ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಿರುಸಿನ ಪ್ರಚಾರ ನಡೆಸಿದ್ದಾರೆ. ಇವರಿಗೆ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಎದುರಾಳಿಯಾಗಿದ್ದಾರೆ. ಚುನಾವಣೆಯ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ಕ್ಕೆ ನೀಡಿದ ಸಂದರ್ಶನದಲ್ಲಿ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ.
ವಿಜಯ್ ಮಲಗಿಹಾಳ
ಬೆಂಗಳೂರು (ಏ.23): ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಹಲವು ಬಿಜೆಪಿಯ ಮಾಜಿ ಸಚಿವರು ಈಗ ಲೋಕಸಭಾ ಚುನಾವಣೆ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶ ಕೊಡುತ್ತಿದ್ದಾರೆ. ಅವರಲ್ಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಪ್ರಭಾವಿ ಸಚಿವರು ಎಂಬ ಹೆಸರು ಗಳಿಸಿದ್ದ ಡಾ.ಕೆ.ಸುಧಾಕರ್ ಕೂಡ ಒಬ್ಬರು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಸೋತ ಬಳಿಕ ಹತ್ತು ತಿಂಗಳ ಅಜ್ಞಾತವಾಸದಿಂದ ಹೊರಬಂದಿರುವ ಅವರು ಈಗ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಿರುಸಿನ ಪ್ರಚಾರ ನಡೆಸಿದ್ದಾರೆ. ಇವರಿಗೆ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಎದುರಾಳಿಯಾಗಿದ್ದಾರೆ. ಚುನಾವಣೆಯ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ಕ್ಕೆ ನೀಡಿದ ಸಂದರ್ಶನದಲ್ಲಿ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ.
*ಲೋಕಸಭಾ ಚುನಾವಣೆಯ ಕಣ ರಂಗೇರಿದೆ. ನಿಮ್ಮ ಪ್ರಚಾರ ಹೇಗೆ ಸಾಗಿದೆ?
-ಕಳೆದ ಒಂದು ತಿಂಗಳಿಂದ ನಾನು ಕ್ಷೇತ್ರದಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಇಡೀ ಕ್ಷೇತ್ರದಲ್ಲಿ ಮೋದಿ ಪರವಾದ, ಬಿಜೆಪಿ ಪರವಾದ, ಎನ್‌ಡಿಎ ಪರವಾದ ವಾತಾವರಣವಿದೆ. 2014ರಲ್ಲಿ ಮತ್ತು 2019ರಲ್ಲಿ ನಾವು ನೋಡಿದ್ದ ಮೋದಿ ಅಲೆಗಿಂತ ಈ 2024ರಲ್ಲಿ ಮೋದಿ ಹವಾ ಇನ್ನೂ ಹೆಚ್ಚಾಗಿದೆ. ಮೋದಿ ಅವರ ಜನಪ್ರಿಯತೆ, ವಿಶ್ವಾಸಾರ್ಹತೆ ಇಮ್ಮಡಿಯಾಗಿದೆ. ಮೋದಿ ಗ್ಯಾರಂಟಿ ಮತ್ತು ನನ್ನ ಹತ್ತು ವರ್ಷಗಳ ಕೆಲಸ, ಇವೇ ನನಗೆ ಶ್ರೀರಕ್ಷೆ ಆಗಲಿದೆ.
15 ವರ್ಷದ ಸಾಧನೆ, ಮೋದಿ ಅಭಿವೃದ್ಧಿಯೇ ನನಗೆ ಶ್ರೀರಕ್ಷೆ: ಪಿ.ಸಿ.ಮೋಹನ್ ವಿಶೇಷ ಸಂದರ್ಶನ!
*ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತದಾರರು ನಿಮಗೇ ಯಾಕೆ ಮತ ಹಾಕಬೇಕು?
