ಸಚಿವರ ವಿರುದ್ಧ ಸಿಡಿದೆದ್ದ ಶಾಸಕರಿಗೆ ಸಿಎಂ ಸಿದ್ದು ‘ಸಾಂತ್ವನ’

Published : Jul 28, 2023, 04:46 AM IST
ಸಚಿವರ ವಿರುದ್ಧ ಸಿಡಿದೆದ್ದ ಶಾಸಕರಿಗೆ ಸಿಎಂ ಸಿದ್ದು ‘ಸಾಂತ್ವನ’

ಸಾರಾಂಶ

ಪತ್ರ ಬರೆಯುವ ಮೂಲಕ ಪಕ್ಷ ಹಾಗೂ ಸರ್ಕಾರಕ್ಕೆ ಹಾನಿಯಾಗುವಂತಾಗಿದೆ ಎಂದು ಮುಖ್ಯಮಂತ್ರಿಯವರು ಅಸಮಾಧಾನ ವ್ಯಕ್ತಪಡಿಸಿ, ಇನ್ನು ಯಾವತ್ತೂ ಇಂತಹ ಪತ್ರ ಬರೆಯದಂತೆ ಶಾಸಕರಿಗೆ ತಾಕೀತು ಮಾಡಿದ ಘಟನೆಯೂ ನಡೆದಿದೆ.

ಬೆಂಗಳೂರು (ಜು.28): ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊರತೆ ಹಾಗೂ ಸ್ಥಳೀಯ ವರ್ಗಾವಣೆಗಳಲ್ಲಿ ತಮ್ಮ ಶಿಫಾರಸಿಗೆ ಸಚಿವರು ಬೆಲೆ ನೀಡುತ್ತಿಲ್ಲ ಎಂಬ ಅಸಮಾಧಾನ ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಸ್ಫೋಟಗೊಂಡಿದ್ದು, ಇದರ ಬೆನ್ನಲ್ಲೇ ತಿಂಗಳಿಗೆ ಒಂದು ಜಿಲ್ಲಾವಾರು ಸಭೆ ಕರೆದು ಶಾಸಕರ ಸಮಸ್ಯೆಗಳನ್ನು ಖುದ್ದಾಗಿ ಬಗೆಹರಿಸುವಂತೆ ಮತ್ತು ಶಾಸಕರ ಶಿಫಾರಸುಗಳಿಗೆ ಮನ್ನಣೆ ನೀಡುವಂತೆ ಸಚಿವರಿಗೆ ತಾಕೀತು ಮಾಡುವ ಭರವಸೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರ ಅಸಮಾಧಾನವನ್ನು ಶಮನಗೊಳಿಸುವ ಪ್ರಯತ್ನ ಮಾಡಿದರು.

ಅಲ್ಲದೆ, ತಮ್ಮ ಎರಡು ಅವಧಿಯ ಅಧಿಕಾರಾವಧಿಯಲ್ಲಿ ಯಾವತ್ತೂ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಶಾಸಕರೇ ಪತ್ರ ಬರೆದ ಘಟನೆ ನಡೆದಿಲ್ಲ. ಸಮಸ್ಯೆಗಳಿದ್ದರೆ ನೇರವಾಗಿ ನನ್ನನ್ನು ಸಂಪರ್ಕಿಸಿ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಬಹುದಿತ್ತು. ಪತ್ರ ಬರೆಯುವ ಮೂಲಕ ಪಕ್ಷ ಹಾಗೂ ಸರ್ಕಾರಕ್ಕೆ ಹಾನಿಯಾಗುವಂತಾಗಿದೆ ಎಂದು ಮುಖ್ಯಮಂತ್ರಿಯವರು ಅಸಮಾಧಾನ ವ್ಯಕ್ತಪಡಿಸಿ, ಇನ್ನು ಯಾವತ್ತೂ ಇಂತಹ ಪತ್ರ ಬರೆಯದಂತೆ ಶಾಸಕರಿಗೆ ತಾಕೀತು ಮಾಡಿದ ಘಟನೆಯೂ ನಡೆದಿದೆ. ಇದಕ್ಕೆ ಪತ್ರ ಬರೆದ ಶಾಸಕರಾದ ಬಸವರಾಜ ರಾಯರೆಡ್ಡಿ ಹಾಗೂ ಬಿ.ಆರ್‌. ಪಾಟೀಲ್‌ ಅವರು, ಸಭೆಯ ಕ್ಷಮೆಯನ್ನು ಕೋರಿದ್ದು, ತಮ್ಮ ಅಳಲು ತೋಡಿಕೊಳ್ಳುವ ಸದುದ್ದೇಶದಿಂದಷ್ಟೇ ಪತ್ರ ಬರೆದಿದ್ದೆವು. 

