ಶಿವಮೊಗ್ಗ ಲೋಕಸಭಾ ಕದನ: ಈಶ್ವರಪ್ಪ ಸ್ಪರ್ಧೆಯಿಂದ ಏನೂ ಆಗಲ್ಲ, ರಾಘವೇಂದ್ರ

By Kannadaprabha News  |  First Published May 5, 2024, 11:22 AM IST

ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರಿದೆ. ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ.ರಾಘವೇಂದ್ರ ಕಣದಲ್ಲಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರು ಸ್ಪರ್ಧಿಸಿರುವುದರಿಂದ ಸಹಜವಾಗಿಯೇ ಕುತೂಹಲ ತೀವ್ರಗೊಳಿಸಿದೆ. 


ಗೋಪಾಲ್ ಯಡಗೆರೆ

ಶಿವಮೊಗ್ಗ(ಮೇ.05):  ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರಿದೆ. ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ.ರಾಘವೇಂದ್ರ ಕಣದಲ್ಲಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರು ಸ್ಪರ್ಧಿಸಿರುವುದರಿಂದ ಸಹಜವಾಗಿಯೇ ಕುತೂಹಲ ತೀವ್ರಗೊಳಿಸಿದೆ. ಕಾಂಗ್ರೆಸ್‌ನ ಗೀತಾ ಶಿವರಾಜ್‌ಕುಮಾರ್ ಅವರ ಜತೆಗೆ ತಮ್ಮದೇ ಪಕ್ಷದ ಈಶ್ವರಪ್ಪ ಅವರನ್ನು ಎದುರಿಸಬೇಕಾಗಿರುವುದರಿಂದ ರಾಘವೇಂದ್ರ ಅವರಿಗೆ ಈ ಬಾರಿ ತುಸು ಪ್ರಯಾಸಪಡಬೇಕಾದ ಸಂದರ್ಭ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ರಾಘವೇಂದ್ರ ಅವರು ‘ಕನ್ನಡಪ್ರಭ’ದೊಂದಿಗೆ ಮುಕ್ತವಾಗಿ ಮಾತನಾಡಿ ಚುನಾವಣೆ ಕುರಿತ ಬೆಳವಣಿಗೆಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Tap to resize

Latest Videos

undefined

ನಾಲ್ಕನೇ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದೀರಿ, ಸ್ಪರ್ಧೆ ಹೇಗಿದೆ?

ವಾತಾವರಣ ತುಂಬಾ ಚೆನ್ನಾಗಿದೆ. ಪ್ರಧಾನಿ ಮೋದಿಯವರು ಮೊದಲೇ ಸಮಯ ನೀಡಿ ಇಲ್ಲಿಗೆ ಆಗಮಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದು, ಕಾರ್ಯಕರ್ತರು ಅದೇ ಉತ್ಸಾಹದಿಂದ ಈಗಲೂ ಕೆಲಸ ಮಾಡುತ್ತಿದ್ದಾರೆ.
ಹಿಂದೆ ನಡೆದ ಮೂರು ಲೋಕಸಭೆ ಚುನಾವಣೆಗಳಿಗಿಂತ ಇಂದಿನ ಚುನಾವಣೆ ಕಷ್ಟವಾಗುತ್ತಿದೆಯೇ ಅಥವಾ ಸುಲಭವಾಗುತ್ತಿದೆಯೇ?
ಎಲ್ಲ ಚುನಾವಣೆಗಳೂ ಸವಾಲೇ. ಹಿಂದಿನ ಚುನಾವಣೆ ಸುಲಭವಾಗಿಯೇನೂ ಇರಲಿಲ್ಲ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ರಾಘವೇಂದ್ರ-ಗೀತಾಗೆ ಪೈಪೋಟಿ ನೀಡಿರುವ ಈಶ್ವರಪ್ಪ

ಈ ಬಾರಿ ಚುನಾವಣೆ ತ್ರಿಕೋನ ಸ್ಪರ್ಧೆ ಅಥವಾ ನೇರ ಸ್ಪರ್ಧೆ ಎನಿಸುತ್ತಿದೆಯೇ?

