'ಸಿದ್ದರಾಮಯ್ಯ ಅಮೃತ ಮಹೋತ್ಸವ ಬಿಜೆಪಿಗೆ ನಡುಕ ಶುರುವಾಗಿದೆ'

Published : Jul 29, 2022, 04:19 PM IST
'ಸಿದ್ದರಾಮಯ್ಯ ಅಮೃತ ಮಹೋತ್ಸವ ಬಿಜೆಪಿಗೆ ನಡುಕ ಶುರುವಾಗಿದೆ'

ಸಾರಾಂಶ

ಸಿದ್ದರಾಮಯ್ಯ ಅಮೃತ ಮಹೋತ್ಸವ ಬಿಜೆಪಿಗೆ ನಡುಕ ಶುರುವಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಎಚ್.ಆಂಜನೇಯ ಕಿಡಿಕಾರಿದ್ದಾರೆ.

ಚಿತ್ರದುರ್ಗ, (ಜುಲೈ.29):  ಪ್ರತಿ ವ್ಯಕ್ತಿಯ ಜೀವನದಲ್ಲಿ 50, 60, 75, 100ನೇ ವರ್ಷದ ಜನ್ಮದಿನ ಸಂಭ್ರಮದ ವಿಷಯ. ಈ ನೆಲೆಗಟ್ಟಿನಲ್ಲಿ ಜನನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನವನ್ನು ಅಭಿಮಾನಿಗಳು, ಬೆಂಬಲಿಗರು ವಿಶೇಷವಾಗಿ ಹಮ್ಮಿಕೊಂಡಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ. 

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಂಜನೇಯ ಅವರು, ಸಿದ್ದರಾಮಯ್ಯ ಅವರ ಜನ್ಮದಿನ ಆಚರಣೆ ಬಿಜೆಪಿಗರಲ್ಲಿ ನಡುಕು ಉಂಟು ಮಾಡಿದೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಹೆಸರು ಕೇಳಿದರೆ ನಿದ್ದೆಗೆಟ್ಡು ಬೆಚ್ಚುಬೀಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. 

ಸಿದ್ದರಾಮೋತ್ಸವಕ್ಕೆ ಜನ ಸೇರಿಸುವ ಹೊಣೆಹೊತ್ತುಕೊಂಡ ಬಿಜೆಪಿ ಹಿರಿಯ ನಾಯಕನ ಪುತ್ರ

ಜನಧನ್ ಅಕೌಂಟ್, ಉಜ್ವಲ ಯೋಜನೆ ಮೂಲಕ ಬಡಜನರ ಬದುಕನ್ನು ಉತ್ತಮದತ್ತ ಕೊಂಡೊಯ್ಯೊತ್ತೇವೆ ಎಂದು ಹೇಳಿ, ಈಗ ಜನರನ್ನು ಸಂಕಷ್ಟ ಸಿಲುಕಿಸಲಾಗಿದೆ. ಸಿಲಿಂಡರ್ ಬೆಲೆ ಏರಿಕೆ ಆಗಿ ಜನ ಕಟ್ಟಿಗೆ ಒಲೆ ಕಡೆ ಹೋಗುತ್ತಿದ್ದಾರೆ. ಬೇಳೆಕಾಳು, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಪ್ರತಿವರ್ಷಕ್ಜೆ ಎರಡು ಕೋಟಿ ಉದ್ಯೋಗದ ಆಸೆ ತೋರಿಸಿದ್ದ ಬಿಜೆಪಿ, ಪ್ರತಿವರ್ಷ ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ಉದ್ಯೋಗ ಕಡಿತ ಮಾಡುತ್ತಿದೆ. ಅಚ್ಚೇದಿನ್ ಅಂದರೇ ಇದೆನಾ ಎಂದು ಜನರು ಬಿಜೆಪಿ, ಮೋದಿ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಜನ ಸ್ಮರಿಸುತ್ತಿದ್ದಾರೆ ಎಂದರು. 