-ನಾನು ಚಿಕ್ಕಬಳ್ಳಾಪುರದ ಮಣ್ಣಿನ ಮಗ. ಇದು ನನ್ನ ಜನ್ಮಭೂಮಿಯೂ ಹೌದು, ಕರ್ಮಭೂಮಿಯೂ ಹೌದು. ಯಲಹಂಕ ನನ್ನ ತಾಯಿಯ ಜನ್ಮ ಸ್ಥಳ. ನನಗೆ ಈ ಭಾಗದ ಜನರ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅರಿವಿದೆ. ಚಿಕ್ಕಬಳ್ಳಾಪುರದಲ್ಲಿ 10 ವರ್ಷ ಶಾಸಕನಾಗಿ, 4 ವರ್ಷ ಈ ಭಾಗದ ಉಸ್ತುವಾರಿ ಸಚಿವನಾಗಿ ಸೇವೆ ಸಲ್ಲಿಸಿರುವ ಅನುಭವ ಇದೆ. ಮೇಲಾಗಿ ಕೇಂದ್ರದಲ್ಲಿ ಮತ್ತೊಮ್ಮೆ ಎನ್ ಡಿಎ ಸರ್ಕಾರ ಬರುವುದು ಸುನಿಶ್ಚಿತವಾಗಿದೆ. ಚಿಕ್ಕಬಳ್ಳಾಪುರದ ಸಂಸದ 400+ ಸಂಸದರು ಇರುವ ಮೋದಿ ಅವರ ತಂಡದಲ್ಲಿರಬೇಕಾ ಅಥವಾ 40 ಸಂಸದರಿರುವ ವಿರೋಧ ಪಕ್ಷದಲ್ಲಿರಬೇಕಾ ಅನ್ನುವುದನ್ನ ಇಲ್ಲಿನ ಪ್ರಜ್ಞಾವಂತ ಮತದಾರರು ನಿರ್ಧಾರ ಮಾಡುತ್ತಾರೆ.
*ಗೆಲ್ಲುವ ವಿಶ್ವಾಸ ಎಷ್ಟಿದೆ? ಅಂದಾಜು ಎಷ್ಟು ಮತಗಳ ಅಂತರದಿಂದ ಗೆಲ್ಲುವಿರಿ?
-ನೂರಕ್ಕೆ ನೂರರಷ್ಟು ಚಿಕ್ಕಬಳ್ಳಾಪುರದಲ್ಲಿ ನಾನು ಗೆಲ್ಲಲಿದ್ದೇನೆ. ಎನ್‌ಡಿಎ ಮೈತ್ರಿಕೂಟ ಇಲ್ಲಿ 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವುದು ಸುನಿಶ್ಚಿತ.
*ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ನಿಮಗೆ ಪ್ರಬಲ ಪೈಪೋಟಿ ಒಡ್ಡುತ್ತಿದ್ದಾರೆಯೇ?
-ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೊರಗಿನವರು. ಅವರಿಗೂ ಚಿಕ್ಕಬಳ್ಳಾಪುರಕ್ಕೂ ಯಾವ ಸಂಬಂಧವೂ ಇಲ್ಲ. ಅವರಿಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿವು ಇಲ್ಲ. ಜನರ ಸಂಪರ್ಕವಂತೂ ಇಲ್ಲವೇ ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ಬಳಿ ಹಣ ಬಲ ಇದೆ. ನನ್ನ ಬಳಿ ಜನ ಬಲವಿದೆ. ಅವರಿಗೆ ದೊಡ್ಡ ಪ್ರಭಾವಿ ಕುಟುಂಬದ ನಾಮ ಬಲ ಇದೆ. ನನ್ನ ಬಳಿ ಹತ್ತು ವರ್ಷಗಳ ಕೆಲಸದ ಟ್ರ್ಯಾಕ್ ರೆಕಾರ್ಡ್ ಇದೆ. ಇದು ‘ನಾಮ್‌ದಾರ್ ವರ್ಸಸ್ ಕಾಮ್‌ದಾರ್’ ನಡುವಿನ ಸ್ಪರ್ಧೆ.