ಈ ಬಾರಿ ನೇರಾ ಹಣಾಹಣಿ ಇದೆ. ಅದಕ್ಕಿಂತ ಮುಖ್ಯವಾಗಿ ಒನ್‌ ಸೈಡೆಡ್‌ ಚುನಾವಣೆಯಂತೆ ಕಾಣುತ್ತಿದೆ. ಹಿಂದಿನ  ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬೆಂಬಲ ನೀಡಿದ್ದ ಜೆಡಿಎಸ್ ಈ ಬಾರಿ ನಮಗೆ ಬೆಂಬಲ ನೀಡುತ್ತಿರುವುದರಿಂದ ಒಳ್ಳೆಯ ಲಾಭವಾಗುತ್ತಿದೆ. ಆ ಪಕ್ಷದ ಎಲ್ಲ ನಾಯಕರು, ಕಾರ್ಯಕರ್ತರು ಕೂಡ ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ. ಇದು ಈ ಬಾರಿಯ ಚುನಾವಣೆಯ ವಿಶೇಷ.

ಕಳೆದ ಒಂದೂವರೆ ದಶಕದಿಂದ ನಡೆಯುತ್ತಿರುವ ಲೋಕಸಭಾ ಚುನಾವಣೆ ಎರಡು ಕುಟುಂಬಗಳ ನಡುವಿನ ಚುನಾವಣೆಯಾಗುತ್ತಿದೆಯೇ?

ಇದು ತಪ್ಪು. ಇದು ಕುಟುಂಬಗಳ ನಡುವಿನ ರಾಜಕಾರಣ ಇಲ್ಲ. ಚುನಾವಣೆ ಎಂದರೆ ಕುಟುಂಬದ ನಡುವಿನ ಸ್ಪರ್ಧೆ ಅಲ್ಲ, ಇವೆಲ್ಲ ವ್ಯಕ್ತಿಗತ ಸ್ಪರ್ಧೆ. ಪಕ್ಷಗಳ ನಡುವಿನ ಸ್ಪರ್ಧೆ. ಅಭಿವೃದ್ಧಿಯ ವಿಚಾರವಷ್ಟೇ ಇಲ್ಲಿ ಮುಖ್ಯ

ಈಶ್ವರಪ್ಪ ಸ್ಪರ್ಧೆ ಅಚ್ಚರಿ ತಂದಿತೇ? ಅವರ ಸ್ಪರ್ಧೆ ನಿಮಗೆ ಕಂಟಕವಾಗಲಿದೆಯೇ?

ಕಳೆದ ಮೂರು ಚುನಾವಣೆಗಳಲ್ಲಿ ಅವರ ಆಶೀರ್ವಾದ ನನಗೆ ಸಿಕ್ಕಿತ್ತು. ಈ ವರ್ಷ ಸಿಕ್ಕಿಲ್ಲ ಎನ್ನುವುದಕ್ಕೆ ಬೇಸರ ಇದೆ. ಆದರೆ ಅವರ ಸ್ಪರ್ಧೆ ಚುನಾವಣಾ ಫಲಿತಾಂಶದ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ

ಈಶ್ವರಪ್ಪ ಹಿಂದುತ್ವವನ್ನೇ ಮುಖ್ಯ ಅಸ್ತ್ರವಾಗಿಸಿಕೊಂಡಿರುವುದರಿಂದ ನಿಮಗೆ ಮುಳುವಾಗುವುದಿಲ್ಲವೇ?