ಬಡವರ ವಿರೋಧಿ, ಶ್ರೀಮಂತರ ಪರ ಸರ್ಕಾರ ಆಗಿರುವ ಬಿಜೆಪಿಗೆ ಪಾಠ ಕಲಿಸಲು ಜನ ಕಾಯುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ತರಲು ಜನ ಉತ್ಸಾಹಕರಾಗಿದ್ದಾರೆ.  ಜನರ ನಾಡಿಮಿಡಿತವನ್ನು ಆಂತರಿಕ ಸರ್ವೇ ಮೂಲಕ ಅರಿತು ಹಾಗೂ ಈ ಮಧ್ಯೆ ಸಿದ್ದರಾಮಯ್ಯ ಜನ್ಮದಿನಕ್ಕೆ ಲಕ್ಷಾಂತರ ಜನ ಸೇರುವುದರಿಂದ ಬಿಜೆಪಿ ನಾಯಕರು ಆತಂಕಕ್ಕೆ ಒಳಗಾಗಿದ್ದಾರೆ ಎಂದರು. ಐಟಿ, ಇಡಿ, ಸಿಬಿಐ ಮೂಲಕ ಪ್ರತಿಪಕ್ಷವನ್ನು ಬೆದರಿಸಲು ಯತ್ನಿಸುತ್ತಿರುವ ಬಿಜೆಪಿ ಸರ್ಕಾರ, ಸಿದ್ದರಾಮಯ್ಯ ವಿರುದ್ಧ ಏನು ಮಾಡಲಾಗದೆ ಮೈ ಮರಚಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ನಡೆದರು, ಕುಂತ್ರು, ನಿಂತ್ರು, ಮಾತನಾಡಿದರು, ಸುಮ್ಮನಿದ್ದರು ಟೀಕೆ ಮಾಡುವ ಕೆಟ್ಟ ಹವ್ಯಾಸ ಬೆಳೆಸಿಕೊಂಡಿರುವ ಬಿಜೆಪಿಗರು, ಈಗ ಅಭಿಮಾನಿಗಳು ಮಧ್ಯಕರ್ನಾಟಕ ದಾವಣಗೆರೆಯಲ್ಲಿ ಆಯೋಜಿಸಿರುವ ಸಿದ್ದರಾಮಯ್ಯ ಜನ್ಮದಿನ ಸಂಭ್ರಮದ ಮೇಲೆ ಹೊಟ್ಟೆ ಕಿಚ್ಚು ಪಡುತ್ತಿದ್ದಾರೆ ಎಂದು ಹೇಳಿದರು. 

ಈ ಹಿಂದೆ ಅನೇಕ ನಾಯಕರು 50, 60, 75 ಹೀಗೆ ವಿಶೇಷ ಸಂದರ್ಭ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸಿಕೊಂಡಿದ್ದಾರೆ. ಈಗಲೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಬಿ.ಎಸ್.ಯಡಿಯೂರಪ್ಪ, ಎಸ್.ಎಂ.ಕೃಷ್ಣ ಸೇರಿ ಅನೇಕ ಮುತ್ಸದ್ಧಿಗಳ ಜನ್ಮದಿನಕ್ಕೆ ನಾವೆಲ್ಲರೂ ಪಕ್ಷಾತೀತವಾಗಿ ಶುಭ ಕೋರುತ್ತೇವೆ. ಆದರೆ, ಬಿಜೆಪಿಗರು ಸಿದ್ದರಾಮಯ್ಯ ಜನ್ಮದಿನದ ಆಚರಣೆಗೆ ಮಾತ್ರ ಟೀಕಿಸುತ್ತಿರುವುದು ಅವರ ಸಣ್ಣ, ಕೆಟ್ಟ ಮನಸ್ಥಿತಿ ಹಾಗೂ ಭೀತಿಗೆ ಒಳಗಾಗಿರುವುದಕ್ಕೆ ಕನ್ನಡಿ ಆಗಿದೆ ಎಂದು ಬೇಸರಿಸಿದರು. ಸಿದ್ದರಾಮಯ್ಯ ಅವರ ಜನ್ಮದಿನವನ್ನು ಅಮೃತೋತ್ಸವ ಎಂದು ನಾವು ಕಾರ್ಯಕ್ರಮ ಆಯೋಜಿಸಿದ್ದೇವೆ.  ಅಭಿಮಾನಿಗಳು ರಾಜ್ಯಾಧ್ಯಂತ ಕಟೌಟ್, ವಾಹನದ ಮೇಲೆ ಫ್ಲೆಕ್ಸ್ ಗಳು ಹಾಕಿಕೊಂಡು ಸಂಭ್ರಮಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಮೇಲೆ ಇರುವ ಜನರ ಪ್ರೀತಿ ಬಣ್ಣಿಸಲಾಗದಷ್ಟು ಅಗಾಧವಾಗಿದೆ ಎಂದರು. 

