ಲೋಕಸಭಾ ಚುನಾವಣೆಯಲ್ಲಿ ಅಭಿವೃದ್ಧಿ ಆಧಾರದಲ್ಲಿ ಬಿಜೆಪಿ ಮತ ಯಾಚನೆ: ಶೋಭಾ ಕರಂದ್ಲಾಜೆ

By Govindaraj SFirst Published Feb 17, 2024, 8:22 PM IST
Highlights

2004ರಿಂದ 2014ರ ವರೆಗೆ ಯುಪಿಎ ಸರ್ಕಾರ ಮತ್ತು 2014 ರಿಂದ 2024ರ ಎನ್‌ಡಿಎ ಸರ್ಕಾರಗಳ ಅವಧಿಯಲ್ಲಿ ನಡೆದ ಅಭಿವೃದ್ಧಿಯನ್ನು ತುಲನೆ ಮಾಡಿ ಜನರ ಮುಂದಿಡಲಾಗುತ್ತದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಉಡುಪಿ (ಫೆ.17): ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳ ಆಧಾರದಲ್ಲಿ ಮತ ಕೇಳಲು ಪಕ್ಷ ನಿರ್ಧರಿಸಿದೆ. 2004ರಿಂದ 2014ರ ವರೆಗೆ ಯುಪಿಎ ಸರ್ಕಾರ ಮತ್ತು 2014 ರಿಂದ 2024ರ ಎನ್‌ಡಿಎ ಸರ್ಕಾರಗಳ ಅವಧಿಯಲ್ಲಿ ನಡೆದ ಅಭಿವೃದ್ಧಿಯನ್ನು ತುಲನೆ ಮಾಡಿ ಜನರ ಮುಂದಿಡಲಾಗುತ್ತದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಅವರು ಕಡಿಯಾಳಿಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಕಾರ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಅಭಿವೃದ್ಧಿಯಾಗಿದೆ. ಮಲ್ಪೆ ಬಂದರಿಗೆ ಪೂರಕವಾಗಿ ಹೆಜಮಾಡಿಯಲ್ಲಿ ಬಂದರು ನಿರ್ಮಾಣಗೊಳ್ಳುತ್ತಿದೆ. ಇಂದ್ರಾಳಿ ರೈಲ್ವೇ ನಿಲ್ದಾಣವನ್ನು ಅಮೃತ ಯೋಜನೆಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇಎಸ್ಐ ಆಸ್ಪತ್ರೆ ಮಂಜೂರಾಗಿದೆ. ಕೇಂದ್ರದ ಯೋಜನೆಗಳನ್ನು ಹಂತಹಂತವಾಗಿ ಉಡುಪಿ -ಚಿಕ್ಕಮಗಳೂರಿಗೆ ತರುವ ಪ್ರಯತ್ನ ಮಾಡಿದ್ದೇನೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಏನೇ ಬರೆದರೂ ಕಾರ್ಯಕರ್ತರು ಮತ ಕೇಳಲು ಹಿಂಜರಿಯುವ ಅಗತ್ಯವಿಲ್ಲ ಎಂದರು.

ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಚುನಾವಣಾ ಪ್ರಭಾರಿ ಆರಗ ಜ್ಞಾನೇಂದ್ರ ಮಾತನಾಡಿ, ಕರಾವಳಿ ಕಾರ್ಯಕರ್ತರ ಸತ್ವ ಮತ್ತು ಶಕ್ತಿ ಬಗ್ಗೆ ಪಕ್ಷಕ್ಕೆ ಅರಿವಿದೆ. ಸಿದ್ಧಾಂತಕ್ಕಾಗಿ ಜೀವನ ನಡೆಸುತ್ತಿದ್ದಾರೆ. ಮೋದಿಯವರು ಈಗಾಗಲೇ ಎಲ್ಲಾ ಮನೆಗಳನ್ನು ತಲುಪಿದ್ದಾರೆ. ಕಾರ್ಯಕರ್ತರು ಪ್ರತಿ ಬೂತ್ ನಲ್ಲಿ ಶೇ.10ರಷ್ಟು ಮತ ಜಾಸ್ತಿ ಮಾಡಬೇಕು ಎಂದು ತಿಳಿಸಿದರು.

ಪರೀಕ್ಷೆ ಸಮಯ ವಿದ್ಯುತ್ ಕಡಿತ ಬೇಡ: ಸಚಿವರಿಗೆ ಶಾಸಕ ಯಶಪಾಲ್ ಮನವಿ

ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅಧ್ಯಕ್ಷತೆ ವಹಿಸಿದರು. ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಂಗಳೂರು ವಿಭಾಗ ಪ್ರಭಾರಿ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಜಿ.ಪ್ರ.ಕಾರ್ಯದರ್ಶಿಗಳಾದ ದಿನಕರ್ ಶೆಟ್ಟಿ ಹೆರ್ಗ, ರೇಷ್ಮಾ ಉದಯ್ ಶೆಟ್ಟಿ ಉಪಸ್ಥಿತರಿದ್ದರು. ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಚಾಲಕ ನವೀನ್ ಶೆಟ್ಟಿ ಕುತ್ಯಾರು ಸ್ವಾಗತಿಸಿ, ಜಿ.ಪ್ರ.ಕಾರ್ಯದರ್ಶಿ ರಾಘವೇಂದ್ರ ಕಿಣಿ ನಿರೂಪಿಸಿದರು.

click me!