ನಿಮ್ಮ ಒಂದು ಓಟು ದೇಶ ಉಳಿಸಬಹುದು. ಹಿಂದೆ ವಾಜಪೇಯಿ ಒಂದು ಮತದ ಕಾರಣಕ್ಕೆ ಸರ್ಕಾರ ಕಳಕೊಂಡರು. ನಿಮ್ಮ ಒಂದು ಓಟು ಈ ಸೀಟು ಉಳಿಸಬಹುದು. ಇದಕ್ಕಾಗಿ ಪ್ರತಿ ಮನೆಗೆ ಹಿಂದುತ್ವ ಕೇಸರಿ ಗಾಳಿ ಸೋಕಬೇಕು. ರಾಷ್ಟ್ರಭಕ್ತಿಯ ಗಾಳಿ ಮನೆ ಮನೆಗೆ ತಟ್ಟಬೇಕು: ಸಚಿವ ಸಿ.ಟಿ.ರವಿ
ಮಂಗಳೂರು(ಏ.05): ಇದು ಜಾತಿ ಉಳಿಸುವ ಚುನಾವಣೆ ಅಲ್ಲ, ದೇಶ ಉಳಿಸುವ ಚುನಾವಣೆ. ದೇಶ ಉಳಿದರೆ ನೀನು, ನಾನು, ನಮ್ಮ ಜಾತಿ ಎಲ್ಲ, ದೇಶವೇ ಇಲ್ಲದಿದ್ದರೆ ನೀನೂ ಇಲ್ಲ, ನಿನ್ನ ಜಾತಿನೂ ಇರಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ದ.ಕ. ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರ ನಾಮಪತ್ರ ಸಲ್ಲಿಕೆಗೂ ಮುನ್ನ ಗುರುವಾರ ಮಂಗಳೂರಿನ ಪುರಭವನ ಎದುರು ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಮಂಗಳೂರಲ್ಲಿ ಕಾಂಗ್ರೆಸ್ ಪರವಾಗಿ ಜಾತಿ ಆಧಾರದಲ್ಲಿ ಮತ ಕೇಳಿರುವುದನ್ನು ಪ್ರಸ್ತಾಪಿಸಿ ತಿರುಗೇಟು ನೀಡಿದ ಸಿ.ಟಿ.ರವಿ, ನಿಮ್ಮ ಒಂದು ಓಟು ದೇಶ ಉಳಿಸಬಹುದು. ಹಿಂದೆ ವಾಜಪೇಯಿ ಒಂದು ಮತದ ಕಾರಣಕ್ಕೆ ಸರ್ಕಾರ ಕಳಕೊಂಡರು. ನಿಮ್ಮ ಒಂದು ಓಟು ಈ ಸೀಟು ಉಳಿಸಬಹುದು. ಇದಕ್ಕಾಗಿ ಪ್ರತಿ ಮನೆಗೆ ಹಿಂದುತ್ವ ಕೇಸರಿ ಗಾಳಿ ಸೋಕಬೇಕು. ರಾಷ್ಟ್ರಭಕ್ತಿಯ ಗಾಳಿ ಮನೆ ಮನೆಗೆ ತಟ್ಟಬೇಕು ಎಂದರು.
ಗ್ಯಾರಂಟಿ ಭ್ರಮೆಯಲ್ಲಿ ಸಿದ್ದರಾಮಯ್ಯ ಸರ್ಕಾರ: ಬಿ.ವೈ.ವಿಜಯೇಂದ್ರ
ಕೇರಳ ಸರ್ಕಾರ ಕಂಠಪೂರ್ತಿ ಸಾಲ ಮಾಡಿ ದಿವಾಳಿ ಸ್ಥಿತಿಗೆ ತಲುಪಿದೆ. ಈಗ ಸಾಲ ಕೇಳಿ ಸುಪ್ರೀಂ ಕೋರ್ಟ್‌ಗೆ ಹೋಗಿದೆ. ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯದಲ್ಲೂ ಸದ್ಯದಲ್ಲೇ ಅಂತಹ ಪರಿಸ್ಥಿತಿ ಬರಲಿದೆ. ರಾಜ್ಯಕ್ಕೆ ಸಿದ್ರಾಮಿಕ್ಸ್(ಸಿದ್ದರಾಮಯ್ಯರ ಆರ್ಥಿಕತೆ) ಬಂದ ಮೇಲೆ ಬೆಲೆ ಏರಿಕೆಯಾಗಿದೆ ಪಹಣಿಪತ್ರ, ದಿನಸಿ ಸಾಮಗ್ರಿ ಹೀಗೆ ಎಲ್ಲದರ ಬೆಲೆ ಏರಿಕೆಯಾಗಿದೆ. ಸಿದ್ದರಾಮಯ್ಯ ಗ್ಯಾರಂಟಿ ಹಣ ನೀಡಿದ್ದು ಅವರ ಕಿಸೆಯಿಂದ ಅಲ್ಲ, ನಿಮ್ಮ ಯಜಮಾನರ ಕಿಸೆಗೆ ಕೈಹಾಕಿದ್ದಾರೆ, 5 ಕೇಜಿ ಅಕ್ಕಿಯಲ್ಲಿ ಕಾಂಗ್ರೆಸ್‌ನ ಒಂದು ಕೇಜಿ ಅಕ್ಕಿಯೂ ಇಲ್ಲ. ಅದನ್ನು ನೀಡಿದ್ದು ಪ್ರಧಾನಿ ನರೇಂದ್ರ ಮೋದಿ, ಇದನ್ನೆಲ್ಲ ಜನಸಾಮಾನ್ಯರಿಗೆ ಅರ್ಥ ಮಾಡಿಸಬೇಕು ಎಂದರು.