*ಮೋದಿ ಮುಖ ನೋಡಿ ಮತ ಹಾಕಬೇಕು ಅಂತ ಬಿಜೆಪಿ ನಾಯಕರು ಹೇಳುತ್ತಿರುವುದು ಸರಿಯೇ?
-ಹತ್ತು ವರ್ಷಗಳ ಕಾಲ ಒಂದೇ ಒಂದು ಸಣ್ಣ ಕಳಂಕವೂ ಇಲ್ಲದೆ, ಭ್ರಷ್ಟಾಚಾರ ರಹಿತ, ಜನಪರ, ಅಭಿವೃದ್ಧಿಶೀಲ ಆಡಳಿತ ನೀಡಿರುವ ಮೋದಿ ಅವರ ಸರ್ಕಾರ ಭಾರತದ ಚಿತ್ರಣವನ್ನೇ ಬದಲಿಸಿದೆ. ವಿಶ್ವ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಿದೆ. ಭಯೋತ್ಪಾದಕರಿಗೆ, ದೇಶದ್ರೋಹಿಗಳಿಗೆ ಮೋದಿ ಸರ್ಕಾರ ಸಿಂಹಸ್ವಪ್ನವಾಗಿದೆ. ಸನಾತನ ಧರ್ಮದ ಗತವೈಭವ ಮರುಸ್ಥಾಪನೆ ಆಗಿದೆ. ಇಂತಹ ನಾಯಕನನ್ನ ಮತ್ತೊಮ್ಮೆ ಈ ದೇಶದ ಪ್ರಧಾನಿ ಮಾಡಿ ಅಂತ ಕೇಳುವುದು ತಪ್ಪಾ? ನಾವು ಮೋದಿ ಗ್ಯಾರಂಟಿ ಎಂದು ಮತ ಕೇಳುತ್ತಿದ್ದೇವೆ. ಏಕೆಂದರೆ ಮೋದಿ ಅವರ ವಿಶ್ವಾಸಾರ್ಹತೆ ಬಗ್ಗೆ ನಮಗೆ ನಂಬಿಕೆ ಇದೆ. ಕಾಂಗ್ರೆಸ್‌ನವರಿಗೆ ಅವರ ನಾಯಕತ್ವದ ಮೇಲೆ ಭರವಸೆ ಇದ್ದರೆ ರಾಹುಲ್ ಗಾಂಧಿ ಗ್ಯಾರಂಟಿ ಅಂತ ಹೇಳಿ ಮತ ಕೇಳಲಿ. ಅಸಲಿಗೆ ‘ಇಂಡಿ’ ಮೈತ್ರಿಕೂಟದ ನಾಯಕ ಯಾರು ಅಂತಲೇ ಇನ್ನೂ ನಿರ್ಧಾರ ಆಗಿಲ್ಲ. ಕ್ಯಾಪ್ಟನ್ ಇಲ್ಲದೆ ಮ್ಯಾಚ್ ಆಡಲು ಹೊರಟಿದೆ ‘ಇಂಡಿ’ ಮೈತ್ರಿಕೂಟ.
*ಹತ್ತು ತಿಂಗಳ ಕಾಲ ಅಜ್ಞಾತವಾಸ ಅನುಭವಿಸಿದೆ ಅಂತ ಕಳೆದ ವಾರ ಕಣ್ಣೀರು ಹಾಕಿದಿರಲ್ಲ ಯಾಕೆ?
