ಜಾತೀಯತೆಯ ಕೊಳಕು ನಿವಾರಿಸಲು ಶಿಕ್ಷಣವೇ ಬಹುದೊಡ್ಡ ಅಸ್ತ್ರ: ಸಿಎಂ ಸಿದ್ದರಾಮಯ್ಯ

Published : Oct 14, 2025, 05:59 AM IST
 CM Siddaramaiah

ಸಾರಾಂಶ

ಹೃದಯ ವೈಶಾಲ್ಯತೆಯಿಂದ ನಾವೆಲ್ಲರೂ ಮನುಷ್ಯರು ಎಂದರಿತರೆ ಸುಂದರ ಸಮಾಜ ಸೃಷ್ಟಿಯಾಗುತ್ತದೆ. ನಮ್ಮ ಸರ್ಕಾರ ಸರ್ವರನ್ನೊಳಗೊಂಡ ಸಮಾಜ ನಿರ್ಮಾಣಕ್ಕೆ ಮುಂದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ರಬಕವಿ-ಬನಹಟ್ಟಿ (ಅ.14): ಜಾತಿ, ಧರ್ಮಗಳಿಂದ ವಿಘಟಿತ ಮನದ ವ್ಯಕ್ತಿಗಳಿಂದ ದೂರವಾಗಿ ಸರ್ವರನ್ನೂ ಪ್ರೀತಿಸುವ ಗುಣಗ್ರಾಹಿತನ ಬೆಳೆಸಿಕೊಳ್ಳಬೇಕು. ಸಂಕುಚಿತ ಮನೋಭಾವ ಬಿಟ್ಟು ಹೃದಯ ವೈಶಾಲ್ಯತೆಯಿಂದ ನಾವೆಲ್ಲರೂ ಮನುಷ್ಯರು ಎಂದರಿತರೆ ಸುಂದರ ಸಮಾಜ ಸೃಷ್ಟಿಯಾಗುತ್ತದೆ. ನಮ್ಮ ಸರ್ಕಾರ ಸರ್ವರನ್ನೊಳಗೊಂಡ ಸಮಾಜ ನಿರ್ಮಾಣಕ್ಕೆ ಮುಂದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ತಾಲೂಕಿನ ಬಂಡಿಗಣಿ ಶ್ರೀಬಸವಗೋಪಾಲ ನೀಲಮಾಣಿಕಮಠದ ದಾನೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ನಡೆದ ವಿಶ್ವಶಾಂತಿಗಾಗಿ ಸರ್ವಧರ್ಮ ಮಹಾಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಯಾವ ತಾರತಮ್ಯವಿಲ್ಲದೆ ಎಲ್ಲ ಜಾತಿಯವರಿಗೂ ಕಾರ್ಯಕ್ರಮ ನೀಡಿದೆ. ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನ್ನಾಗಿಸಿದೆ.

ಏನಪ್ಪ ವಿಜಯಾನಂದ ಕಾಶಪ್ಪನವರ ನಿವೇನಾದ್ರೂ ಮಾಡಿದ್ರಾ? ಎಂದು ಪ್ರಶ್ನಿಸಿದಾಗ ಕಾಶಪ್ಪನವರ ನಾವು ಮಾಡಿಲ್ಲ ಎಂದುತ್ತರಿಸಿದರು.ಮುಂದುವರೆದು ಸಿಎಂ ಯಡಿಯೂರಪ್ಪ, ಬೊಮ್ಮಾಯಿ ಮಾಡಲಿಲ್ಲ ಆದರೂ ನನ್ನೇಕೆ ಪ್ರಶ್ನೆ ಮಾಡ್ತೀರಿ? ನೀನಂದ್ರೆ ನೀನಲ್ಲಪ್ಪ ಕಾಶಪ್ಪನವರ ನೀನು ನನ್ನ ಕಟ್ಟಾ ಅಭಿಮಾನಿ ಕೆಲವರು ಮಾತಾಡ್ತಾರೆ ಎಂದು ಪರೋಕ್ಷವಾಗಿ ಬಿಜೆಪಿ ಲಿಂಗಾಯತ ನಾಯಕರಿಗೆ ಸಿದ್ದರಾಮಯ್ಯ ಟಾಂಗ್ ನೀಡಿದರು. ನಾನು ಬಸವಣ್ಣನ ಕಟ್ಟಾ ಅನುಯಾಯಿಯಾಗಿದ್ದು, ದಯವೇ ಧರ್ಮದ ಮೂಲ ಎಂದು ಅರಿತು ಬದುಕುತ್ತಿದ್ದೇನೆ. ಜಾತೀಯತೆ ಸಮಾಜದ ಬಹುದೊಡ್ಡ ಕಂಟಕವಾಗಿದ್ದು, ಜಾತೀಯತೆಯ ಕೊಳಕು ನಿವಾರಿಸಲು ಶಿಕ್ಷಣವೇ ಬಹುದೊಡ್ಡ ಅಸ್ತ್ರವಾಗಿದೆ ಎಂದರು.