ಕೇಸರಿ ಗಾಳಿ:
ಇಲ್ಲಿರೋದು ಕೇಸರಿ ಗಾಳಿ, ಹಿಂದುತ್ವದ ಗಾಳಿ.ಉಡುಪಿಯಲ್ಲಿ ಕೋಟ, ದ.ಕ.ದಲ್ಲಿ ಚೌಟ ಎಂದು ಬುಧವಾರ ಉಡುಪಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ರು, ಉಡುಪಿಗೆ ಕೋಟ, ದ.ಕ.ಗೆ ಚೌಟ, ಕಾಂಗ್ರೆಸ್‌ಗೆ ಗೂಟ ಅಂತ, ಅದು ಖಾಲಿ ಗೂಟ ಅಲ್ಲ, ಮಲೆನಾಡು ಭಾಷೆಯಲ್ಲಿ ಬಗಣಿ ಗೂಟವನ್ನೇ ಹಾಕಬೇಕು. ಅನಂತರ ಮೇಲೆ ಏಳಬಾರದು ಎಂದು ಸಿ.ಟಿ.ರವಿ ಹೇಳಿದರು.
ಜೂನ್ 4ರಂದು ವಿರೋಧಿಗಳು ದೇಳದ ಫಲಿತಾಂಶ ಕಂಡು ಕಾಯಂ ಆಗಿ ಎದೆ ಹೊಡ್ಕೋಬೇಕು. ಮತ್ತೆ ಇವರಿಗೆ ಅವಕಾಶ ನೀಡಿದರೆ, ಪಂಚಾಯ್ತಿನಿಂದ ಪಾರ್ಲಿಮೆಂಟ್ ವರೆಗೆ ಪಾಕಿಸ್ತಾನ್ ಜಿಂದಾಬಾದ್ ಕೂಗು ಕೇಳಿಸುತ್ತದೆ. ದೇಶ ವಿರೋಧಿ ಚಟುವಟಿಕೆ ನಡೆಸುವ ಎಸ್‌ಡಿಪಿಐ, ಪಿಎಫ್‌ಐ ಈ ಬಾರಿ ಕಾಂಗ್ರೆಸ್‌ಗೆ ಬೆಂಬಲ ನೀಡಿದೆ. ಕಾಂಗ್ರೆಸ್ ಗೆಲವನ್ನು ಪಾಕಿಸ್ತಾನವೂ ಸಂಭ್ರಮಿಸುತ್ತದೆ. ಇದಕ್ಕಾಗಿ ಕಾಂಗ್ರೆಸಿಗರು ಪಾಕಿಸ್ತಾನ ಜಿಂದಾಬಾದ್ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಅತಿಯಾದ ಆತ್ಮವಿಶ್ವಾಸ ಇರಬಾರದು, ಅಭಿವೃದ್ಧಿ ಚಿಂತನೆಯಿಂದ ಮನೆ ಮನೆಗೆ ತೆರಳಿ ಮತಯಾಚನೆ ಮಾಡಬೇಕು. ಕೇಂದ್ರ ಸರ್ಕಾರದ ಸಾಧನೆ, ರಾಜ್ಯ ಕಾಂಗ್ರೆಸ್‌ನ ದುರಾಡಳಿತ ಜನತೆಗೆ ಮನದಟ್ಟು ಮಾಡಿ, ದ.ಕ.ಜಿಲ್ಲೆಗೆ ಮೋದಿ ಕೊಡುಗೆಯನ್ನು ತಿಳಿಸಿ ಎಂದರು.
ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಸಹಕರಿಸಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ
ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಗೆದ್ದದ್ದಕ್ಕೆ ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಎಂದವರಿಗೆ ಮತ ಹಾಕುತ್ತೀರಾ? ರಾಮನ ಹೆಸರಿನಲ್ಲಿ ಕೆಫೆ ಇದೆ ಎಂಬ ಕಾರಣಕ್ಕೆ ಸ್ಫೋಟಿಸಿದವರ ಬಗ್ಗೆ ಮೃದು ಧೋರಣೆ ಹೊಂದಿದವರಿಗೆ ಮತ ಹಾಕುತ್ತೀರಾ? ಕುಕ್ಕರ್ ಬಾಂಬ್ ಇರಿಸಿದವರನ್ನು ಬ್ರದರ್ಸ್ ಎಂದವರಿಗೆ ಮತ ಹಾಕುತ್ತೀರಾ? ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರನ್ನು ಅಮಾಯಕರು ಎಂದವರಿಗೆ ಮತ ಹಾಕುತ್ತೀರಾ ಎಂದು ಪ್ರಶ್ನಿಸಿದರು.
ವೇದಿಕೆಯಲ್ಲಿ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಪ್ರಮೋದ್ ಮಧ್ವರಾಜ್, ಸಂಘಟನಾ ಕಾರ್ಯದರ್ಶಿ ರಾಜೇಶ್, ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರು ಇದ್ದರು. ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಯತೀಶ್ ಅರುವಾರ್ ವಂದಿಸಿದರು. ದೇವದಾಸ್ ಶೆಟ್ಟಿ ನಿರೂಪಿಸಿದರು.