ಬರಪರಿಹಾರಕ್ಕೆ ಕೇಂದ್ರ ಸರ್ಕಾರ ರಾಜ್ಯಕ್ಕೆ ನೆರವು ನೀಡುತ್ತಿಲ್ಲ. ಬರದ ಕುರಿತು ಚರ್ಚೆ ನಡೆಸಿದರೆ ಕೇಂದ್ರ ಸರ್ಕಾರ ಮಾಡಿದ ಅನ್ಯಾಯ ಹೊರಬೀಳುತ್ತದೆ ಎಂದುಕೊಂಡು ಅಡ್ಡಿಪಡಿಸುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ನಡವಳಿಕೆಯಿಂದಲೇ ಜನತೆ ಚುನಾಯಿತ ಪ್ರತಿನಿಧಿಗಳಿಗೆ ಛಿಮಾರಿ ಹಾಕುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುವರ್ಣಸೌಧ (ಡಿ.11): ಬರಪರಿಹಾರಕ್ಕೆ ಕೇಂದ್ರ ಸರ್ಕಾರ ರಾಜ್ಯಕ್ಕೆ ನೆರವು ನೀಡುತ್ತಿಲ್ಲ. ಬರದ ಕುರಿತು ಚರ್ಚೆ ನಡೆಸಿದರೆ ಕೇಂದ್ರ ಸರ್ಕಾರ ಮಾಡಿದ ಅನ್ಯಾಯ ಹೊರಬೀಳುತ್ತದೆ ಎಂದುಕೊಂಡು ಅಡ್ಡಿಪಡಿಸುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ನಡವಳಿಕೆಯಿಂದಲೇ ಜನತೆ ಚುನಾಯಿತ ಪ್ರತಿನಿಧಿಗಳಿಗೆ ಛಿಮಾರಿ ಹಾಕುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸೋಮವಾರ ಸಂಜೆ ಪ್ರಕಟಣೆ ಬಿಡುಗಡೆ ಮಾಡಿದ ಅವರು ಪ್ರತಿಪಕ್ಷದ ನಾಯಕ ಅಶೋಕಗೆ ಬಿಜೆಪಿ ಶಾಸಕರ ಬೆಂಬಲವೇ ಇಲ್ಲ. ಅವರದೇ ಪಕ್ಷದ ಶಾಸಕರು ಪ್ರತಿದಿನ ಅವರಿಗೆ ಮಂಗಳಾರತಿ ಮಾಡುತ್ತಿದ್ದಾರೆ. ಯಾವ ಸ್ಥಾನ ಸಿಕ್ಕಿಲ್ಲವೆಂದು ಬಸನಗೌಡ ಪಾಟೀಲ ಯತ್ನಾಳ ಯಡಿಯೂರಪ್ಪರಿಂದ ಹಿಡಿದು ಎಲ್ಲರ ವಿರುದ್ಧ ಹರಿಹಾಯುತ್ತಿದ್ದಾರೆ.
ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಈ ರೀತಿ ಮಾಡಲು ಪ್ರಯತ್ನಿಸುತ್ತಿದೆ ಅಷ್ಟೇ ಎಂದು ಜರೆದಿದ್ದಾರೆ. ಬೆಳಗಾವಿಯ ಅಧಿವೇಶನದಲ್ಲಿ ಈ ಭಾಗದ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಲು ಕರೆಯಲಾಗಿದೆ. ಆದರೆ ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ದಮ್ಮು ತಾಕತ್ ಬಗ್ಗೆ ಮಾತನಾಡುವ ಬಿಜೆಪಿಗರು ಕಲಾಪದಲ್ಲಿ ಭಾಗವಹಿಸುವ ಧೈರ್ಯ ತೋರಬೇಕು. ಆದರೆ ಸರ್ಕಾರವೇನಾದರೂ ತಪ್ಪು ಮಾಡಿದ್ದರೆ ಎತ್ತಿ ತೋರಿಸುವ ತಾಕತ್ತು ಪ್ರತಿಪಕ್ಷಕ್ಕೆ ಇಲ್ಲ. ಆಡಳಿತ ಪಕ್ಷವನ್ನು ಎದುರಿಸುವ ಧೈರ್ಯವೇ ಬಿಜೆಪಿಗಿಲ್ಲ. ರಾಜ್ಯದಲ್ಲಿ ಸಮರ್ಥ ಪ್ರತಿಪಕ್ಷ ಇರಬೇಕು. ಬಿಜೆಪಿ ಧರಣಿ ಕೈಬಿಟ್ಟು ಕಲಾಪದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.
ಆಗ ಮುಸ್ಲಿಮರ ಓಲೈಸುತ್ತಿದ್ದ ಯತ್ನಾಳ್ ಈಗ ಹಿಂದೂ ಹುಲಿ: ಸಚಿವ ಎಂ.ಬಿ.ಪಾಟೀಲ್
ಬರ ನಿರ್ವಹಣೆಗೆ ಕೇಂದ್ರ ಸಹಕರಿಸುತ್ತಿಲ್ಲ: ಬರ ನಿರ್ವಹಣೆಗೆ ಕೇಂದ್ರಕ್ಕೆ ಮೂರು ಪತ್ರ ಬರೆದರೂ ಅದಕ್ಕೆ ಸ್ಪಂದನೆ ಸಿಗುತ್ತಿಲ್ಲ. ಗುಳೆ ಹೋಗುವುದನ್ನು ತಪ್ಪಿಸಲು ಮನರೇಗಾ ಯೋಜನೆಯ 100 ಮಾನವ ದಿನಗಳಿಂದ 150 ಮಾನವ ದಿನಗಳನ್ನಾಗಿ ಮಾಡಿಕೊಡಿ ಎಂದು ಕೋರಿದರೂ ಸಹಕಾರ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಪ್ರತಿಪಕ್ಷದ ಧರಣಿ ಮಧ್ಯೆಯೇ ಕಂದಾಯ ಸಚಿವ ಕೃಷ್ಣ ಭೈರೇಗೌಡ ಬರದ ವಿಷಯವಾಗಿ ಉತ್ತರ ನೀಡುವಾಗ ಮಧ್ಯ ಪ್ರವೇಶಿಸಿ ಅವರು ಮಾತನಾಡಿದರು.
ಸರ್ಕಾರ ಪತನ ಆಗಲಿದೆಯೆಂದು ಎಚ್‌ಡಿಕೆ ಕನಸು ಕಾಣುತ್ತಲೇ ಇರಲಿ: ಸಚಿವ ಚಲುವರಾಯಸ್ವಾಮಿ
ರಾಜ್ಯದ 236 ತಾಲೂಕುಗಳ ಪೈಕಿ 223 ತಾಲೂಕುಗಳಲ್ಲಿ ತೀವ್ರ ಬರ ಆಗಿದೆ. ರಾಜ್ಯ ಸರ್ಕಾರ ಬರ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುತ್ತಿದೆ. ಕುಡಿವ ನೀರು, ಮೇವು, ಉದ್ಯೋಗ ಕಲ್ಪಿಸುವ ಕೆಲಸಗಳನ್ನೆಲ್ಲ ಮಾಡಿದ್ದೇವೆ. ಜಿಲ್ಲಾಡಳಿತದ ಬಳಿ 900 ಕೋಟಿ ರು. ಇದೆ. ಆದರೆ ಮನರೇಗಾ ಯೋಜನೆಯಡಿ ಇರುವ 100 ಮಾನವ ದಿನಗಳನ್ನು 150ಕ್ಕೆ ಏರಿಸಿ ಕೊಡಿ ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಈವರೆಗೂ ಸ್ಪಂದಿಸಿಲ್ಲ ಎಂದರು. ಬರಪರಿಹಾರಕ್ಕಾಗಿ. ರೂ.18,171 ಕೋಟಿ ನೆರವನ್ನು ಕೇಂದ್ರ ಸರ್ಕಾರದಿಂದ ಕೇಳಿದ್ದೇವೆ. ಕೇಂದ್ರದ ತಂಡ ಬಂದು ಸಮೀಕ್ಷೆ ನಡೆಸಿ, ವರದಿಯನ್ನೂ ನೀಡಿದೆ. ನಾವು ಬರೆದ ಪತ್ರಗಳಿಗೆ ಪ್ರತಿಕ್ರಿಯೆ ಇಲ್ಲ. ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಲು ಅವಕಾಶ ಕೇಳಿದರೂ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.