ಶಾಸಕರು ಹಾದಿ-ಬೀದಿಯಲ್ಲಿ ಮಾತನಾಡಿದರೆ ಸಚಿವ ಸ್ಥಾನ ಸಿಗುವುದಿಲ್ಲ | ಸಿ.ಡಿ. ಸೇರಿದಂತೆ ಯಾವ ವಿಚಾರಕ್ಕೂ ಹೆದರುವ ಅಗತ್ಯವಿಲ್ಲ: ಬಿಎಸ್‌ವೈ
ಬೆಂಗಳೂರು(ಜ.15): ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿದ್ದಕ್ಕೆ ಅತೃಪ್ತಿಗೊಂಡವರು ಬೇಕಿದ್ದರೆ ದೆಹಲಿ ವರಿಷ್ಠರಿಗೆ ದೂರು ನೀಡಲಿ. ಇಲ್ಲಿ ಮಾತನಾಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸವನ್ನು ಶಾಸಕರು ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಕ್ಷದ ಅಸಮಾಧಾನಿತ ಶಾಸಕರಿಗೆ ಪರೋಕ್ಷವಾಗಿ ಎಚ್ಚರಿಕೆ ರೂಪದಲ್ಲಿ ಹೇಳಿದ್ದಾರೆ.
undefined
ಅಲ್ಲದೆ, ಸಿ.ಡಿ. ಸೇರಿದಂತೆ ಯಾವುದೇ ವಿಚಾರಕ್ಕೂ ಹೆದರುವ ಅಗತ್ಯವೇ ಇಲ್ಲ ಎಂದು ತಮ್ಮ ವಿರುದ್ಧದ ಟೀಕಾಕಾರರಿಗೆ ಎದಿರೇಟು ನೀಡಿದ್ದಾರೆ. ಗುರುವಾರ ಬೆಂಗಳೂರು ಮತ್ತು ದಾವಣಗೆರೆಯಲ್ಲಿ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಿ ಮಾಡಲಿಲ್ಲ ಅಂತ 10-12 ಶಾಸಕರು ಆರೋಪ ಮಾಡುತ್ತಿದ್ದಾರೆ. ನನ್ನ ಇತಿಮಿತಿಯಲ್ಲಿ ಏನೆಲ್ಲ ಸಾಧ್ಯವೋ ಅಷ್ಟನ್ನು ಮಾಡಿದ್ದೇನೆ. ಇಲ್ಲಸಲ್ಲದ ಹೇಳಿಕೆ ನೀಡುವುದನ್ನು ಬಿಟ್ಟು ನನ್ನ ಬಳಿ ಬಂದು ಚರ್ಚೆ ಮಾಡಿ. ಅದರ ಬದಲು ಗೊಂದಲ ಸೃಷ್ಟಿಸುವ ಹೇಳಿಕೆ ನೀಡುವುದು ಬೇಡ. ಸಿಕ್ಕಸಿಕ್ಕಲ್ಲಿ ಹೇಳಿಕೆಗಳನ್ನು ಕೊಡುವುದು ಪಕ್ಷದ ಶಿಸ್ತಿಗೆ ಧಕ್ಕೆ ತರುವ ಕೆಲಸ ಎಂದು ತೀಕ್ಷ$್ಣವಾಗಿ ಹೇಳಿದರು.
ಸಚಿವ ಸ್ಥಾನ ಸಿಗದ ಕಾರಣಕ್ಕೆ ಅಸಮಾಧಾನವಿದ್ದರೆ ದೆಹಲಿಗೆ ಹೋಗಿ ದೂರು ನೀಡಲಿ. ಇಲ್ಲಿ ಮಾತನಾಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸವನ್ನು ಶಾಸಕರು ಮಾಡುವುದು ಬೇಡ. ಸಂಪುಟ ವಿಸ್ತರಣೆ ಬಗ್ಗೆ ಅಸಮಾಧಾನ ಇರುವ ಶಾಸಕರು ಹಗುರವಾಗಿ ಮಾತನಾಡಬಾರದು. ಅಸಮಾಧಾನ ಇದ್ದರೆ ದೆಹಲಿಗೆ ಹೋಗಿ ವರಿಷ್ಠರ ಜತೆ ಮಾತನಾಡಲಿ ಎಂದರು.
