ರಾಜ್ಯದಲ್ಲಿ ಬಿಜೆಪಿಗೆ 130 ಸೀಟು ಗ್ಯಾರಂಟಿ, ಮೋದಿ ವಿಶ್ವದಲ್ಲೇ ಮಾನ್ಯತೆ ಪಡೆದವರು: ಬೊಮ್ಮಾಯಿ ಬಣ್ಣನೆ
ತುಮಕೂರು(ಡಿ.08): ರಾಜ್ಯದಲ್ಲಿ ಬಿಜೆಪಿಯ ಸುನಾಮಿ ಎದ್ದಿದೆ. ಸುನಾಮಿಯ ಅಬ್ಬರಕ್ಕೆ ಕಾಂಗ್ರೆಸ್ ಕೊಚ್ಚಿ ಹೋಗಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದರು. ತುಮಕೂರು ಜಿಲ್ಲೆಯ ಕುಣಿಗಲ್ ಹಾಗೂ ಕೊರಟಗೆರೆಯಲ್ಲಿ ಬುಧವಾರ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಅವರು ಮಾತನಾಡಿದರು. ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸಲಿದ್ದು, ಕರ್ನಾಟಕದಲ್ಲೂ ವಿಜಯಯಾತ್ರೆ ಮುಂದುವರೆಯಲಿದೆ. ಕಾಂಗ್ರೆಸ್ ಪಕ್ಷ ಇಡೀ ರಾಷ್ಟ್ರ ಹಾಗೂ ರಾಜ್ಯದಲ್ಲಿ ನಿರ್ಮೂಲನೆಯಾಗಲಿದೆ. ಬಿಜೆಪಿ ಯಾವಾಗ ಪರ್ಯಾಯ ಶಕ್ತಿಯಾಗಿ ಬೆಳೆಯಿತೋ ಆಗ ಕಾಂಗ್ರೆಸ್ ನೆಲಕಚ್ಚಿತು. ಮುಂಬರುವ ಚುನಾವಣೆಯಲ್ಲೂ ಕಾಂಗ್ರೆಸ್ ನೆಲಕಚ್ಚಲಿದೆ ಎಂದರು.
ರಾಜ್ಯದಲ್ಲಿ ಬಿಜೆಪಿಗೆ 130 ಸೀಟು ಬರುವುದು ಗ್ಯಾರಂಟಿ. ದೇಶದ 20 ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದೆ. ಕಾಂಗ್ರೆಸ್ ಪಕ್ಷ ಕೇವಲ 2 ರಾಜ್ಯದಲ್ಲಿ ಅಧಿಕಾರದಲ್ಲಿದೆ. 2023ಕ್ಕೆ ಅದನ್ನೂ ಕಳೆದುಕೊಂಡು ಕಾಂಗ್ರೆಸ್ ಮುಕ್ತ ರಾಷ್ಟ್ರ ಆಗಲಿದೆ ಎಂದರು.
ಶಿರಾದಲ್ಲಿ ಜೆಡಿಎಸ್ ಟಿಕೆಟ್ ಯಾರಿಗೆ..? ಎಚ್ಡಿಕೆಯಿಂದ ಸ್ಪಷ್ಟನೆ
ಪ್ರಧಾನಿ ನರೇಂದ್ರ ಮೋದಿ ವಿಶ್ವದಲ್ಲೇ ಮಾನ್ಯತೆ ಪಡೆದಿದ್ದಾರೆ. ಹಿಂದೆ ಕಾಂಗ್ರೆಸ್‌ನ ಪ್ರಧಾನಿಗಳು ಬೇರೆ ದೇಶಕ್ಕೆ ಹೋದರೆ ಕ್ಯಾರೆ ಎನ್ನುತ್ತಿರಲಿಲ್ಲ. ಆದರೆ ಈಗ ಇಡೀ ವಿಶ್ವ ಮೋದಿ ನಾಯಕತ್ವಕ್ಕೆ ಮನ್ನಣೆ ನೀಡುತ್ತಿದೆ. ಪ್ರಧಾನಿ ಮೋದಿಯವರು ಸಂಕಲ್ಪ ಮಾಡಿ, ಪ್ರತಿ ಮನೆಗೂ ನೀರು ಕೊಡುತ್ತಿದ್ದಾರೆ. 10 ಕೋಟಿ ಮನೆಗಳಿಗೆ ನೀರು ಕೊಟ್ಟಿದ್ದಾರೆ. ಸ್ವಾತಂತ್ರ ಬಂದು 70 ವರ್ಷವಾದರೂ ಜನರಿಗೆ ಶುದ್ಧ ನೀರು ಕೊಡಲು ಕಾಂಗ್ರೆಸ್‌ಗೆ ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್‌ದು ಸೋನಿಯಾ ಮಾತಾಕೀ ಜೈ. ಬಿಜೆಪಿಯದು ಭಾರತ್ ಮಾತಾಕೀ ಜೈ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗೈರು ಹಾಜರಾಗಿದ್ದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪಗೆ ಇನ್ನೊಂದು ವಿಶೇಷ ಕಾರ್ಯಕ್ರಮ ಇದ್ದುದ್ದರಿಂದ ಗೈರಾಗಿದ್ದಾರೆ. ಇದುವರೆಗೆ ಎಲ್ಲಾ ಜನಸಂಕಲ್ಪ ಯಾತ್ರೆಯಲ್ಲಿಯೂ ಅವರು ಪಾಲ್ಗೊಂಡಿದ್ದಾರೆ ಎಂದರು.
