ಕೇಂದ್ರದ ವಿರುದ್ಧ ಮತ್ತೆ ಸಿಎಂ ಸಿದ್ದರಾಮಯ್ಯ ತೆರಿಗೆ ಗುಡುಗು

Sujatha NR   | Kannada Prabha
Published : Jan 31, 2026, 06:49 AM IST
Siddaramaiah

ಸಾರಾಂಶ

ರಾಜ್ಯ ಸರ್ಕಾರ 16ನೇ ಹಣಕಾಸು ಆಯೋಗದ ಮುಂದೆ ಮಂಡಿಸಿರುವ ಬೇಡಿಕೆಗಳನ್ನು ಪರಿಗಣಿಸಿ ರಾಜ್ಯದ ನ್ಯಾಯಯುತ ತೆರಿಗೆ ಪಾಲು, ಪ್ರಾಕೃತಿಕ ವಿಕೋಪ ಪರಿಹಾರ ನಿಧಿ, ವಿಶೇಷ ಅನುದಾನ ಸೇರಿ ಸಮಾನ ಹಂಚಿಕೆಯ ಮೂಲಕ ಸದೃಢ ಒಕ್ಕೂಟಕ್ಕೆ ಮನ್ನಣೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಬೆಂಗಳೂರು : ರಾಜ್ಯ ಸರ್ಕಾರ 16ನೇ ಹಣಕಾಸು ಆಯೋಗದ ಮುಂದೆ ಮಂಡಿಸಿರುವ ಬೇಡಿಕೆಗಳನ್ನು ಪರಿಗಣಿಸಿ ರಾಜ್ಯದ ನ್ಯಾಯಯುತ ತೆರಿಗೆ ಪಾಲು, ಪ್ರಾಕೃತಿಕ ವಿಕೋಪ ಪರಿಹಾರ ನಿಧಿ, ವಿಶೇಷ ಅನುದಾನ ಸೇರಿ ಸಮಾನ ಹಂಚಿಕೆಯ ಮೂಲಕ ಸದೃಢ ಒಕ್ಕೂಟಕ್ಕೆ ಮನ್ನಣೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನ್ಯಾಯ ಸಮ್ಮತ ಮತ್ತು ಸಂವಿಧಾನಾತ್ಮಕ ಬೇಡಿಕೆಗಳನ್ನು ಆಯೋಗದ ಮುಂದಿಡಲಾಗಿದೆ. ಈ ಸಂಬಂಧ ತಮ್ಮ ಎಕ್ಸ್‌ ಖಾತೆಯಲ್ಲಿ ‘ನ್ಯಾಯಕ್ಕಾಗಿ ಕನ್ನಡಿಗರ ಹೋರಾಟ’ ಎಂಬ ಅಭಿಯಾನ ಕೈಗೊಂಡಿದ್ದು, ಅಭಿಯಾನ ಯಶಸ್ವಿಯಾಗಲು ಬೆಂಬಲ ಕೋರಿದ್ದಾರೆ.

ಪ್ರಮುಖವಾಗಿ ಪ್ರಧಾನಿ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಒತ್ತಾಯ ಮಾಡುತ್ತಿದ್ದಂತೆಯೇ ರಾಜ್ಯಗಳಿಗೆ ಹಂಚಿಕೆ ಮಾಡುತ್ತಿರುವ ಶೇ.41ರಷ್ಟು ಹಂಚಿಕೆಯನ್ನು ಶೇ.50ಕ್ಕೆ ಏರಿಕೆ ಮಾಡಬೇಕು. ಸೆಸ್‌ ಮತ್ತು ಸರ್‌ಚಾರ್ಜ್‌ಗಳನ್ನು ಕೇಂದ್ರದ ಆದಾಯದ ಶೇ.5ಕ್ಕೆ ಮಾತ್ರ ಸೀಮಿತಗೊಳಿಸಿ, ಉಳಿಕೆ ಮೊತ್ತವನ್ನು ರಾಜ್ಯಗಳಿಗೆ ಹಂಚಬೇಕು ಎಂಬುದು ಕರ್ನಾಟಕದ ಸಮಸ್ತ ನಾಗರಿಕರ ಪರ ಮುಖ್ಯಮಂತ್ರಿ ಒತ್ತಾಯಿಸಿದ್ದಾರೆ.

