
ಮಂಡ್ಯ (ಜೂ.01): ರಾಷ್ಟ್ರೀಯ ನಾಯಕರ ಅಪೇಕ್ಷೆಯಂತೆ ರಾಜ್ಯದಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮುಂದುವರಿಯುತ್ತದೆ ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಸ್ಥಳೀಯ ಹಾಗೂ ಗ್ರಾಮ ಮಟ್ಟದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಒಗ್ಗಟ್ಟು ಇಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಿಜೆಪಿ ರಾಷ್ಟ್ರೀಯ ನಾಯಕರು, ಅಧ್ಯಕ್ಷರ ತೀರ್ಮಾನದಂತೆ ಮುಂದೆ ಯಾವ ರೀತಿ ಹೋಗಬೇಕು ಅದರಂತೆ ನಡೆಯುತ್ತೇವೆ ಎಂದರು.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸಕ್ಕೆ ತೀರ್ಮಾನಿಸಿದ್ದೇವೆ. ಪಕ್ಷದ ಹಿರಿಯ ಮುಖಂಡರ ನೇತೃತ್ವದಲ್ಲಿ ಸಂಘಟನೆಗೆ ರಾಜ್ಯದ 10 ಭಾಗಗಳಲ್ಲೂ 3 ರಿಂದ 4 ಜಿಲ್ಲೆಗಳನ್ನೊಳಗೊಂಡ ಕೋರ್ ಕಮಿಟಿ ರಚಿಸಿದ್ದು, ನಾಲ್ಕೈದು ಜನರ ತಂಡ ಒಂದೊಂದು ವಿಭಾಗಕ್ಕೆ ತೆರಳಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಈಗಿನಿಂದಲೇ ಪೂರ್ವ ತಯಾರಿ ನಡೆಸುತ್ತಿದೆ ಎಂದರು. ತಮ್ಮ ಉಚ್ಛಾಟನೆಯನ್ನು ಸ್ವಾಗತಿಸಿದ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿದ ವಿಜಯೇಂದ್ರ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 66 ಸೀಟ್ ಗೆದ್ದಿತ್ತು.
ಈಗ 62 ಆಗಿದೆ. ಯಾರ್ಯಾರು ಬೇಕು ಎಲ್ಲರನ್ನು ಕಾಂಗ್ರೆಸ್‌ನವರು ಕರೆದುಕೊಂಡು ಹೋಗಲಿ. ಇನ್ನೂ ಕಡಿಮೆಯಾದರೂ ಯಾವುದೇ ಬೇಸರವಿಲ್ಲ ಎಂದರು. ವಿಧಾನಸಭಾ ಚುನಾವಣೆ ಇನ್ನೂ ಮೂರು ವರ್ಷವಿದೆ. ನಮ್ಮ ಗುರಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಬೇಕು ಎಂಬುದಾಗಿದೆ. ಮಂಡ್ಯ ಜಿಲ್ಲೆಯಲ್ಲಿಯೂ 3 ರಿಂದ 4 ಸ್ಥಾನ ಗೆಲ್ಲಬೇಕು. ಇದಕ್ಕಾಗಿ ಶಕ್ತಿ ಮೀರಿ ಹೋರಾಟ ಮಾಡಲಾಗುತ್ತಿದೆ ಎಂದರು. ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯಿಂದಾಗಿ ರಾಜ್ಯದಲ್ಲಿ ಬಡವರ, ರೈತ, ದಲಿತ, ಹಿಂದುಳಿದ ವರ್ಗ ಸೇರಿದಂತೆ ಎಲ್ಲಾ ಜನಸಾಮಾನ್ಯರಿಗೂ ಅನ್ಯಾಯವಾಗಿದೆ.
ಕಾಂಗ್ರೆಸ್ ಪಕ್ಷ ಮಾತ್ರ ಜಾತಿ, ಜಾತಿಗಳ ವಿರುದ್ಧ ವಿಷಬೀಜ ಬಿತ್ತುವುದರಲ್ಲಿ ಬಿಜಿಯಾಗಿದೆ. ಅಭಿವೃದ್ಧಿ ಸಂಪೂರ್ಣ ನಿಂತಿದೆ ಎಂದು ದೂರಿದರು. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಎಲ್ಲಾ ಇಲಾಖೆಗಳಿಗೂ ಸರ್ಕಾರ ಟಾರ್ಗೆಟ್ ನಿಗದಿಪಡಿಸಿದೆ. ರಾಜ್ಯದ ಜನರ ತೆರಿಗೆ ಹಣವನ್ನು ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕಲು ಬಳಸಿಕೊಳ್ಳುತ್ತಿದ್ದಾರೆ. ಸರ್ಕಾರದಿಂದ ನೌಕರರಿಗೆ ಸಂಬಳ ಕೊಡಲೂ ಸಾಧ್ಯವಾಗುತ್ತಿಲ್ಲ. ಗ್ಯಾರಂಟಿಗೆ ಹಣ ಕೂಡಿಡಲು ಸಾಧ್ಯವಾಗದೆ ಕಸದ ಮೇಲೆ ತೆರಿಗೆ ವಿಧಿಸುತ್ತಿದೆ. ಇಂತಹ ಸರ್ಕಾರ ಬೇಕಾ ಎಂದು ಅವರು ಪ್ರಶ್ನಿಸಿದರು.
ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಶಾಸಕರು ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಡವರಿಗೆ ಬರೆ ಎಳೆಯುತ್ತಿದೆ. ಚುನಾವಣೆ ಎದುರಾದರೆ ಕಾಂಗ್ರೆಸ್ ಹೀನಾಯವಾಗಿ ಸೋಲೋದು ನಿಶ್ಚಿತ ಎಂದು ವರದಿ ಬಂದಿದೆ. ಇಂತಹ ಬಡವರ ವಿರೋಧಿ ಸರ್ಕಾರ ತೊಲಗಬೇಕು ಎಂದರು. ಸರ್ಕಾರಿ ಆಸ್ಪತ್ರೆಯಲ್ಲಿ ಜನೌಷಧ ಕೇಂದ್ರ ಮುಚ್ಚಿಸುವ ಮೂಲಕ ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದೆ. ಬಡವರಿಗೆ ಕೇಂದ್ರದ ಯೋಜನೆ ತಲುಪಬಾರದೆಂಬ ದುರುದ್ದೇಶದಿಂದ ಕೆಟ್ಟ ರಾಜಕಾರಣ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.