ವರಿಷ್ಠರು ನೀಡಿರುವ ಸೂಚನೆಯಂತೆ ಸಂಪುಟ ವಿಸ್ತರಣೆ ಮಾಡಲಾಗಿದೆ. ಯಾರನ್ನೂ ಕಡೆಗಣಿಸಿಲ್ಲ. ಹಾದಿಬೀದಿಯಲ್ಲಿ ಮಾತನಾಡಿದರೆ ಸಚಿವ ಸ್ಥಾನ ಸಿಗುತ್ತದೆ ಎಂದುಕೊಂಡಿದ್ದಾರೆ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ವರಿಷ್ಠರೇ ತೀರ್ಮಾನಿಸಲಿದ್ದಾರೆ ಎಂದು ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯಡಿಯೂರಪ್ಪ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಂತಹವರು ಎಲ್ಲ ಪಕ್ಷದಲ್ಲಿಯೂ ಇದ್ದೇ ಇರುತ್ತಾರೆ. ಅದಕ್ಕೆಲ್ಲಾ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
ಯಶಸ್ವಿಯಾಗಿ ಮಂತ್ರಿ ಮಂಡಲ ವಿಸ್ತರಣೆ ಮಾಡಿದ್ದೇವೆ. ಕೇಂದ್ರದ ನಾಯಕರ ಅಪೇಕ್ಷೆಯಂತೆ ಒಂದು ಸಚಿವ ಸ್ಥಾನ ಖಾಲಿ ಇಟ್ಟುಕೊಂಡಿದ್ದೇನೆ. ಕೇಂದ್ರದ ನಾಯಕರೇ ಹೇಳಿದಂತೆ ಇನ್ನೂ ಎರಡೂವರೆ ವರ್ಷ ಆಡಳಿತ ನಡೆಯುತ್ತದೆ. ಉತ್ತಮ ಆಡಳಿತ ನೀಡಲಾಗುತ್ತದೆ. ಇನ್ನು ಮುಂದೆ ರಾಜ್ಯದ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸಲಾಗುವುದು. ವಿಧಾನ ಮಂಡಲದ ಅಧಿವೇಶನವನ್ನು ಇದೇ ತಿಂಗಳ ಕಡೇ ವಾರದಲ್ಲಿ ನಡೆಸಲಾಗುವುದು. ಮಾಚ್‌ರ್ ತಿಂಗಳಲ್ಲಿ ಬಜೆಟ್ ಅಧಿವೇಶನ ಮಾಡುತ್ತೇವೆ ಎಂದರು.
ಏನು ಸಾಧ್ಯವೋ ಅಷ್ಟುಮಾಡಿದ್ದೇನೆ
ನನ್ನ ಇತಿಮಿತಿಯಲ್ಲಿ ಏನೆಲ್ಲ ಸಾಧ್ಯವೋ ಅಷ್ಟನ್ನು ಮಾಡಿದ್ದೇನೆ. ಅತೃಪ್ತಿಗೊಂಡವರು ಇಲ್ಲಸಲ್ಲದ ಹೇಳಿಕೆ ನೀಡುವುದನ್ನು ಬಿಟ್ಟು ನನ್ನ ಬಳಿ ಬಂದು ಚರ್ಚೆ ಮಾಡಿ. ಬೇಕಿದ್ದರೆ ದೆಹಲಿ ವರಿಷ್ಠರಿಗೆ ದೂರು ನೀಡಿ. ಸಿ.ಡಿ. ಸೇರಿದಂತೆ ಯಾವುದೇ ವಿಚಾರಕ್ಕೂ ಹೆದರುವ ಅಗತ್ಯವೇ ಇಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ಸಿ.ಡಿ. ತೋರಿಸಿ ಬ್ಲ್ಯಾಕ್‌ಮೇಲ್ ಮಾಡಿದವರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂಬ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಎಚ್.ವಿಶ್ವನಾಥ್ ಅವರ ಆರೋಪ ಇನ್ನಷ್ಟುತೀವ್ರ ಸ್ವರೂಪ ಪಡೆದುಕೊಂಡಿದೆ. ಗುರುವಾರ ಪುನಃ ಈ ವಿಚಾರ ಕೆದಕಿರುವ ಯತ್ನಾಳ್, ಕಾಂಗ್ರೆಸ್ ಪಕ್ಷದವರ ಬಳಿಯೂ ಆ ಸಿ.ಡಿ. ಇದೆ ಎಂದಿದ್ದಾರೆ. ಇನ್ನೊಂದೆಡೆ ವಿಶ್ವನಾಥ್, ಸಿ.ಡಿ.ಯನ್ನು ಯತ್ನಾಳ್ ಅಥವಾ ಇನ್ನಾರೋ ಬಿಡುಗಡೆ ಮಾಡುತ್ತಾರೆ ಎಂದು ಹೇಳಿದ್ದಾರೆ.
ಪ್ರತಿಪಕ್ಷ ಕಾಂಗ್ರೆಸ್ ಕೂಡ ಈ ಕುರಿತು ತೀಕ್ಷ$್ಣ ಪ್ರತಿಕ್ರಿಯೆ ನೀಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ‘ಸಿ.ಡಿ. ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಸಿ.ಡಿ. ತೋರಿಸಿ ಮಂತ್ರಿ ಹುದ್ದೆ ಪಡೆದಿದ್ದಾರೆ ಅಂತಾದರೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಹೇಳಿದ್ದಾರೆ.