ಕರ್ನಾಟಕಕ್ಕೆ 15ನೇ ಹಣಕಾಸು ಆಯೋಗದ ವರದಿಯಿಂದ ಕಡಿಮೆಯಾಗಿರುವ 80 ಸಾವಿರ ಕೋಟಿ ರು.ಗಳಿಗೂ ಹೆಚ್ಚಿನ ತೆರಿಗೆ ಪಾಲು ಸರಿದೂಗಿಸಲು 14ನೇ ಹಣಕಾಸು ಆಯೋಗ ನೀಡಿದ್ದ ಶೇ. 4.71ಕ್ಕಿಂತ ಹೆಚ್ಚು ಪಾಲು ಕೊಡಬೇಕು. ರಾಜ್ಯಕ್ಕೆ 15ನೇ ಹಣಕಾಸು ಆಯೋಗದಲ್ಲಿ ಸಮಸ್ಯೆಯಾಗಲು ಆಯೋಗ ಅಳವಡಿಸಿಕೊಂಡ ಸೂತ್ರಗಳಲ್ಲಿಯೇ ದೋಷಗಳಿದ್ದವು. ಕರ್ನಾಟಕದ ಜನರ ತಲಾ ಆದಾಯ ಹೆಚ್ಚಿದೆಯೆಂದು ನಮಗೆ ಕಡಿಮೆ ಪಾಲನ್ನು ಹಂಚಿಕೆ ಮಾಡಲಾಯಿತು. ತಲಾ ಆದಾಯ ಎನ್ನುವುದು ಆರ್ಥಿಕತೆಯನ್ನು ಅಳೆಯುವ ಮಾನದಂಡಗಳಲ್ಲೊಂದಷ್ಟೆ, ಅದೇ ಮುಖ್ಯವಲ್ಲ. ಕಲ್ಯಾಣ ಕರ್ನಾಟಕವೂ ಸೇರಿ ಕೆಲ ಜಿಲ್ಲೆಗಳ ತಲಾ ಆದಾಯ ದೇಶದ ಸರಾಸರಿ ತಲಾ ಆದಾಯಕ್ಕಿಂತ ಕಡಿಮೆ ಇದೆ ಎಂಬುದನ್ನು 16ನೇ ಹಣಕಾಸು ಆಯೋಗಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಆದ್ದರಿಂದ ಆದಾಯ ದೂರ ಅಥವಾ ಇನ್‌ಕಂ ಡಿಸ್ಟೆನ್ಸ್‌ ಸೂತ್ರವನ್ನು ಶೇ.45ರ ಬದಲು 25ಕ್ಕೆ ಇಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಘೋರ ಶಿಕ್ಷೆ:

15ನೇ ಹಣಕಾಸು ಆಯೋಗದಲ್ಲಿ ಜನಸಂಖ್ಯಾ ನಿಯಂತ್ರಣ ಸಾಧಿಸಿದ ರಾಜ್ಯಗಳಿಗೆ ಉತ್ತೇಜನ ನೀಡುವ ಬದಲು ಘೋರ ಶಿಕ್ಷೆ ನೀಡಲಾಯಿತು. ಇದನ್ನು ಸರಿಪಡಿಸಬೇಕಾದರೆ 1971ರ ಜನಸಂಖ್ಯೆಯನ್ನೇ ಮಾನದಂಡವನ್ನಾಗಿ ಪರಿಗಣಿಸಬೇಕು. 2018-24ರ ಅವಧಿಯಲ್ಲಿ ರಾಜ್ಯವು ಪ್ರಕೃತಿ ವಿಕೋಪಗಳಿಂದಾಗಿ 1.56 ಲಕ್ಷ ಕೋಟಿ ರು.ಅಷ್ಟು ನಷ್ಟವನ್ನು ಅನುಭವಿಸಿದೆ. 2002ರಿಂದಲೂ ಅತಿವೃಷ್ಟಿ, ಬರ, ಪ್ರವಾಹಗಳಿಗೆ ರಾಜ್ಯವು ನಿರಂತರವಾಗಿ ಒಳಗಾಗುತ್ತಲೇ ಇದೆ. ಹಾಗಾಗಿ ಕರ್ನಾಟಕಕ್ಕೆ ಇರುವ ಕೇವಲ 5 ರಿಸ್ಕ್‌ ಫ್ಯಾಕ್ಟರ್‌ ಅಂಕವನ್ನು 15ಕ್ಕೆ ಏರಿಸಬೇಕು. ವಿಕೇಂದ್ರೀಕರಣದಲ್ಲಿ ಉತ್ತಮ ಸಾಧನೆ ಮಾಡಿದ ರಾಜ್ಯಗಳನ್ನು ಪ್ರೋತ್ಸಾಹಿಸಲು ಪಂಚಾಯತ್‌ ಅಧಿಕಾರ ಹಂಚಿಕೆ ಸೂಚ್ಯಂಕ ಅಳವಡಿಸಿಕೊಳ್ಳಬೇಕು. ಜನಸಂಖ್ಯೆಗೆ ಶೇ 60, ಭೌಗೋಳಿಕ ವಿಸ್ತೀರ್ಣಕ್ಕೆ ಶೇ 20 ಮತ್ತು ಅಧಿಕಾರ ಹಂಚಿಕೆ ಸೂಚ್ಯಂಕಕ್ಕೆ ಶೇ.20ರಷ್ಟು ಮಾನದಂಡಗಳನ್ನು ನಿಗದಿಪಡಿಸಬೇಕು ಎಂದು ಅವರು ಕೋರಿದ್ದಾರೆ.

ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ 5 ವರ್ಷಗಳಲ್ಲಿ 25 ಸಾವಿರ ಕೋಟಿ ರು.ಮೀಸಲಿರಿಸಿದೆ. ಇದರ ಜೊತೆಗೆ ಕೇಂದ್ರ ಸರ್ಕಾರವೂ ಅಷ್ಟೇ ಮೊತ್ತವನ್ನು ಮ್ಯಾಚಿಂಗ್‌ ಗ್ರ್ಯಾಂಟ್‌ ಆಗಿ ನೀಡಬೇಕು ಹಾಗೂ ಆ ಭಾಗದ ಪರಿಸರ ಸಂರಕ್ಷಣೆ ಮತ್ತು ವಿಪತ್ತು ನಿರ್ವಹಣೆಗಾಗಿ 10 ಸಾವಿರ ಕೋಟಿ ರು. ವಿಶೇಷ ಪ್ಯಾಕೇಜ್‌ ನೀಡಬೇಕು. ಮಲೆನಾಡು, ಕರಾವಳಿ ಹಾಗೂ ಪಶ್ಚಿಮ ಘಟ್ಟಗಳ ಕೃಷಿಕರ ಬದುಕು ಸಂಕಷ್ಟದಲ್ಲಿದೆ. ಅದಕ್ಕಾಗಿ ವಿಶೇಷ ಅನುದಾನ ಒದಗಿಸಬೇಕು. ಒಣ ಭೂಮಿಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ. ಅದಕ್ಕೆ ಅನುದಾನಗಳನ್ನು ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರು ಅಭಿವೃದ್ದಿಗೆ 1.15 ಲಕ್ಷ ಕೋಟಿ ಕೊಡಿ:

ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ ಮುಂದಿನ 5 ವರ್ಷಗಳಲ್ಲಿ 1.15 ಲಕ್ಷ ಕೋಟಿ ರು. ಹೂಡಿಕೆ ಅಗತ್ಯವಿದೆ. ಇದಕ್ಕಾಗಿ 16ನೇ ಹಣಕಾಸು ಆಯೋಗವು ಕನಿಷ್ಠ 27,793 ಕೋಟಿ ರು.ಗಳನ್ನಾದರೂ ನೀಡುವಂತೆ ಶಿಫಾರಸು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ಯಾರಂಟಿಗೆ ಒತ್ತು ನೀಡಿ, ಒಬಿಸಿ ಕಡೆಗಣಿಸಿದ ಸರ್ಕಾರ: ಬಿವೈವಿ ಆಕ್ರೋಶ
ಫೆಬ್ರವರಿ 2ನೇ ವಾರ ಎನ್‌ಸಿಪಿ ಬಣಗಳ ವಿಲೀನ ?