ಹಿಂದುತ್ವ ಎನ್ನುವುದು ಸ್ವಾರ್ಥಕ್ಕೆ ಬಳಸುವ ಪ್ರಾಡಕ್ಟ್ ಅಲ್ಲ. ಹಿಂದುತ್ವ ಎಂದರೆ ಮೋದಿ. ಹಿಂದುತ್ವ ಎನ್ನುವುದು ಯಡಿಯೂರಪ್ಪ ಅವರ ರಕ್ತದಲ್ಲಿಯೇ ಇದೆ. ಯಡಿಯೂರಪ್ಪ ಅವರು ಶಿಕಾರಿಪುರಕ್ಕೆ ಬಂದಿದ್ದೇ ಸಂಘ ಪರಿವಾರದ ಕಾರ್ಯಕರ್ತರಾಗಿ. ಶಿಕಾರಿಪುರದಲ್ಲಿ ಮೊದಲ ಶಾಖೆ ಮಾಡಿದ್ದು ಅವರೇ. ಹುಬ್ಬಳ್ಳಿಯ ಈದ್ಗಾ ಮೈದಾನದ ಹೋರಾಟ, ರಾಮಜನ್ಮಭೂಮಿ ಹೋರಾಟ, ಕಾಶ್ಮೀರದ ಲಾಲ್ ಚೌಕದಲ್ಲಿ ಧ್ವಜ ಹಾರಿಸುವ ಹೋರಾಟ ಎಲ್ಲದರಲ್ಲಿಯೂ ಮುಂಚೂಣಿಯಲ್ಲಿ ಇದ್ದವರು ಯಡಿಯೂರಪ್ಪನವರು. ಸಾವಯವ ಕೃಷಿಗೆ ಒತ್ತು, ಹೆಣ್ಣು ಭ್ರೂಣ ಹತ್ಯೆ ತಡೆಯುವ ಕಾಯ್ದೆ ತಂದಿರುವುದು, ಭಾಗ್ಯಲಕ್ಷ್ಮೀ ಬಾಂಡ್ ಜಾರಿ ಎಲ್ಲವೂ ಹಿಂದುತ್ವದ ಅಂಶವೇ. ಜೊತೆಗೆ ನಾನು ಮತ್ತು ವಿಜಯೇಂದ್ರ ವಿದ್ಯಾಭ್ಯಾಸ ಮಾಡಿದ್ದು ಆರೆಸ್ಸೆಸ್‌ ಶಾಲೆಯಲ್ಲೇ ಎಂಬುದನ್ನು ಕೂಡ ಗಮನಿಸಬೇಕು. ಮೂರು ವಾರದ ಹಿಂದೆ ರಾಘವೇಂದ್ರ ಅವರನ್ನು ಮೂರು ಲಕ್ಷದಲ್ಲಿ ಗೆಲ್ಲಿಸಬೇಕು ಎಂದು ಹೇಳಿದವರು ಬಳಿಕ ಹೇಗೆ ಮಾತು ಬದಲಾಯಿಸಿದರು?ಇವರ ಮಾತು, ಟೀಕೆಗಳು ಮತದಾರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಚುನಾವಣಾ ಪ್ರಚಾರದಲ್ಲಿ ಈಶ್ವರಪ್ಪ ಅವರು ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ಕುರಿತು ನೇರವಾಗಿ ಪ್ರಸ್ತಾಪಿಸುತ್ತಿದ್ದಾರಲ್ಲ?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮಗೆ ಟಿಕೆಟ್ ತಪ್ಪಿದಾಗ ಟಿಕೆಟ್ ಕೇಳಿದ್ದು ಅವರ ಮಗನಿಗೇ ಅಲ್ವ? ಈ ಚುನಾವಣೆಯಲ್ಲಿ ಹಾವೇರಿಯಲ್ಲಿ ಕೇಳಿದ್ದು ಕೂಡ ಸಾಮಾನ್ಯ ಕಾರ್ಯಕರ್ತನಿಗಲ್ಲ, ಬದಲಿಗೆ ಅವರ ಮಗನಿಗೇ. ಇದು ಕುಟುಂಬ ರಾಜಕಾಣ ಅಲ್ವಾ? ಇವತ್ತು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ? ಅವರಿಗೆ ಖುಷಿ ಬಂದಾಗ ಕುಟುಂಬ ರಾಜಕಾರಣ ಬಗ್ಗೆ ಮಾತನಾಡುವುದನ್ನು ಜನ ಗಮನಿಸುತ್ತಿದ್ದಾರೆ. ಜನ ಪ್ರಜ್ಞಾವಂತರಿದ್ದಾರೆ. ಗಮನಿಸುತ್ತಾರೆ.

