* ಎಡಿಕೆ ವಿರುದ್ದ ಹರಿಹಾಯ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ
* ದೇವೇಗೌಡ್ರ ಮಗ ಎಂಬ ಐಡೆಂಟಿಟಿ ಬಿಟ್ರೆ ಬೇರೆ ಏನು ಇರಲಿಲ್ಲ
* ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ವಿರುದ್ಧ ಕಿಡಿಕಾರಿದ್ದ ಕುಮಾರಸ್ವಾಮಿ
ವರದಿ - ವರದರಾಜ್
ದಾವಣಗೆರೆ, (ಏ.05): ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸರಣಿ ಟ್ವೀಟ್ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಹಲವು ಪ್ರಶ್ನೆಗಳನ್ನು ಹಾಕಿದ ರೇಣುಕಾಚಾರ್ಯ, ಕುಮಾರಸ್ವಾಮಿ ಕಾಲೇಳಿದಿದ್ದಾರೆ.
undefined
ಸ್ವಯಂ ಘೋಷಿತ ಕರ್ನಾಟಕದ ಆರುವರೆ ಕೋಟಿ ಹೃದಯ ಸಾಮ್ರಾಜ್ಯ ಗೆದ್ದ ಹೆಚ್ ಡಿ ಕುಮಾರಸ್ವಾಮಿ ಎಂದು ಸಂಬೋಧಿಸಿದ ರೇಣುಕಾಚಾರ್ಯ, 2006 ರಲ್ಲಿ ಬಿಜೆಪಿ ನಿಮ್ಮನ್ನು ಮುಖ್ಯಮಂತ್ರಿ ಮಾಡದಿದ್ದರೆ ಈ ಜನ್ಮದಲ್ಲಿ ನೀವು ಸಿಎಂ ಆಗುತ್ತಿರಲಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕಾಗಿ ನಮ್ಮ ಜೊತೆ ಓಡಿಬಂದು ಸಿದ್ಧಾಂತಕ್ಕೆ ತಿಲಾಂಜಲಿ ಇಟ್ಟವರು ನೀವು ಎಂದು ಕಿಡಿಕಾರಿದ್ದಾರೆ.
ಮಸೀದಿಗಳ ಧ್ವನಿವರ್ಧಕಗಳ ಬಗ್ಗೆ ತಕರಾರು ತೆಗೆಯುವುದು ಏಕೆ? ಎಚ್‌ಡಿಕೆ ಪ್ರಶ್ನೆ
ದೇವೇಗೌಡರ ಮಗ ಎಂಬ ಐಡೆಂಟಿಟಿ ಬಿಟ್ಟರೆ ಬೇರೆ ಏನು ಇರಲಿಲ್ಲ. ಬಿಜೆಪಿ ಸಹಕಾರ ಕೊಡದಿದ್ದರೆ ನಿಮ್ಮನ್ನು ಯಾರು ಮೂಸತ್ತಿರಲಿಲ್ಲ ಎಷ್ಟೇ ಆದ್ರು ನೀವು ಸಾಂದರ್ಭಿಕ ಶಿಶು ತಾನೇ. ಸಮ್ಮಿಶ್ರ ಸರ್ಕಾರದಲ್ಲಿ ನಾನು ಕೇವಲ ಗುಲಾಮನಾಗಿದ್ದೇ ಎಂದು ಹೇಳುವಾಗ ನಿಮಗೆ ಸ್ವಾಭಿಮಾನ ಅಡ್ಡಿಬರಲಿಲ್ಲ. ಅಧಿಕಾರಕ್ಕಾಗಿ ಯಾವ ಪಕ್ಷದ ಜೊತೆಯಲ್ಲಾದ್ರು ಹೊಂದಾಣಿಕೆ ಮಾಡಿಕೊಳ್ಳುವ ಜಾಯಮಾನದವರು ಯಾರು ?? ಅಧಿಕಾರ ಹಸ್ತಾಂತರ ಮಾಡುವಾಗ ಒಪ್ಪಂದದ ನಾಟಕವಾಡಿದ ವಚನ ಭ್ರಷ್ಟ ಯಾರು? ನನ್ನಿಂದಲೇ ಕರ್ನಾಟಕದಲ್ಲಿ ಬಿಜೆಪಿ ಮರುಜನ್ಮ ಪಡೆಯುತೆಂದು ಹೇಳುವ ನಿಮಗೆ ಕೃತಜ್ಞತೆ ಇದಿಯೇ ? ಎಂದು ಪ್ರಶ್ನಿಸಿದ್ದಾರೆ.
