
ಬೆಂಗಳೂರು(ಫೆ.23): ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರನ್ನು ಸೆಳೆಯಲು ‘ಕುದುರೆ ವ್ಯಾಪಾರ’ಕ್ಕಿಳಿದಿದ್ದಾರೆ ಎಂಬ ಆರೋಪದ ಮೇರೆಗೆ ವಿರೋಧ ಪಕ್ಷಗಳ ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೇರಿದಂತೆ ನಾಲ್ವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿ ಕುಮಾರ್ (ಗಣಿಗ ರವಿ) ದೂರು ನೀಡಿದ್ದು, ಅದರನ್ವಯ ಮೈತ್ರಿ ಹುರಿಯಾಳು ಕುಪೇಂದ್ರ ರೆಡ್ಡಿ, ಪಕ್ಷೇತರ ಶಾಸಕಿಯೊಬ್ಬರ ಭಾವ ಡಾ.ಮಹಾಂತೇಶ್, 37 ಕ್ರೆಸೆಂಟ್ ಹೋಟೆಲ್ ಮಾಲಿಕ ರವಿ ಹಾಗೂ ಹರಿಹರದ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಮೇಲೆ ಐಪಿಸಿ 506 (ಬೆದರಿಕೆ) ಹಾಗೂ ಐಪಿಸಿ 171ಇ (ಲಂಚದ ಆಮಿಷ) ಸೇರಿದಂತೆ ಇತರೆ ಪರಿಚ್ಛೇದಗಳಡಿ ಎಫ್‌ಐಆರ್ ದಾಖಲಿಸಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಎರಡು ದಿನಗಳ ಹಿಂದೆ ರಾಜ್ಯಸಭೆ ಚುನಾವಣೆಯಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಆರೋಪಿಸಿ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರನ್ನು ಭೇಟಿಯಾಗಿ ಶಾಸಕ ರವಿ ಗಣಿಗ ನೇತೃತ್ವದ ಕಾಂಗ್ರೆಸ್ ಶಾಸಕರ ನಿಯೋಗವು ದೂರು ನೀಡಿತ್ತು. ಈ ದೂರಿನ ಸಂಬಂಧ ಮುಂದಿನ ಕಾನೂನು ಕ್ರಮಕ್ಕೆ ವಿಧಾನಸೌಧ ಠಾಣೆಗೆ ಆಯುಕ್ತರು ವರ್ಗಾಯಿಸಿದ್ದರು.
ಬಿಜೆಪಿ ದಿಲ್ಲಿ ವರಿಷ್ಠರು, ಜೆಡಿಎಸ್ ನಾಯಕರು ಚರ್ಚಿಸಿ ಕುಪೇಂದ್ರ ರೆಡ್ಡಿ ಕಣಕ್ಕೆ: ವಿಜಯೇಂದ್ರ
ದೂರಿನಲ್ಲೇನಿದೆ?
ಫೆ.26 ರಂದು ರಾಜ್ಯ ವಿಧಾನಸಭೆಯಿಂದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ. ನಾಲ್ಕು ಸ್ಥಾನಗಳ ಪೈಕಿ ಶಾಸಕರ ಸಂಖ್ಯಾಬಲದ ಆಧಾರದ ಮೇರೆಗೆ ಮೂರು ಸ್ಥಾನಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಒಂದು ಸ್ಥಾನದಲ್ಲಿ ಬಿಜೆಪಿ ನಿರಾಯಾಸವಾಗಿ ಗೆಲುವು ಸಾಧಿಸಬಹುದು. ಆದರೆ ಚುನಾವಣಾ ಅಖಾಡಕ್ಕೆ ಬಿಜೆಪಿ-ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಪ್ರವೇಶಿಸಿದ್ದಾರೆ. ಆದರೆ ಈ ಅಭ್ಯರ್ಥಿಗೆ ಗೆಲುವಿಗೆ ಮತಗಳ ಕೊರತೆ ಇದೆ. ಹೀಗಾಗಿ ಕಾಂಗ್ರೆಸ್ ಶಾಸಕರಿಗೆ ಹಣದ ಆಮಿಷವೊಡ್ಡಿ ಸೆಳೆಯಲು ಕುಪೇಂದ್ರರೆಡ್ಡಿ ಯತ್ನಿಸಿದ್ದಾರೆ. ಇನ್ನು ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಸಹ ಷಡ್ಯಂತ್ರ ರೂಪಿಸಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳ ಮೂಲಕ ಶಾಸಕರಿಗೆ ಬೆದರಿಕೆ ಹಾಕಲಾಗುತ್ತದೆ ಎಂದು ದೂರಿನಲ್ಲಿ ರವಿ ಗಣಿಗ ಆರೋಪಿಸಿದ್ದಾರೆ.
