ಒಡೆದು ಆಳುವ ನೀತಿ ಅನುಸರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ: ಬಿಜೆಪಿ ದಲಿತ ಮುಖಂಡರ ಆರೋಪ
ಚನ್ನಪಟ್ಟಣ(ಅ.22): ದಲಿತರ ವಿರುದ್ಧ ದಲಿತರನ್ನು ಎತ್ತಿಕಟ್ಟುವ ಮೂಲಕ ನಮ್ಮ ನಮ್ಮಲ್ಲೇ ಒಡಕು ಮೂಡಿಸುವ ಪ್ರಯತ್ನ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ದಲಿತ ಮುಖಂಡರು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಭವನದ ಅನುದಾನದ ವಿಚಾರದಲ್ಲಿ ಸತ್ಯ ಮರೆಮಾಚಿ, ದಲಿತರ ಮಧ್ಯೆ ಭಿನ್ನಾಭಿಪ್ರಾಯ ಮೂಡುವಂತೆ ಮಾಡುತ್ತಿದ್ದು ಇದನ್ನು ಹೀಗೆ ಮುಂದುವರಿಸಿದರೆ ನಿಮ್ಮ ವಿರುದ್ಧ ನಾವು ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.
ಮೊದಲು ಮನವಿ ಸಲ್ಲಿಸಿದ್ದೆ ಸಿಪಿವೈ:
ಬಿಜೆಪಿ ಮುಖಂಡ ಎಸ್.ಸಿ.ಶೇಖರ್ ಮಾತನಾಡಿ, ತಾಲೂಕಿನ ವಿವಿಧ ಗ್ರಾಮಗಳಲ್ಲಿ 30 ಕಡೆ ಅಂಬೇಡ್ಕರ್ ಭವನ, ಬಾಬು ಜಗಜೀವನ್ ರಾಂ ಮತ್ತು ವಾಲ್ಮೀಕಿ ಭವನಗಳ ನಿರ್ಮಾಣಕ್ಕೆ 13.90 ಕೋಟಿ ಅನುದಾನ ನೀಡುವಂತೆ ಮೊದಲಿಗೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್. ಆದರೆ, ಅನುದಾನ ಬಿಡುಗಡೆಯಾಗುವ ಕುಮಾರಸ್ವಾಮಿ ಮಧ್ಯಪ್ರವೇಶಿಸಿದರು. ಇದರಿಂದಾಗಿ 25 ಭವನಗಳ ನಿರ್ಮಾಣಕ್ಕೆ ಕೇವಲ 5 ಕೋಟಿ ಅನುದಾನ ಬಿಡುಗಡೆಯಾಯಿತು.
KARNATAKA ASSEMBLY ELECTIONS: ಚನ್ನಪಟ್ಟಣದಿಂದಲೇ ಮುಂದಿನ ಸಲವೂ ಸ್ಪರ್ಧೆ: ಎಚ್‌ಡಿಕೆ ಸ್ಪಷ್ಟನೆ
ಆದರೆ, ಸಾಮಾಗ್ರಿಗಳು ಸೇರಿದಂತೆ ಎಲ್ಲದರ ವೆಚ್ಚ ದುಬಾರಿಯಾಗಿದ್ದು, ಸಮುದಾಯ ಭವನಗಳ ನಿರ್ಮಾಣಕ್ಕೆ ಈ ಹಣ ಯಾವುದಕ್ಕೂ ಸಾಕಾಗುವುದಿಲ್ಲ. ಬಿಡುಗಡೆಯಾಗಿರುವ ಅನುದಾನದಲ್ಲಿ ಒಂದೊಂದು ಭವನಕ್ಕೆ ಕೇವಲ 5ರಿಂದ 10 ಲಕ್ಷ ನೀಡಬಹುದಾಗಿದೆ. ಇದರಿಂದ ಭವನದ ಕಾಮಗಾರಿಗಳು ಅರ್ಧಕ್ಕೆ ನಿಲ್ಲುತ್ತಿತ್ತು. ಇದನ್ನು ಮನಗೊಂಡ ಯೋಗೇಶ್ವರ್ ಒಂದೊಂದು ಭವನದ ನಿರ್ಮಾಣಕ್ಕೆ ಕನಿಷ್ಠ 50 ಲಕ್ಷ ರು. ಅನುದಾನದಂತೆ ಹಣ ನೀಡಿ ಎಂದರೆ ಹೊರತು ಜೆಡಿಎಸ್‌ನವರ ಆರೋಪದಂತೆ ಅನುದಾನ ತಡೆ ಹಿಡಿಯಲಿಲ್ಲ ಎಂದು ಸ್ಪಷ್ಟನೆ ನೀಡಿದರು.