ಈಶ್ವರಪ್ಪನವರ ಹಿಂದುತ್ವ ಮತ್ತು ಮೋದಿಯವರ ಭಾವಚಿತ್ರದಿಂದ ಮತದಾರರು ಗೊಂದಲಕ್ಕೆ ಈಡಾಗುವುದಿಲ್ಲವೇ?

ಇಲ್ಲ. ಹಿಂದುತ್ವ ಎಂದರೆ ಬಿಜೆಪಿ, ಹಿಂದುತ್ವ ಎಂದರೆ ನರೇಂದ್ರ ಮೋದಿ. ಹಿಂದುತ್ವದ ಪರಿಕಲ್ಪನೆ ಎಂದರೆ ಕಾಮನ್ ಸಿವಿಲ್ ಕೋಡ್, ರಾಮಮಂದಿರ ನಿರ್ಮಾಣ, ಆರ್ಟಿಕಲ್ 370 ನೇ ವಿಧಿ ರದ್ದು. ಇದೆಲ್ಲವನ್ನೂ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಂತ ಹಂತವಾಗಿ ಜಾರಿ ಮಾಡಿದೆ. ನಮ್ಮ ದೇಶದವರು ಮಾತ್ರವಲ್ಲ, ವಿದೇಶದವರೂ ಮೋದಿ ಕಡೆ ನೋಡುತ್ತಿದ್ದಾರೆ. ಬಿಜೆಪಿಯ ಅಧಿಕೃತ ಅಭ್ಯರ್ಥಿ ನಾನಾಗಿದ್ದು, ಜನ ನನಗೆ ಮತ ನೀಡಿದರೆ ಮಾತ್ರ ಮೋದಿಗೆ ನೀಡಿದಂತೆ. ಅವರ್ಯಾರೋ ಮೋದೀಜಿ ಫೋಟೋ ಹಾಕಿಕೊಂಡರೆ ಜನ ಮತ ಹಾಕಲ್ಲ.

ಈ ಬಾರಿ ಮಾತಿನ ವಾಗ್ಯುದ್ಧ, ವೈಯಕ್ತಿಕ  ಟೀಕೆ, ಹೇಳಿಕೆಗಳು ಹೆಚ್ಚಾದಂತೆ ಕಾಣುತ್ತಿದೆ.

ಈವರೆಗೆ ಈ ರೀತಿಯ ಮಾತುಗಳು ಇರಲಿಲ್ಲ. ಈಗ ಕೇಳಿ ಬರುತ್ತಿರುವುದರ ಕುರಿತು ನೋವಿದೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ, ಯಡಿಯೂರಪ್ಪ, ಜೆ.ಹೆಚ್. ಪಟೇಲ್ ರಂತಹ ನಾಯಕರು, ಸಾಹಿತಿಗಳು ಇದ್ದ ನಾಡಿನಲ್ಲಿ ಉತ್ತಮ ವಿಚಾರ ಇಟ್ಟುಕೊಂಡು ಚರ್ಚೆ ನಡೆಯಬೇಕಿತ್ತು. ಆದರೆ ಅದಾಗುತ್ತಿಲ್ಲ. ಅದರಲ್ಲಿಯೂ ಮುಖ್ಯವಾಗಿ ಕಾಂಗ್ರೆಸ್ ಗೆ ನಮ್ಮ ಬಗ್ಗೆ ಹೇಳಲೂ ಏನೂ ಇಲ್ಲ. ಹೀಗಾಗಿ ಅಪ್ರಚಾರ ಮಾಡುತ್ತಿದ್ದಾರೆ. ಯಾವುದೇ ರೀತಿಯಲ್ಲಿ ಹೋರಾಟ ನಡೆಸಲು ಸಾಧ್ಯವಿಲ್ಲ ಎಂದಾದಾಗ ವೈಯಕ್ತಿಕ ಟೀಕೆ ಟಿಪ್ಪಣಿಗಳ ಕುರಿತು ಮಾತನಾಡುತ್ತಾ ಅಪಪ್ರಚಾರ ಮಾಡುವುದು ಕೆಲವರ ರೀತಿ ನೀತಿಯಾಗಿದ್ದು, ಈಗಲೂ ಅದೇ ಆಗುತ್ತಿದೆ.

