಈ ಸಂಬಂಧ ರಾಜ್ಯಪತ್ರ ಪ್ರಕಟಗೊಂಡಿದೆ. ತನ್ಮೂಲಕ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಹತ್ತೇ ದಿನದಲ್ಲಿ ಪರಿಪೂರ್ಣ ಸಚಿವ ಸಂಪುಟ ರಚನೆ ಹಾಗೂ ಖಾತೆ ಹಂಚಿಕೆಯಂತಹ ಕ್ಲಿಷ್ಟ ಸವಾಲನ್ನು ನಿಭಾಯಿಸಿ ರಾಜ್ಯಾಡಳಿತದ ಟೇಕ್‌ ಆಫ್‌ಗೆ ವೇದಿಕೆ ಸಜ್ಜು ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 20ರಂದು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದರು. ಇದರ ಬೆನ್ನಲ್ಲೇ ಆರಂಭಗೊಂಡ ಸಚಿವ ಸಂಪುಟ ರಚನೆಯೆಂಬ ಕಗ್ಗಂಟನ್ನು ಬಗೆಹರಿಸಿ, ಖಾತೆ ಹಂಚಿಕೆಯನ್ನು ಪೂರ್ಣಗೊಳಿಸಿ ಚುನಾವಣೆ ವೇಳೆ ತಾನು ನೀಡಿದ್ದ ಐದು ಗ್ಯಾರಂಟಿಗಳ ಜಾರಿಗೆ ಪೂರ್ವಭಾವಿಯಾಗಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸುವುದರೊಂದಿಗೆ ಆಡಳಿತಕ್ಕೆ ತ್ವರಿತ ಚಾಲನೆ ನೀಡಿದರು.

ತಾಳ್ಮೆಯಿಂದ ಇರಿ, ಗ್ಯಾರಂಟಿ ಭರವಸೆ ಈಡೇರಿಸುತ್ತೇವೆ: ಲಕ್ಷ್ಮೀ ಹೆಬ್ಬಾಳ್ಕರ್

ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪರೋಕ್ಷವಾಗಿ ಬಿಡುಗಡೆ ಮಾಡಲಾಗಿದ್ದ ಕರಡು ಖಾತೆ ಹಂಚಿಕೆ ಪಟ್ಟಿಯಲ್ಲಿ ಕೆಲವೊಂದು ಬದಲಾವಣೆ ಮಾತ್ರ ಮಾಡಲಾಗಿದೆ. ಸಾರಿಗೆ ಇಲಾಖೆ ಬೇಡ ಎಂದು ಪಟ್ಟು ಹಿಡಿದಿದ್ದ ರಾಮಲಿಂಗಾ ರೆಡ್ಡಿ ಅವರ ಮನವೊಲಿಸಲಾಗಿದ್ದು, ಅವರಿಗೆ ಸಾರಿಗೆಯ ಜತೆಗೆ ಮುಜರಾಯಿ ಇಲಾಖೆಯನ್ನು ನೀಡಲಾಗಿದೆ. ಕರಡು ಪಟ್ಟಿಯಲ್ಲಿ ಆರ್‌.ಬಿ. ತಿಮ್ಮಾಪುರ ಬಳಿ ಮುಜರಾಯಿ ಇಲಾಖೆಯಿತ್ತು. ಈಗ ತಿಮ್ಮಾಪುರ ಅವರ ಬಳಿ ಅಬಕಾರಿ ಮಾತ್ರ ಉಳಿದುಕೊಂಡಂತೆ ಆಗಿದೆ.

ಡಿ. ಸುಧಾಕರ್‌ಗೆ ಹಂಚಿಕೆ ಮಾಡಲಾಗಿದ್ದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಎಂ.ಬಿ. ಪಾಟೀಲ್‌ಗೆ ನೀಡಲಾಗಿದ್ದ ಐಟಿ-ಬಿಟಿ ಇಲಾಖೆಗಳನ್ನು ಮುಖ್ಯಮಂತ್ರಿಗಳು ಹಣಕಾಸು ಹಾಗೂ ಡಿಪಿಎಆರ್‌ ಜತೆಗೆ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಇನ್ನು ಬಿ. ನಾಗೇಂದ್ರ ಅವರ ಬೇಡಿಕೆಯಂತೆ ಯುವಜನ ಮತ್ತು ಕ್ರೀಡೆಯ ಜತೆಗೆ ಶಿವರಾಜ ತಂಗಡಗಿ ಅವರ ಬಳಿಯಿದ್ದ ಪರಿಶಿಷ್ಟಪಂಗಡ ಕಲ್ಯಾಣ ಇಲಾಖೆಯ ಹೊಣೆಯನ್ನು ನೀಡಲಾಗಿದೆ. ನಾಗೇಂದ್ರ ಬಳಿಯಿದ್ದ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ತಂಗಡಗಿ ಅವರಿಗೆ ದಯಪಾಲಿಸಲಾಗಿದೆ. ಸಂತೋಷ್‌ ಲಾಡ್‌ ಬಳಿಯಿದ್ದ ಕೌಶಲ್ಯಾಭಿವೃದ್ಧಿಯನ್ನು ಡಾ. ಶರಣ ಪ್ರಕಾಶ ಪಾಟೀಲ್‌ ಅವರಿಗೆ ನೀಡಲಾಗಿದೆ. ಇಷ್ಟು ಬದಲಾವಣೆ ಹೊರತುಪಡಿಸಿದರೆ ಉಳಿದ ಎಲ್ಲ ಖಾತೆಗಳು ಕರಡು ಪಟ್ಟಿಯಂತೆಯೇ ಇದೆ.

click me!