
ದಾವಣಗೆರೆ(ಮಾ.25): ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರಕ್ಕೆ ಮುಂದಾಗಿರುವ ಮೋದಿ, ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಇಂದು(ಶನಿವಾರ) ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ‘ಮಹಾ ಸಂಗಮ’ ಸಮಾವೇಶ ನಡೆಸಲಿದ್ದಾರೆ. ಆ ಮೂಲಕ ವಿಧಾನಸಭೆ ಚುನಾವಣೆಗೆ ವಿದ್ಯುಕ್ತವಾಗಿ ರಣಕಹಳೆ ಮೊಳಗಿಸಲಿದ್ದಾರೆ.
2003ರಲ್ಲಿ ರಾಜ್ಯಕ್ಕೆ ನೀಡುತ್ತಿರುವ 7ನೇ ಭೇಟಿ ಇದಾಗಿದೆ. ರಾಜ್ಯದ ನಾಲ್ಕೂ ಕಡೆಯಿಂದ 224 ಕ್ಷೇತ್ರ ಸುತ್ತಾಡಿರುವ ವಿಜಯ ಸಂಕಲ್ಪ ಯಾತ್ರೆ ದಾವಣಗೆರೆ ತಲುಪಿದ್ದು, ಶನಿವಾರ ಇಲ್ಲಿನ ಹಳೆ ಪಿ.ಬಿ.ರಸ್ತೆಯಲ್ಲಿರುವ ಜಿಎಂಐಟಿ ಕಾಲೇಜು ಪಕ್ಕದ ಸುಮಾರು 400 ಎಕರೆ ಪ್ರದೇಶದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ‘ಮಹಾ ಸಂಗಮ’ವಾಗಲಿವೆ. ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ಮೋದಿಯವರು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಮಾನದಲ್ಲಿ ಬಂದು, ಅಲ್ಲಿಂದ ದಾವಣಗೆರೆ ಜಿಎಂಐಟಿ ಹೆಲಿಪ್ಯಾಡ್‌ಗೆ ಮಧ್ಯಾಹ್ನ 2.45ರ ಹೊತ್ತಿಗೆ ಆಗಮಿಸಲಿದ್ದಾರೆ. ಬಳಿಕ, ಗೆಸ್ಟ್ ಹೌಸ್‌ಗೆ ಹೋಗಿ, ಸ್ವಲ್ಪ ಕಾಲ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ. ಬಳಿಕ, ಐತಿಹಾಸಿಕ ಪೆಂಡಾಲ್ ರೋಡ್ ಶೋ ಮೂಲಕ ಮಹಾ ಸಂಗಮದ ವೇದಿಕೆಗೆ ಆಗಮಿಸಲಿದ್ದಾರೆ.
ದಾವಣಗೆರೆ: ನಾಳೆ ಬಿಜೆಪಿ ಸಮಾವೇಶ ಹಿನ್ನೆಲೆ: ಸಂಚಾರ ಮಾರ್ಗ ಬದಲು, ನಿಲುಗಡೆ ಸ್ಥಳ ನಿಗದಿ
ಸಮಾವೇಶಕ್ಕಾಗಿ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು, ಪ್ರಧಾನಿ ಸ್ವಾಗತಕ್ಕೆ ವಿದ್ಯಾನಗರಿ ಕಾತುರದಿಂದ ಕಾದಿದೆ. ಸುಮಾರು 400 ಎಕರೆ ಪ್ರದೇಶದಲ್ಲಿ ಮಹಾ ಸಂಗಮ ಸಮಾವೇಶಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಖ್ಯ ವೇದಿಕೆ ಸೇರಿದಂತೆ 3 ವೇದಿಕೆ ಸಿದ್ಧಪಡಿಸಲಾಗಿದೆ. ಮುಖ್ಯ ವೇದಿಕೆಯಲ್ಲಿ ಮೋದಿ, ಯಡಿಯೂರಪ್ಪ, ಮುಖ್ಯಮಂತ್ರಿ ಬೊಮ್ಮಾಯಿ, ರಾಜ್ಯಾಧ್ಯಕ್ಷ ಕಟೀಲು ಸೇರಿದಂತೆ ಕೇವಲ 30 ಜನರಿಗೆ ಮಾತ್ರವೇ ಅವಕಾಶ ಕಲ್ಪಿಸಲಾಗಿದೆ. ಉಳಿದ ಎರಡು ವೇದಿಕೆಗಳಲ್ಲಿ ಕೇಂದ್ರ, ರಾಜ್ಯ ಸಚಿವರು, ಶಾಸಕರು, ವಿಪ ಸದಸ್ಯರು, ಹಾಗೂ ಮತ್ತೊಂದು ವೇದಿಕೆಯಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು, ಮಾಜಿ ಸಂಸದರು, ಮಾಜಿ ಎಂಎಲ್‌ಸಿಗಳು, ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರಿಗೆ ಅವಕಾಶ ಕಲ್ಪಿಸಲಾಗಿದೆ.
ಸಮಾವೇಶಕ್ಕೆ 10 ಲಕ್ಷ ಮಂದಿ ಆಗಮಿಸುವ ನಿರೀಕ್ಷೆಯಿದೆ. ಸಮಾವೇಶದ ಹಿನ್ನೆಲೆಯಲ್ಲಿ ಇಡೀ ನಗರ ಕೇಸರಿಮಯವಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಬಿಜೆಪಿಯ ಬಾವುಟಗಳು ರಾರಾಜಿಸುತ್ತಿವೆ. ಮೋದಿ ಹಾಗೂ ಬಿಜೆಪಿ ನಾಯಕರಿಗೆ ಸ್ವಾಗತ ಕೋರುವ ಪ್ಲೆಕ್ಸ್‌ಗಳನ್ನು ಹಾಕಲಾಗಿದೆ. ಸಮಾವೇಶದ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.