
ಬೆಂಗಳೂರು (ಜೂ.12): ರಾಜ್ಯ ಹಾಗೂ ದೇಶದ ಜನತೆ ಸೋಲಿಸಿದ್ದು ಮೋದಿ ಗ್ಯಾರಂಟಿಯೇ ಹೊರತು, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಅಲ್ಲ, ರಾಜಕೀಯ ಲಾಭದ ಉದ್ದೇಶದಿಂದ ಗ್ಯಾರಂಟಿ ಯೋಜನೆ ತಂದಿಲ್ಲ ಗ್ಯಾರಂಟಿ ಯೋಜನೆ ಮುಂದುವರೆಯುತ್ತದೆ, ರಾಜ್ಯದ ಆರ್ಥಿಕ ಸ್ಥಿತಿಯೂ ಸುಭದ್ರವಾಗಿದ್ದು, ಸಾಲ ಮಾಡಿ ಸಂಬಳ ಕೊಡುವ ಸ್ಥಿತಿ ರಾಜ್ಯ ಸರ್ಕಾರಕ್ಕೆ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ತಿರುಗೇಟು ನೀಡಿದ್ದಾರೆ.
ಗ್ಯಾರಂಟಿ ಯೋಜನೆಗಳು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ತಂದುಕೊಟ್ಟಿಲ್ಲ ಎಂಬ ಆರ್. ಅಶೋಕ್ ಅವರ ಹೇಳಿಕೆಗೆ ಪ್ರಕಟಣೆಯ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳು, ಪ್ರತಿಪಕ್ಷದ ನಾಯಕರು ಆಗಾಗ ತಮ್ಮ ಅಜ್ಞಾನದ ಪ್ರದರ್ಶನ ಮಾಡುತ್ತಾ ಜನರಿಗೆ ಮನರಂಜನೆ ನೀಡುತ್ತಿರುತ್ತಾರೆ. ಅವರ ಹೇಳಿಕೆ ಇತ್ತೀಚಿನ ಸಂಶೋಧನೆಯಾಗಿದೆ. ಗ್ಯಾರಂಟಿ ಯೋಜನೆ ಬಗ್ಗೆ ತಮಗೆ ಹಾಗೂ ತಮ್ಮ ಪಕ್ಷಕ್ಕೆ ಯಾಕೆ ಇಷ್ಟೊಂದು ಸಿಟ್ಟು, ಮತ್ಸರ, ಫಲಾನುಭವಿಗಳಾದ ಬಡವರು, ಮಹಿಳೆಯರು, ಯುವಜನರ ಬಗ್ಗೆ ಯಾಕೆ ಇಷ್ಟೊಂದು ದ್ವೇಷ, ಅಸಹನೆ ಎಂದು ಪ್ರಶ್ನಿಸಿದ್ದಾರೆ.
ಭಾರತಕ್ಕೆ ಇಂಧನ ಭದ್ರತೆ ಕಲ್ಪಿಸಲು ಬದ್ಧ: ಪ್ರಲ್ಹಾದ್ ಜೋಶಿ
ಕಳೆದ ಹಾಗೂ ಇತ್ತೀಚಿನ ಲೋಕಸಭಾ ಚುನಾವಣೆಗೂ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಮತಪ್ರಮಾಣದ ಅಂತರ ಕೇವಲ 0.63 ಆಗಿದೆ, ಹೀಗಿರುವಾಗ ಗೆದ್ದವರು ಯಾರು, ಜೆಡಿಎಸ್ ಪಕ್ಷದ ಪಾದಕ್ಕೆ ಬಿದ್ದರೂ 26 ಸ್ಥಾನಗಳಿಂದ 17 ಸ್ಥಾನಕ್ಕೆ ನಿಮ್ಮ ಪಕ್ಷ ಕುಸಿಯುವುದನ್ನು ತಪ್ಪಿಸಲು ಆಗಲಿಲ್ಲ. ಒಂದು ಸ್ಥಾನದಿಂದ 9 ಸ್ಥಾನಕ್ಕೆ ಏರುವುದನ್ನು ನಿಮಗೆ ತಪ್ಪಿಸಲು ಆಗಲಿಲ್ಲ. ಮೊದಲು ನಿಮ್ಮ ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದಿದ್ದಾರೆ.