-ಚಿಕ್ಕಬಳ್ಳಾಪುರ ನನ್ನ ಜನ್ಮಭೂಮಿ, ಕರ್ಮಭೂಮಿ. ಕಳೆದ 15 ವರ್ಷಗಳಿಂದ ಚಿಕ್ಕಬಳ್ಳಾಪುರದಲ್ಲಿ ನನ್ನ ಟ್ರಸ್ಟ್ ಮೂಲಕ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಹತ್ತು ವರ್ಷಗಳ ಕಾಲ ಚಿಕ್ಕಬಳ್ಳಾಪುರದ ಶಾಸಕನಾಗಿ ಸೇವೆ ಸಲ್ಲಿಸುತ್ತಿದ್ದಾಗ ಚಿಕ್ಕಬಳ್ಳಾಪುರದ ಜನತೆಗೂ ನನಗೂ ಇದ್ದದ್ದು ಕೇವಲ ಒಬ್ಬ ಜನಪ್ರತಿನಿಧಿಗೂ ಮತದಾರರಿಗೂ ಇರುವ ಸಂಬಂಧವಲ್ಲ. ಚಿಕ್ಕಬಳ್ಳಾಪುರದ ಜನತೆ ನನ್ನನ್ನ ತಮ್ಮ ಮನೆ ಮಗನಾಗಿ, ಸಹೋದರನಾಗಿ ಕಂಡಿದ್ದರು. ಈ ಅವಿನಾಭಾವ ಸಂಬಂಧಕ್ಕೆ ಕಳೆದ ಹತ್ತು ತಿಂಗಳಲ್ಲಿ ಎಲ್ಲೋ ಒಂದು ಕಡೆ ಧಕ್ಕೆ ಆಯ್ತಲ್ಲ ಅನ್ನುವ ಭಾವನೆಯಿಂದ ಅಂದು ಭಾವುಕನಾದೆ.
*ನೀವು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದು ಯಾಕೆ?
-ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ನನ್ನದಲ್ಲ. ಅದು ಪಕ್ಷದ ನಿರ್ಧಾರ. ಟಿಕೆಟ್ ಬಯಸಿದ್ದು, ಕೇಳಿದ್ದು ಸತ್ಯ, ಆದರೆ ಅಂತಿಮವಾಗಿ ನನ್ನ ಸ್ಪರ್ಧೆ ಪಕ್ಷದ ನಿರ್ಧಾರ. ನಿಜ ಹೇಳಬೇಕು ಅಂದರೆ 2009ರಲ್ಲೇ ನಾನು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಬೇಕು ಅಂತ ಬಯಸಿದ್ದೆ. ಆದರೆ ಆ ಅವಕಾಶ ಈಗ ಬಂದಿದೆ. ನಮ್ಮ ದೇಶ ವಿಕಸಿತ ಭಾರತ ಆಗುವತ್ತ ಮುನ್ನಡೆಯುತ್ತಿರುವ ಈ ಅಮೃತ ಕಾಲಘಟ್ಟದಲ್ಲಿ ಮೋದಿ ಅವರಂತಹ ಶ್ರೇಷ್ಠ ನಾಯಕನ ತಂಡದಲ್ಲಿ ಕೆಲಸ ಮಾಡುವುದು ನನ್ನ ಜೀವನದಲ್ಲಿ ಸಿಕ್ಕಿರುವ ಅತ್ಯಂತ ದೊಡ್ಡ ಅವಕಾಶ ಮತ್ತು ಸೌಭಾಗ್ಯ ಎಂದು ಭಾವಿಸಿದ್ದೇನೆ.
*ವಿಧಾನಸಭೆ ಚುನಾವಣೆಯಲ್ಲಿ ಸೋತವರನ್ನು ತಕ್ಷಣ ಸಂಸತ್ತಿಗೆ ಕಳಿಸುವುದಾದರೆ ಪಕ್ಷಕ್ಕಾಗಿ ದಶಕಗಳಿಂದ ದುಡಿಯುತ್ತಿರುವ ಇತರ ಮುಖಂಡರ, ಕಾರ್ಯಕರ್ತರ ಕತೆ ಏನು?
