ಚಾಮುಂಡೇಶ್ವರಿ ಎಲ್ಲರ ತಾಯಿ, ಎಲ್ಲರ ಹಕ್ಕು – ಡಿಕೆಶಿ; ಚಾಮುಂಡಿ ಎಲ್ಲರ ತಾಯಿಯಾದರೂ 'ಹಿಂದೂ ದೇವಿ' -ಯದುವೀರ್

Published : Aug 27, 2025, 05:43 PM IST
Chamundi Temple Row Yaduveer Vs DK Shivakumar

ಸಾರಾಂಶ

ಚಾಮುಂಡಿ ಬೆಟ್ಟ, ದಸರಾ ಹಬ್ಬದ ಧಾರ್ಮಿಕ ಸ್ವರೂಪದ ಕುರಿತು ಯದುವೀರ್ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಟ್ವಿಟರ್ ವಾಗ್ಯುದ್ಧ ನಡೆಯಿತು. ಚಾಮುಂಡೇಶ್ವರಿ ಹಿಂದೂ ದೇವಿ, ದಸರಾ ಹಿಂದೂ ಹಬ್ಬ ಎಂದ ಯದುವೀರ್. ಎಲ್ಲರಿಗೂ ಸೇರಿದ್ದು ಎಂದು ಡಿ.ಕೆ. ಶಿವಕುಮಾರ್. ಓಲೈಕೆಗಾಗಿ ಧರ್ಮದ ಮೇಲೆ ದಾಳಿ ಬೇಡವೆಂದ ಯದುವೀರ್.

ಬೆಂಗಳೂರು/ ಮೈಸೂರು (ಆ.27): ಚಾಮುಂಡಿ ಬೆಟ್ಟ ಎಲ್ಲ ಧರ್ಮ–ಸಮುದಾಯದವರಿಗೂ ಮುಕ್ತವಾಗಿದೆ. ಆದರೆ, ತಾಯಿ ಚಾಮುಂಡೇಶ್ವರಿ ಹಿಂದೂ ದೇವಿ. ಒಂದು ಕುಟುಂಬವನ್ನೇ ನಿಮ್ಮ ದೇವರನ್ನಾಗಿ ಮಾಡಿಕೊಂಡಿರುವ ನೀವು, ಓಲೈಕೆ ರಾಜಕೀಯಕ್ಕಾಗಿ ನಮ್ಮ ಧರ್ಮದ ಮೇಲೆ ದಾಳಿ ಮಾಡಿದಾಗ, ಅದನ್ನು ರಕ್ಷಿಸಲು ನಾವು ಎದ್ದು ನಿಂತಿದ್ದೇವೆ ಎಂದು ಸಂಸದ ಹಾಗೂ ಮೈಸೂರು ಸಂಸ್ಥಾನದ ಉತ್ತರಾಧಿಕಾರಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ತಿರುಗೇಟು ಕೊಟ್ಟಿದ್ದಾರೆ.

ನಾಡಹಬ್ಬ ದಸರಾ ಮತ್ತು ಚಾಮುಂಡೇಶ್ವರಿ ದೇವಿ ಕುರಿತು ಮೈಸೂರು ರಾಜಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಟ್ವೀಟ್‌ ವಾರ್‌ ಶುರುವಾಗಿದೆ. ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ, ನಾಡಹಬ್ಬ ದಸರಾ ಮತ್ತು ಚಾಮುಂಡಿ ಬೆಟ್ಟ ಎಲ್ಲರಿಗೂ ಸೇರಿದ್ದು ಎಂಬ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಯದುವೀರ ಒಡೆಯರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಸಂಸದ ಯದುವೀರ್ ಹೇಳಿಕೆ:

ಚಾಮುಂಡಿ ಬೆಟ್ಟ ಎಲ್ಲ ಧರ್ಮ–ಸಮುದಾಯದವರಿಗೂ ಮುಕ್ತವಾಗಿ ತೆರೆದಿದೆ. ತಾಯಿಯನ್ನು ಆರಾಧಿಸುವವರು, ನಂಬುವವರು, ಗೌರವಿಸುವವರು ಎಲ್ಲ ಜಾತಿ-ಧರ್ಮಗಳಲ್ಲಿದ್ದಾರೆ. ಆದರೆ, ಚಾಮುಂಡಿ ಬೆಟ್ಟ ಒಂದು ಶಕ್ತಿಪೀಠ. ತಾಯಿ ಚಾಮುಂಡೇಶ್ವರಿ ಹಿಂದೂ ದೇವಿ - ಆಕೆಯ ಉಲ್ಲೇಖ ಹಿಂದೂ ಗ್ರಂಥವಾದ ಮಾರ್ಕಂಡೇಯ ಪುರಾಣದ ದೇವಿ ಮಹಾತ್ಮ್ಯದಲ್ಲಿದೆ; ಬೇರೆ ಧರ್ಮಗಳ ಗ್ರಂಥಗಳಲ್ಲಿ ಇಲ್ಲ. ಪ್ರತಿದಿನವೂ ಹಿಂದೂ ಶಾಸ್ತ್ರಾನುಸಾರವೇ ಪೂಜೆ–ಪರಂಪರೆ ನಡೆಯುತ್ತಿವೆ. ಇಲ್ಲಿಗೆ ಬರುವ ಎಲ್ಲರೂ ಆಕೆಯನ್ನು ಹಿಂದೂ ದೇವಿಯಾಗಿಯೇ ಆರಾಧಿಸುತ್ತಾರೆ.

