ರಾಜ್ಯಾದ್ಯಂತ ಭುಗಿಲೆದ್ದಿರುವ ವಕ್ಫ್ ಆಸ್ತಿ ವಿವಾದವನ್ನು ಖಂಡಿಸಿ ವಕ್ಫ್ ಕಾಯ್ದೆ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಸೋಮವಾರದಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.
ವಿಜಯಪುರ (ನ.06): ರಾಜ್ಯಾದ್ಯಂತ ಭುಗಿಲೆದ್ದಿರುವ ವಕ್ಫ್ ಆಸ್ತಿ ವಿವಾದವನ್ನು ಖಂಡಿಸಿ ವಕ್ಫ್ ಕಾಯ್ದೆ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಸೋಮವಾರದಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆಯುತ್ತಿರುವ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ನಾಯಕರು, ಮಠಾಧೀಶರು ವಕ್ಫ್ ಆಕ್ರಮಣ ವಿರುದ್ಧ ಕಿಡಿಕಾರಿದರು. ವಕ್ಫ್ ಆಕ್ರಮಣ ರಾಜ್ಯದಲ್ಲಿ ರಕ್ತಕ್ರಾಂತಿಗೆ ದಾರಿ ಮಾಡಿಕೊಡಬಹುದು ಎಂದು ಎಚ್ಚರಿಸಿದರು. ಶಾಸಕ ಬಸನಗೌಡ ಯತ್ನಾಳ್ ಮಾತನಾಡಿ, ಅನ್ವರ್‌ಮಾಣಿಪ್ಪಾಡಿ ವರದಿಯಲ್ಲಿರುವಂತೆ ಕಾಂಗ್ರೆಸ್ ನಾಯಕರು ವಕ್ಫ್ ಆಸ್ತಿ ಕಬಳಿಸಿದ್ದು, ಸುಮಾರು ಕ2.70 ಲಕ್ಷ ಕೋಟಿ ಬೆಲೆಯ ಆಸ್ತಿ ನುಂಗಿದ್ದಾರೆ.
ಅದರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಖಮರುಲ್ ಇಸ್ಲಾಂ, ಸಿ.ಎಂ.ಇಬ್ರಾಹಿಂ, ಕೆ.ಎ. ರೆಹಮಾನ್ ಖಾನ್, ಹ್ಯಾರಿಸ್ ಹೆಸರುಗಳಿವೆ. ಇವರೆಲ್ಲಾ ವಕ್ಫ್ ಆಸ್ತಿ ನುಂಗಿ ನೀರು ಕುಡಿದಿದ್ದಾರೆ ಎಂದು ಆರೋಪಿಸಿದ್ದಾರೆ. ವಕ್ಫ್‌ನಿಂದ ಯಾವುದೇ ಮುಸ್ಲಿಮರಿಗೆ ಅನುಕೂಲ ವಾಗಿಲ್ಲ. ಹಾಗಾಗಿ ಕಾಂಗ್ರೆಸ್ ಮುಖಂಡರು ನುಂಗಿರುವ ವಕ್ಫ್ ಆಸ್ತಿ ರಕ್ಷಣೆ ಮಾಡುತ್ತೇವೆಂದು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಹಾಕಿದ್ದೇವು. ಕೇಂದ್ರದಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದ್ದು, ಈ ವಿಚಾರದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಗಂಭೀರವಾಗಿದ್ದಾರೆ. ವಕ್ ಕಾಯ್ದೆಯ ತಿದ್ದುಪಡಿಯನ್ನು ಸಂಸತ್ ಅಧಿವೇಶನದಲ್ಲಿ ಮಂಡನೆ ಮಾಡಲಾಗುತ್ತದೆ.
ಜಗತ್ತಿನ ಯಾವುದೇ ಶಕ್ತಿ ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಭರವಸೆ ನೀಡಿದರು. ಜಿಲ್ಲಾದ್ಯಂತ ವಕ್ಫ್‌ನಿಂದ ಅನ್ಯಾಯಕ್ಕೊಳಗಾದ ಸಂತ್ರಸ್ತರು ಧರಣಿ ಸ್ಥಳದ ವೇದಿಕೆಗೆ ಬಂದು ತಮ್ಮ ಆಕ್ರೋಶ ಹೊರಹಾಕಿದರು. ಧರಣಿಗೆ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಆರ್.ಎಸ್.ಪಾಟೀಲ್ ಕುಚಬಾಳ, ರಾಜಶೇಖರ ಮಗಿಮಠ, ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರು ಸಾಥ್ ನೀಡಿದ್ದು, ಧರಣಿ ಸ್ಥಳದಲ್ಲಿ ಕಲಾವಿದರಿಂದ ಗೀ ಗೀ ಪದ ಹಾಡು, ಕ್ರಾಂತಿ ಗೀತೆ, ದೇಶ ಭಕ್ತಿ ಗೀತೆಗಳು ಮೊಳಗಿದವು. ಈ ಮಧ್ಯೆ, ಯತ್ನಾಳ್ ಹೋರಾಟದ ವೇದಿಕೆಗೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಆಗಮಿಸಿ ಧರಣಿಗೆ ಸಾಥ್ ನೀಡಿದರು.
ಕೇವಲ 14 ಸೈಟ್‌ಗಳಿಗಾಗಿ ನಾನು ತಪ್ಪು ಮಾಡ್ತೀನಾ?: ಸಿಎಂ ಸಿದ್ದರಾಮಯ್ಯ
ಕುರುಬ ಹಾಲುಮತ ಸ್ವಾಮೀಜಿಗಳ ಬೆಂಬಲ: ಯತ್ನಾಳ್ ಅವರ ಅಹೋರಾತ್ರಿ ಧರಣಿ ಸ್ಥಳಕ್ಕೆ ಆಗಮಿಸಿದ ಕುರುಬ ಹಾಲುಮತ ಸ್ವಾಮೀಜಿಗಳು ವಕ್ಫ್ ವಿರುದ್ಧದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿ ಸಿದರು. ಅಲ್ಲದೆ, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಖಡಕ್ ಸಂದೇಶ ರವಾನಿಸಿದಾರೆ. ಮಖನಾಪುರದ ಹಾಲುಮತ ಪೀಠದ ಸೋಮಲಿಂಗ ಸ್ವಾಮೀಜಿ ಮಾತನಾಡಿ, ಯಾರ ಅಸ್ತಿ ಯಾರಿಗೆ ದಾನ ಮಾಡ್ತಿರಿ? ನಿಮಗೆ ವಕ್ಫ್ ಮೇಲೆ ಪ್ರೀತಿ ಇದ್ದರೆ ನಿಮ್ಮ ಆಸ್ತಿ ಮಾರಾಟ ಮಾಡಿ. ಬೇಕಿದ್ರೆ ಖರೀದಿ ಮಾಡಿ ಕೊಡಿ. ಮಾಡಿದ್ದುಣೋ ಮಾರಾಯ್ಯಾ ಎನ್ನುವಂತೆ ಮುಂದೆ ಅನುಭವಿಸ್ತೀರಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.