ನಿಮ್ಮ ವಿರುದ್ಧ ವೈಯಕ್ತಿಕ  ಟೀಕೆಗಳು ಕೇಳಿ ಬಂದಾಗಲೂ ನಿಮ್ಮ ಪ್ರತಿಕ್ರಿಯೆ ತಣ್ಣಗಿರುವುದರ ಗುಟ್ಟೇನು?

ಅವರ ಮಟ್ಟಕ್ಕೆ ಇಳಿಯಬೇಡಿ ಎಂದಿದ್ದಾರೆ. ಹಿರಿಯರು, ಸಂಘ ಪರಿವಾರದವರು ಕಲಿಸಿದ್ದು ಒಳ್ಳೆಯ ಸಂಸ್ಕೃತಿ. ಚೀಪ್ ಪಬ್ಲಿಸಿಟಿ ಬೇಕಿಲ್ಲ. ಮಾಡಬೇಕಿರುವ ನೂರಾರು ಕೆಲಸಗಳಿವೆ. ಆ ಕಡೆ ಗಮನ ಹರಿಸುತ್ತೇವೆ.

ಈ ಚುನಾವಣೆಯಲ್ಲಿಯೂ ಗ್ಯಾರಂಟಿ ಯೋಜನೆ ಕಾಂಗ್ರೆಸ್ಸಿಗೆ ಲಾಭ ತಂದುಕೊಡಲಿದೆಯೇ?

