
ಬೆಂಗಳೂರು (ಅ.04): ‘ಮುಖ್ಯಮಂತ್ರಿಯಾಗಿ ಇನ್ನೂ ಎರಡೂವರೆ ವರ್ಷ ನಾನೆ ಇರುತ್ತೇನೆ’ ಎಂಬ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಟೀಕಾಪ್ರಹಾರ ನಡೆಸಿರುವ ಬಿಜೆಪಿ ನಾಯಕರು, ಸಿಎಂ ಖುರ್ಚಿ ಸದ್ಯದಲ್ಲೇ ಶೇಕ್ ಆಗಲಿದೆ ಎಂದು ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ ಹೇಳಿಕೆ ಅಸ್ಥಿರತೆಯ ಲಕ್ಷಣ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದರೆ, ಡಿಸೆಂಬರ್ ಒಳಗೆ ಸಿಎಂ ಬದಲಾವಣೆ ಖಚಿತ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ. ಸಿಎಂ ಹೇಳಿಕೆಯಿಂದ ಡಿಕೆಶಿ ಬಗ್ಗೆ ನನಗೆ ಅನುಕಂಪವಾಗುತ್ತಿದೆ ಎಂದು ಸುನಿಲ್ ಕುಮಾರ್ ವ್ಯಂಗ್ಯವಾಡಿದ್ದರೆ, ಸಿದ್ದು ಹೇಳಿಕೆಯಿಂದ ಕಾಂಗ್ರೆಸ್ ಹೈಕಮಾಂಡ್ ದುರ್ಬಲವಾಗಿರುವುದು ತಿಳಿಯುತ್ತಿದೆ ಎಂದು ಸಿ.ಟಿ.ರವಿ ಹೇಳಿದ್ದಾರೆ.
ಸಿದ್ದುಗೆ ವಿಶ್ವಾಸವಿಲ್ಲವೇ?: ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ಅಸ್ಥಿರತೆಯ ಲಕ್ಷಣ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಈ ಅಧಿಕಾರಾವಧಿ ನಾನೇ ಸಿಎಂ ಆಗಿರುತ್ತೇನೆ ಎಂದು ಹೇಳುವ ಅಗತ್ಯವೇನು? ಸಿದ್ದರಾಮಯ್ಯಗೆ ವಿಶ್ವಾಸವಿಲ್ಲವೇ? ತಾವು ಸಿಎಂ ಹುದ್ದೆಯಲ್ಲಿ ಮುಂದುವರಿಯುವ ವಿಶ್ವಾಸವಿಲ್ಲ, ಅಸ್ಥಿರತೆಯಿದೆ ಎಂಬುದಕ್ಕೆ ಅವರ ಈ ಹೇಳಿಕೆ ಸಾಕ್ಷಿ ಎಂದು ವ್ಯಂಗ್ಯವಾಡಿದ್ದಾರೆ. ಈ ಗೊಂದಲ ತಪ್ಪಿಸುವ ಉದ್ದೇಶದಿಂದಲೇ ಜಾತಿ ಗಣತಿ ಆರಂಭಿಸಿದ್ದಾರೆ. ಸಮೀಕ್ಷೆ ಹೆಸರಲ್ಲಿ ಜಾತಿ ಗಣತಿ ಮಾಡುತ್ತಿದ್ದಾರೆ. ಇಲ್ಲದ ಜಾತಿಗಳನ್ನೆಲ್ಲ ಸೇರಿಸಿದ್ದಾರೆ. ಮುಜಾವರ ಬ್ರಾಹ್ಮಣ, ಬ್ರಾಹ್ಮಣ ಕ್ರಿಶ್ಚಿಯನ್ ಇವೆಲ್ಲ ಏನು ತೋರಿಸುತ್ತಿದೆ?. ಇವರು ಯಾವುದಾದರೂ ಸಂಘಟನೆ ಸದಸ್ಯರಾಗಿದ್ದಾರಾ?. ಎನ್ನುವ ಪ್ರಶ್ನೆಯೂ ಇದೆ. ಇದೆಲ್ಲ ಯಾಕೆ ಬೇಕು? ಎಂದು ಅವರು ಪ್ರಶ್ನಿಸಿದರು.