ವಿದ್ಯೆ, ಸ್ವಾಭಿಮಾನ, ಜ್ಞಾನ ಬೆಳೆಸಿಕೊಂಡು ಮೌಢ್ಯಗಳನ್ನು ತಿರಸ್ಕರಿಸಬೇಕು. ರಾಮಾಯಣ, ಮಹಾಭಾರತ ಬರೆದವರೆಲ್ಲರೂ ಶೂದ್ರರಾಗಿದ್ದು, ಶ್ರೇಣೀಕೃತ ಸಮಾಜ ವ್ಯವಸ್ಥೆಯಲ್ಲಿ ಸ್ತ್ರೀಯರಿಗೆ, ದಲಿತರಿಗೆ ಶಿಕ್ಷಣ ಹೊಂದುವ ಅವಕಾಶವಿರಲಿಲ್ಲ. ಬಸವಾದಿ ಶರಣರು ಸಮಾನತೆ ತತ್ವ ಜಾರಿಗೊಳಿಸಿ ಚಲನೆ ನೀಡಿ ಬಲಶಾಲಿ ಸಮಾಜ ನಿರ್ಮಿಸಲು ಶ್ರಮಿಸಿದರು. ಈಚೆಗೆ ಅಸಹಿಷ್ಣುತೆ ಹೆಚ್ಚುತ್ತಿದೆ. ನ್ಯಾಯಾಧೀಶರ ಮೇಲೆಯೇ ಶೂ ಎಸೆಯಲು ವಕೀಲರೊಬ್ಬರು ಯತ್ನಿಸಿದ್ದು, ನಮ್ಮಲ್ಲಿನ ಅಸಹನೀಯತೆಯ ಪ್ರತೀಕವಾಗಿದೆ. ಶರಣರ ಕಾಯಕ, ದಾಸೋಹ ನಮ್ಮ ಧ್ಯೇಯವಾಗಿ ಎಲ್ಲರೂ ಮಾನವ ಧರ್ಮಕ್ಕೆ ನಿಷ್ಠೆ ತೋರಿ ಬದುಕಲು ಪ್ರೇರೇಪಿಸಬೇಕು ಎಂದರು.

ನಾನು ಬಸವ ಧರ್ಮದ ಬೆಂಬಲಿಗ

ಜಿಲ್ಲಾ ಉಸ್ತುವಾರಿ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿ, ಮತಾಂಧತೆ ಮಾನವತೆ ಅಲ್ಲ. ದಯೆವೇ ಧರ್ಮದ ಮೂಲವಾಗಿದ್ದು, ನಾನು ಬಸವ ಧರ್ಮದ ಬೆಂಬಲಿಗ. ಕಾಂಗ್ರೆಸ್ ಸರ್ಕಾರದಲ್ಲಿ ಬಸವ ಧರ್ಮದ ಆಚರಣೆಯಿದೆ. ಹಿಂದೂ ಕಾಲಂ ತೆಗೆದು ನಾನು ಬಸವಧರ್ಮ ಎಂದು ಬರೆಸಲು ಬದ್ಧನಾಗಿದ್ದೇನೆ. ಜಾತಿ-ಪಂಥಗಳಿಲ್ಲದ ಬಂಡಿಗಣಿಮಠ ಜಾತ್ಯತೀತ ಮಠವಾಗಿದೆ. ಶಿಕ್ಷಣ, ಅನ್ನ ದಾಸೋಹ ನಡೆಸುವಲ್ಲಿ ಶ್ರೀಗಳು ಹೆಸರಾಗಿದ್ದರೆ ನಮ್ಮ ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಕಲ್ಪಿಸಿ ಬಡವರ ಪ್ರತ್ಯಕ್ಷ ದೈವವಾಗಿದ್ದಾರೆಂದರು.

ವೇದಿಕೆಯಲ್ಲಿ ದಾಸೋಹರತ್ನ ಚಕ್ರವರ್ತಿ ದಾನೇಶ್ವರರು ಅಧ್ಯಕ್ಷತೆ ವಹಿಸಿದ್ದರು. ಬಬಲಾದಿ ಸಿದ್ಧರಾಮೇಶ್ವರ ಶ್ರೀ, ಡಾ.ಡೆರಿಕ್ ಫರ್ನಾಂಡೀಸ್, ಯೋಗಿ ವೇಮನಪೀಠದ ವೇಮನಾನಂದ ಶ್ರೀ, ಹಳೆಹುಬ್ಬಳ್ಳಿ ವೀರಭಿಕ್ಷಾವರ್ತಿಮಠದ ಶಿವಶಂಕರ ಶ್ರೀ, ಬೆಂಗಳೂರಿನ ಹಜರತ್ ಮಹಮ್ಮದ ತನ್ವೀರ್ ಹಾಶ್ಮಿ, ಹೈದರಾಬಾದ್‌ ಸೂಫಿ ಸಂತ ಸೈಯದ್ ಬಾಷಾ ಸಾಹೇಬ, ತಂಗಡಗಿಯ ಹಡಪದ ಅಪ್ಪಣ್ಣ ಸ್ವಾಮೀಜಿ, ಚಿತ್ರದುರ್ಗದ ಸರ್ದಾ ಸೇವಾಲಾಲರು, ಕೋಡಹಳ್ಳಿಯ ಷಡಕ್ಷರ ಮುನಿಗಳು, ಬೆಳಗಾವಿ ಬ್ರಹ್ಮಾಕುಮಾರೀಸ್‌ನ ರಾಜಯೋಗಿನಿ ಬಿ.ಕೆ.ಅಂಬಿಕಾ, ಬೌದ್ಧ ಗುರು ಮುಂಡಗೋಡದ ಗೆಶೆ ಜಂಪಾ ಲೋಬಾಂಗ್ಸ್, ಶಾಸಕ ವಿಜಯಾನಂದ ಕಾಶಪ್ಪನವರ, ಭೀಮಸೇನ ಚಿಮ್ಮನಕಟ್ಟಿ, ಡಾ.ಉಮಾಶ್ರೀ, ಎಸ್.ಜಿ. ನಂಜಯ್ಯನಮಠ, ಆನಂದ ನ್ಯಾಮಗೌಡ, ಸಿದ್ದು ಕೊಣ್ಣೂರ, ಕೆಪಿಸಿಸಿ ಸದಸ್ಯ ಬಸವರಾಜ ಕೊಕಟನೂರ ಮುಂತಾದವರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