ಮುಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ) ಸೈಟ್ ಹಂಚಿಕೆ ಹಗರಣ ಸಂಬಂಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ ಹಿನ್ನೆಲೆ ಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸೋಮವಾರ ಪ್ರತಿಭಟನೆ ನಡೆಸಲಿವೆ.
ಬೆಂಗಳೂರು (ಆ.19): ಮುಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ) ಸೈಟ್ ಹಂಚಿಕೆ ಹಗರಣ ಸಂಬಂಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ ಹಿನ್ನೆಲೆ ಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸೋಮವಾರ ಪ್ರತಿಭಟನೆ ನಡೆಸಲಿವೆ. ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗ ಬೆಳಗ್ಗೆ 11.30ಕ್ಕೆ ಪ್ರತಿಭಟನೆ ನಡೆಯಲಿದೆ. ಉಭಯ ಪಕ್ಷಗಳ ಶಾಸಕರು, ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್ಸಿನ ನಡಿಗೆ ಭ್ರಷ್ಟಾಚಾರದ ಕಡೆಗೆ ಎಂಬಂತಾಗಿದೆ. ಈ ಸರ್ಕಾರ ಬಂದಾಗ ಜನರು ಗ್ಯಾರಂಟಿಗಳ ಬಗ್ಗೆ ಭರವಸೆ ಇಟ್ಟುಕೊಂಡಿದ್ದರು. ಆದರೆ ಜನರ ಅಪೇಕ್ಷೆಗೆ ವಿರುದ್ಧವಾಗಿ ಸರ್ಕಾರ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ 65 ಪ್ರಕರಣಗಳಿದ್ದು ಅದನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ' ಎಂದು ಸ್ಪಷ್ಟಪಡಿಸಿದರು. 'ಇಷ್ಟೊಂದು ಪ್ರಕರಣಗಳಿರುವಾಗ ಸಿದ್ದರಾಮಯ್ಯ'ಕ್ಲೀನ್' ಎನ್ನುವುದು ತಿಳಿಯುತ್ತಿಲ್ಲ.
ಭಾರತದ ದೇಶಿ ಮಾವು ತಳಿಗಳ ಬೆಳೆದು ಭಾರತಕ್ಕೇ ಚೀನಾ ರಫ್ತು: ವಿಶ್ವ ಮಾರುಕಟ್ಟೆಯಲ್ಲಿ ಪ್ರಾಬಲ್ಯಕ್ಕೂ ಕುತ್ತು!
ಈಗ ರಾಜ್ಯಪಾಲರು ಮುಡಾ ಹಗರಣದ ಬಗ್ಗೆ ತನಿಖೆಗೆ ಅನುಮತಿ ನೀಡಿರುವುದನ್ನು ಕಾಂಗ್ರೆಸ್ ಸ್ವಾಗತ ಮಾಡಬೇಕಿತ್ತು. ತನಿಖೆಯಾಗಿ ಸ್ವಚ್ಛವಾಗಿ ಹೊರಬಂದರೆ ಕ್ಲೀನ್ ಎಂದು ನಂಬಬಹುದು. ಅದನ್ನು ಬಿಟ್ಟು ರಾಜ್ಯಾದ್ಯಂತ ಹೋರಾಟ ಮಾಡಲು ಕಾಂಗ್ರೆಸ್‌ನವರು ಮುಂದಾಗಿದ್ದಾರೆ' ಎಂದು ಟೀಕಿಸಿದರು. 'ಸಿದ್ದರಾಮಯ್ಯ ಅವರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಧಾನಮಂಡಲ ಅಧಿವೇಶನದಲ್ಲಿ ಉತ್ತರ ನೀಡದೆ ಪಲಾಯನ ಮಾಡಿದ್ದಾರೆ. ಜೊತೆಗೆ ಪ್ರಕರಣ ಮುಚ್ಚಿಹಾಕಲು ಬೇಕಾದವರನ್ನು ನೇಮಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸಹ ಸಿದ್ದರಾಮಯ್ಯ ಅವರ ಭ್ರಷ್ಟಾಚಾರವನ್ನು ಬೆಂಬಲಿಸಿದೆ. ಯಾವ ನೈತಿಕತೆ ಇಟ್ಟುಕೊಂಡು ಇವರು ಹೋರಾಟ ಮಾಡುತ್ತಾರೆ' ಎಂದು ಪ್ರಶ್ನಿಸಿದರು.