
ಬೆಂಗಳೂರು (ಆ.06): ಹಲವು ತಿಂಗಳುಗಳಿಂದ ಸರ್ಕಾರದಲ್ಲಿ ಆರ್ಥಿಕ ಮುಗ್ಗಟ್ಟಿದೆ. ಹೀಗಾಗಿ ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿಗಳಿಗೆ ಸಾಧ್ಯವಾಗುತ್ತಿಲ್ಲ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಮುಷ್ಕರದಿಂದ ಬಸ್ ಸಿಗದೆ ಗ್ರಾಮೀಣ ಭಾಗದಲ್ಲಿ ಶಾಲಾ ಮಕ್ಕಳಿಗೆ ತೀವ್ರ ಸಮಸ್ಯೆ ಆಗಿದೆ. ಸರಕಾರಿ ಬಸ್ಸಿಲ್ಲದೆ ಕಾಲೇಜು, ಶಾಲಾ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಎಂದರು. ಗ್ಯಾರಂಟಿ ಕಾರಣಕ್ಕಾಗಿ ಗ್ರಾಮೀಣ ಭಾಗದ ಬಸ್ ಓಡಾಟ ಕಡಿತಗೊಳಿಸಿದ್ದಾರೆ. ಕೆಎಸ್ಆರ್‌ಟಿಸಿ ಮತ್ತಿತರ ಸಾರಿಗೆ ಸಂಸ್ಥೆಗಳ ನೌಕರರಿಗೆ ವೇತನ ಕೊಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಬಹಳ ತಿಂಗಳುಗಳಿಂದ ಆರ್ಥಿಕ ಮುಗ್ಗಟ್ಟು ಇದ್ದು, ಸಮಸ್ಯೆ ಉಲ್ಬಣವಾಗಿದೆ. ಹಾಗಾಗಿ ಅವರ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿಗಳಿಗೆ ಸಾಧ್ಯವಾಗುತ್ತಿಲ್ಲ. ಮುಖ್ಯಮಂತ್ರಿಗಳು ತಡ ಮಾಡದೆ ತಕ್ಷಣವೇ ಕಾರ್ಮಿಕರ ಮತ್ತು ಅಧಿಕಾರಿಗಳ ಸಭೆ ಕರೆಯಬೇಕು. ಅವರ ಸಮಸ್ಯೆಗೆ ಪರಿಹಾರ ನೀಡಬೇಕು. ಜನಸಾಮಾನ್ಯರಿಗೆ ತೊಂದರೆ ಆಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು. ಗಡ್ಡಕ್ಕೆ ಬೆಂಕಿ ಹತ್ತಿಕೊಂಡಾಗ ಸಮಸ್ಯೆ ಪರಿಹರಿಸಲು ಹೊರಟಿದ್ದಾರೆ. ಈಗಲೂ ಕಾಲ ಮಿಂಚಿಲ್ಲ. ಸಂಬಂಧಿತರನ್ನು ಕರೆದು ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ನೈತಿಕ ಬೆಂಬಲ: ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಯ ಹೋರಾಟಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ನಿರ್ವಹಿಸಲು ಸಾಧ್ಯವಾಗದೆ ಹೆಣಗಾಡುತ್ತಿರುವ ಕಾಂಗ್ರೆಸ್ ಸರ್ಕಾರ, ಸೇವೆ ಮತ್ತು ಬದ್ಧತೆಗೆ ಹೆಸರಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಬಡವಾಗಿಸಿದೆ. ಸಂಸ್ಥೆಯ ನೌಕರರ ಹಿತಾಸಕ್ತಿಯನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಕಿಡಿಕಾರಿದ್ದಾರೆ.
ಸಾರಿಗೆ ನಿಗಮಗಳ ನೌಕರರು ಸಂಕಷ್ಟಗಳ ನಡುವೆ ತಮ್ಮ ಸೇವಾ ನಿಷ್ಠೆಯನ್ನು ಸಂಯಮದಿಂದ ಮುಂದುವರೆಸಿಕೊಂಡು ಬಂದಿದ್ದರೂ ಅವರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಬೇಕಾದ ಸರ್ಕಾರ ವೇತನ ಪರಿಷ್ಕರಣೆ ಮಾಡದೆ, ಬರೋಬ್ಬರಿ 38 ತಿಂಗಳ ಬಾಕಿ ವೇತನವನ್ನೂ ಬಿಡುಗಡೆ ಮಾಡಿಲ್ಲವೆಂದರೆ ಸಂಬಳವನ್ನೇ ನಂಬಿ ಕುಟುಂಬ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿಗಳ ಸ್ಥಿತಿ ಹೇಳತೀರದಾಗಿದೆ ಎಂದು ಹೇಳಿದ್ದಾರೆ.
ನೌಕರರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನೀಡದೇ ನೌಕರರ ಹಿತಾಸಕ್ತಿಯನ್ನು ತಾತ್ಸಾರದಿಂದ ನೋಡುತ್ತಿರುವ ರಾಜ್ಯ ಸರ್ಕಾರ ಈ ಕೂಡಲೇ ಸಾರಿಗೆ ನೌಕರರ ಬೇಡಿಕೆಯನ್ನು ಈಡೇರಿಸಬೇಕು. ಸರ್ಕಾರ ಈ ನಿಟ್ಟಿನಲ್ಲಿ ತುರ್ತು ಕ್ರಮ ತೆಗೆದುಕೊಳ್ಳದೆ ಹೋದರೆ ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರದಿಂದ ಉಂಟಾಗುವ ಅನಾನುಕೂಲ ಪರಿಸ್ಥಿತಿ ಹಾಗೂ ಜನರಿಗೆ ಉಂಟಾಗುವ ತೊಂದರೆಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.