-ನಮ್ಮ ಪಕ್ಷದ ಸಂಘಟನೆ ಗಟ್ಟಿ ಇಲ್ಲದ ಕ್ಷೇತ್ರವನ್ನ ಸವಾಲಾಗಿ ತೆಗೆದುಕೊಂಡು 5,000 ಮತಗಳಿಂದ 85,000 ಮತ ಗಳಿಸುವ ಮಟ್ಟಕ್ಕೆ ಪಕ್ಷವನ್ನು ಬಲಪಡಿಸಿದ್ದೇನೆ. ಕಳೆದ ನಾಲ್ಕೂವರೆ ವರ್ಷಗಳಿಂದ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಸೇರಿದಂತೆ ಇಡೀ ಬಯಲುಸೀಮೆ ಭಾಗದಲ್ಲಿ ನಮ್ಮ ಬಿಜೆಪಿ ಪಕ್ಷವನ್ನ ಬೇರು ಮಟ್ಟದಿಂದ ಗಟ್ಟಿಗೊಳಿಸಲು ಸಾಕಷ್ಟು ಶ್ರಮ ಪಟ್ಟಿದ್ದೇನೆ. ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. 2020ರಲ್ಲಿ ಹೈದರಾಬಾದ್‌ನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತ್ತು ಇತ್ತೀಚೆಗೆ ನಡೆದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಸಹ-ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ. ಕೋವಿಡ್‌ನಂಥ ಸವಾಲಿನ ಸಂದರ್ಭದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿ ನಮ್ಮ ರಾಜ್ಯಕ್ಕೆ, ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಒಳ್ಳೆಯ ಹೆಸರು ತಂದಿದ್ದೇನೆ. ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಉಸ್ತುವಾರಿ ಸಚಿವನಾಗಿ ಈ ಭಾಗದ ಜನರೊಂದಿಗೆ, ಕಾರ್ಯಕರ್ತರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡಿದ್ದೇನೆ. ಬಹುಶಃ ಇವೆಲ್ಲವನ್ನೂ ಪರಿಗಣಿಸಿ, ನನ್ನ ಸೇವೆ ಹಾಗೂ ಸಾಮರ್ಥ್ಯ ಗುರುತಿಸಿ ಪಕ್ಷ ನನಗೆ ಅವಕಾಶ ನೀಡಿದೆ. ಪ್ರತಿಭೆ, ಸಾಮರ್ಥ್ಯಕ್ಕೆ ಬೆಲೆ ಕೊಡುವ ಪಕ್ಷ ನಮ್ಮದು. ಈಗ ಅವಕಾಶ ಸಿಗದವರಿಗೆ ಮುಂದೆ ಸಿಗುತ್ತದೆ. ಪಕ್ಷ ಯಾರನ್ನೂ ಕೈಬಿಡುವುದಿಲ್ಲ.
*ಬಿಜೆಪಿಯಲ್ಲಿ ನಿಮಗೆ ಟಿಕೆಟ್ ಸಿಗದೆ ಇದ್ದರೆ ನೀವು ವಾಪಸ್ ಕಾಂಗ್ರೆಸ್ ಹೋಗುವ ಪ್ರಯತ್ನ ನಡೆದಿತ್ತಂತೆ?
-ಇವೆಲ್ಲ ಕೇವಲ ಊಹಾಪೋಹಗಳು. ಟಿಕೆಟ್ ಬಗ್ಗೆ ಚರ್ಚೆಗಳು ನಡೆಯುತ್ತಿದ್ದಾಗ ಇಂತಹ ಗಾಳಿ ಸುದ್ದಿಗಳನ್ನು ಹರಿಬಿಟ್ಟು ಗೊಂದಲ ಸೃಷ್ಟಿಸುವ ದುರುದ್ದೇಶದಿಂದ ಕೆಲವರು ಮಾಡಿದ್ದು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟು ಬಿಜೆಪಿ ಸೇರಿದ್ದೇನೆ. ಹಾಗಾಗಿ ಪಕ್ಷ ತೊರೆಯುವ ಆಲೋಚನೆಯಾಗಲಿ, ಉದ್ದೇಶವಾಗಲಿ ಅಥವಾ ಅವಶ್ಯಕತೆಯಾಗಲಿ ನನಗಿಲ್ಲ.
*ನಿಮಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದು ಭಾರತದ ಶ್ರೀಮಂತ ಉದ್ಯಮಿಗಳಾದ ಗೌತಮ್ ಅದಾನಿ, ಮುಕೇಶ್ ಅಂಬಾನಿ ಅವರ ಪ್ರಭಾವದಿಂದ ಅಂತ ವದಂತಿ ಹಬ್ಬಿತ್ತು?
-ಇದು ಮತ್ತೊಂದು ಅಪಪ್ರಚಾರ. ನನಗೆ ಅಂಥ ಯಾವ ಪ್ರಭಾವಿ ವ್ಯಕ್ತಿಗಳ ಪರಿಚಯವೂ ಇಲ್ಲ, ಅಂಥ ಶಿಫಾರಸ್ಸಿನ ಅವಶ್ಯಕತೆಯೂ ನನಗಿಲ್ಲ. ಮೇಲಾಗಿ ಬಿಜೆಪಿ ಪಕ್ಷದಲ್ಲಿ ಅಂತಹ ಯಾರ ಪ್ರಭಾವ ನಡೆಯುವುದೂ ಇಲ್ಲ. ನಮ್ಮ ಪಕ್ಷದಲ್ಲಿ ಬಹಳ ವೈಜ್ಞಾನಿಕವಾಗಿ ಮತ್ತು ಪಾರದರ್ಶಕವಾಗಿ ಸರ್ವೇ ವರದಿ, ರಾಜ್ಯ ನಾಯಕರ ಅಭಿಪ್ರಾಯ, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ, ಸಂಘಟನೆಯ ಅಭಿಪ್ರಾಯ, ಗೆಲ್ಲುವ ಸಾಮರ್ಥ್ಯ ಹೀಗೆ ಅನೇಕ ಅಂಶಗಳನ್ನು ಪರಿಗಣಿಸಿ ಟಿಕೆಟ್ ನಿರ್ಧಾರ ಆಗುತ್ತದೆ. ಬಿಜೆಪಿ ಸಂಸ್ಕೃತಿ ಗೊತ್ತಿಲ್ಲದವರು ಮಾಡುವ ಅಪಪ್ರಚಾರ ಇದು.
*ಮತ್ತೆ ರಾಜ್ಯ ರಾಜಕಾರಣಕ್ಕೆ ವಾಪಸಾಗುವ ಉದ್ದೇಶ ಇದೆಯೇ ಅಥವಾ ಇಲ್ಲವೇ?
-ಪಕ್ಷದ ವರಿಷ್ಠರು ಸದ್ಯಕ್ಕೆ ನನಗೆ ಲೋಕಸಭೆಯ ಟಿಕೆಟ್ ಕೊಟ್ಟು ಗೆದ್ದುಕೊಂಡು ಬರುವ ಜವಾಬ್ದಾರಿ ಕೊಟ್ಟಿದ್ದಾರೆ. ಅವರ ವಿಶ್ವಾಸ ಉಳಿಸಿಕೊಂಡು ಗೆಲ್ಲುವುದು ಈಗ ನನ್ನ ಮುಂದಿರುವ ಏಕೈಕ ಗುರಿ. ನನ್ನ ಮುಂದಿನ ಭವಿಷ್ಯ ನಿರ್ಧರಿಸುವುದು ಪಕ್ಷಕ್ಕೆ, ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಪಕ್ಷ ಯಾವ ಕೆಲಸ ಕೊಟ್ಟರೂ ನಾನು ಅದನ್ನ ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ಮಾಡುತ್ತೇನೆ.
