ಬಡವರ ಎದೆ ಸೀಳುತ್ತಿರುವ ಮೈಕ್ರೋ ಫೈನಾನ್ಸ್ ಶೂಲ: ಆರ್.ಅಶೋಕ್

Published : Feb 07, 2025, 07:43 AM IST
ಬಡವರ ಎದೆ ಸೀಳುತ್ತಿರುವ ಮೈಕ್ರೋ ಫೈನಾನ್ಸ್ ಶೂಲ: ಆರ್.ಅಶೋಕ್

ಸಾರಾಂಶ

ಮೈಕ್ರೋ ಫೈನಾನ್ಸ್‌ಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ತರಲು ಮುಂದಾಗಿದೆ. ಅದು ಜಾರಿಯಾಗುವಷ್ಟರಲ್ಲಿ ಇನ್ನೆಷ್ಟು ಅಮಾಯಕರು ಸಾಲದ ಶೂಲಕ್ಕೆ ಬಲಿಯಾಗಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದರು. 

ಮಂಡ್ಯ/ಹಲಗೂರು (ಫೆ.07): ಮೈಕ್ರೋ ಫೈನಾನ್ಸ್‌ಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ತರಲು ಮುಂದಾಗಿದೆ. ಅದು ಜಾರಿಯಾಗುವಷ್ಟರಲ್ಲಿ ಇನ್ನೆಷ್ಟು ಅಮಾಯಕರು ಸಾಲದ ಶೂಲಕ್ಕೆ ಬಲಿಯಾಗಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದರು. ಹಲಗೂರು ಗ್ರಾಮದ ಸಮೀಪವಿರುವ ಕೊನ್ನಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಾಲದ ಶೂಲಕ್ಕೆ ಹೆದರಿ ಊರು ಬಿಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜನವರಿಯಿಂದ ಹೇಳುತ್ತಿದ್ದಾರೆ. ಕೊನ್ನಾಪುರ ಗ್ರಾಮವೊಂದರಲ್ಲೇ ಆರು ಜನ ಊರು ಬಿಟ್ಟಿದ್ದಾರೆ. ಕರ್ನಾಟಕದಲ್ಲಿ ಒಂದು ಲಕ್ಷ ಜನ ಊರು ತೊರೆದಿದ್ದಾರೆ. ನಾಳೆನೇ ಸುಗ್ರೀವಾಜ್ಞೆ ಜಾರಿಗೆ ತರುವುದಾಗಿ ಹೇಳಿದ್ದರು. ಇದುವರೆಗೂ ಜಾರಿಯಾಗಿಲ್ಲ. 

ರಾಜ್ಯದಲ್ಲಿ ಅಮಾಯಕರ ಸಾವು ನಿಂತಿಲ್ಲ. ಸಿಎಂ ಸಿದ್ದರಾಮಯ್ಯಗೆ ಕಣ್ಣು- ಕಿವಿ ಇಲ್ಲ. ನಾವು ಬಡವರ ಪರ ಅಂತಾರೆ. ಇವರ್ಯಾರೂ ಬಡವರಲ್ಲವೇ, ದಲಿತರಲ್ಲವೇ. ಇದುವರೆಗೆ ಸಿಎಂ, ಸಚಿವರು, ಒಬ್ಬ ಎಂಎಲ್‌ಎ ಕೂಡ ಇಲ್ಲಿಗೆ ಬಂದು ಕುಟುಂಬದವರ ನೋವಿಗೆ ಸ್ಪಂದಿಸಿಲ್ಲ. ಸರ್ಕಾರ ಇದ್ದೂ ಸತ್ತಂತಿದೆ ಎಂದು ಮಾರ್ಮಿಕವಾಗಿ ಹೇಳಿದರು. ಕುಂಭಮೇಳದಲ್ಲಿ ಮುಳುಗಿದರೆ ಅನ್ನ ಸಿಗುತ್ತಾ ಅಂತ ಖರ್ಗೆ ಹೇಳಿದ್ದರು. ನಿಮ್ಮ ಜನಾಂಗದವರೇ ಇಲ್ಲಿ ಪ್ರಾಣ ಭಿಕ್ಷೆ ಕೇಳುತ್ತಿದ್ದಾರೆ. ಇದರ ಬಗ್ಗೆ ಸಂಸತ್‌ನಲ್ಲಿ ಏಕೆ ಮಾತಾನಾಡುತ್ತಿಲ್ಲ ಎಂದು ಪ್ರಶ್ನಿಸಿದ ಅಶೋಕ್, ಒಂದು ಲಕ್ಷ ಸಾಲ ಕೊಡುವುದಾಗಿ ಹೇಳಿ ಎಂದು ೯೦ ಸಾವಿರ ರು. ಕೈಗೆ ಕೊಡುತ್ತಾರೆ. 9 ಜನರ ಶೂರಿಟಿ ಪಡೆದು ಸಾಲ ನೀಡುವರು. ಈ ನಿಯಮ ಯಾವ ಆರ್‌ಬಿಐ ರೂಲ್ಸ್‌ನಲ್ಲಿದೆ. ಸಾಲದ ಹಣ ಕಟ್ಟದಿದ್ದರೆ ಮಾನ ತೆಗೆಯುವ ಕೆಲಸ ಮಾಡುತ್ತಾರೆ.