2006 ನಾವು ಜೆಡಿಎಸ್ ಗೆ ಬೆಂಬಲ ನೀಡಿ ಸರ್ಕಾರ ರಚಿಸದಿದ್ದರೆ ಅಂದೇ ನಿಮ್ಮ ಪಕ್ಷ ಹೇಳ ಹೆಸರಿಲ್ಲದಂತೆ ಮುಗಿಸಲು ಇಬ್ಬರು ಮಹಾನ್ ನಾಯಕರು ಮುಂದಾಗಿದ್ದು ನಿಮಗೆ ಗೊತ್ತಿಲ್ಲವೇ?? ಹಿಂದೂ ಸಂಘಟನೆಗಳ ವಿರುದ್ಧ ಏಕಾಏಕಿ ಮುಗಿಬಿದ್ದಿರುವುದರ ಹಿಂದೆ ನಿಜವಾದ ಜನಹಿತ ಇದ್ದರೆ ಗಂಗೊಳ್ಳಿಯಲ್ಲಿ ಮೀನು ಖರೀದಿಸಬಾರದೆಂದು ಹುಕುಂ ಹೊರಡಿಸಿದವರ ವಿರುದ್ಧ ಏಕೆ ಸೊಲ್ಲೆತ್ತಿಲ್ಲ ? ಕೇವಲ ಹಿಂದೂಗಳು ಹಿಂದೂ ಸಂಘಟನೆಗಳು ನಿಮ್ಮ ಕಣ್ಣಿಗೆ ಸಮಾಜ ಘಾತುಕರಂತೆ ಕಂಡರೆ ಶಿವಮೊಗ್ಗದಲ್ಲಿ ಅಮಾಯಕ ಹರ್ಷ ಕೊಲೆ ಮಾಡಿದವರು ಯಾರು? ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಶ್ರೀಮಂತ ಪಕ್ಷ ಎನ್ನುವುದಾದ್ರೆ ನೀವು ರಾಮನಗರದಲ್ಲಿ ರೇಷ್ಮೆ , ಹಾಸನದಲ್ಲಿ ಆಲೂಗಡ್ಡೆ ಬೆಳೆದು ಪಕ್ಷ ಸಂಘಟನೆ ಮಾಡುತ್ತೀರಾ ? ತಾಜ್ ವೆಸ್ಟ್ ಎಂಡ್ ಹೋಟೆಲ್ ಅನ್ನೇ ಸಿಎಂ ಕಚೇರಿ ಮಾಡಿಕೊಂಡಿದ್ದ ನೀವು ಅಧಿಕಾರ ಇದ್ದಾಗ ಜನರ ಕೈಗೆ ಸಿಗದೇ ಈಗ ಬಡವರ ಬಗ್ಗೆ ಅಣಿಮುತ್ತು ಉದುರಿಸುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳದಂತಿದೆ ಅಷ್ಟುಕ್ಕು ಕುಮಾರಸ್ವಾಮಿಯವರೇ ನೀವು ಕಾಂಗ್ರೆಸ್ ಮತ್ತು ಬಿಜೆಪಿಗೆ ಒಂದೊಂದು ಬಾರಿ ಮಕ್ಮಲ್ ಟೋಪಿ ಹಾಕಿದ ಮಹಾನುಭಾವರು ಎಂದು ಟಾಂಗ್ ಕೊಟ್ಟರು.
20 -25 ಸ್ಥಾನಗಳನ್ನು ಗೆದ್ದು ನಮ್ಮ ಮನೆ ಬಾಗಿಲಿಗೆ ಬರಲಿ ಎಂದು ಕಾದು ಕುಳಿತಿದ್ದೀರಿ. ಈ ಬಾರಿ ಅದು ಕೂಡ ಕೈಗೆಟುಕುವ ಲಕ್ಷಣಗಳು ಕಾಣುತ್ತಿಲ್ಲ. ಸಿಎಂ ಬೊಮ್ಮಾಯಿಯವರನ್ನು ಆರ್ ಎಸ್ ಎಸ್ ನಿಯಂತ್ರಣ ಮಾಡುತ್ತಿದೆ ಎಂದು ಹೇಳುವ ನೀವು ಪದ್ಮನಾಭ ನಗರದ ಅಣತಿ ಇಲ್ಲದೇ ಯಾವ ನಿರ್ಧಾರ ತೆಗೆದುಕೊಂಡಿದ್ದೀರಾ ? ಎಂದು ತಿರುಗೇಟು ಕೊಟ್ಟರು.
ಅಂದು ಕಾಂಗ್ರೆಸ್ ಜೆಡಿಎಸ್ ಸರ್ಕಾರವಿದ್ದಾಗ ನಮ್ಮ ಪಕ್ಷವನ್ನು ಮುಗಿಸಲು ಸಿದ್ದಣ್ಣ ಡಿಕೆ ಸೇರಿ ಸಂಚು ರೂಪಿಸಿದ್ದಾರೆಂದು ಮಾಧ್ಯಮಗಳ ಮುಂದೆ ಹೇಳಿದ್ದು ಸುಳ್ಳೋ ನಿಜವೋ?? ನೀವು ನಿಜವಾಗಿಯು ಸಿದ್ದಾಂತಕ್ಕೆಬದ್ಧರಾಗಿದ್ದರೆ ನಾನು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಬಹುದಿತ್ತಲ್ಲವೇ ?? ಬಿಜೆಪಿ ಎಂದಿಗೂ ಅಧಿಕಾರಕ್ಕಾಗಿ ಹಾತೊರೆಯುವುದಿಲ್ಲ ..ದೇಶ ಸೇವೆ ರಾಷ್ಟ್ರ ರಕ್ಷಣೆ ಭಾರತೀಯರ ಒಗ್ಗೂಡಿಸುವುವಿಕೆಗೆ ಧರ್ಮ ರಕ್ಷಣೆಗೆ ಕಂಕಣಬದ್ಧವಾಗಿದೆ ಎಂದಿದ್ದಾರೆ.
ಪಂಚ ರಾಜ್ಯಗಳ ಚುನಾವಣಾ ಪಲಿತಾಂಶ ಕಾಂಗ್ರೆಸ್ ನಂತೆ ನಿಮಗು ಕೂಡ ಭೀತಿ ಉಂಟುಮಾಡಿದ್ದರೆ ಅಚ್ಚರಿಯಿಲ್ಲ. ಯಾರಿಗೆ ಯಾವ ಸಂದರ್ಭದಲ್ಲಿ ಪಾಠ ಕಲಿಸಬೇಕೆಂಬುದನ್ನು ಜನತೆ ಕೂಡ ಕಾದುನೋಡುತ್ತಿದ್ದಾರೆ ಎಂದು ರೇಣುಕಾಚಾರ್ಯ, ಕುಮಾರಸ್ವಾಮಿಯವರಿಗೆ ಎಚ್ಚರಿಸಿದ್ದಾರೆ.