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಗ್ಗೆ ವಿಶ್ವಾಸ ಇಟ್ಟುಕೊಂಡು ಆ ಸರ್ಕಾರವನ್ನು ತಂದರು. ಆದರೆ ಚುನಾವಣೆ ಬಳಿಕ ಯಾವುದೂ ಪ್ರಾಮಾಣಿಕವಾಗಿ ಕಾರ್ಯರೂಪಕ್ಕೆ ಬರಲಿಲ್ಲ. ಇವತ್ತೂ 5 ಕೆ.ಜಿ. ಅಕ್ಕಿ ನೀಡುತ್ತಿರುವುದು ನರೇಂದ್ರ ಮೋದಿ. ನಿರುದ್ಯೋಗ ಭತ್ಯೆ ಅಂತ ಹೇಳಿದರು. ಆದರೆ ಅದು ಯಾರಿಗೆ ಸಿಗುತ್ತಿದೆ? ಎಲ್ಲೋ ಕೆಲವರಿಗೆ ಮಾತ್ರ. ಬಸ್ ಫ್ರೀ ಎನ್ನುತ್ತಾರೆ. ಅಣ್ಣ ತಂಗಿ ಹೋದರೆ ಬಸ್ ದರ ಏರಿಸಿರುವುದರಿಂದ ಅಣ್ಣ ಡಬ್ಬಲ್ ದರ ನೀಡಬೇಕಾಗಿದೆ. ವಿದ್ಯುತ್ ಫ್ರೀ ಎನ್ನುತ್ತಾ ಪಂಪ್ ಸೆಟ್ ಗಳ ಅಕ್ರಮ ಸಕ್ರಮ ಮಾಡಿಸಲು ಈ ಮೊದಲು ಇದ್ದ 10 ಸಾವಿರ ಇದ್ದ ದರವನ್ನು 2 ಲಕ್ಷಕ್ಕೆ ಏರಿಸಿದ್ದಾರೆ. ಮದ್ಯದ ದರ ಏರಿಸಿದ್ದು ಬಡವರ ಪಾಲಿಗೆ ಹೊರೆಯಾಗಿದೆ. ಎಲ್ಲಿಯ ಗ್ಯಾರಂಟಿ? ಯಾರಿಗೆ ಲಾಭವಾಗಿದೆ. ಒಂದು ಕುಟುಂಬದ ಹಣವನ್ನು ಕಿತ್ತುಕೊಂಡು ಆ ಕುಟುಂಬಕ್ಕೆ ಅದರಲ್ಲಿ ಅರ್ಧ ಹಣ ನೀಡುವುದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ! ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಗೆ ಒಂದು ಲಕ್ಷ ರು. ನೀಡುತ್ತೇವೆ ಎನ್ನುತ್ತಾರೆ. ಒಬ್ಬೊಬ್ಬರಿಗೆ ಒಂದು ಲಕ್ಷ ಎಂದರೆ 60 ಲಕ್ಷ ಕೋಟಿ ಹಣ ಬೇಕಾಗುತ್ತದೆ. ದೇಶದ ಬಜೆಟ್ಟೇ 45 ಲಕ್ಷ ಕೋಟಿ ರು. ಇದನ್ನು ನಾವು ಹೇಳಿದಾಗ, ಇಲ್ಲ ಕುಟುಂಬದ ಒಬ್ಬಮಹಿಳೆಗೆ 1 ಲಕ್ಷ ಕೋಟಿ ರು. ಎಂದರು. ಹಾಗಾದರೂ ವರ್ಷಕ್ಕೆ 35 ಲಕ್ಷ ಕೋಟಿ ರು. ಬೇಕಾಗುತ್ತದೆ. ಇದು ಸಾಧ್ಯವಾ?

ಪ್ರಧಾನಿ ಮೋದಿಯವರ ಸಾಧನೆ ನಿಮ್ಮ ಚುನಾವಣೆಯ ಪ್ರಮುಖ ವಿಷಯವೇ?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹತ್ತು ವರ್ಷದಲ್ಲಿ ಅಗಾಧವಾದ ಸಾಧನೆ ಮಾಡಿದ್ದು, ಜನ ಗಮನಿಸಿದ್ದಾರೆ. ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲಿಯೂ ಅವರ ವರ್ಚಸ್ಸು ಬೆಳೆದಿದೆ. ಮೋದಿಜಿಯವರ ಮೊದಲ ಅವಧಿಯಲ್ಲಿ ಹಿಂದಿನ ಯುಪಿಎ ಅವಧಿಯಲ್ಲಿ ಆದ ತಪ್ಪುಗಳನ್ನು ಮುಚ್ಚಲು ಸಮಯ ಬೇಕಾಯಿತು. ಎರಡನೇ ಅವಧಿಯಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡಲು ಗಮನ ಹರಿಸಿದ್ದಾರೆ. ನಮ್ಮ ಅಖಂಡ ಭಾರತವನ್ನು ಕಾಂಗ್ರೆಸ್ ತುಂಡು ತುಂಡಾಗಿ ಮಾಡಿತ್ತು. ಈಗ ಮೋದೀಜಿ ಅವರ ಕಾಲದಲ್ಲಿ ಮತ್ತೆ ಅಖಂಡ ಭಾರತ ಸೃಷ್ಟಿಯಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದಾರೆ. ಇದೆಲ್ಲವನ್ನೂ ಜನ ಗಮನಿಸುತ್ತಿದ್ದಾರೆ.

ಕಾಂಗ್ರೆಸ್ ಗ್ಯಾರಂಟಿ ಎದುರು ಮೋದಿ ಗ್ಯಾರಂಟಿ ಮೇಲಾಗುವುದೇ?