*ಜೆಡಿಎಸ್ ಜತೆಗಿನ ಮೈತ್ರಿ ನಿಮಗೆ ಅನುಕೂಲ ಉಂಟು ಮಾಡಲಿದೆಯೇ?
-ಪ್ರಧಾನಿ ಮೋದಿ ಅವರ ವರ್ಚಸ್ಸು, ಜನಪ್ರಿಯತೆ ನನಗೆ ಖಂಡಿತ ದೊಡ್ಡ ಶಕ್ತಿ. ಅದರ ಜೊತೆಗೆ ಈಗ ಜೆಡಿಎಸ್ ಎನ್‌ಡಿಎ ಭಾಗವಾಗಿದೆ. ಈ ದೇಶವನ್ನು ಮುನ್ನಡೆಸಲು ಮೋದಿ ಅವರಿಂದ ಮಾತ್ರ ಸಾಧ್ಯ ಎಂದು ಸ್ವತಃ ದೇವೇಗೌಡರೇ ಹೇಳಿದ್ದಾರೆ. ದೇವೇಗೌಡರ ಆಶೀರ್ವಾದದ ಜೊತೆಗೆ ಕುಮಾರಣ್ಣನವರ ಬೆಂಬಲ ಇದೆ. ಮೋದಿ ಗ್ಯಾರಂಟಿ, ದೇವೇಗೌಡರ ಆಶೀರ್ವಾದ, ಕುಮಾರಣ್ಣನವರ ಬೆಂಬಲ ಮತ್ತು ನನ್ನ ಹತ್ತು ವರ್ಷಗಳ ಕೆಲಸ. ಇವೇ ನನಗೆ ಶ್ರೀರಕ್ಷೆ ಆಗಲಿದೆ.
*ಯಲಹಂಕದಲ್ಲಿ ನಿಮಗೆ ಸ್ವಪಕ್ಷೀಯರಿಂದ ಒಳಹೊಡೆತ ಬೀಳುವ ಸಾಧ್ಯತೆ ಇದೆಯಂತೆ?
-ಯಲಹಂಕ ನಮ್ಮ ಪಕ್ಷದ ಶಾಸಕರಾದ ಎಸ್.ಆರ್.ವಿಶ್ವನಾಥ್ ನನ್ನ ಆತ್ಮೀಯ ಮಿತ್ರರು. 40 ವರ್ಷಗಳಿಂದ ಪಕ್ಷ ಕಟ್ಟಿ ಯಲಹಂಕ ಕ್ಷೇತ್ರವನ್ನ ಬಿಜೆಪಿ ಭದ್ರಕೋಟೆ ಮಾಡಿರುವ ನಿಷ್ಠಾವಂತ ಹಿರಿಯ ನಾಯಕರು. ಯಲಹಂಕ ಕ್ಷೇತ್ರದಲ್ಲಿ ನಾವಿಬ್ಬರೂ ಒಟ್ಟಿಗೆ ಪ್ರಚಾರ ಮಾಡುತ್ತಿದ್ದೇವೆ. ಯಲಹಂಕದಲ್ಲಿ ಒಂದು ಲಕ್ಷ ಮತಗಳ ಲೀಡ್ ಕೊಡಿಸುತ್ತೇನೆ ಅಂತ ಅವರೇ ಹೇಳಿದ್ದಾರೆ. ಹೀಗಿರುವಾಗ ಒಳಹೊಡೆತದ ಪ್ರಶ್ನೆ ಉದ್ಭವಿಸುವುದೇ ಇಲ್ಲ.
* ಕೋವಿಡ್ ಅಕ್ರಮ ಕುರಿತು ತನಿಖೆ ನಡೆಯುತ್ತಿದ್ದು, ಶೀಘ್ರ ಸುಧಾಕರ್ ಜೈಲು ಸೇರುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ಹೇಳಿದ್ದಾರೆ. ಇದಕ್ಕೆ ಏನು ಹೇಳುತ್ತೀರಿ?
