* ‘ನೆಹರೂ ಸಂತತಿಯಲ್ಲಿ ಭಿಕ್ಷಾಟನೆ’- ಮಾಜಿ ಸಿಎಂ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಲೇವಡಿ
* ಈಗ ಕಾಂಗ್ರೆಸ್ ಅವನತಿಯ ಅಂಚಿನಲ್ಲಿದೆ
* ಒಂದು ವರ್ಷದಲ್ಲಿ ಪಕ್ಷ ತೊರೆದ ಕಾಂಗ್ರೆಸ್‌ನ 66 ಮುಖಂಡರು
ಮಂಗಳೂರು(ಮೇ.29): ನೆಹರೂ ಸಂತತಿಯಲ್ಲಿ ಭಿಕ್ಷಾಟನೆ ಮಾಡಿ ಅಧಿಕಾರ ಗಳಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮತ್ತೆ ಸಿಎಂ ಆಗುವ ಹುಚ್ಚು ಆಸೆ ಶುರುವಾಗಿದೆ. ಅದಕ್ಕಾಗಿ ಬೇಕಾಬಿಟ್ಟಿ ಮಾತನಾಡಿ ರಾಜ್ಯದಲ್ಲಿ ವೈಷಮ್ಯ ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ದೇಶ ಕಟ್ಟುವ ಕೆಲಸ ಮಾಡುತ್ತಿರುವ ಆರ್‌ಎಸ್‌ಎಸ್ ಬಗ್ಗೆ ಸಿದ್ದುಗೆ ಮಾತನಾಡುವ ನೈತಿಕತೆ ಇಲ್ಲ ಎಂದು ದ.ಕ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಶನಿವಾರ ಮಂಗಳೂರಿನಲ್ಲಿ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಾ ನಂತರ ನೆಹರೂ ಸಂತಾನ ದೇಶವನ್ನು ಮಾರಿದರೆ, ಆರ್‌ಎಸ್‌ಎಸ್ ದೇಶವನ್ನು ಉದ್ಧರಿಸಿದೆ. ಸಿದ್ದರಾಮಯ್ಯಗೆ ಅಧಿಕಾರ ವಂಚಿತವಾದ ಮೇಲೆ ಮತಿಭ್ರಮಣೆ ಆಗಿದೆ. ಅಧಿಕಾರದ ಹುಚ್ಚಿನಲ್ಲಿ ಇತಿಹಾಸ, ಭಾರತೀಯತೆ ಎಲ್ಲವನ್ನೂ ಮರೆತಿದ್ದಾರೆ. ಸಮಾಜವಾದದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ, ಬಳಿಕ ಮಜಾ ವಾದಿಯಾಗಿ ಪರಿವರ್ತನೆಯಾಗಿದ್ದಾರೆ. ಓಟ್‌ಬ್ಯಾಂಕ್ ರಾಜಕಾರಣಕ್ಕಾಗಿ ಸಮಾಜವನ್ನು ಒಡೆಯುವ, ಜಾತಿ ಸಂಘರ್ಷ, ಗಲಭೆ ಸೃಷ್ಟಿಸುವ ಮನಸ್ಸುಗಳೊಂದಿಗೆ ಕೈಜೋಡಿಸುತ್ತಿದ್ದಾರೆ. ಹಿರಿಯ ಮುತ್ಸದ್ದಿ, ಮಾಜಿ ಸಿಎಂ ಆಗಿರುವ ಸಿದ್ದುಗೆ ಇದು ಶೋಭೆ ತರುವುದಿಲ್ಲ ಎಂದರು.
ಮಳಲಿ ಮಸೀದಿಯ ಮಣ್ಣು ತೆಗೆದು ನೋಡಿ: SDPI ಮುಖಂಡನ ಬೆದರಿಕೆ ಹೇಳಿಕೆ ವೈರಲ್
ಆರ್‌ಎಸ್‌ಎಸ್ ರಾಷ್ಟ್ರಭಕ್ತಿ ಕಲಿಸುತ್ತದೆಯೇ ಎನ್ನುವ ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿದ ನಳಿನ್, ಆರ್‌ಎಸ್‌ಎಸ್ ರಾಷ್ಟ್ರ ಕಟ್ಟುವ ಕೆಲಸ ಮಾಡುತ್ತಿದೆ. ರಾಷ್ಟ್ರದ ಸಂಕಷ್ಟ ಸಮಯದಲ್ಲಿ ಅನೇಕ ಕಾರ್ಯಗಳನ್ನು ನಡೆಸಿದೆ. ಇಂತಹ ಸಂಘಟನೆ ಬಗ್ಗೆ ಸಿದ್ದುಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದರು.
ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಪಕ್ಷ ತೊರೆದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಈಗ ಕಾಂಗ್ರೆಸ್ ಅವನತಿಯ ಅಂಚಿನಲ್ಲಿದೆ. ಒಂದು ವರ್ಷದಲ್ಲಿ ಕಾಂಗ್ರೆಸ್‌ನ ಪ್ರಮುಖ 66 ಮಂದಿ ಮುಖಂಡರು ಪಕ್ಷ ತೊರೆದಿದ್ದಾರೆ. ಕಪಿಲ್ ಸಿಬಲ್‌ರಂಥವರೂ ಕಾಂಗ್ರೆಸ್ ಬಿಟ್ಟಿದ್ದಾರೆ. ಕಾದು ನೋಡಿ, ರಾಜ್ಯದಲ್ಲೂ ಇಂತಹ ನಾಯಕರು ಕಾಂಗ್ರೆಸ್ ತೊರೆಯಲಿದ್ದಾರೆ. ಉತ್ತರ ಪ್ರದೇಶ, ಜಾರ್ಖಂಡ್, ಗೋವಾ, ಮಣಿಪುರಗಳಲ್ಲಿ ಬಿಜೆಪಿ ಫಲಿತಾಂಶವೇ ಇದಕ್ಕೆ ಉತ್ತರ ನೀಡುತ್ತಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಆಡಳಿತ ನಡೆಸಲಿದ್ದು, ಇಲ್ಲಿ ಕಾಂಗ್ರೆಸ್ ಬಗ್ಗೆ ಜನತೆ ಭ್ರಮನಿರಸನಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವಾಗಲಿದೆ ಎಂದರು.