ಕೇಂದ್ರ ಸರ್ಕಾರದ ದುರಾಡಳಿತದಿಂದ ನೆಲ ಹಿಡಿದಿರುವ ಜನತೆಗೆ ನೆರವಾಗಲು ಗ್ಯಾರಂಟಿ ಯೋಜನೆಗಳನ್ನು ತಂದಿದ್ದೇವೆ ಅದು ನಮ್ಮ ಬದ್ಧತೆ ಮತ್ತು ರಾಜ್ಯದ ಜನರ ಮೇಲಿನ ಬದ್ಧತೆಯಾಗಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗಬೇಕು ಎಂಬ ಆಸೆ ನಿಮಗಿದ್ದರೂ ಅದು ಈಡೇರುವುದಿಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರವಾಗಿರುತ್ತದೆ. ನಿಮಗೆ ಬರುವ ಸಂಬಳದಲ್ಲಿ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ನನ್ನ ಗಮನಕ್ಕೆ ತನ್ನಿ ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.
ಹುಸಿ ಕಾಳಜಿ: ದಲಿತರ ಬಗ್ಗೆ ನಿಮ್ಮ ಕಾಳಜಿ ಎನ್ನುವುದಕ್ಕೆ ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯದ ಒಬ್ಬ ದಲಿತ ಇಲ್ಲವೇ ಹಿಂದುಳಿದ ವರ್ಗದ ಸಮುದಾಯದ ನಾಯಕನಿಗೆ ಅವಕಾಶ ನೀಡದಿರುವುದೇ ಸಾಕ್ಷಿಯಾಗಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಎಸ್‌ಸಿಪಿ/ಟಿಎಸ್‌ಪಿ ಕಾಯ್ದೆ ಜಾರಿಗೊಳಿಸಿ, ಅವರ ಜನಸಂಖ್ಯೆಗೆ ಅನುಗುಣವಾಗಿ ಒಟ್ಟು ಸಂಪನ್ಮೂಲದ ಶೇ. 25ರಷ್ಟನ್ನು ಮೀಸಲು ಇಟ್ಟವರು ನಾವು. ನಿಮಗೆ ದಮ್ಮು-ತಾಕತ್ ಇದ್ದರೆ ಈ ಕಾಯ್ದೆಯನ್ನು ರಾಷ್ಟ್ರ ಮಟ್ಟದಲ್ಲಿ ಜಾರಿಗೆ ತರಲು ಪ್ರಧಾನಿ ಮೋದಿ ಅವರಿಗೆ ತಿಳಿಸಿ ನಂತರ ನಮ್ಮ ಬಗ್ಗೆ ಮಾತನಾಡಿ ಎಂದು ಮುಖ್ಯಮಂತ್ರಿಗಳು ಸವಾಲು ಹಾಕಿದ್ದಾರೆ.
ಮರ್ಮಾಂಗದ ಫೋಟೋ ಕಳುಹಿಸಿದ್ದ ರೇಣುಕಾಸ್ವಾಮಿ: ದರ್ಶನ್ ಸಿಟ್ಟಿಗೇಳಲು ಇದೇ ಕಾರಣವಂತೆ!
ಯುವತಿ ಹತ್ಯೆ ಕೇಸಿಂದ ಹುಬ್ಬಳ್ಳಿ ಭಾಗದಲ್ಲಿ ಕೈಗೆ ಹಿನ್ನಡೆ: ಡಿ.ಕೆ. ಸುರೇಶ್ ಸೋತಿದ್ದಾರೆ ನಿಜ, ಆದರೆ ಬಳ್ಳಾರಿ, ಬೀದರ್, ಚಾಮರಾಜನಗರ, ಚಿಕ್ಕೋಡಿ, ದಾವಣಗೆರೆ, ಕಲಬುರಗಿ ಮತ್ತು ರಾಯಚೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ನಮ್ಮ ಅಭ್ಯರ್ಥಿಗಳು ಸೋಲಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಅಮಾಯಕ ಹೆಣ್ಣುಮಗಳ ಹತ್ಯೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡ ಪರಿಣಾಮ ನಮಗೆ ಆ ಭಾಗದಲ್ಲಿ ಹಿನ್ನಡೆಯಾಯಿತು. ಇಲ್ಲದಿದ್ದರೆ ನಿಮ್ಮ ಪಕ್ಷ ಒಂದಂಕಿಗೆ ಇಳಿಯಿತು. ನಿಮ್ಮ ದೆಹಲಿ ನಾಯಕರ ರೀತಿಯಲ್ಲಿ ಸುಳ್ಳು ಹೇಳಬೇಡಿ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.