
ಬೆಂಗಳೂರು (ಅ.02): ಜಿಎಸ್‌ಟಿ ಮೂಲಕ ಇಲ್ಲಿಯವರೆಗೆ ಜನರನ್ನು ಸುಲಿಗೆ ಮಾಡಿದ ಕೇಂದ್ರ ಸರ್ಕಾರ ಮತ್ತು ಬಿಜೆಪಿ ದೇಶದ ಜನರ ಕ್ಷಮೆ ಕೋರಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಗ್ರಹಿಸಿದ್ದಾರೆ. ಜಿಎಸ್‌ಟಿ ಇಳಿಕೆಗೆ ಕೇಂದ್ರ ಸರ್ಕಾರ ಸಂಭ್ರಮಾಚರಣೆ ಮಾಡುತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ರಾಮಲಿಂಗಾರೆಡ್ಡಿ, ಜಿಎಸ್‌ಟಿ ಮೂಲಕ ಅಮಾಯಕ ಜನರಿಂದ ವರುಷಗಳ ಕಾಲ ಸುಲಿಗೆ ಮಾಡಲಾಗಿದೆ. ಅದನ್ನು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಮರೆತಿದೆ. ಈ ಸುಲಿಗೆಗಾಗಿ ಕೇಂದ್ರ ಸರ್ಕಾರ, ಬಿಜೆಪಿ ನಾಯಕರು ದೇಶದ ಜನರ ಕ್ಷಮೆ ಕೋರಬೇಕು ಎಂದಿದ್ದಾರೆ.
ಈಗ ಜಿಎಸ್‌ಟಿ ಪ್ರಮಾಣ ಕಡಿಮೆ ಮಾಡಿ ಸಂಭ್ರಮಾಚರಣೆ ಮಾಡುವ ಮೂಲಕ ಪ್ರಚಾರ ಪಡೆಯುವ ಬಿಜೆಪಿಯ ನೈತಿಕತೆ ಬಗ್ಗೆ ಹೇಳಲು ಪದಗಳು ಸಾಲುತ್ತಿಲ್ಲ. ಅಲ್ಲದೆ, ಇನ್ನಾದರೂ ಇಲ್ಲದ ಮಾಹಿತಿಯನ್ನು ಹೇಳಿ ಅಪಪ್ರಚಾರ ಮಾಡಿ ಜನರನ್ನು ತಪ್ಪು ದಾರಿಗೆ ಎಳೆಯುವ ದುಸ್ಸಾಹಸಕ್ಕೆ ಇನ್ನಾದರೂ ಪೂರ್ಣವಿರಾಮ ಹಾಬೇಕು ಎಂದು ಹೇಳಿದ್ದಾರೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಯಾವುದೇ ದೇವಸ್ಥಾನಗಳಲ್ಲಿ ಸೇವಾ ದರ ಏರಿಕೆಯಲ್ಲಿ ಸರ್ಕಾರದ ಪಾತ್ರವಿಲ್ಲ. 2019ರಿಂದ 2023ರವರೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 24 ದೇವಸ್ಥಾನಗಳ ಸೇವಾ ಶುಲ್ಕ ಪರಿಷ್ಕರಿಸಲಾಗಿತ್ತು. ಈಗ ಬಿಜೆಪಿ ನಾಯಕರು ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಹೇಳಿದ್ದಾರೆ. ಕಟೀಲು ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದರೂ, ಅಲ್ಲಿಗೆ ಸರ್ಕಾರ ಕಾರ್ಯ ನಿರ್ವಹಣಾಧಿಕಾರಿ ನೇಮಕ ಕೂಡ ಮಾಡುವಂತಿಲ್ಲ. ಆಡಳಿತವು ಸಂಪೂರ್ಣ ದೇವಸ್ಥಾನದ ಮಂಡಳಿಗೆ ಸೇರಿದ್ದು, ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ನ್ಯಾಯಾಲಯದ ಆದೇಶವೇ ಇದೆ. ಹಾಗಾಗಿ ಅವರೇ ದರ ಪರಿಷ್ಕರಣೆ ಮಾಡಿದ್ದಾರೆ ಎಂದು ತಿಳಿಸಿದರು.
2010ರಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸೇವೆಗಳ ಶುಲ್ಕ ಹೆಚ್ಚಿಸುವಾಗ ಬಿಜೆಪಿ ಸರ್ಕಾರವಿತ್ತು. ಈಗ 2025ರಲ್ಲಿ ದರ ಪರಿಷ್ಕರಣೆಗೆ ಅವಕಾಶ ಮಾಡಿಕೊಡಿ ಎಂದು ಆಡಳಿತ ಮಂಡಳಿ ಮನವಿ ಮಾಡುವಾಗ ನಮ್ಮ ಸರ್ಕಾರವಿದೆ. ಹಾಗಂತ ಕಾಂಗ್ರೆಸ್ ಸರ್ಕಾರ ಹೆಚ್ಚು ಮಾಡಿದೆ ಎನ್ನುವುದು ಸರಿಯೇ ಎಂದು ಸಚಿವರು ಪ್ರಶ್ನಿಸಿದರು. 2003ರಲ್ಲಿ ಕಾಯಿದೆ ಜಾರಿಗೆ ಬಂದಂದಿನಿಂದ ಒಂದು ದೇವಸ್ಥಾನದ ಹಣವನ್ನು ಇನ್ನೊಂದು ದೇವಸ್ಥಾನಕ್ಕೂ ಕೊಡುವಂತಿಲ್ಲ. ಯಾವುದೇ ದೇವಸ್ಥಾನದ ಹಣ ಸರ್ಕಾರದ ಖಜಾನೆಗೂ ಬರುವುದಿಲ್ಲ. ರಾಜ್ಯದಲ್ಲಿ ಬಿಜೆಪಿಯವರೂ ಅಧಿಕಾರದಲ್ಲಿದ್ದರು. ಅವರಿಗೂ ಆ ವಿಷಯ ಗೊತ್ತಿದ್ದರೂ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.