ಸಿಎಂ ಹುದ್ದೆ ತ್ಯಜಿಸಲು 2 ವರ್ಷ ಹಿಂದೆಯೇ ಒಪ್ಪಂದ: ಬಿಜೆಪಿ ಸಂಸದನ ಸ್ಫೋಟಕ ಹೇಳಿಕೆ!

By Kannadaprabha NewsFirst Published Jul 24, 2021, 10:14 AM IST
Highlights

* ಶ್ರೀನಿವಾಸ ಪ್ರಸಾದ್‌ ಸ್ಫೋಟಕ ಹೇಳಿಕೆ

* ಸಿಎಂ ಹುದ್ದೆ ತ್ಯಜಿಸಲು 2 ವರ್ಷ ಹಿಂದೆಯೇ ಒಪ್ಪಂದ

* ‘ಇದು ಸ್ವಾಮೀಜಿಗಳಿಗೆ ಸಂಬಂಧಿಸಿದ್ದಲ್ಲ’

ಚಾಮರಾಜನಗರ(ಜು.24): ಸಮ್ಮಿಶ್ರ ಸರ್ಕಾರ ಪತನದ ಬಳಿಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಾಗಲೇ ಯಡಿಯೂರಪ್ಪ ಅವರಿಗೆ 2 ವರ್ಷ ಮುಖ್ಯಮಂತ್ರಿ ಸ್ಥಾನ ಎಂದು ಪಕ್ಷದ ಹೈಕಮಾಂಡ್‌ ಮತ್ತು ಯಡಿಯೂರಪ್ಪ ಅವರ ಮಧ್ಯೆ ಒಪ್ಪಂದವಾಗಿತ್ತು ಎಂಬ ವಿಚಾರವನ್ನು ಸಂಸದ ವಿ.ಶ್ರೀನಿವಾಸಪ್ರಸಾದ್‌ ಬಹಿರಂಗಗೊಳಿಸಿದ್ದಾರೆ. ಜೊತೆಗೆ ಇದು ಹೈಕಮಾಂಡ್‌ ಮತ್ತು ಯಡಿಯೂರಪ್ಪನವರ ಮಧ್ಯೆ ನಡೆದಿದ್ದು, ಮೂರನೆಯವರಿಗೆ ಸಂಬಂಧವಿಲ್ಲ ಎನ್ನುವ ಮೂಲಕ ಈ ರಾಜಕೀಯ ಬೆಳವಣಿಗೆಯಲ್ಲಿ ಮಠಾಧಿಪತಿಗಳು ಪ್ರವೇಶಿಸುವ ಅಗತ್ಯವಿಲ್ಲ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.

ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂದು ರಾಜ್ಯದ ವಿವಿಧ ಸ್ವಾಮೀಜಿಗಳು ಪಟ್ಟು ಹಿಡಿಯುತ್ತಿರುವ ಬಗ್ಗೆ ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರನ್ನು ಮುಂದುವರಿಸಿ ಎಂದು ಸ್ವಾಮೀಜಿಗಳು ಹೇಳುತ್ತಿದ್ದಾರೆ. ಆದರೆ ಇದರ ಬಗ್ಗೆ ಹೈಕಮಾಂಡ್‌ ನಿರ್ಧಾರ ಮಾಡುತ್ತದೆ. ಸ್ವಾಮೀಜಿಗಳು ಸೂಪರ್‌ ಹೈಕಮಾಂಡ್‌ ಅಲ್ಲ. ಸ್ವಾಮೀಜಿಗಳಾಗಲಿ, ಅಭಿಮಾನಿಗಳಾಗಲಿ, ಹಿತೈಷಿಗಳಾಗಲಿ ವಿಕೋಪಕ್ಕೆ ಹೋಗಬಾರದು ಎಂದು ಅಭಿಪ್ರಾಯಪಟ್ಟರು.

75 ವರ್ಷ ಆದವರು ಯಾರೂ ಪಕ್ಷದ ಮುಖ್ಯವಾದ ಹುದ್ದೆಯಲ್ಲಿ ಇರಬಾರದು ಎಂಬುದು ಹೈಕಮಾಂಡ್‌ ತೀರ್ಮಾನ. ಇದೇ ಕಾರಣಕ್ಕೆ ಎಲ್‌.ಕೆ.ಅಡ್ವಾಣಿ ಅವರನ್ನೂ ನಿವೃತ್ತಿಗೊಳಿಸಲಾಗಿದೆ. ಆದರೂ ತಮಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಯಡಿಯೂರಪ್ಪನವರೇ ಸ್ಪಷ್ಟವಾಗಿ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರ ಪತನದ ಬಳಿಕ ಬಿಜೆಪಿ ಬಹುಮತ ಗಳಿಸಿ ಅಧಿಕಾರಕ್ಕೆ ಬಂದಾಗಲೇ ಎರಡು ವರ್ಷ ಅವಕಾಶ ಕೊಡುತ್ತೇವೆ, ಎರಡು ವರ್ಷ ಅಧಿಕಾರ ಮಾಡಿ ಎಂದು ಹೈಕಮಾಂಡ್‌ ಮತ್ತು ಯಡಿಯೂರಪ್ಪ ಮಧ್ಯೆ ಒಪ್ಪಂದ ಆಗಿತ್ತು. ಹೈಕಮಾಂಡ್‌ ಒಪ್ಪಂದದಂತೆ ಯಡಿಯೂರಪ್ಪ ನಡೆದುಕೊಂಡಿದ್ದಾರೆ. ಈಗ ಒಪ್ಪಂದ ಒಂದು ಹಂತಕ್ಕೆ ಬಂದಿದೆ. ನಾವು ಅದರ ಬಗ್ಗೆ ಹೇಳುವಂಥದ್ದಿಲ್ಲ ಎಂದರು.

ಇದೇ ವೇಳೆ ಮುಂದೆ ಮುಖ್ಯಮಂತ್ರಿ ಯಾರಾಗುತ್ತಾರೆ ಎಂದು ಯಾರೂ ನಿಖರವಾಗಿ ಹೇಳಲಿಕ್ಕಾಗುವುದಿಲ್ಲ. ಹೈಕಮಾಂಡ್‌ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಗೊತ್ತಿಲ್ಲ. ಮುಖ್ಯಮಂತ್ರಿ ಬದಲಾವಣೆ ಇಂದಿನ ಸ್ಥಿತಿ ನೋಡಿದರೆ ಸ್ಪಷ್ಟವಾಗಿ ಗೊತ್ತಾಗುತ್ತಿದೆ. 26ಕ್ಕೆ 2 ವರ್ಷಾವಾಗುತ್ತಿದೆ. ಯಡಿಯೂರಪ್ಪನವರಿಗೆ 78 ವರ್ಷ ಆಗುತ್ತಿದೆ. ಹಾಗಾಗಿ ಏನು ಒಪ್ಪಂದ ಇದೆಯೋ ಆ ರೀತಿ ನಡೆಯುತ್ತದೆ ಎಂದರು.

click me!