ಲೋಕಸಭೆ ಚುನಾವಣೆ 2024: ಕಾಂಗ್ರೆಸ್‌, ಬಿಜೆಪಿ-ಜೆಡಿಎಸ್‌ನಲ್ಲಿ ಶುರುವಾಯ್ತು ಬಲಾಬಲ ಲೆಕ್ಕಾಚಾರ..!

By Kannadaprabha NewsFirst Published Feb 3, 2024, 11:00 PM IST
Highlights

ರಾಯಚೂರು- ಯಾದಗಿರಿ ಜಿಲ್ಲೆಗಳನ್ನೊಳಗೊಂಡ ರಾಯಚೂರು ಲೋಕಸಭಾ ಕ್ಷೇತ್ರ ಹಾಗೂ ಜಿಲ್ಲೆಯ ಸಿಂಧನೂರು, ಮಸ್ಕಿ ವಿಧಾನಸಭಾ ಕ್ಷೇತ್ರ ಗಳನ್ನೊಳಗೊಂಡ ಕೊಪ್ಪಳ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಹೆಜ್ಜೆ ಗಮನಿಸುತ್ತಿರುವ ಕಾಂಗ್ರೆಸ್ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದೆ.

ರಾಮಕೃಷ್ಣ ದಾಸರಿ 

ರಾಯಚೂರು(ಫೆ.03):  ಇನ್ನೇನು ಲೋಕಸಭೆ ಚುನಾವಣೆ ಘೋಷಣೆಗೆ ದಿನಗಣನೆ ಶುರುವಾದ ಹಿನ್ನೆಲೆ ಕೇಂದ್ರ, ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ ಜೊತೆಗೆ ರಾಜಕೀಯ ಪಕ್ಷಗಳು ಹಾಗೂ ಆಕಾಂಕ್ಷಿಗಳು ಪೂರ್ವ ಸಿದ್ಧತೆಯಲ್ಲಿ ಮುಳುಗಿದ್ದು, ಪಕ್ಷಗಳ ಬಲಾ ಬಲದ ಲೆಕ್ಕಾಚಾರಗಳು ಜೋರಾಗಿ ನಡೆದಿವೆ.

ರಾಯಚೂರು- ಯಾದಗಿರಿ ಜಿಲ್ಲೆಗಳನ್ನೊಳಗೊಂಡ ರಾಯಚೂರು ಲೋಕಸಭಾ ಕ್ಷೇತ್ರ ಹಾಗೂ ಜಿಲ್ಲೆಯ ಸಿಂಧನೂರು, ಮಸ್ಕಿ ವಿಧಾನಸಭಾ ಕ್ಷೇತ್ರ ಗಳನ್ನೊಳಗೊಂಡ ಕೊಪ್ಪಳ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಹೆಜ್ಜೆ ಗಮನಿಸುತ್ತಿರುವ ಕಾಂಗ್ರೆಸ್ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಭಾರತ ದೇಶ ಒಂದಾಗಿರುವುದು ಕಾಂಗ್ರೆಸ್‌ಗೆ ಇಷ್ಟವಿಲ್ಲ: ಈಶ್ವರಪ್ಪ

ರಾಜ್ಯ ಆಡಳಿತಾರೂಢ ಕಾಂಗ್ರೆಸ್ ಗ್ಯಾರಂಟಿ ಲೆಕ್ಕಾಚಾರದಲ್ಲಿದ್ದರೆ, ಶೇ.100 ರಷ್ಟು ಮೋದಿ ಮೇಲೆ ಅವಲಂಬಿತ ಬಿಜೆಪಿ ಮತ್ತಷ್ಟು ಹುಮಸ್ಸಿನಲ್ಲಿ ಲೋಕಸಭಾ ಚುನಾವಣೆಗೆ ತಳಮಟ್ಟದ ಸಂಘಟನೆ ಜೊತೆಗೆ ಹೊಸ ರೀತಿ ರಣತಂತ್ರ ರೂಪಿಸುತ್ತಿದೆ. ಉಭಯ ರಾಷ್ಟ್ರೀಯ ಪಕ್ಷಗಳು ತಮ್ಮದೇ ಆದ ರೀತಿ ಸಂಘಟನೆ, ಚುನಾವಣೆ ಪೂರ್ವದ ತಂತ್ರಗಾರಿಕೆಯಲ್ಲಿ ತೊಡಗಿರುವ ವಿಷಯಗಳು ಪಕ್ಷಗಳ ಆಂತರೀಕ ಚರ್ಚೆಗೆ ಕಾರಣವಾಗಿವೆ.