ಗಣಿನಾಡು ಬಳ್ಳಾರಿಗೆ ಪಾದಯಾತ್ರೆ ಮೂಲಕ ಸಿದ್ದರಾಮಯ್ಯ ಬಿಜೆಪಿಯ ಆಡಳಿತವನ್ನು ಕಿತ್ತು ಹಾಕಿದ್ದರು. ಈಗ ಶಿಕ್ಷಣ ಕಾಶಿ, ದಾನಧರ್ಮ, ಹೋರಾಟದ ನೆಲ ಎಂದೇ ಖ್ಯಾತಿ ಗಳಿಸಿರುವ ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮಯ್ಯ ಜನ್ಮದಿನ ಆಚರಣೆಯು ಕೆಟ್ಟು ನಿಂತಿರುವ ಡಬಲ್ ಇಂಜಿನ್ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಲು ಮುನ್ನುಡಿ ಬರೆಯಲಿದೆ.ಈ ಕಾರಣಕ್ಕೆ ಸಿದ್ದರಾಮಯ್ಯ ಜನ್ಮದಿನದ ಅಮೃತ ಮಹೋತ್ಸವ ಕುರಿತು ಬಿಜೆಪಿ ನಾಯಕರು ಭಯಭೀತಿಗೆ ಒಳಗಾಗಿ ಅಧಾರರಹಿತ ಟೀಕೆ ಮಾಡುತ್ತಿದ್ದಾರೆ ಎಂದರು. ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಕಡು ಟೀಕೆ ಮಾಡುತ್ತಲೇ ಅವರ 75ನೇ ವರ್ಷದ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಯಡಿಯೂರಪ್ಪ ಅವರಿಗೆ ಆಯಸ್ಸು, ಆರೋಗ್ಯ, ನೆಮ್ಮದಿ ನೀಡಲಿ ಎಂದು ಹಾರೈಸಿದ ಹೃದಯವಂತ  ಸಿದ್ದರಾಮಯ್ಯ. ಈ ಪ್ರೀತಿಯನ್ನು ಯಡಿಯೂರಪ್ಪ ಕೂಡ ಹೊಂದಿದ್ದು, ಇದೇ ಕಾರಣಕ್ಕೆ ಸಿದ್ದರಾಮಯ್ಯ ಜನ್ಮದಿನ ಕಾರ್ಯಕ್ರಮವನ್ನು ಟೀಕಿಸದಂತೆ ಪಕ್ಷದ ನಾಯಕರಿಗೆ ಸೂಚನೆ ನೀಡಿರುವುದು ಹಾಗೂ ನಾಡಿನ ಮತ್ಸದ್ಧಿ ಸಿದ್ದರಾಮಯ್ಯ ಅವರ ಜನ್ಮದಿನಕ್ಕೆ ಶುಭಾಶಯ ಕೋರಿರುವ ಯಡಿಯೂರಪ್ಪ ಅವರ ದೊಡ್ಡತನ ಮೆಚ್ಚುವಂತಹದ್ದಾಗಿದೆ . ಬಿಜೆಪಿ ಇತರೆ ನಾಯಕರು ಇದನ್ನು ಪಾಲಿಸುವ ಗುಣ ಬೆಳೆಸಿಕೊಳ್ಳಲಿ ಎಂದು ಕಿವಿಮಾತು ಹೇಳಿದರು. 

ರಾಜಕೀಯ, ಸೈದ್ಧಾಂತಿಕ ಭಿನ್ನಾಭಿಪ್ರಾಯದ ಮಧ್ಯೆಯೂ ಮನುಷ್ಯತ್ವ ನಮ್ಮಲ್ಲಿ ಇರಬೇಕು. ಆಗ ಮಾತ್ರ ಮತ್ತೊಬ್ಬರ ಸಂಭ್ರಮವನ್ನು ಗೌರವಿಸುವ ಮನಸ್ಥಿತಿ ಬರಲಿದೆ. ಆದರೆ, ಬಿಜೆಪಿಗರು ಮನುಷ್ಯತ್ವವನ್ನೇ ಕಳೆದುಕೊಂಡು ನೀಚತನದ  ಪ್ರದರ್ಶನತನಕ್ಕೆ ಇಳಿದಿದ್ದಾರೆ ಎಂದು ಬೇಸರಿಸಿದರು. ಸಿದ್ದರಾಮಯ್ಯ ಕೇವಲ ಒಂದು ಜಾತಿ, ಧರ್ಮ, ವರ್ಗಕ್ಕೆ ಸೀಮಿತ ನಾಯಕರು ಅಲ್ಲ. ಎಲ್ಲ ಸಮುದಾಯದ ಜನರ ಪ್ರೀತಿ ಗಳಿಸಿರುವ ವ್ಯಕ್ತಿ.‌ ತಮ್ಮ ಅಧಿಕಾರಾವಧಿಯಲ್ಲಿ ಎಲ್ಲ ವರ್ಗದ ಪ್ರಗತಿಗೆ ಶ್ರಮಿಸಿದ್ದಾರೆ. ಇಂತಹ ಅಪರೂಪದ ನಾಯಕನ 75ನೇ ವರ್ಷದ ಜನ್ಮದಿನ ನಾಡಿನ ಮಟ್ಟಿಗೆ ಹಬ್ಬ ಎಂದು ಬಣ್ಣಿಸಿದರು. 

