ಮಂಗಳೂರಿನ ನಾಗುರಿ ಬಳಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದ ಹೊಣೆಯನ್ನು ‘ಐಸಿಸ್-ಖೊರಾಸಾನ್’ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿದೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಏನು ಹೇಳುತ್ತಾರೆ?
ಹುಬ್ಬಳ್ಳಿ (ಮಾ.07): ಮಂಗಳೂರಿನ ನಾಗುರಿ ಬಳಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದ ಹೊಣೆಯನ್ನು ‘ಐಸಿಸ್-ಖೊರಾಸಾನ್’ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿದೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಏನು ಹೇಳುತ್ತಾರೆ? ಈಗ ಶಿವಕುಮಾರ್ ಉತ್ತರವೇನು ಎಂಬುದು ಗೊತ್ತಾಗಬೇಕು. ಈ ವಿಷಯವನ್ನು ಪತ್ರಕರ್ತರು ಡಿಕೆಶಿಗೆ ಕೇಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಬೊಮ್ಮಾಯಿ, ಕುಕ್ಕರ್ ಬಾಂಬ್ ಸ್ಫೋಟವಾದಾಗ ಡಿ.ಕೆ.ಶಿವಕುಮಾರ್ ಅವರು ‘ಸ್ಫೋಟವಾಗಿದ್ದು ಸಾದಾ ಕುಕ್ಕರ್. ಇದನ್ನು ಬಿಜೆಪಿಯವರು ದುರುಪಯೋಗಪಡಿಸಿಕೊಂಡು ಭಯೋತ್ಪಾದಕ ಕೃತ್ಯ ಎಂದು ಬಿಂಬಿಸಲು ಹೊರಟಿದ್ದಾರೆ’ ಎಂದಿದ್ದರು. ಈಗ ಸ್ಫೋಟದ ಹೊಣೆಯನ್ನು ‘ಐಸಿಸ್-ಖೊರಾಸಾನ್’ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿದೆ. ಈಗ ಡಿಕೆಶಿ ಉತ್ತರವೇನು ಎಂಬುದು ಗೊತ್ತಾಗಬೇಕು ಎಂದರು.
ತಪ್ಪು ಮುಚ್ಚಿ ಹಾಕುವುದು ಕಾಂಗ್ರೆಸ್ ನೈತಿಕತೆ: ಸಿಎಂ ಬೊಮ್ಮಾಯಿ
2022ರ ನವೆಂಬರ್ 19ರಂದು ಮಂಗಳೂರಿನ ನಾಗುರಿ ಬಳಿ ರಿಕ್ಷಾವೊಂದರಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಸಂಭವಿಸಿತ್ತು. ಈ ವೇಳೆ, ಆರೋಪಿ ಶಂಕಿತ ಉಗ್ರ ಮಹಮ್ಮದ್ ಶಾರೀಕ್ ಹಾಗೂ ರಿಕ್ಷಾ ಚಾಲಕ ಪುರುಷೋತ್ತಮ್ ಗಾಯಗೊಂಡಿದ್ದು, ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತನಿಖೆ ವೇಳೆ ಇದು ಐಸಿಎಸ್ ಉಗ್ರರ ಕೃತ್ಯ ಎಂದು ತಿಳಿದು ಬಂದಿದ್ದರಿಂದ ಪ್ರಕರಣದ ತನಿಖೆಯನ್ನು ಎನ್‌ಐಎ (ರಾಷ್ಟ್ರೀಯ ತನಿಖಾ ದಳ)ಗೆ ವಹಿಸಲಾಗಿತ್ತು. ಬಳಿಕ, ಬೆಂಗಳೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ್ದ ಡಿಕೆಶಿ, ಮತದಾರರ ಮಾಹಿತಿ ಕಳ್ಳತನ, ಭ್ರಷ್ಟಾಚಾರದ ಆರೋಪದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ, ಇದನ್ನು ಉಗ್ರರ ಕೃತ್ಯ ಎಂದು ಬಿಂಬಿಸಲು ಹೊರಟಿದೆ.
