ಸದನಲ್ಲಿ ಸಿಎಂ ವಿರುದ್ಧ ಮತ್ತೆ ಗುಡುಗಿದ ಯತ್ನಾಳ್, ಕೆರಳಿದ ರೇಣುಕಾಚಾರ್ಯ

By Suvarna News  |  First Published Mar 10, 2021, 2:32 PM IST

ಬಜೆಟ್ ಮೇಲಿನ ಅಧಿವೇಶನದಲ್ಲಿ ಇಂದು (ಬುಧವಾರ) ಬಿಜೆಪಿ ಪಕ್ಷದ ಶಾಸಕರುಗಳ ಮಧ್ಯೆಯೇ ಜಟಾಪಟಿ ನಡೆದಿರುವ ಪ್ರಸಂಗ ನಡೆದಿದೆ.


ಬೆಂಗಳೂರು, (ಮಾ.10): ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಎಂದಿನಂತೆ ಬಜೆಟ್‌ ಮೇಲಿನ ಅಧಿವೇಶನದಲ್ಲಿ ತಮ್ಮ ಪಕ್ಷದ ಸಿಎಂ ಬಿಎಸ್‌ ಯಡಿಯೂರಪ್ಪ ವಿರುದ್ಧ ಗುಡುಗಿದರು.

 ಮೀಸಲಾತಿ ವಿಚಾರ ಚರ್ಚೆಗೆ ಅವಕಾಶ ನೀಡುವಂತೆ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯ ಮಾಡಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಮುಂದಾಗಿರುವ ಘಟನೆ ಇಂದು (ಬುಧವಾರ) ಸದನದಲ್ಲಿ ನಡೆಯಿತು.

Latest Videos

undefined

ಯತ್ನಾಳ್-ಬಿಎಸ್‌ವೈ ಮುಖಾಮುಖಿ: ಉಭಯ ನಾಯಕ ಮಧ್ಯೆ ನಡೀತು ಮಹತ್ವದ ಚರ್ಚೆ

ನಮ್ಮ ಸಮಾಜದ ಹೆಸರೇಳಿಕೊಂಡು ಮುಖ್ಯಮಂತ್ರಿ ಆಗಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದರು. ನಿನ್ನೆಯೇ ಸರ್ಕಾರ ಉತ್ತರ ಕೊಡುತ್ತದೆ ಎಂದು ಹೇಳಿದ್ದರೂ ಉತ್ತರ ಕೊಡಬೇಕಾದ ಸಿಎಂ ನಾಪತ್ತೆಯಾಗಿದ್ದಾರೆ ಎಂದರು.

ಮೀಸಲಾತಿ ವಿಚಾರ ಚರ್ಚೆಗೆ ಅವಕಾಶ ನೀಡುವಂತೆ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿದ ಮನವಿಗೆ ನಂತರ ಅವಕಾಶ ನೀಡುತ್ತೇನೆ. ವಿರೋಧ ಪಕ್ಷದ ನಾಯಕರು ಮಾತನಾಡಿದ ಬಳಿಕ ನೀಡೋದಾಗಿ ಸ್ಪೀಕರ್ ಹೇಳಿದರು. ಇದಕ್ಕೆ ಒಪ್ಪದ ಯತ್ನಾಳ್​, ನೀವು ಕೊಟ್ಟಂತೆ ಮಾಡಿ ಮುಂದೂಡಿ ಹೋದರೆ ಹೇಗೆ? ಕೊಟ್ಟಂಗೂ ಆಗಬೇಕು, ಕೊಡದಂಗೂ ಆಗಬೇಕು ಅನ್ನೋ ಥರಾ ಆಗುತ್ತೆ ಎಂದು ಹೇಳಿ ಪ್ರತಿಭಟನೆ ನಡೆಸಲು ಮುಂದಾದರು. ಯತ್ನಾಳ್ ಅವರಿಗೆ ಸಾಥ್​ ಕೊಟ್ಟ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಯತ್ನಾಳ್​ಗೆ ಮಾತನಾಡಲು ಅವಕಾಶ ಕೊಡಿ ಎಂದರು. 

ಸಿದ್ದರಾಮಯ್ಯ ಅವರು ನಡೆಗೆ ಮೆಚ್ಚುಗೆ ಸೂಚಿಸಿದ ಯತ್ನಾಳ್, ವಿಪಕ್ಷ ‌ನಾಯಕ ಸಿದ್ದರಾಮಯ್ಯಗೆ ಪಂಚಮಸಾಲಿ ಸಮುದಾಯದ ಮೇಲೆ ಪ್ರೀತಿ ಇದೆ. ಹೀಗಾಗಿ ಅವರ ಸಮಯ ನಮಗೆ ಕೊಟ್ಟಿದ್ದಾರೆ. ಆದರೆ ಸರ್ಕಾರದಿಂದ ಉತ್ತರ ಕೊಡುವುದಾಗಿ ನಿನ್ನೆ ಹೇಳಿದ್ದ ಸಿಎಂ ಇಂದು ನಾಪತ್ತೆಯಾಗ್ತಾರೆ ಎಂದರೇ ಏನಿದು ವ್ಯವಸ್ಥೆ ಎಂದು ಪ್ರಶ್ನಿಸಿದರು.

ಯತ್ನಾಳ್ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಸಿಎಂ ಎಲ್ಲೂ ನಾಪತ್ತೆ ಆಗಿಲ್ಲ. ಅವರಿಗೂ ಪಂಚಮಸಾಲಿ ಸಮುದಾಯದ ಮೇಲೆ ಪ್ರೀತಿ ಇದೆ ಎಂದರು. ಇದಕ್ಕೆ ಪ್ರತ್ಯುತ್ತರ ನೀಡಿದ ಯತ್ನಾಳ್, ಅದನ್ನ ನೀವು ಹೇಳಬೇಡಿ, ಇದ್ದರೆ ಬರಬೇಕಿತ್ತು ಎಂದು ಟಾಂಗ್ ಕೊಟ್ಟರು.

ಆಯ್ತು ಬರ್ತಾರೆ ಎಂದು ರೇಣುಕಾಚಾರ್ಯ ಸಮಜಾಯಿಸಿ ನೀಡಿದರು. ಆ ಬಳಿಕ ಮೀಸಲಾತಿ ಹೋರಾಟದ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಭಾಷಣ ಮಾಡಿದರು. ಪಂಚಮಸಾಲಿಗೆ 2A ಕೊಡ್ತೀರೋ ಇಲ್ವೋ ಎನ್ನುವುದನ್ನು ಸಿಎಂ ಹೇಳಲಿ. ಸಿಎಂ ಅವರ ಮನಸ್ಸಿನಲ್ಲಿ ಏನಿದೆ ಎಂದು ಹೇಳಲಿ ಎಂದು ಆಗ್ರಹಿಸಿದರು.

click me!