ಕೆಎಸ್.ಆರ್.ಟಿಸಿ ನಿಗಮ ನಷ್ಟದಲ್ಲಿ ಇದೆ. ಆದ್ದರಿಂದ ಸಿದ್ದರಾಮಯ್ಯ ಜನ್ಮದಿನದ ಸೇರಿದಂತೆ ವಿಶೇಷ ಕಾರ್ಯಕ್ರಮಳಿಗೆ ಹೆಚ್ಚುವರಿ ಬಸ್ ಗಳನ್ನು ಬಿಡಬೇಕು. ಕೂಡಲೇ ಸಿದ್ದರಾಮಯ್ಯ ಜನ್ಮದಿನ ಕಾರ್ಯಕ್ರಮಕ್ಕೆ ವಿಶೇಷ ಬಸ್ ಗಳನ್ನು ರಾಜ್ಯದ ವಿವಿಧ ಸ್ಥಳಗಳಿಂದ ಬಿಟ್ಟರೆ ಸಾರಿಗೆ ನಿಗಮಕ್ಕೆ ಲಾಭ ಆಗಲಿದೆ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 

ಪಕ್ಷ ಬಲವರ್ಧನೆ ಜನ್ಮದಿನ ಆನೆಬಲ
ಸಿದ್ದರಾಮಯ್ಯ ಜನ್ಮದಿನ ಕಾರ್ಯಕ್ರಮ ಪಕ್ಷದ ಬಲವರ್ಧನೆಗೆ ಹೆಚ್ಚು ಸಹಕಾರಿಯಾಗಲಿದೆ. ಜೊತೆಗೆ ಭವಿಷ್ಯದ ಪ್ರಧಾನಮಂತ್ರಿ ಎಂದೇ ಜನರಿಂದ ಪ್ರೀತಿಯಿಂದ ಕರೆಸಿಕೊಳ್ಳುತ್ತಿರುವ, ದೂರದೃಷ್ಠಿ ಯುವ ನಾಯಕ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಜನ್ಮದಿನಕ್ಕೆ ಶುಭಾಶಯ ಕೋರಲು ದೆಹಲಿಯಿಂದ ಆಗಮಿಸುತ್ತಿರುವುದು ಕಾರ್ಯಕ್ರಮಕ್ಕೆ ಆನೆಬಲ ತರುತ್ತಿದೆ. ಜೊತೆಗೆ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳಲ್ಲಿ ಹೆಚ್ಚು ಉತ್ಸಾಹ ಉಂಟು ಮಾಡಿದೆ. ಈ ಕಾರ್ಯಕ್ರಮ ಪಕ್ಷದಲ್ಲಿ ಒಗ್ಗಟ್ಟು ಪ್ರದರ್ಶನ ಹಾಗೂ ಪಕ್ಷದ ಕಾರ್ಯಕರ್ತರ ಶಕ್ತಿಪ್ರದರ್ಶನಕ್ಕೆ ವೇದಿಕೆಯಾಗಿ ಮಾರ್ಪಟ್ಟಿದೆ ಎಂದರು.

ದಲಿತ ಮುಖ್ಯಮಂತ್ರಿ ಎನ್ನುವ ಕೂಗು ನಿನ್ನೆ ಮೊನ್ನೆಯದಲ್ಲ. 2008 ರಲ್ಲಿಯೇ ಖರ್ಗೆ ನೇತೃತ್ವದಲ್ಲಿ ನಾವು ಚುನಾವಣೆ ಮಾಡಿದ್ದೆವು. ಆಗ ಖರ್ಗೆ ಸಿಎಂ ಆಗುವ ಅವಕಾಶವಿತ್ತು. ಆದ್ರೆ ದಲಿತ ಸಿಎಂ ಎಂದು ಘೋಷಣೆ ಮಾಡಿದ್ರೆ, ಜನ ಮತ ಕೊಡ್ತಾರೇನ್ರಿ ಎಂದು ಬೇಸರ ವ್ಯಕ್ತಪಡಿಸಿದರು. ಜಗಜೀವನ್ ರಾಮ್ ಪ್ರಧಾನಿ ಆಗುವ ಅವಕಾಶವನ್ನು ತಪ್ಪಿಸಲಾಯಿತು. ದಲಿತ ಸಿಎಂ ಎಂಬುದು ನಮ್ಮ ಪಕ್ಷದಲ್ಲಿ ಇಲ್ಲವೇ ಇಲ್ಲ ಎಂದು ಆಂಜನೇಯ ತಿಳಿಸಿದರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?