ಡಿಕೆಶಿ ಬಗ್ಗೆ ಅನುಕಂಪವಾಗ್ತಿದೆ: ಮುಂದಿನ ಎರಡು ವರ್ಷವೂ ನಾನೇ ಸಿಎಂ ಎಂದು ಸಿದ್ದರಾಮಯ್ಯ ಪುನಃ ಹೇಳಿದ್ದಾರೆ, ಆದ್ದರಿಂದ ಡಿ.ಕೆ.ಶಿವಕುಮಾರ್ ಬಗ್ಗೆ ನನಗೆ ಅನುಕಂಪ ಉಂಟಾಗುತ್ತಿದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಸುನಿಲ್ ವಿ.ಕುಮಾರ್ ಹೇಳಿದ್ದಾರೆ. ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಹಿಂದೊಮ್ಮೆ ಡಿ.ಕೆ.ಶಿವಕುಮಾರ್ ಅವರು ಅಧಿಕಾರವನ್ನು ಕಾಲಿನಿಂದ ಒದ್ದು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ ಮಾತು ನನಗೆ ನೆನಪಿದೆ. ಆದ್ದರಿಂದ ಅವರು ಸಹಜವಾಗಿ ಸಿಎಂ ಅಧಿಕಾರ ಪಡೆಯುತ್ತಾರೋ ಅಥವಾ ಅವರ ಸಹಜ ಗುಣದಂತೆ ಕಾಲಿನಿಂದ ಒದ್ದು ಪಡೆಯುತ್ತಾರೋ ಎಂಬ ಬಗ್ಗೆ ಜನತೆಗೆ ಕುತೂಹಲ ಇದೆ ಎಂದರು. ಸರ್ಕಾರದಲ್ಲಾಗುತ್ತಿರುವ ಈ ಕ್ರಾಂತಿ, ಈ ಕಂಪನ ಕಾಂಗ್ರೆಸ್ ನ ಒಳಗೆ ಆಗಲಿ. ಅದರಿಂದ ರಾಜ್ಯದ ಜನತೆಗೆ ಕಂಪನ, ತೊಂದರೆ ಆಗದಿರಲಿ ಎಂದು ಹಾರೈಸಿದರು.
ಮುಂಬರುವ ನವೆಂಬರ್ ಇಲ್ಲವೇ ಡಿಸೆಂಬರ್ ಒಳಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವುದು ಖಚಿತ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ. ಬೆಳಗಾವಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ ಸಿಎಂ ಹುದ್ದೆಯಿಂದ ಇಳಿಯುತ್ತಾರೆ. ಅಧಿಕಾರ ಹಂಚಿಕೆ ಸಂಬಂಧ ಒಪ್ಪಂದ ಆಗಿರುವುದು ನಿಜ. ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕ್ರಾಂತಿ ಆಗುತ್ತದೆ ಎಂಬ ಹೇಳಿಕೆ ನೀಡಿದ ಒಬ್ಬರು ಸಚಿವರು ಈಗ ಮನೆಗೆ ಹೋಗಿದ್ದಾರೆ. ಅಧಿಕಾರಕ್ಕಾಗಿ ಕಾಂಗ್ರೆಸ್‌ನಲ್ಲಿ ಜಗಳ ಶುರುವಾಗಿದೆ. ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡುತ್ತಿಲ್ಲ. ಡಿ.ಕೆ.ಶಿವಕುಮಾರ ಹಠ ಬಿಡುತ್ತಿಲ್ಲ. ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ ಎಂದರು. ಒಳಜಗಳದಿಂದ ಕಾಂಗ್ರೆಸ್ ಸರ್ಕಾರ ಪತನವಾದರೆ ನಾವೇನೂ ಸರ್ಕಾರ ಮಾಡುವುದಿಲ್ಲ. ನಾವು ನೇರವಾಗಿ ಚುನಾವಣೆಗೆ ಹೋಗಲು ಸಿದ್ಧರಿದ್ದೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.