ಕಾಂಗ್ರೆಸ್‌ನದ್ದು ತುಷ್ಟೀಕರಣ, ನಮ್ಮದು ಸಂತುಷ್ಟೀಕರಣ: ಸಂಸತ್ತಲ್ಲಿ ಮೋದಿ ವಾಗ್ದಾಳಿ

ಮಾನ- ಮರ್ಯಾದೆಗೆ ಅಂಜಿ ಜನರು ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚಾಗುತ್ತಿದೆ. ಜೊತೆಗೆ ಪೊಲೀಸರ ದೌರ್ಜನ್ಯ ಕೂಡ ಹೆಚ್ಚುತ್ತಿದ್ದು, ಕೋರ್ಟ್ ಆದೇಶದ ಪ್ರಕಾರ ಪೊಲೀಸರು ಆಮಾಯಕರಿಗೆ ರಕ್ಷಣೆ ಕೊಡಬೇಕು. ಆದರೆ, ಇಲ್ಲಿ ಪೊಲೀಸರು ಮನೆಯಲ್ಲಿದ್ದವರನ್ನೇ ಎಳೆದು ಹೊರಹಾಕಿದ್ದಾರೆ. ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಪೊಲೀಸರ ನಡವಳಿಕೆಯನ್ನು ಖಂಡಿಸಿದರು. ಮೈಕ್ರೋ ಫೈನಾನ್ಸ್‌ಗಳ ಕಿರುಕುಳಕ್ಕೆ ೩೦ ಜನರು ಆತ್ಮಹತ್ಯೆ ಮಾಡಿಕೊಂಡಿರುವುದು ಇದೇ ಮೊದಲು. ಸಾವಿಗೆ ಯಾರು ಕಾರಣ. ಮನೆ ಹಾಳು ಕಾಂಗ್ರೆಸ್ ಸರ್ಕಾರ ಸುಗ್ರೀವಾಜ್ಞೆ ತರುವ ಹೊತ್ತಿಗೆ ಇನ್ನೆಷ್ಟು ಸಾವಾಗಬೇಕು ಎಂದು ಪ್ರಶ್ನಿಸಿದರು.

ಮೈಕ್ರೋ ಫೈನಾನ್ಸ್ ಕಿರುಕುಳ ಕೊಟ್ಟರೆ ಜೈಲಿಗೆ ಕಳುಹಿಸುವುದಾಗಿ ಅಧಿಕಾರಿಗಳು ಹೇಳಬೇಕು. ಎಲ್ಲೆಲ್ಲಿ ಸಮಸ್ಯೆ ಇದೆಯೋ ಅಲ್ಲೆಲ್ಲಾ ಡಂಗೂರ ಸಾರಿಸಬೇಕು. ವಿಪಕ್ಷ ನಾಯಕನಾಗಿ ನಾನು ಮಾಡುವ ಕೆಲಸವನ್ನು ಸರ್ಕಾರ ಮಾಡಬಹುದಿತ್ತು. ಅಧಿವೇಶನದಲ್ಲಿ ನಿಲುವಳಿ ಸೂಚನೆ ತರುತ್ತೇನೆ. ತಾಯಿ, ಮಗ ಆತ್ಮಹತ್ಯೆ ಪ್ರಕರಣ ನ್ಯಾಯಾಂಗ ತನಿಖೆ ಆಗಬೇಕು. ಈ ಸಾವಿಗೆ ಕಾರಣ ಏನು ತಿಳಿಯಬೇಕು. ಅನಧಿಕೃತ ಫೈನಾನ್ಸ್ ಕಂಪನಿಗಳಿಗೆ ಬ್ರೇಕ್ ಹಾಕಬೇಕು ಎಂದು ಆಗ್ರಹಿಸಿದರು.

