ಅತ್ತಿಬೆಲೆ ಪಟಾಕಿ ದುರಂತದ ಘಟನೆಯಲ್ಲಿ 14 ಮಂದಿ ಘೋರವಾಗಿ ಸಾವನ್ನಪ್ಪಿದ್ದು, ಇನ್ನೂ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗೋದಾಮು ಮಾಲೀಕರ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಗೋದಾಮಿಗೆ ಜಿಲ್ಲಾಧಿಕಾರಿಗಳು, ಪೊಲೀಸ್ ಹಾಗೂ ಅಗ್ನಿಶಾಮಕ ದಳ ಹೇಗೆ ನಿರಾಪೇಕ್ಷಣಾ ಪತ್ರ ನೀಡಿದರು ಎಂಬುದೂ ಪ್ರಶ್ನೆಯಾಗಿದೆ.
ಬೆಂಗಳೂರು (ಅ.09): ಅತ್ತಿಬೆಲೆ ಪಟಾಕಿ ದುರಂತದ ಘಟನೆಯಲ್ಲಿ 14 ಮಂದಿ ಘೋರವಾಗಿ ಸಾವನ್ನಪ್ಪಿದ್ದು, ಇನ್ನೂ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗೋದಾಮು ಮಾಲೀಕರ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಗೋದಾಮಿಗೆ ಜಿಲ್ಲಾಧಿಕಾರಿಗಳು, ಪೊಲೀಸ್ ಹಾಗೂ ಅಗ್ನಿಶಾಮಕ ದಳ ಹೇಗೆ ನಿರಾಪೇಕ್ಷಣಾ ಪತ್ರ ನೀಡಿದರು ಎಂಬುದೂ ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ ಅತ್ತಿಬೆಲೆ ದುರಂತದ ತನಿಖೆಯನ್ನು ಸಿಐಡಿಗೆ ವಹಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಿಐಡಿ ಪೊಲೀಸರ ತಂಡ ದುರಂತದ ಹಿಂದಿರುವ ಕಾರಣ ಹಾಗೂ ತಪ್ಪಿತಸ್ಥರನ್ನು ಪತ್ತೆ ಹಚ್ಚಲಿದೆ. ಪ್ರಕರಣದಲ್ಲಿ ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಅಲ್ಲದೆ, ಮೃತರ ಕುಟುಂಬಕ್ಕೆ ಈಗಾಗಲೇ ಘೋಷಿಸಿರುವಂತೆ ರಾಜ್ಯ ಸರ್ಕಾರದ ವತಿಯಿಂದ 5 ಲಕ್ಷ ರು. ಪರಿಹಾರ ನೀಡಲಾಗುವುದು. ಜತೆಗೆ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದ ಭರಿಸಲಾಗುವುದು ಎಂದು ಭರವಸೆ ನೀಡಿದರು. ಅತ್ತಿಬೆಲೆಯಲ್ಲಿ ನಡೆದ ಅಗ್ನಿದುರಂತದ ಘಟನಾ ಸ್ಥಳಕ್ಕೆ ಹಾಗೂ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜತೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ ಪಟಾಕಿ ಗೋದಾಮುಗಳ ಸುರಕ್ಷತೆ ಬಗ್ಗೆ ಪರಿಶೀಲನೆ: ಡಿಕೆಶಿ
ಇದು ಅತ್ಯಂತ ದುರದೃಷ್ಟಕರ ಘಟನೆ. ರಾಮಸ್ವಾಮಿರೆಡ್ಡಿ ಎಂಬುವರು ಪರವಾನಗಿ ಪಡೆದು ಪಟಾಕಿ ಮಾರಾಟದ ವ್ಯವಹಾರ ಮಾಡುತ್ತಿದ್ದರು. ಮಧ್ಯಾಹ್ನ 3 ಗಂಟೆ ಸಮಯದಲ್ಲಿ ತಮಿಳುನಾಡಿನಿಂದ ಟ್ರಕ್ ಗಳಲ್ಲಿ ಪಟಾಕಿಗಳು ಬಂದಿದ್ದು, ಬೆಂಕಿ ಹೇಗೆ ಪಟಾಕಿಗಳ ಮೇಲೆ ಬಿತ್ತು ಎನ್ನುವ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ. ಅಧಿಕಾರಿಗಳು ಇಲ್ಲಿ ಪರಿಶೀಲಿಸಿದಾಗ ಸ್ಫೋಟಕಗಳ ಮಾರಾಟ ಮಾಡುವ ಗೋದಾಮಿನಲ್ಲಿ ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ ಎಂದು ಕಂಡುಬಂದಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯಲಿದೆ ಎಂದು ಹೇಳಿದರು.