ಕೇರಳ ಮಾದರಿಯಲ್ಲಿ ಗ್ರಾಪಂಗಳ ಅಭಿವೃದ್ಧಿ: ಶಾಸಕ ದರ್ಶನ್‌ ಪುಟ್ಟಣ್ಣಯ್ಯ

ಆದರೆ, ಪಿತೂರಿಕಾರರು ನಕಲಿ ಪತ್ರವೊಂದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ವಿಷಯ ದೊಡ್ಡದಾಗುವಂತೆ ಮಾಡಿದ್ದಾರೆ. ವಿಷಯ ಇಂತಹ ತಿರುವು ತೆಗೆದುಕೊಳ್ಳುತ್ತದೆ ಎಂಬ ಕಲ್ಪನೆಯಿರಲಿಲ್ಲ ಎಂದು ಸಮಜಾಯಿಷಿಯನ್ನು ನೀಡಿದರು ಎಂದು ತಿಳಿದುಬಂದಿದೆ. ಇದಕ್ಕೂ ಮುನ್ನ ಶಿವಲಿಂಗೇಗೌಡ, ಬಿ.ಆರ್‌. ಪಾಟೀಲ್‌, ವೀರೇಂದ್ರ (ಪಪ್ಪಿ), ವಿನಯ ಕುಲಕರ್ಣಿ ಹಾಗೂ ಶರತ್‌ ಬಚ್ಚೇಗೌಡ ಮೊದಲಾದ ಶಾಸಕರು ವರ್ಗಾವಣೆ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೆಲ ಇಲಾಖೆಯ ಸಚಿವರ ನಡವಳಿಕೆ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದರು. 

ಸಚಿವರು ಶಾಸಕರ ವರ್ಗಾವಣೆ ಶಿಫಾರಸು ಪತ್ರಗಳಿಗೆ ಬೆಲೆಯನ್ನೇ ನೀಡುತ್ತಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸಚಿವರೇ ನೇರವಾಗಿ ಕರೆಸಿಕೊಂಡು ವರ್ಗಾವಣೆ ಮಾಡುತ್ತಿದ್ದಾರೆ. ಹೀಗಾದರೆ ಶಾಸಕರು ಯಾಕೆ ಬೇಕು? ಎಂದು ಕಿಡಿಕಾರಿದರು. ಚಿತ್ರದುರ್ಗದ ವೀರೇಂದ್ರ ಪಪ್ಪಿ ಅವರಂತೂ, ಕಳೆದ ಚುನಾವಣೆಯಲ್ಲಿ ನಮ್ಮ ವಿರುದ್ಧ ಕೆಲಸ ಮಾಡಿದ ಅಧಿಕಾರಿಗಳನ್ನೇ ಮುಂದುವರೆಸಲಾಗಿದೆ. ಈ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಒತ್ತಾಯ ಮಾಡಿದರೂ ಸಚಿವರು ಕ್ಯಾರೆ ಎನ್ನುತ್ತಿಲ್ಲ. ಹೀಗಾದರೆ ಕ್ಷೇತ್ರದಲ್ಲಿ ಹೇಗೆ ಕೆಲಸ ಮಾಡಬೇಕು ಎಂದು ಪ್ರಶ್ನಿಸಿದರು ಎನ್ನಲಾಗಿದೆ.

ಕೋಪ ಶಮನಕ್ಕೆ ಸಿಎಂ ಯತ್ನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರ ಕೋಪ ಶಮನಗೊಳಿಸಲು ಯತ್ನಿಸಿದ್ದು, ಅನುದಾನ ಹಾಗೂ ವರ್ಗಾವಣೆ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸೋಣ. ಆದರೆ, ನೀವು ಯಾವುದೇ ಕಾರಣಕ್ಕೂ ಪತ್ರದ ಮೂಲಕ ಅಸಮಾಧಾನ ಹೊರಹಾಕಬೇಡಿ. ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ. ಪತ್ರ ವ್ಯವಹಾರ ಮಾಡಿದರೆ ನಾವೇ ಪ್ರತಿಪಕ್ಷಗಳಿಗೆ ಆಹಾರ ನೀಡಿದಂತಾಗುತ್ತದೆ ಎಂದು ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಕೆಲ ಶಾಸಕರು, ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಚುನಾವಣೆಗಳು ಸಮೀಪಿಸುತ್ತಿವೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಯಾವುದೇ ಅನುದಾನ ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ಕ್ಷೇತ್ರಗಳಿಗೆ ತ್ವರಿತವಾಗಿ ಅನುದಾನ ಬಿಡುಗಡೆ ಮಾಡಬೇಕು ಎಂದು ಕೋರಿದರು.

ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳಿಗಾಗಿಯೇ 58 ಸಾವಿರ ಕೋಟಿ ರು. ಮೀಸಲಿಡಬೇಕಾಯಿತು. ಹೀಗಾಗಿ ಅನುದಾನ ಹಂಚಿಕೆಯಲ್ಲಿ ಸ್ವಲ್ಪ ವ್ಯತ್ಯಾಸ ಆಗಿರಬಹುದು. ಎಲ್ಲವನ್ನೂ ಆದ್ಯತೆ ಮೇರೆಗೆ ಬಗೆಹರಿಸಲಾಗುವುದು. ಇನ್ನು ಸ್ಥಳೀಯ ವರ್ಗಾವಣೆಗಳನ್ನು ಶಾಸಕರ ಶಿಫಾರಸಿನಂತೆ ಮಾಡಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳ ವರ್ಗಾವಣೆ ಜಿಲ್ಲಾ ಉಸ್ತುವಾರಿ ಸಚಿವರ ಬೇಡಿಕೆಯಂತೆ ಆಗಬೇಕು. ಈ ವಿಚಾರದಲ್ಲಿ ಎಲ್ಲಾ ಸಚಿವರೂ ನಿಯಮ ಪಾಲಿಸಬೇಕು. ಜತೆಗೆ ಶಾಸಕರಿಗೆ ಗೌರವ ನೀಡಬೇಕು ಎಂದು ಸ್ಪಷ್ಟಪಡಿಸಿದರು.

ಸುಳ್ಳಿನ ಕಾರ್ಖಾನೆಗೆ ದಾಳವಾಗಬೇಡಿ: ಬಿಜೆಪಿ ಪರಿವಾರ ಸುಳ್ಳಿನ ಕಾರ್ಖಾನೆ. ಮೊದಲು ಸುಳ್ಳನ್ನು ಸೃಷ್ಟಿಸುತ್ತಾರೆ. ಬಳಿಕ ಆ ಸುಳ್ಳನ್ನು ತಮ್ಮ ಸುಳ್ಳಿನ ಪತಿವಾರದ ಮೂಲಕ ಹರಡಿಸುತ್ತಾರೆ. ಕೊನೆಗೆ ಅದೇ ಸುಳ್ಳಿನ ಮೇಲೆ ಮಾಧ್ಯಮಗಳಲ್ಲಿ ಚರ್ಚೆ ಆಗುವಂತೆ ಮಾಡುತ್ತಾರೆ. ಈ ಬಗ್ಗೆ ಎಚ್ಚರದಿಂದಿರಿ. ಸುಳ್ಳುಗಳಿಗೆ ದಾಳವಾಗದೆ ಜವಾಬ್ದಾರಿಯಿಂದ ವರ್ತಿಸಿ ಎಂದು ಸಿದ್ದರಾಮಯ್ಯ ಶಾಸಕರಿಗೆ ಎಚ್ಚರಿಸಿದರು. ಶಾಸಕರೊಬ್ಬರ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿ, ಸುದ್ದಿ ಮಾಡಿಸಿದ್ದು ಈ ಕುತಂತ್ರದ ಭಾಗವೇ ಆಗಿದೆ. ಈಗ ಶಾಸಕರೇ ಆ ಪತ್ರ ತಮ್ಮದಲ್ಲ ಎಂದು ಸ್ಪಷ್ಟನೆ ನೀಡಿದ್ದಾಗಿದೆ. ವಿಪರ್ಯಾಸ ಅಂದರೆ ಸತ್ಯ ಏನು ಎಂದು ಗೊತ್ತಾಗುವುದರೊಳಗೆ ಅವರು ಸುಳ್ಳನ್ನು ವ್ಯಾಪಕವಾಗಿ ಹರಿಡಿದ್ದಾರೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ.

ಬೆಳೆಹಾನಿ ವೈಜ್ಞಾನಿಕ ವರದಿ ಸಲ್ಲಿ​ಸಲು ಸೂಚನೆ: ಸಚಿ​ವ ಮಧು ಬಂಗಾರಪ್ಪ

ತಿಂಗಳಿಗೊಮ್ಮೆ ಜಿಲ್ಲಾವಾರು ಶಾಸಕರ ಸಭೆ: ಶಾಸಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಿಂಗಳಿಗೊಮ್ಮೆ ಜಿಲ್ಲಾವಾರು ಶಾಸಕರ ಸಭೆ ಕರೆಯುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಕ್ಷೇತ್ರದ ಕುಂದು ಕೊರತೆಗಳ ಬಗ್ಗೆ ಚರ್ಚಿಸುತ್ತೇನೆ. ಸರ್ಕಾರದಿಂದ ತುರ್ತಾಗಿ ಆಗಬೇಕಿರುವ ಕೆಲಸಗಳು ಸಮರ್ಪಕವಾಗಿ ಆಗುವಂತೆ ನೋಡಿಕೊಳ್ಳುತ್ತೇನೆ. ಏನೇ ಅಸಮಾಧಾನಗಳಿದ್ದರೂ ನೇರವಾಗಿ ನನಗೆ ಹೇಳಿ, ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಎಂದು ತಿಳಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: BBK 12 - ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