ದಸರಾ ನಮ್ಮ ನಾಡಿನ ಅತಿದೊಡ್ಡ ಸಾಂಸ್ಕೃತಿಕ ಸಂಭ್ರಮ. ಎಲ್ಲ ಧರ್ಮದವರು ಪಾಲ್ಗೊಳ್ಳಬಹುದು, ಆದರೆ ಮೂಲತಃ ಅದು ಹಿಂದೂ ಹಬ್ಬ. ಅದರ ದಿನಾಂಕವನ್ನು ನಿಗದಿಪಡಿಸುವುದು ಹಿಂದೂ ಪಂಚಾಂಗ. ಯಾರದೋ ಇಚ್ಛೆ-ಮನೋಭಾವಕ್ಕೆ ಅನುಗುಣವಾಗಿ ಬದಲಾಯಿಸುವ ಹಬ್ಬವಲ್ಲ.

ನೀವು ಒಂದು ಕುಟುಂಬವನ್ನೇ ನಿಮ್ಮ ದೇವರನ್ನಾಗಿ ಮಾಡಿಕೊಂಡಿದ್ದೀರಿ. ಹೀಗಿರುವಾಗ, ದೇವಿಯ ಹಿಂದೂ ಸ್ವರೂಪವನ್ನೂ, ದಸರೆಯ ಧಾರ್ಮಿಕ ಪರಂಪರೆಯನ್ನೂ ನಿರಾಕರಿಸುವ ದುಸ್ಸಾಹಸ ಮಾಡಬೇಡಿ. ನಾವು ರಾಜಕೀಯ ಮಾಡುತ್ತಿಲ್ಲ. ನೀವು ಓಲೈಕೆ ರಾಜಕೀಯಕ್ಕಾಗಿ ನಮ್ಮ ಧರ್ಮದ ಮೇಲೆ ದಾಳಿ ಮಾಡಿದಾಗ, ಅದನ್ನು ರಕ್ಷಿಸಲು ನಾವು ಎದ್ದು ನಿಂತಿದ್ದೇವೆ' ಎಂದು ರಾಜಕೀಯವಾಗಿಯೇ ಖಾರವಾಗಿ ತಿರುಗೇಟು ಕೊಟ್ಟಿದ್ದಾರೆ.

ಡಿ.ಕೆ. ಶಿವಕುಮಾರ್ ಹೇಳಿದ್ದೇನು?

ನಮ್ಮ ನಾಡ ಹಬ್ಬ - ದಸರಾ
ನಮ್ಮ ನಾಡ ದೇವತೆ - ಚಾಮುಂಡೇಶ್ವರಿ

ಚಾಮುಂಡೇಶ್ವರಿ ತಾಯಿ ನಮ್ಮ ನಾಡಿನ ಅಧಿದೇವತೆ. ಈ ತಾಯಿಯನ್ನು ಆರಾಧಿಸುವವರು, ನಂಬುವವರು, ಗೌರವಿಸುವವರು ಎಲ್ಲ ಜಾತಿ, ಧರ್ಮಗಳಲ್ಲೂ ಇದ್ದಾರೆ. ಆಕೆಯ ದರ್ಶನ ಎಲ್ಲರ ಹಕ್ಕು. ತಾಯಿ ಎಲ್ಲ ಭಕ್ತರ, ನಾಡಿನ ಎಲ್ಲ ಮಕ್ಕಳ ಆಸ್ತಿ, ಯಾರೊಬ್ಬರಿಗೂ ಸೀಮಿತ ಅಲ್ಲ. ತಾಯಿಯನ್ನು ಪೂಜಿಸಿದರೆ ಯಾರೂ ಬೇಡ ಅನ್ನಲು ಆಗುವುದಿಲ್ಲ. ಇದೇ ನನ್ನ ಮಾತಿನ ಸತ್ವ. ವಿವಾದ ಮಾಡೋದು ಬಿಜೆಪಿ ತತ್ವ!

ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮ, ಸಮಾಜದವರಿಗೂ ಪ್ರವೇಶವಿದೆ. ಎಲ್ಲರೂ ಬೆಟ್ಟಕ್ಕೆ ಹೋಗುತ್ತಾರೆ. ದೇವಿಯ ಪ್ರಾರ್ಥನೆ ಮಾಡುತ್ತಾರೆ. ಎಲ್ಲರ ನೋವನ್ನು ದೂರ ಮಾಡುವಳು ನಮ್ಮ ದುರ್ಗಾ ದೇವಿ. ನಾಡ ಹಬ್ಬ ದಸರಾವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಜನ ಬರುತ್ತಾರೆ. ಇದಕ್ಕೆ ನಮ್ಮ ರಾಜ ವಂಶಸ್ಥರೇ ಅನುಮತಿ ನೀಡಿ ಸಾಕ್ಷಿಯಾಗಿದ್ದಾರೆ. ನಾಡ ಹಬ್ಬ ದಸರಾ ಎಲ್ಲ ಧರ್ಮದವರಿಗೂ ಸೇರಿದ್ದು. ಧರ್ಮದಲ್ಲಿ ರಾಜಕಾರಣ ಮಾಡುವುದು ಬೇಡ, ಅದನ್ನು ಆ ತಾಯಿಯೂ ಮೆಚ್ಚುವುದಿಲ್ಲ' ಎಂದು ಯದುವೀರ್ ಅವರನ್ನು ಟ್ಯಾಗ್ ಮಾಡಿ ಡಿಸಿಎಂ ಡಿ.ಕೆ. ಶಿವಕುಮಾರ್ ಟ್ವೀಟ್ ಮಾಡಿದ್ದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ
ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು