
ಹರಿಪ್ರಸಾದ್‌ಗೆ ಸಿಕ್ಕಿದ್ದೇಗೆ?
ಬೆಂಗಳೂರು (ಜೂ.4): ಹಲವು ಪ್ರಭಾವಿ ನಾಯಕರು ಬಯಸಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ರಾಜ್ಯಾಧ್ಯಕ್ಷ ಹುದ್ದೆಯು ರಾಷ್ಟ್ರಮಟ್ಟದ ಸಂಘಟಕ, ಹಿಂದುಳಿದ ವರ್ಗಗಳ ನಾಯಕ, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್(BK Hariprasad) ಅವರಿಗೆ ಒಲಿದಿದೆ.
ಪ್ರಭಾವಿಗಳಾದ ಸತೀಶ್ ಜಾರಕಿಹೊಳಿ(Satish Jarkiholi), ಈಶ್ವರ ಖಂಡ್ರೆ, ಡಾ.ಜಿ.ಪರಮೇಶ್ವರ್(G Parameshwar), ಸಂತೋಷ ಲಾಡ್(santosh Lad), ಶಿವರಾಜ ತಂಗಡಗಿ(shivaraj tangadagi) ಮೊದಲಾದವರು ತೀವ್ರ ಪ್ರಯತ್ನ ನಡೆಸಿದ್ದ ಈ ಹುದ್ದೆಗೆ ಹೈಕಮಾಂಡ್‌ನ ಆಯ್ಕೆಯಾಗಿ ಬಿ.ಕೆ.ಹರಿಪ್ರಸಾದ್ ಹೊರ ಹೊಮ್ಮಿದ್ದಾರೆ.
ಹಿಂದುಳಿದ ವರ್ಗಗಳ ಮೇರು ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ಆ ಹುದ್ದೆಯು ಮೇಲ್ವರ್ಗ (ಒಕ್ಕಲಿಗ)ದ ಡಿ.ಕೆ.ಶಿವಕುಮಾರ್ ಅವರಿಗೆ ಲಭಿಸಿದ ನಂತರ ಕೆಪಿಸಿಸಿ ಹುದ್ದೆಗೆ ಒಬಿಸಿ ವರ್ಗದಿಂದಲೇ ಪ್ರಮುಖ ಸಂಘಟಕರನ್ನು ಆಯ್ಕೆ ಮಾಡುವ ಇರಾದೆ ಹೈಕಮಾಂಡ್ ಹೊಂದಿತ್ತು.
ಹೀಗಾಗಿ ನಾಯಕ ಸಮುದಾಯದ ಸತೀಶ್ ಜಾರಕಿಹೊಳಿ ಅವರ ಹೆಸರು ಪ್ರಧಾನವಾಗಿ ಈ ಹುದ್ದೆಗೆ ಕೇಳಿ ಬಂದಿತ್ತು. ಆದರೆ, ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಹುದ್ದೆಯೊಂದಿಗೆ ಸಚಿವ ಖಾತೆಯನ್ನೂ ಬಯಸಿದ್ದರು. ಇದೇ ಉದ್ದೇಶ ಇತರ ಆಕಾಂಕ್ಷಿಗಳಾದ ಪರಮೇಶ್ವರ್, ಈಶ್ವರ್ ಖಂಡ್ರೆ, ತಂಗಡಗಿ ಅವರಿಗೂ ಇತ್ತು.
ಆದರೆ, ಹೈಕಮಾಂಡ್ ಒಬ್ಬರಿಗೆ ಒಂದು ಹುದ್ದೆ ಎಂಬ ನಿಯಮ ವಿಧಿಸಿದ್ದು ಈ ನಾಯಕರಿಗೆ ತೊಡಕಾಯಿತು. ಆದರೂ ಪಟ್ಟು ಬಿಡದ ಜಾರಕಿಹೊಳಿ ಅವರು ಮಾಜಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಹೀಗೆ ಮೂರು ಹುದ್ದೆಗಳನ್ನು ಹೊಂದಿದ್ದನ್ನು ಮುಂದಿಟ್ಟುಕೊಂಡು ಹೈಕಮಾಂಡ್ ತಮಗೆ ಸಚಿವ ಸ್ಥಾನ ಹಾಗೂ ಕೆಪಿಸಿಸಿ ಹುದ್ದೆ ನೀಡುವಂತೆ ಕಡೆ ಕ್ಷಣದವರೆಗೂ ಪ್ರಬಲ ಲಾಬಿ ನಡೆಸಿದರು.
ಆದರೆ, ಹೈಕಮಾಂಡ್ ಎರಡು ವರ್ಷಗಳ ನಂತರ ಮತ್ತೆ ವಿಧಾನಸಭಾ ಚುನಾವಣೆಯು ಮುಖ್ಯವಾಗಿರುವುದರಿಂದ ಪೂರ್ಣಪ್ರಮಾಣದಲ್ಲಿ ಪಕ್ಷ ಸಂಘಟನೆ ಮಾಡುವವರನ್ನು ಅಧ್ಯಕ್ಷರನ್ನಾಗಿ ಮಾಡುವುದು ಅತ್ಯಗತ್ಯ. ಆದ್ದರಿಂದ ಕೆಪಿಸಿಸಿ ಅಧ್ಯಕ್ಷ ಹುದ್ದೆ ಅಥವಾ ಸಚಿವ ಸ್ಥಾನ ಎರಡರಲ್ಲಿ ಒಂದನ್ನು ಆಯ್ಕೆ ಖಡಾಖಂಡಿತವಾಗಿ ತಿಳಿಸಿತ್ತು.
ಆದರೆ, ಸಚಿವ ಖಾತೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಹೊಣೆ ಕೈ ಬಿಡಲು ತಯಾರಿಲ್ಲದ ಸತೀಶ್ ಅವರು ಅಂತಿಮವಾಗಿ ಕೆಪಿಸಿಸಿ ಹುದ್ದೆಯಿಂದ ಹಿಂದಕ್ಕೆ ಸರಿದರು ಎನ್ನಲಾಗಿದೆ. ಇದಾದ ನಂತರ ಹೈಕಮಾಂಡ್ ಹಠಾತ್ ಆಗಿ ಸಿದ್ದರಾಮಯ್ಯ ಸರ್ಕಾರದಲ್ಲಿ ಯುವ ಸಚಿವರಾಗಿದ್ದ ಸಂತೋಷ್ ಲಾಡ್ ಅವರ ಹೆಸರನ್ನು ಪರಿಗಣಿಸಿ, ರಾಜ್ಯ ನಾಯಕರ ಅಭಿಪ್ರಾಯ ಕೇಳಿದೆ.
ಇದಕ್ಕೆ ರಾಜ್ಯ ಕಾಂಗ್ರೆಸ್ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದರು ಎನ್ನಲಾಗಿದೆ. ಲಾಡ್ ಚಿಕ್ಕ ಕೋಮಿನಿಂದ ಬಂದವರಾಗಿದ್ದು, ಪಕ್ಷಕ್ಕೆ ಅಂಥ ದೊಡ್ಡ ಲಾಭವಾಗದು ಎಂದು ಮನವರಿಕೆ ಮಾಡಿಕೊಟ್ಟ ನಂತರ ಹರಿಪ್ರಸಾದ್ ಅವರ ಹೆಸರು ಅಂತಿಮಗೊಂಡಿದೆ.
ವಾಸ್ತವವಾಗಿ ಹರಿಪ್ರಸಾದ್ ಅವರು ಸಚಿವ ಸ್ಥಾನಕ್ಕಾಗಿ ತೀವ್ರ ಪ್ರಯತ್ನ ನಡೆಸಿದ್ದರು. ಕೆಪಿಸಿಸಿ ಹುದ್ದೆ ಅವರು ಬಯಸಿಯೂ ಇರಲಿಲ್ಲ. ಆದರೆ, ಬದಲಾದ ಪರಿಸ್ಥಿತಿಯಿಂದಾಗಿ ಹೈಕಮಾಂಡ್ ಹರಿಪ್ರಸಾದ್ ಅವರು ಕೆಪಿಸಿಸಿ ಅಧ್ಯಕ್ಷ ಗಾದಿಗೆ ಆಯ್ಕೆ ಮಾಡಿದೆ.
ಬೆಂಗಳೂರಿನಲ್ಲಿ 29-7-1954ರಲ್ಲಿ ಕೆಂಪಯ್ಯ- ಗುಣವತಿ ಅವರ ಮಗನಾಗಿ ಬಿ.ಕೆ.ಹರಿಪ್ರಸಾದ್ ಜನನ. ನಾಲ್ಕು ಬಾರಿ ರಾಜ್ಯ ಸಭಾ ಸದಸ್ಯ, ಒಂದು ಬಾರಿ ವಿಧಾನ ಪರಿಷತ್ ಸದಸ್ಯ. ಹಾಲಿ ಹರ್ಯಾಣ ರಾಜ್ಯ ಕಾಂಗ್ರೆಸ್ ಎಐಸಿಸಿ ಉಸ್ತುವಾರಿ. ಇದಲ್ಲದೆ, ಗುಜರಾತ್, ಪುದುಚೇರಿ, ದಿಯು ಮತ್ತು ದಮನ್, ಗೋವಾ, ದಾದರ್ ನಗರ್ ಹವೇಲಿ, ಹರ್ಯಾಣ, ಮಧ್ಯಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್, ಒಡಿಶಾ, ಬಿಹಾರ, ರಾಜಸ್ಥಾನ, ಪಂಜಾಬ್, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ತ್ರಿಪುರ, ಮಣಿಪುರ ಮತ್ತು ಉತ್ತರ ಪ್ರದೇಶ ಎಐಸಿಸಿ ಉಸ್ತುವಾರಿಯಾಗಿ ಕೆಲಸ ಮಾಡಿದ ಅನುಭವ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.