ನೂರಕ್ಕೆ ನೂರರಷ್ಟು. ಈಗಾಗಲೇ ಕಾಂಗ್ರೆಸ್ ಗ್ಯಾರಂಟಿ ಕುರಿತು ಹೇಳಿದ್ದೇನೆ. ಜನ ನೋಡಿ ಭ್ರಮನಿರಸನರಾಗಿದ್ದಾರೆ. ಮೋದಿಜಿಯವರ ಗ್ಯಾರಂಟಿ ಎಂದರೆ ರಾಷ್ಟ್ರೀಯತೆಯೇ ಹೊರತು ಅಕ್ಕಿ, ಬೇಳೆ ಕಾಳು ಮಾತ್ರವಲ್ಲ. ಸಮಗ್ರ ಭಾರತದ ಅಭಿವೃದ್ಧಿಯ ಚಿಂತನೆ.

ಮೋದಿಯವರ ಸಾವು ಬಯಸುವುದು ಅಕ್ಷಮ್ಯ ಅಪರಾಧ: ರಾಜು ಕಾಗೆ ಹೇಳಿಕೆಗೆ ರಾಘವೇಂದ್ರ ತಿರುಗೇಟು

ಕಾಂಗ್ರೆಸ್ ನಾಯಕರು ನಟರನ್ನು ಕರೆ ತಂದು ಮತ ಕೇಳುತ್ತಿದ್ದು, ಪರಿಣಾಮ ಬೀರಲಿದೆಯೇ?

ಜನರಿಗೆ ಕಲಾವಿದರನ್ನು ಹತ್ತಿರದಿಂದ ನೋಡುವ ಅವಕಾಶ ಕಲ್ಪಿಸಿಕೊಟ್ಟ ಕಾಂಗ್ರೆಸ್ ಗೆ ವಂದನೆಗಳು. ನನಗೆ ಮತ್ತು ಜನರಿಗೆ ಕಲಾವಿದರ ಬಗ್ಗೆ ಗೌರವ ಇದೆ. ಇವರು ಬಂದಾಗ ಜನ ಸೇರುತ್ತಾರೆ. ಆದರೆ ಯಾರೂ ಮಾತು ಕೇಳುವುದಿಲ್ಲ. ಇಲ್ಲಿ ಯಾರು ಇರುತ್ತಾರೆ? ಯಾರು ನಮ್ಮ ಕಷ್ಟಕ್ಕೆ ಆಗುತ್ತಾರೆ ಎಂಬುದನ್ನು ಜನ ಸ್ಪಷ್ಟವಾಗಿ ಗಮನಿಸುತ್ತಾರೆ. ಅದೆಲ್ಲ ಅವರಿಗೆ ಗೊತ್ತಿದೆ.

ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿ ವೀಕ್ ಎಂಬ ಮಾತು ಎದುರಾಳಿಗಳಿಂದ ಕೇಳಿ ಬರುತ್ತಿದೆ?

ಅವರು ಒಳ್ಳೆಯ ಕುಟುಂಬದಿಂದ ಬಂದವರು. ಖ್ಯಾತ ನಟ ರಾಜ್ ಕುಟುಂಬದ ಅಭ್ಯರ್ಥಿಯಾಗಿದ್ದು, ಅವರ ಬಗ್ಗೆ ಗೌರವವಿದೆ. ಯಾವುದೇ ಅಭ್ಯರ್ಥಿಯನ್ನು ವೀಕ್ ಎನ್ನಲಾಗುವುದಿಲ್ಲ. ಎಲ್ಲ ಸಂದರ್ಭದಲ್ಲಿಯೂ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಬೇಕು. ತುಂಬಾ ಎಚ್ಚರಿಕೆಯಿಂದ ಚುನಾವಣೆಯನ್ನು ಎದುರಿಸುತ್ತೇವೆ.

click me!