
ಬೆಂಗಳೂರು (ಅ.22): ಪಕ್ಷ, ಸರ್ಕಾರ, ಸಿದ್ಧಾಂತ ಬೇರೆ ಬೇರೆ ಆದರೂ ಪ್ರದಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉತ್ತಮ ಆಡಳಿತಾತ್ಮಕ ಸಂಬಂಧ ಮತ್ತು ರಾಜಕೀಯೇತರ ಬಾಂಧವ್ಯ ಹೊಂದಿದ್ದಾರೆ ಎಂಬ ಮಾತುಗಳಿವೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಅವರೇ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ವಿಶೇಷ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ರಾಜ್ಯದ ವಿಚಾರಗಳ ಚರ್ಚೆಗೆ ಸಮಯ ಕೇಳಿದಾಗ ಮೋದಿ ಅವರು ಇಲ್ಲ ಎಂದಿಲ್ಲ. ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರಬಹುದು. ನಾವೂ ಅವರಿಗೆ ಗೌರವ ಕೊಡಬೇಕಲ್ವಾ? ಅದೇ ರೀತಿ ಅಮಿತ್ ಶಾ ಅವರಿಗೂ ಡಿ.ಕೆ.ಶಿವಕುಮಾರ್ ಅವರ ಇತರೆ ರಾಜ್ಯಗಳೊಂದಿಗಿನ ಸಹಕಾರ ಮನೋಭಾವ ಇಷ್ಟ. ಅದನ್ನು ಹೊಗಳಿದ್ದಾರೆ ಎಂದು ಕೂಡ ನೆನಪಿಸಿಕೊಂಡರು.
ಮೋದಿ ಅವರು ರಾಜ್ಯಕ್ಕೆ ಬಂದಾಗ ತಮ್ಮ ಕೈ ಹಿಡಿದುಕೊಂಡು ಓಡಾಡುತ್ತಾರೆ. ತಾವೂ ಅವರನ್ನು ಹೊಗಳುತ್ತೀರಿ. ಮತ್ತೊಂದೆಡೆ ಅಮಿತ್ ಶಾ ಅವರ ಜೊತೆಗಿನ ತಮ್ಮ ಭೇಟಿಯಲ್ಲೂ ಪಾಸಿಟಿವ್ ವೈಬ್ ಕಾಣುತ್ತದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸೈದ್ಧಾಂತಿಕವಾಗಿ ಭಿನ್ನಾಪ್ರಾಯ ಇರಬಹುದು. ಆದರೆ, ವೈಯಕ್ತಿಕವಾಗಿ ಒಂದು ಸ್ಥಾನದಲ್ಲಿರುವವರಿಗೆ ಗೌರವ ಕೊಡಲೇಬೇಕು. ನಾನು ಕಾಂಗ್ರೆಸ್‌ನವನಾಗಿದ್ದೇನೆ. ನಿತ್ಯ ಬಿಜೆಪಿಯವರನ್ನು ಬೈಯುತ್ತಿರುತ್ತೇನೆ. ಹಾಗಂತ ನಾನು ಮೋದಿ, ಅಮಿತ್ ಶಾ ಅವರ ಭೇಟಿಗೆ ಸಮಯ ಕೇಳಿದಾಗ ನಿರಾಕರಿಸಿಲ್ಲ. ಅವರೇಕೆ ನಮಗೆ ಸಮಯ ಕೊಡುತ್ತಾರೆ. ಅದನ್ನು ನಾವು ಗೌರವಿಸಬೇಕಲ್ವಾ? ರಾಜ್ಯಕ್ಕೆ ಬರಬೇಕಾದ ಸಾಕಷ್ಟು ಅನುದಾನ, ತೆರಿಗೆ ಬಾಕಿ ಇನ್ನೂ ಕೊಟ್ಟಿಲ್ಲ. ಮೊನ್ನೆ ಮೋದಿ ಅವರು ಸಿಕ್ಕಾಗ ಭದ್ರಾ ಮೇಲ್ಡಂಡೆ ಯೋಜನೆಗೆ ಕೇಂದ್ರದ ಬಜೆಟ್‌ನಲ್ಲಿ ₹5400 ಕೋಟಿ ಘೋಷಣೆ ಮಾಡಿದಿರಿ ಇನ್ನೂ ಕೊಟ್ಟಿಲ್ಲ ಎಂದು ಕೇಳಿದೆ. ಅವರು ಈ ಸಲ ನೋಡೋಣ ಡಿಕೆ ಅಂದರು ಎಂದು ತಿಳಿಸಿದರು.