-ಕೋವಿಡ್ ಮುಗಿದರೂ ನನ್ನ ಮೇಲಿನ ಅಪಪ್ರಚಾರ ಮುಗಿಯುತ್ತಲೇ ಇಲ್ಲ. ಕೋವಿಡ್ ಅಲೆಗಳು ನಿಂತು ಹೋಯಿತು. ಆದರೆ ನನ್ನ ಮೇಲಿನ ಅಪಪ್ರಚಾರದ ಅಲೆಗಳು ಪದೇ ಪದೇ ಬರುತ್ತಲೇ ಇವೆ. ಕೈಲಾಗದ ಶತ್ರುವಿನ ಕೊನೆಯ ಅಸ್ತ್ರವೇ ಅಪಪ್ರಚಾರ. ಅದನ್ನೇ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಎಲ್ಲಾ ಸರ್ವೇ ವರದಿಗಳು, ಸಮೀಕ್ಷೆಗಳು ಚಿಕ್ಕಬಳ್ಳಾಪುರದಲ್ಲಿ ಎನ್‌ಡಿಎ ಗೆಲ್ಲುತ್ತದೆ, ನಾನು ಗೆಲ್ಲುತ್ತೇನೆ ಎಂದು ಹೇಳುತ್ತಿರುವುದರಿಂದ ಹತಾಶೆಯಿಂದ ನನ್ನ ಮೇಲೆ ಕೆಸರೆರಚುವ ಪ್ರಯತ್ನ ಮಾಡುತ್ತಿದ್ದಾರೆ. ಈ ಎಲ್ಲಾ ಅಪಪ್ರಚಾರಗಳು, ತೇಜೋವಧೆಯ ಪ್ರಯತ್ನಗಳು ಕಾಂಗ್ರೆಸ್ ಪಕ್ಷಕ್ಕೇ ತಿರುಗುಬಾಣ ಆಗಲಿದೆ.
ಅಟಲ್‌ರಂತೆ ನರೇಂದ್ರ ಮೋದಿ ಕೂಡ ಸೋಲುತ್ತಾರೆ: ಮುಖಾಮುಖಿ ಸಂದರ್ಶನದಲ್ಲಿ ಸುರ್ಜೇವಾಲಾ
*ಕಾಂಗ್ರೆಸ್ ಗ್ಯಾರಂಟಿಗಳು ಬಿಜೆಪಿ ಅಭ್ಯರ್ಥಿಗಳಿಗೆ ಆತಂಕ ತಂದಿದೆಯಂತೆ ಹೌದಾ?
-ಖಂಡಿತಾ ಇಲ್ಲ. ಕಾಂಗ್ರೆಸ್ ಗ್ಯಾರಂಟಿಗಳು ಚುನಾವಣೆ ಗೆಲ್ಲಲು ಮಾಡಿರುವ ಗಿಮಿಕ್. ಮೋದಿ ಗ್ಯಾರಂಟಿ ಜನರ ಬದುಕನ್ನ ಗೆಲ್ಲಿಸುವ ನಿಜವಾದ ಗ್ಯಾರಂಟಿ. ಕಾಂಗ್ರೆಸ್ ಗ್ಯಾರಂಟಿ ನೀರಿನ ಮೇಲಿನ ಗುಳ್ಳೆಯಂತೆ ಕ್ಷಣಿಕ, ತಾತ್ಕಾಲಿಕ. ಮೋದಿ ಗ್ಯಾರಂಟಿ ಶಾಶ್ವತವಾಗಿ ಜನರ ಬದುಕು ಕಟ್ಟಿಕೊಡುವ ಗ್ಯಾರಂಟಿ. ಜನರು ನಂಬುವುದು ಮೋದಿ ಗ್ಯಾರಂಟಿಯನ್ನ ಮಾತ್ರ.