ಇತ್ತೀಚಿಗೆ ಹರಪನಹಳ್ಳಿ ಕ್ಷೇತ್ರದ ಶಾಸಕಿ ಲತಾ ಮಲ್ಲಿಕಾರ್ಜುನ್ ಅವರನ್ನು ಸಂಪರ್ಕಿಸಿ ‘ಕುಪೇಂದ್ರ ರೆಡ್ಡಿ ಅವರ ಪುತ್ರ ಭೇಟಿಯಾಗಿ ಹಣ ಕೊಡುತ್ತಾರೆ. ನೀವು ಕುಪೇಂದ್ರ ರೆಡ್ಡಿಗೆ ಮತ ಚಲಾಯಿಸಬೇಕು. ಇಲ್ಲವಾದರೆ ತೊಂದರೆ ಆಗುತ್ತದೆ’ ಎಂದು ಕ್ರೆಸೆಂಟ್ ಹೋಟೆಲ್ ಮಾಲಿಕ ರವಿ ಅವರು ಬೆದರಿಕೆ ಹಾಕಿದ್ದಾರೆ. ಹಾಗೆಯೇ ಜೆಡಿಎಸ್ ಹಾಗೂ ಬಿಜೆಪಿ ನಾಯಕರ ನಿರ್ದೇಶನದ ಮೇರೆಗೆ ಮತ ಚಲಾಯಿಸುವಂತೆ ಶಾಸಕಿ ಲತಾ ಅವರಿಗೆ ಅವರ ಭಾವ ಡಾ। ಮಹಾಂತೇಶ್ ಹಣದ ಆಮಿಷವೊಡ್ಡಿದ್ದಾರೆ. ಇನ್ನು ಲತಾರವರ ಪತಿ ಮಲ್ಲಿಕಾರ್ಜುನ್ ಅವರನ್ನು ಭೇಟಿಯಾಗಿ ಹರಿಹರ ಕ್ಷೇತ್ರದ ಮಾಜಿ ಶಾಸಕ ಶಿವಶಂಕರ್ ಒತ್ತಡ ಹಾಕಿದ್ದಾರೆ ಎಂದು ದೂರಿದ್ದಾರೆ.
ಶಾಸಕಿ ಲತಾಗೆ ಮಾತ್ರವಲ್ಲದೇ ಇದೇ ರೀತಿ ಮತ್ತಿಬ್ಬರು ಶಾಸಕರಾದ ಗೌರಿಬಿದನೂರಿನ ಪುಟ್ಟಸ್ವಾಮಿಗೌಡ ಹಾಗೂ ಮೇಲುಕೋಟೆ ಕ್ಷೇತ್ರದ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಕೂಡಾ ಬೆಂಬಲಿಗರ ಮೂಲಕ ಬಿಜೆಪಿ-ಜೆಡಿಎಸ್ ಮುಖಂಡರು ಹಣದಾಸೆ ತೋರಿಸಿ ಸೆಳೆಯಲು ಯತ್ನಿಸಿದ್ದಾರೆ ಎಂದು ಗಣಿಗ ರವಿ ಆಪಾದಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.