ಬಿಜೆಪಿಯಲ್ಲಿ ಹೊಸ ಹುಮ್ಮಸ್ಸು: ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕೇವಲ ಎರಡು ಸ್ಥಾನಗಳನ್ನು ಪಡೆದು ಮಂಕಾಗಿದ್ದ ಬಿಜೆಪಿಯಲ್ಲಿ ಇದೀಗ ಹೊಸ ಹುಮ್ಮಸ್ಸು ಹುಟ್ಟಿಕೊಂಡಿದೆ. ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ ವಿಜಯೇಂದ್ರ ಆಯ್ಕೆ ಬಲದ ಜೊತೆಗೆ ಸ್ಥಳೀಯ ಶಾಸಕ ಡಾ.ಶಿವರಾಜ ಪಾಟೀಲ್ ಅವರನ್ನೇ ಬಿಜೆಪಿ ಜಿಲ್ಲಾ ಮೋರ್ಚಾಕ್ಕೆ ಹೊಸ ಅಧ್ಯಕ್ಷರನ್ನಾಗಿ ಮಾಡಿರುವುದು. ಎಲ್ಲೆಡೆ ಮೋದಿ ಅಲೆಯ ಬಿರುಗಾಳಿ ಎದ್ದಿರುವುದು, ರಾಯ ಚೂರು ಮತ್ತು ಕೊಪ್ಪಳದ ಲೋಕಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಬಿಜೆಪಿ ಸಂಸದರೇ ಇರುವುದು ಪಕ್ಷದಲ್ಲಿ ಹೊಸ ಹುಮ್ಮಸ್ಸಿಗೆ ಕಾರಣವಾಗಿದೆ. ಇದರ ಜೊತೆಗೆ ಜೆಡಿಎಸ್ ಮೈತ್ರಿಯ ಫಲವು ಚುನಾವಣೆಯಲ್ಲಿ ಫಸಲಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಪಕ್ಷದ ವರಿಷ್ಠರು ಹಾಲಿ ಸಂಸದರು, ಇಲ್ಲವೇ ಹೊಸಬರಿಗೆ ಅವಕಾಶ ಕೊಟ್ಟರೆ ಅವರ ಬೆನ್ನಿಗೆ ನಿಂತು ಪ್ರಮಾಣಿಕ ಪ್ರಯತ್ನ ಮಾಡುವ ಮನೋಭಾವನೆಯು ಜಿಲ್ಲೆ ಬಿಜೆಪಿಗರು ಬೆಳೆಸಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ ಹಿಂದಿನಿಂದಲೂ ದೇಶ ಒಡೆಯುವ ಕೆಲಸ ಮಾಡುತ್ತಿದೆ: ಈಶ್ವರಪ್ಪ ವಾಗ್ದಾಳಿ

ಕಾಂಗ್ರೆಸ್ ಕಾರ್ಯಕರ್ತರ ಕಳವಳ:

ಜಿಲ್ಲೆ ಏಳು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಪಕ್ಷದ ಶಾಸಕರಿದ್ದು, ಜಿಲ್ಲೆಯವರೇ ಸಚಿವರಾಗಿ, ಉಸ್ತುವಾರಿ ಸಚಿವರಿದ್ದಾರೆ. ಮೂರು ಜನ ಶಾಸಕರಿಗೆ ನಿಗಮ ಮಂಡಳಿ ಸ್ಥಾನ ಸಹ ನೀಡಲಾಗಿದೆ. ಹೀಗಿದ್ದರೂ ಮಿತಿ ಮೀರಿದ ಗುಂಪು ಸಂಘರ್ಷ, ಮರೆಯಾಗದ ಕಲೆಳೆಯುವ ಪ್ರವೃತ್ತಿ, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ದ್ವೇಷ, ಅಸೂಯೆ. ಇದು ಕಾಂಗ್ರೆಸ್ ಕಾರ್ಯಕರ್ತರನ್ನು ಕಳವಳಕ್ಕೀಡು ಮಾಡಿದೆ. ರಾಜ್ಯ ಸರ್ಕಾರದ ಗ್ಯಾರಂಟ ಯೋಜನೆಗಳ ಲಾಭ, ಸಚಿವ. ಶಾಸಕರು ಹಾಗೂ ನಿಗಮ ಮಂಡಳಿಗಳ ಸ್ಥಾನ- ಮಾನದ ಶಕ್ತಿಯನ್ನು ಬಳಸಿಕೊಂಡು ಸಂಘಟನೆ ಮಾಡಬೇಕು ಎಂದರೆ ಒಂದುವರ್ಷ ಕಳೆಯುತ್ತಿದ್ದರು ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಅಧ್ಯಕ್ಷರಿಲ್ಲದಿರುವುದು ಪಕ್ಷವನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.

ಹೀಗೆ ಲೋಕಸಭೆ ಚುನಾವಣೆ ಘೋಷಣೆಯ ಹೊಸ್ತಿಲಲ್ಲಿ ಅನುಕೂಲ ಅನಾನುಕೂಲಗಳ ಕುರಿತು ಕಾಂಗ್ರೆಸ್-ಬಿಜೆಪಿ ಆಂತರೀಕ-ಬಾಹ್ಯ ಬಲಾಬಗಳ ಕುರಿತು ಸಾಗಿರುವ ಲೆಕ್ಕಾಚಾರವು ಚುನಾವಣೆ ಬಿಸಿಯನ್ನೆಬ್ಬಿಸುವ ವಾತಾವರಣವನ್ನು ಸೃಷ್ಟಿಸಿದೆ.

click me!