ಅಂಬೇಡ್ಕರ್ ಸಮುದಾಯು ಭವನಗಳನ್ನು ಸುಸಜ್ಜಿತವಾಗಿ ನಿರ್ಮಿಸಬೇಕು ಎಂಬ ಸದುದ್ದೇಶದಿಂದ ಮತ್ತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದ ಯೋಗೇಶ್ವರ್ ಇದೀಗ 10 ಗ್ರಾಮಗಳಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ತಲಾ 50 ಲಕ್ಷದಂತೆ 5 ಕೋಟಿ ಅನುದಾನ ತಂದಿದ್ದಾರೆ. ಇದನ್ನು ಮರೆಮಾಚುವ ಉದ್ದೇಶದಿಂದ ಯೋಗೇಶ್ವರ್ ಅನುದಾನ ತಡೆಹಿಡಿದರು ಎಂದು ಜೆಡಿಎಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಅಂಬೇಡ್ಕರ್ ಭವನ ಏಕೆ ಪೂರ್ಣಗೊಳಿಸಿಲ್ಲ:
ಕುಮಾರಸ್ವಾಮಿಗೆ ದಲಿತರ ಮೇಲೆ ಎಷ್ಟುಕಾಳಜಿ ಇದೆ ಎಂಬುದಕ್ಕೆ ಇನ್ನು ಸರಿಯಾಗಿ ಪೂರ್ಣವಾಗದ ನಗರದ ಅಂಬೇಡ್ಕರ್ ಭವನವೇ ಸಾಕ್ಷಿಯಾಗಿದೆ. ಸೆಲ್ಲಿಂಗ್‌ನಲ್ಲಿ ನೀರು ನಿಂತು ಸಮಸ್ಯೆಯಾಗುತ್ತಿದ್ದರೂ, ತರಾತುರಿಯಲ್ಲಿ ಅಂಬೇಡ್ಕರ್ ಭವನದ ಉದ್ಘಾಟನೆ ನಡೆಸಿದ ಕುಮಾರಸ್ವಾಮಿ ಇನ್ನು 1 ಕೋಟಿ ಅನುದಾನ ತಂದು 15 ದಿನದಲ್ಲಿ ಭವನದ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಹೇಳಿ ಹೋದವರು ಇನ್ನು ತಮ್ಮ ಭರವಸೆ ಈಡೇರಿಸಿಲ್ಲ ಎಂದು ಜಿಪಂ ಮಾಜಿ ಸದಸ್ಯ ಸದಾನಂದ ಟೀಕಿಸಿದರು.
ಪಕ್ಷದೊಳಗೆ ಭಿನ್ನಮತೀಯ ಚಟುವಟಿಕೆ : ಕೈ ನಾಯಕರಿಂದ ಡಿಕೆಶಿ ಭೇಟಿ
ಕುಮಾರಸ್ವಾಮಿ ಮನಸ್ಸು ಮಾಡಿದ್ದರೆ ತಾವು ಮುಖ್ಯಮಂತ್ರಿ ಆಗಿದ್ದಾಗ ಕ್ಷೇತ್ರಾದ್ಯಂತ 50 ಸುಸಜ್ಜಿತ ಅಂಬೇಡ್ಕರ್ ಭವನಗಳನ್ನು ನಿರ್ಮಿಸಬಹುದಾಗಿತ್ತು. ಆದರೆ, ಅಧಿಕಾರ ಇದ್ದಾಗ ಅವರು ಆ ಕೆಲಸ ಮಾಡಲಿಲ್ಲ. ಅವರ ಅವಧಿಯಲ್ಲಿ ಒಂದು ಭವನ ನಿರ್ಮಿಸಲು ಮುಂದಾಗದ ಅವರು ಇದೀಗ ತಮ್ಮ ಪಕ್ಷದ ಮುಖಂಡರ ಮೂಲಕ ಯೋಗೇಶ್ವರ್ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದು ಎಷ್ಟುಸರಿ ಎಂದು ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಲೋಕಾನಂದ್, ರಾಜೇಶ್, ನಾಗರಾಜು, ಕಿರಣ್‌ಕುಮಾರ್, ಕೇಶವಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
ಶ್ವೇತ ಪತ್ರ ಹೊರಡಿಸಲು ಸವಾಲು
ಯೋಜನಾ ಪ್ರಾಧಿಕಾರದ ಸದಸ್ಯ ಚಕ್ಕಲೂರು ಚೌಡಯ್ಯ ಮಾತನಾಡಿ, ತಮ್ಮ ನಾಲ್ಕುವರೆ ವರ್ಷಗಳ ಅಧಿಕಾರವಧಿಯಲ್ಲಿ ಕುಮಾರಸ್ವಾಮಿ ದಲಿತ ಸಮುದಾಯದ ಸಮಗ್ರ ಅಭಿವೃದ್ಧಿಗೆ ಎಷ್ಟುಅನುದಾನ ತಂದಿದ್ದಾರೆ ಎಂದು ಶ್ವೇತಪತ್ರ ಹೊರಡಿಸಲಿ. ಅಂತೆಯೇ 15 ದಿನದಲ್ಲಿ ಅಂಬೇಡ್ಕರ್ ಭವನದ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿ ಒಂದುವರೆ ವರ್ಷದಿಂದ ಅದನ್ನು ಮರೆತಿದ್ದು, ಇದು ದಲಿತರ ಸ್ವಾಭಿಮಾನಕ್ಕೆ ಧಕ್ಕೆ ತಂದ ವಿಚಾರವಾಗಿರುವುದರಿಂದ ಅವರು ಕೂಡಲೇ ಬಹಿರಂಗವಾಗಿ ದಲಿತ ಸಮುದಾಯದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ದಲಿತರ ಮಧ್ಯೆ ಒಡುಕು ಮೂಡಿಸುವ ಪ್ರಯತ್ನವನ್ನು ಎಚ್‌ಡಿಕೆ ಕೈಬಿಡದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಜಿಪಂ ಮಾಜಿ ಸದಸ್ಯ ಸದಾನಂದ ಎಚ್ಚರಿಸಿದರು.