‘ಆಪರೇಷನ್ ಕಮಲ’ ಮೂಲಕ ಗದ್ದುಗೆ ಹಿಡಿಯುವ ಬಿಜೆಪಿ ಕರ್ನಾಟಕದಲ್ಲಿ ಯಾವಾಗಲೂ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಬಿಜೆಪಿಯಲ್ಲೀಗ ಬಣ ಜಗಳ ಶುರುವಾಗಿದೆ.
ಹುಬ್ಬಳ್ಳಿ (ಮಾ.21): ‘ಆಪರೇಷನ್ ಕಮಲ’ ಮೂಲಕ ಗದ್ದುಗೆ ಹಿಡಿಯುವ ಬಿಜೆಪಿ (BJP) ಕರ್ನಾಟಕದಲ್ಲಿ ಯಾವಾಗಲೂ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಬಿಜೆಪಿಯಲ್ಲೀಗ ಬಣ ಜಗಳ ಶುರುವಾಗಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಪೂರ್ಣ ಬಹುಮತ ಗಳಿಸಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಚುನಾವಣೆ ಯಾವಾಗ ಎದುರಾದರೂ ಎದುರಿಸಲು ಕಾಂಗ್ರೆಸ್ ಸಿದ್ಧವಿದೆ. ಬಿಜೆಪಿಯವರು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ನಾವು ನೂರಕ್ಕೆ ನೂರು ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ. 2008, 2018 ಇರಬಹುದು, ಕಾಂಗ್ರೆಸ್ಸನ್ನು ತುಳಿದುಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅವರು ಯಾವಾಗಲೂ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬಂದಿಲ್ಲ ಎಂದು ಲೇವಡಿ ಮಾಡಿದರು. ಕಾಂಗ್ರೆಸ್‌ನಲ್ಲಿ ಸೋನಿಯಾ ಗಾಂಧಿ ಬಣ ಬಿಟ್ಟು ಬೇರೆ ಯಾವುದೇ ಬಣವಿಲ್ಲ. ಬಿಜೆಪಿಯಲ್ಲಿ ಹತ್ತಾರು ಬಣಗಳಿವೆ. ನಮ್ಮಿಂದ ಹೋದವರು, ಜೆಡಿಯುನಿಂದ ಹೋದವರು, ಆರ್‌ಎಸ್‌ಎಸ್ ಮೂಲದವರು ಎಂಬ ಬಣಗಳಿವೆ.
ಭಾವನಾತ್ಮಕ ವಿಚಾರ ಇಟ್ಟುಕೊಂಡು ಕರ್ನಾಟಕ ಗೆಲ್ಲಲು ಸಾಧ್ಯವಿಲ್ಲ. ಉತ್ತರಪ್ರದೇಶ ಚುನಾವಣೆ ಬೇರೆ, ಕರ್ನಾಟಕವೇ ಬೇರೆ. ಇಲ್ಲಿ ಜನತೆ ಅಭಿವೃದ್ಧಿ, ಬೆಲೆ ಏರಿಕೆ ಇವನ್ನೆಲ್ಲ ಪರಿಗಣಿಸಿ ಮತ ಹಾಕುತ್ತಾರೆ. ಬಿಜೆಪಿಯವರಿಗೆ ಸೋಲುವ ಭಯವಿದೆ. ಹೀಗಾಗಿ ಮುಖ್ಯಮಂತ್ರಿ ಬೊಮ್ಮಾಯಿ ಎರಡು ಕಡೆಯಿಂದ ಸ್ಪರ್ಧೆ ಮಾಡುತ್ತಿದ್ದಾರೆ ಎಂದರು. ಮಹದಾಯಿ ಪಾದಯಾತ್ರೆ ಬಗ್ಗೆ ಅಧಿವೇಶನ ಮುಗಿದ ಬಳಿಕ ಉತ್ತರ ಕರ್ನಾಟಕ ಮುಖಂಡರ ಜತೆಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಬಜರಂಗದಳ ಮುಖಂಡನಿಂದ ಕೊಲೆ: ಮೃತನ ಕುಟುಂಬಕ್ಕೆ 1 ಲಕ್ಷ ಪರಿಹಾರ ಕೊಟ್ಟ ಸಿದ್ದರಾಮಯ್ಯ
ಗೋಡ್ಸೆ ವಂಶಸ್ಥರಿಂದ ಕರಾವಳಿಯ ಸಾಮರಸ್ಯ ಹಾಳು: ಕರಾವಳಿಯ ಸಾಮರಸ್ಯವನ್ನು ಗೋಡ್ಸೆ ವಂಶಸ್ಥರು ಹಾಳುಮಾಡುತ್ತಿದ್ದಾರೆ. ಗೋಡ್ಸೆ ಒಬ್ಬ ಮತಾಂಧನಾಗಿದ್ದು, ಆರ್‌ಎಸ್‌ಎಸ್(RSS), ಬಜರಂಗದಳ, ಶ್ರೀರಾಮ ಸೇನೆ ಮತ್ತು ಸಂಘ ಪರಿವಾರದವರೆಲ್ಲ ಗೋಡ್ಸೆ ಮತ್ತು ಸಾವರ್ಕರ್ ಅನುಯಾಯಿಗಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಾಣೆಮಂಗಳೂರು ಬ್ಲಾಕ್‌ನ ಯುವಕಾಂಗ್ರೆಸ್ ವತಿಯಿಂದ ನಡೆದ ಯುವಕರ ನಡೆ ಸಾಮರಸ್ಯದ ಕಡೆ ಗ್ರಾಮ ಚಲೋ ಅಭಿಯಾನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ದೇಶದ ಸ್ವಾತಂತ್ರ್ಯಕ್ಕಾಗಿ ಆರೆಸ್ಸೆಸ್ ನಾಯಕರು ಹೋರಾಡಿದ ಸಾಕ್ಷಿಗಳು ಇವೆಯಾ? ಎಂದ ಅವರು, ಇವರಿಂದ ದೇಶ ಭಕ್ತಿ ಪಾಠ ಕಲಿಯಬೇಕಾ? ಎಂದು ಪ್ರಶ್ನಿಸಿದರು.
ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಹಿಂದೂ ಸಂಘಟನೆಯ ಯುವಕನ ಕೊಲೆಗೆ ರಾಜಕೀಯ ಬಣ್ಣ ಕಟ್ಟಿ ಅದರಿಂದ ಲಾಭ ಪಡೆಯಲು ಮುಂದಾಗುತ್ತಾರೆ. ಈಶ್ವರಪ್ಪ ಎಂಬ ಪೆದ್ದ, ಮತಾಂಧ, 144 ಸೆಕ್ಷನ್ ಇದ್ದರೂ ಶವ ಮೆರವಣಿಗೆ ಮಾಡಿದ್ದಾರೆ. ಜೊತೆಗೆ ಸರ್ಕಾರದಿಂದ ಲಕ್ಷಾಂತರ ರು. ಪರಿಹಾರ ನೀಡುವಂತೆ ಮಾಡಿದ ಅವರು ಬೆಳ್ತಂಗಡಿಯಲ್ಲಿ ನಡೆದ ದಿನೇಶ್ ಕೊಲೆಗೆ ಯಾಕೆ ಪರಿಹಾರ ನೀಡಲು ಒತ್ತಾಯಿಸಿಲ್ಲ. ಅದೂ ನಾನು ಮಾಡಿದ ಒತ್ತಾಯದಿಂದ ಸರ್ಕಾರ ಅಲ್ಪಸ್ವಲ್ಪ ಪರಿಹಾರ ನೀಡಿದೆ ಎಂದು ಅವರು ಹೇಳಿದರು.
ಸಿದ್ದು-ಡಿಕೆಶಿ ಶೀತಲ ಸಮರ: ಸಿಎಂ ಅಭ್ಯರ್ಥಿ ಘೋಷಣೆ ಈಗಿಲ್ಲ, ಇದು ಇತಿಹಾಸ ಎಂದ ಕಾಂಗ್ರೆಸ್ ನಾಯಕ
ಯುವ ಸಮುದಾಯ ಬಿಜೆಪಿಯನ್ನು ಕಿತ್ತು ಎಸೆಯುತ್ತೇವೆ ಎಂಬ ಸಂಕಲ್ಪವನ್ನು ಮಾಡಿದರೆ ಮಾತ್ರ ದೇಶ, ರಾಜ್ಯ ಉಳಿಯುತ್ತೆ. ರಾಜ್ಯದಲ್ಲಿ ಬಡವರಿಗೆ ಒಂದೇ ಒಂದು ಮನೆ ನೀಡಲು ಸಾಧ್ಯವಾಗದ ಬಿಜೆಪಿ ಇರಬೇಕಾ? ಸಮಾಜ ಸಾಮರಸ್ಯದಿಂದ ಬದುಕಬೇಕಾದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದರು. ಮಾಜಿ ಸಚಿವ ಬಿ.ರಮಾನಾಥ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಂಗ್ರೆಸ್ ಸಮಾಜದ ಎಲ್ಲ ವರ್ಗದವರನ್ನು ಪ್ರೀತಿ ಮಾಡಿದ ಏಕೈಕ ಪಕ್ಷವಾಗಿದ್ದು, ದೇಶದ ಜಾತ್ಯತೀತ ಚಳುವಳಿಯನ್ನು ಬಲಿಷ್ಠ ಗೊಳಿಸಬೇಕು. ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕಾಗಿದೆ ಎಂದರು.