ಬಿಜೆಪಿ ನಾಯಕರ ಧೋರಣೆಗೆ ಬೇಸತ್ತು ಜೆಡಿಎಸ್‌ಗೆ ಸೇರ್ಪಡೆ
ಜನಸಂಕಲ್ಪ ಸಮಾವೇಶಕ್ಕೆ ಜನಸಾಗರ:
ಕುಣಿಗಲ್ ಮತ್ತು ಕೊರಟಗೆರೆಯಲ್ಲಿ ನಡೆದ ಜನಸಂಕಲ್ಪ ಯಾತ್ರೆಗೆ ಜನಸಾಗರವೇ ಹರಿದು ಬಂತು. ಪಟ್ಟಣಗಳು ಕೇಸರಿಮಯವಾಗಿ ಕಂಗೊಳಿಸುತ್ತಿದ್ದವು. ರಸ್ತೆಯುದ್ದಕ್ಕೂ ಬಿಜೆಪಿ ನಾಯಕರ ಸಾವಿರಾರು ಕಟೌಟ್, ಬ್ಯಾನರ್ ಮತ್ತು ಬಿಜೆಪಿ ಪಕ್ಷದ ಬಾವುಟಗಳು ರಾರಾಜಿಸುತ್ತಿದ್ದವು.
ಡಾ.ಲಕ್ಷ್ಮೀಕಾಂತ ಬೆಂಬಲಿಗರ ಹೈಡ್ರಾಮ:
ಜನಸಂಕಲ್ಪ ಸಮಾವೇಶದ ವೇಳೆ ಬಿಜೆಪಿ ಆಕಾಂಕ್ಷಿ ಡಾ.ಲಕ್ಷ್ಮೀಕಾಂತ ಬೆಂಬಲಿಗರ ಹೈಡ್ರಾಮವೇ ನಡೆಯಿತು. ಬೊಮ್ಮಾಯಿ ಮತ್ತು ಸಚಿವ ಗೋವಿಂದ ಕಾರಜೋಳ ಭಾಷಣದ ವೇಳೆ ಡಾ.ಲಕ್ಷ್ಮೀಕಾಂತ ಬೆಂಬಲಿಗರು ಭಾವಚಿತ್ರ ಹಿಡಿದು ಲಕ್ಷ್ಮೇಕಾಂತ ಪರ ಘೋಷಣೆಗಳನ್ನು ಕೂಗಿದರು. ಭಾಷಣಕ್ಕೆ ಅಡ್ಡಿಯಾದಾಗ ಗೋವಿಂದ ಕಾರಜೋಳ ಸುಮ್ಮನಿರಲು 5 ಬಾರಿ ಮನವಿ ಮಾಡಿದರು. ನಂತರ ಕೂಡ ಘೋಷಣೆ ಹೆಚ್ಚಾದಾಗ ವೇದಿಕೆ ಮೇಲೆಯೇ ಮುಖ್ಯಮಂತ್ರಿ ಬೊಮ್ಮಾಯಿಯವರು ಲಕ್ಷ್ಮೀಕಾಂತ್‌ರನ್ನು ಕರೆದು ಕ್ಲಾಸ್ ತೆಗೆದುಕೊಂಡು ಬೆಂಬಲಿಗರನ್ನು ಸುಮ್ಮನಿರುವಂತೆ ಖಡಕ್ ಎಚ್ಚರಿಕೆ ನೀಡಿದರು.