ಈಗ ಕಬ್ಬು ಬೆಳೆಗಾರರ ಸಮಸ್ಯೆ ಚರ್ಚೆಗೂ ಮೋದಿ ಅವರ ಸಮಯ ಕೇಳಿದ್ದೇನೆ. ಏಕೆಂದರೆ ಇದು ಕೇಂದ್ರದವರು ಪರಿಹರಿಸಬೇಕಾದ ಸಮಸ್ಯೆ. ಎಥನಾಲ್, ಸಕ್ಕರೆ ದರ ಹೆಚ್ಚಳ ನಾವು ತೀರ್ಮಾನ ಮಾಡಲಾಗಲ್ಲ. ಸಂಬಂಧಿಸಿದ ಎಲ್ಲಾ ರಾಜ್ಯದವರೊಂದಿಗೆ ಚರ್ಚಿಸಿ ಕೇಂದ್ರದವರು ತೀರ್ಮಾನಿಸಬೇಕು. ನನ್ನೊಟ್ಟಿಗೆ ಬಂದರೆ ಸರ್ವಪಕ್ಷ ನಿಯೋಗ ಕೊಂಡೊಯ್ಯುತ್ತೇನೆ. ಬರದಿದ್ದರೆ ನಾನೊಬ್ಬನೇ ಹೋಗುತ್ತೇನೆ ಎಂದರು.
ಇನ್ನು, ಅಮಿತ್ ಶಾ ಅವರೊಂದಿಗೆ ರಾಜ್ಯದ ನೀರಾವರಿ ಯೋಜನೆಗಳು ಸೇರಿದಂತೆ ಅಭಿವೃದ್ಧಿ ಯೋಜನೆಗಳ ಕುರಿತು ಸಾಕಷ್ಟು ಬಾರಿ ಮಾತನಾಡಿದ್ದೇನೆ. ಅವರೂ ಸ್ಪಂಧಿಸಿದ್ದಾರೆ. ನೀರಾವರಿ ವಿಚಾರದಲ್ಲಿ ನೆರೆ ರಾಜ್ಯಗಳ ಮುಖ್ಯಮಂತ್ರಿಗಳ ಸಹಕಾರದೊಂದಿಗೆ ನಾನು ಮಾಡಿದ ಕಾರ್ಯಗಳನ್ನು ಅವರು ಮೆಚ್ಚಿದ್ದಾರೆ. ಡಿಕೆ ನೋಡಿ ಸಹಕಾರ ಮನೋಭಾವ ಕಲಿಯರಿ ಎಂದು ಹೇಳಿದ್ದೂ ಉಂಟು. ಅದು ಬಿಟ್ಟರೆ ಆತ್ಮೀಯತೆ ಅಂತ ಏನಿಲ್ಲ, ರಾಜಕೀಯವನ್ನೂ ಏನು ಮಾತನಾಡಿಲ್ಲ ಎಂದರು.