ಪರವಾನಾಗಿಯನ್ನು ಸೆ.13ರಂದು ನವೀಕರಿಸಲಾದ್ದು, ಅ.31ರವರೆಗೆ ಚಾಲ್ತಿಯಲ್ಲಿದೆ. ಮತ್ತೊಂದು ಪರವಾನಗಿ 2021ರ ಜ.18ರಿಂದ 2026ರ ಜ.28ರವರೆಗೆ ಜಾರಿಯಲ್ಲಿರಲಿದೆ. ಅನಿಲ್ ರೆಡ್ಡಿ ಹಾಗೂ ಜಯಮ್ಮ ಎಂಬುವವರು ಈ ಜಾಗದ ಮಾಲೀಕರು. ಪ್ರಕರಣದಲ್ಲಿ ಪರವಾನಗಿ ಪಡೆದು ವ್ಯವಹಾರ ನಡೆಸುತ್ತಿದ್ದ ರಾಮಸ್ವಾಮಿರೆಡ್ಡಿ, ಜಾಗದ ಮಾಲೀಕ ಅನಿಲ್ ರೆಡ್ಡಿ, ನವೀನ್ ಎಂಬುವವರನ್ನು ಬಂಧಿಸಿದ್ದು, ಒಟ್ಟು ಐದು ಮಂದಿ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿದರು.
ನಿರ್ಲಕ್ಷ್ಯ ಎದ್ದು ಕಾಣುತ್ತಿದೆ: ಸ್ಫೋಟಕಗಳಿಗೆ ಅಗತ್ಯವಾದ ಯಾವುದೇ ಸುರಕ್ಷಾ ಕ್ರಮಗಳನ್ನು ಕೈಗೊಂಡಿಲ್ಲ. ಗೋದಾಮು ಅಧಿಕೃತವೋ ಅಲ್ಲವೋ ಎಂಬುದನ್ನು ಪರಿಶೀಲಿಸಬೇಕು. ಹಿಂಭಾಗದಲ್ಲಿ 200 ಅಡಿಗಳವರೆಗೂ ಗೋದಾಮು ಇದೆ. ಎಲ್ಲೂ ಕೂಡ ಅಗ್ನಿ ಶಾಮಕಗಳನ್ನು ಅಳವಡಿಸಿಲ್ಲ. ಒಟ್ಟಾರೆ ಮೇಲ್ನೋಟಕ್ಕೆ ಪರವಾನಗಿ ಹೊಂದಿದವರ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಜಿಲ್ಲಾಧಿಕಾರಿಗಳನ್ನು ವಿಚಾರಿಸಿದಾಗ, ಅಗ್ನಿಶಾಮಕ ದಳ ಹಾಗೂ ಪೊಲೀಸರು ನಿರಾಕ್ಷೇಪಣಾ ಪತ್ರ ನೀಡಿದ್ದರು ಎಂದು ಹೇಳಿದ್ದಾರೆ. ಜಿಲ್ಲಾಧಿಕಾರಿಗಳು ಖುದ್ದಾಗಿ ಭೇಟಿ ನೀಡಬೇಕಾಗಿತ್ತು.
ಆನೇಕಲ್ ಪಟಾಕಿ ದುರಂತ, ಮಾಲೀಕನ ಮೇಲೆ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ: ಸಿದ್ದರಾಮಯ್ಯ
ಪರವಾನಗಿಯನ್ನು ಸ್ಫೋಟಕಗಳ ಕಾಯ್ದೆಯಡಿಯಲ್ಲಿ ನೀಡಿರುವುದರಿಂದ ನಿರಾಕ್ಷೇಪಣಾ ಪತ್ರ ನೀಡಿದವರು ಸ್ಫೋಟಕಗಳ ಕಾಯ್ದೆಯಲ್ಲಿನ ಅಗತ್ಯಗಳನ್ನು ನೋಡಿ ಕೊಡಬೇಕಿತ್ತು. ಜಿಲ್ಲಾಧಿಕಾರಿಗಳೂ ಕೂಡ ಸ್ಥಳ ಪರಿಶೀಲನೆ ಮಾಡಿ ಪರವಾನಗಿ ನೀಡಬೇಕಿತ್ತು. ಹೀಗಾಗಿ ಈ ಬಗ್ಗೆ ಸೂಕ್ತ ಪರಿಶೀಲನೆಯಾಗಬೇಕು ಎಂದು ಹೇಳಿದರು. 1000 ಕೆ.ಜಿ ಮಾರಾಟ ಮಾಡಲು ಪರವಾನಗಿ ಇದ್ದು, ಬಹುಶಃ ಸಂಗ್ರಹ ಮಾಡಲು ಪರವಾನಗಿ ಇರಲಿಲ್ಲ ಎನಿಸುತ್ತದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.