
ಶಿವಮೊಗ್ಗ (ಏ.03): ಕಳೆದ ಒಂದು ವಾರದಿಂದ ಬಾಗಲಕೋಟೆ ನಗರ, ಗ್ರಾಮಾಂತರ ಭಾಗದಲ್ಲಿ ಪ್ರವಾಸ ಮಾಡಿದ್ದೇನೆ. ಎಲ್ಲಾ ಮುಖಂಡರ ಜೊತೆ ಪ್ರವಾಸ ಮಾಡಿದ್ದೇನೆ. ನಮ್ಮ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ನೂರಕ್ಕೆ ನೂರರಷ್ಟು ಗೆಲ್ಲುವ ವಿಶ್ವಾಸವಿದೆ. ದಾವಣಗೆರೆ ದಕ್ಷಿಣ ಕ್ಷೇತ್ರವೂ ಬಿಜೆಪಿಯ ಐತಿಹಾಸಿಕ ಗೆಲುವು ಸಾಕ್ಷಿಯಾಗುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ದಾವಣಗೆರೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಮೋಸ ಮಾಡಿರುವುದು ಮನವರಿಕೆ ಅಗಿದೆ. ಬೇರೆ ಬೇರೆ ಕಾರಣಕ್ಕೆ ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂಬುದು ಸಿದ್ದರಾಮಯ್ಯ ಅವರ ಹತಾಶೆಯಲ್ಲೇ ಗೊತ್ತಾಗುತ್ತದೆ ಎಂದು ಹೇಳಿದರು. ಬಿ.ವೈ.ವಿಜಯೇಂದ್ರ ಸಫಲರಾಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ನಾನು ಸಫಲ ಅನ್ನೋದಕ್ಕಿಂತ ಕಾರ್ಯಕರ್ತರು- ಮುಖಂಡರ ಶ್ರಮ ಇದೆ. ಇದನ್ನು ನೋಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಭಯಭೀತರಾಗಿದ್ದಾರೆ ಎಂದು ತಿರುಗೇಟು ನೀಡಿದರು.
ಗ್ಯಾರಂಟಿಗಳ ಬಗ್ಗೆ ಸಿದ್ದರಾಮಯ್ಯ ಅವರಿಗೆ ಭರವಸೆ ಹೋಗಿದೆ. ಬಾಗಲಕೋಟೆಯಲ್ಲಿ 15ಕ್ಕೂ ಹೆಚ್ಚು ಸಚಿವರು ಸೂಟ್ ಕೇಸ್ ಸಹಿತ ಬಂದಿದ್ದಾರೆ. ದಾವಣಗೆರೆಯಲ್ಲೂ ಬಂದು ಹೋಗಿದ್ದಾರೆ. ಇದು ಯಾವುದೇ ಕಾರಣಕ್ಕೂ ಮತದಾರರ ಮೇಲೆ ಪರಿಣಾಮ ಬೀರಲ್ಲ. ಎರಡು ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದರು. ಯತ್ನಾಳ್ ಅವರಿಂದ ಬಿಜೆಪಿ ಪರ ಪ್ರಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಾಗಲಕೋಟೆಯಲ್ಲಿ ಬಿಜೆಪಿ ಗೆದ್ದಾಗಿದೆ. ನಮ್ಮ ಅಭ್ಯರ್ಥಿ ಅಂತರ ಹೆಚ್ಚಾಗುತ್ತೇ ಅಂದರೆ ಆಗಲಿ ಬಿಡಿ. ಬಹಳ ಸಂತೋಷ ಎಂದರು.
ಎರಡು ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೊರಗಡೆ ಸಾರ್ವಜನಿಕ ಸಭೆಯಲ್ಲಿ ಏನು ಬೇಕಾದರೂ, ಹೇಳಬಹುದು. ಆದರೆ, ಇದೇ ಮಾತನ್ನು ಸದನದಲ್ಲಿ ಹೇಳುವ ಎದೆಗಾರಿಕೆ ಅವರಿಗೆ ಇಲ್ಲ. ಬಿಜೆಪಿ ಎಷ್ಟು ಕೇಳಿದ್ರೂ ಸದನದಲ್ಲಿ ಹೇಳಲಿಲ್ಲ. ಸಿಎಂ ಇರುತ್ತಾರಾ, ಬದಲಾಗುತ್ತಾರ ಗೊತ್ತಿಲ್ಲ. ಮುಖ್ಯಮಂತ್ರಿ ಇದ್ದರೂ, ಬದಲಾದರೂ ರಾಜ್ಯದ ಆರ್ಥಿಕ ಸ್ಥಿತಿ ಬದಲಾಗಲ್ಲ ಎಂದು ಕುಟುಕಿದರು. ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲೋದು ಶತಸಿದ್ಧ. ಸರ್ಕಾರಕ್ಕೆ ಯಾವ ರೀತಿ ಪರಿಣಾಮ ಬರುತ್ತೇ ಅಂತ ನಾನು ಹೇಳಲ್ಲ. ಅದು ಅವರ ಆಂತರಿಕ ವಿಚಾರ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.