ರಾಜ್ಯಪಾಲರು ಅಂಕಿತ ಹಾಕಿದ ಕೂಡಲೇ ಸುಗ್ರೀವಾಜ್ಞೆ ಜಾರಿ ಎಂದು ಸರ್ಕಾರ ನೀಡುತ್ತಿರುವ ಸಮರ್ಥನೆ ನೋಡಿದರೆ ನಾಳೆ ಬಾ ಎಂಬ ಬೋರ್ಡ್‌ನ್ನು ಸರ್ಕಾರ ಹಾಕಿಕೊಂಡಂತಿದೆ. ಯಾವ ಕಾನೂನಿನಡಿ ಸಿ.ಟಿ.ರವಿ ಅವರನ್ನು ಕರೆದೊಯ್ದಿದ್ದಿರಿ. ಒಂದು ಮಾತನಾಡಿದ್ದಕ್ಕೆ ಸಿ.ಟಿ.ರವಿ ಅವರನ್ನು ಊರೂರು ಸುತ್ತಿಸಿದಿರಿ. ಇಲ್ಲಿ ಹಲವರ ಸಾವಾಗಿದ್ದರೂ ಏಕೆ ಕ್ರಮ ತೆಗೆದುಕೊಂಡಿಲ್ಲ. ಅಪರಾಧ ಮಾಡದಿದ್ದರೂ ಸಿ.ಟಿ.ರವಿಗೆ ಟಾರ್ಚರ್ ಕೊಟ್ಟಿರಿ. ಇಲ್ಲಿ ಟಾರ್ಚರ್ ಕೊಟ್ಟು ಕೊಲೆ ಮಾಡಿದ್ದಾರೆ. ಏನು ಕ್ರಮ ತೆಗೆದುಕೊಂಡಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದರು.

ಜಾತಿ, ಧರ್ಮ, ಭಾಷೆ ಬಗ್ಗೆ ದ್ವೇಷದ ಮಾತಾಡಿದ್ರೆ 3 ವರ್ಷ ಜೈಲು ಶಿಕ್ಷೆ!

ಬಿಜೆಪಿಯಲ್ಲಿ ಬಣ ಬಡಿದಾಟದ ಬಗ್ಗೆ ಕೇಳಿದ ಪ್ರಶ್ನೆಗೆ, ಇದು ಪಕ್ಷದ ಆಂತರಿಕ ವಿಚಾರ. ನಾನು ನಾಲ್ಕು ಗೋಡೆಗಳ ಮಧ್ಯೆ ಮಾತ್ರ ಮಾತನಾಡುತ್ತೇನೆ. ಬಹಿರಂಗವಾಗಿ ಮಾತನಾಡುವುದಿಲ್ಲ. ನಾನು ಜವಾಬ್ದಾರಿ ಸ್ಥಾನದಲ್ಲಿದ್ದೇನೆ. ಹಾದಿ- ಬೀದಿಯಲ್ಲಿ ಪಕ್ಷದ ವಿಚಾರವನ್ನು ಮಾತನಾಡುವುದಿಲ್ಲ. ನಾನು ೫೦ ವರ್ಷದಿಂದ ಪಕ್ಷದಲ್ಲಿದ್ದೇನೆ. ಯಾವ ವೇದಿಕೆಯಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ ಎಂದು ಹೇಳಿ ಮುನ್ನಡೆದರು. ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಇಂದ್ರೇಶ್, ಮುಖಂಡರಾದ ಎಸ್.ಪಿ.ಸ್ವಾಮಿ, ಎಸ್.ಸಚ್ಚಿದಾನಂದ, ಟಿ.ಶ್ರೀಧರ್ ಇತರರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