ಅಲ್ಲಿ ಆಗಿದ್ದು ಕುಕ್ಕರ್ ಬ್ಲಾಸ್ಟ್. ಇದರಲ್ಲಿ ಭಯೋತ್ಪಾದಕ ಎಲ್ಲಿಂದ ಬಂದ? ಡಿಜಿಪಿಯವರು ಸ್ಫೋಟದ ಬಗ್ಗೆ ಕೂಡಲೇ ಟ್ವೀಟ್ ಮಾಡಿದ್ದಾರೆ. ತನಿಖೆ ಮಾಡದೆಯೇ ಇದೊಂದು ಭಯೋತ್ಪಾದಕ ದಾಳಿ ಎಂದಿದ್ದಾರೆ. ಅದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಈ ಮಧ್ಯೆ, ಐಸಿಸ್ ಸಂಘಟನೆಯ ಉಪ-ಸಂಘಟನೆ, ಐಸಿಸ್-ಖೊರಾಸಾನ್, ಈ ಸ್ಫೋಟದ ಹೊಣೆ ಹೊತ್ತುಕೊಂಡಿದ್ದು, ಈ ಕೃತ್ಯ ನಡೆಸಿದ್ದು ನಾವೇ ಎಂದು ಹೇಳಿಕೊಂಡಿದೆ. ಅಲ್ಲದೆ, ದಕ್ಷಿಣ ಭಾರತದಲ್ಲಿ ತನ್ನ ಸಂಘಟನೆಯ ಉಗ್ರರು ಸಕ್ರಿಯರಾಗಿದ್ದಾರೆ ಎಂದೂ ಹೇಳಿಕೊಂಡಿದೆ. ಸಂಘಟನೆಯ ಮುಖವಾಣಿ ನಿಯತಕಾಲಿಕೆ ‘ವಾಯ್‌್ಸ ಆಫ್ ಖೊರಾಸಾನ್’ನಲ್ಲಿ ಈ ಹೇಳಿಕೆ ಪ್ರಕಟವಾಗಿದೆ.
ಡಿಕೆಶಿ ಕ್ಷಮೆಯಾಚಿಸಲಿ: ಕುಕ್ಕರ್ ಬಾಂಬ್ ಸ್ಫೋಟ ಹೇಳಿಕೆ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಜನರ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಐಸಿಎಸ್, ಹಾಗೂ ತಾಲಿಬಾನಿ ಬೆಂಬಲ ನೀಡುತ್ತಿದೆ ಎಂದು ಜನರೇ ತೀರ್ಮಾನ ಮಾಡ್ತಾರೆ ಎಂದು ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿ ಸೋಮವಾರ ಫಲಾನುಭವಿಗಳ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಕ್ಕರ್ ಬಾಂಬ್ ಸ್ಫೋಟಿಸಿದ್ದು ನಾವೇ ಎಂದು ಐಸಿಎಸ್ ಉಗ್ರ ಸಂಘಟನೆ ಒಪ್ಪಿಕೊಂಡಿದೆ. ಆದರೆ ಡಿ.ಕೆ. ಶಿವಕುಮಾರ ಅವರು, ಅದೊಂದು ಆಕ್ಸಿಡೆಂಟ್, ಬಿಜೆಪಿಯವರು ಗಮನ ಬೇರೆಡೆ ಸೆಳೆಯುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಕುರಿತು ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು ಅಥವಾ ತಾವು ಉಗ್ರರ ಪರವಾಗಿದ್ದೇವೆ ಎಂದು ಒಪ್ಪಿಕೊಳ್ಳಬೇಕು ಎಂದರು.
ಸಿಎಂಗೆ ಸೆಡ್ಡು ಹೊಡೆದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್: 2ನೇ ಸಲ ಶಿವಾಜಿ ಪ್ರತಿಮೆ ಉದ್ಘಾಟನೆ
ಪಾಕಿಸ್ತಾನದ ಭಯೋತ್ಪಾದಕ ಚಟುವಟಿಕೆ ಬೆಂಬಲಿಸದೇ ಅದನ್ನು ಕಪ್ಪುಪಟ್ಟಿಗೆ ಸೇರಿಸಿ ಏಕಾಂಗಿ ಮಾಡಬೇಕು ಎಂಬುದು ಭಾರತದ ದಿಟ್ಟನಿಲುವು ಆಗಿದೆ. ಕುಕ್ಕರ್ ಬಾಂಬ್ ಸ್ಫೋಟದ ಹಿಂದೆ ವಿದೇಶಿ ಶಕ್ತಿಗಳಿವೆ. ಘಟನೆಗೆ ಪಾಕಿಸ್ತಾನದ ಬೆಂಬಲ ಕೂಡ ಇದೆ. ಇಂತಹ ಸಮಯದಲ್ಲಿ ಅವರು ಈ ರೀತಿ ಹೇಳಿಕೆ ನೀಡುವುದು ಎಷ್ಟರ ಮಟ್ಟಿಗೆ ಸರಿ? ಎಂದರು. ಶಿವಕುಮಾರ ಕ್ಷಮೆ ಕೇಳಿದರೆ, ಭಯೋತ್ಪಾದನಾ ವಿರುದ್ಧದ ಹೋರಾಟದಲ್ಲಿದ್ದಾರೆ ಎಂದರ್ಥ. ಇಲ್ಲವಾದಲ್ಲಿ ಭಯೋತ್ಪಾದಕರ ಪರವಾಗಿ ಇದ್ದಾರೆ ಎಂಬುದು ಸಾಬೀತಾಗುತ್ತದೆ ಎಂದರು. ಒಂದು ಸಮುದಾಯ ಓಲೈಕೆಗಾಗಿ ಕಾಂಗ್ರೆಸ್‌ನವರು ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ. ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಸ್ಥಾನ ಲಭಿಸಿಲ್ಲ. ಆದರೂ ಕಾಂಗ್ರೆಸ್ ಈ ರೀತಿಯಲ್ಲಿ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಎಂದು ಲೇವಡಿ ಮಾಡಿದರು.