ಇತ್ತೀಚೆಗೆ ಉದ್ಯಮಿ ಗೌತಮ್ ಅದಾನಿ ಅವರು ತಮ್ಮನ್ನು ಭೇಟಿ ಮಾಡಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ಅವರೇ ಅಪಸ್ವರ ಎತ್ತಿದ್ದರು. ತಮ್ಮ ಮತ್ತು ಅವರ ನಡುವೆ ಮನಸ್ತಾಪವೇನಾದರೂ ಇದೆಯಾ ಎಂಬ ಪ್ರಶ್ನೆಗೆ ಶಿವಕುಮಾರ್ ಅವರು, ನಾನು ಬಿಜೆಪಿ, ದಳದವರ ಮೇಲೆಯೇ ಮನಸ್ತಾಪ ಹೊಂದಲು ಇಷ್ಟ ಪಡುವುದಿಲ್ಲ. ಬಿ.ಕೆ.ಹರಿಪ್ರಸಾದ್ ಅವರು ನಮ್ಮ ಪಕ್ಷದ ಅಧ್ಯಕ್ಷರು. ಅವರು ಅಧ್ಯಕ್ಷರಾಗಿರುವುದು ನಮ್ಮ ಭಾಗ್ಯ. ಅದಾನಿ ಅವರು ನಮ್ಮ ರಾಜ್ಯದಲ್ಲಿ ಸಾಕಷ್ಟು ವ್ಯವಹಾರ ಹೊಂದಿದ್ದಾರೆ. ಅವರಿಂದ ನಾವು ವಿದ್ಯುತ್ ಖರೀದಿ ಮಾಡುತ್ತಿದ್ದೇವೆ. ಅವರ ಸಿಮೆಂಟ್ ಫ್ಯಾಕ್ಟರಿ ರಾಜ್ಯದಲ್ಲಿದೆ. ಅಂತಹ ಒಬ್ಬ ಉದ್ಯಮಿ ಬಂದು ನಮ್ಮನ್ನು ಭೇಟಿ ಮಾಡಬೇಕೆಂದಾಗ ಬೇಡ ಅನ್ನೋಕಾಗುತ್ತಾ ಎಂದರು.
ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಇಲ್ಲದ ಸರ್ಕಾರ ಮತ್ತು ಪಕ್ಷದ ನಡುವಿನ ಸಮನ್ವಯ ಸಮಿತಿ ತಾವು ಮುಖ್ಯಮಂತ್ರಿ ಆದಾಗ ಮಾಡಲು ನಿಮ್ಮ ಪಕ್ಷ ತೀರ್ಮಾನಿಸಿದ್ದೇಕೆ? ನಿಮಗೆ ಮೂಗುದಾರ ಹಾಕುವ ಪ್ರಯತ್ನವಾ ಎಂಬ ಪ್ರಶ್ನೆಗೆ, ಅದೆಲ್ಲಾ ಸುಳ್ಳು. ಸಮನ್ವಯ ಸಮಿತಿ ಮಾಡೋಕೆ ಹೇಳಿದ್ದೇ ನಾನು. ನಾನೇ ಸರ್ಕಾರದಿಂದ 20 ಹೆಸರುಗಳನ್ನು ಸಮಿತಿಗೆ ಕೊಟ್ಟಿದ್ದೇನೆ. ಸರ್ಕಾರದಲ್ಲಿ ಯಾವುದೇ ತೀರ್ಮಾನ, ಯೋಜನೆ, ತಿದ್ದುಪಡಿ ಮಾಡುವ ಮುನ್ನ ರಾಜಕೀಯವಾಗಿ ಚರ್ಚೆ ಆಗಬೇಕೆಂದು ಈ ತೀರ್ಮಾನ ಮಾಡಿದ್ದೇವೆ. ನಾನು ಪ್ರಜಾಪ್ರಭುತ್ವ, ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟಿರುವವನು. ಸಮನ್ವಯ ಸಮಿತಿ ಸರ್ಕಾರಕ್ಕೆ ಸಲಹೆ, ಸೂಚನೆಗಳನ್ನು ನೀಡಬೇಕು. ಕಾರ್ಯಕರ್ತರಿಗೂ ದನಿಯಾಗಬೇಕು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.