
ಬೆಳಗಾವಿ (ಡಿ.30): ಕುಂದಾನಗರಿಯಲ್ಲಿ ಕಮಲ ಪಾಳೆಯದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬೆಳಗಾವಿ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಜಿಲ್ಲಾ ಕೋರ್ ಕಮಿಟಿಯ ಅತ್ಯಂತ ಮಹತ್ವದ ಸಭೆ ಆರಂಭವಾಗಿದ್ದು, ಜಿಲ್ಲಾ ರಾಜಕಾರಣದಲ್ಲಿ ಈ ಸಭೆ ತೀವ್ರ ಕುತೂಹಲ ಮೂಡಿಸಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಅವರ ಜಂಟಿ ನೇತೃತ್ವದಲ್ಲಿ ಈ ಸಭೆ ನಡೆಯುತ್ತಿದೆ. ರಾಷ್ಟ್ರೀಯ ಮಟ್ಟದ ನಾಯಕರು ಜಿಲ್ಲಾ ಮಟ್ಟದ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿರುವುದು ಸಭೆಯ ಕುತೂಹಲ ಹೆಚ್ಚಿಸಿದೆ. ಮುಂಬರುವ ಸವಾಲುಗಳನ್ನು ಎದುರಿಸಲು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಲು ಈ ಸಭೆ ವೇದಿಕೆಯಾಗಲಿದೆಯೇ?
ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು ಸಭೆಯ ಪ್ರಮುಖ ಉದ್ದೇಶವಾಗಿದೆ. ಮುಂದಿನ ರಾಜಕೀಯ ಬೆಳವಣಿಗೆಗಳು, ಪಕ್ಷದೊಳಗಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳ ಶಮನ ಹಾಗೂ ವಿರೋಧ ಪಕ್ಷಗಳನ್ನು ಎದುರಿಸಲು ರೂಪಿಸಬೇಕಾದ ತಂತ್ರಗಳ ಕುರಿತು ನಾಯಕರು ಸುದೀರ್ಘ ಚರ್ಚೆ ನಡೆಸುತ್ತಿದ್ದಾರೆ. ಸಂಘಟನಾ ಚಟುವಟಿಕೆಗಳ ಪರಾಮರ್ಶೆ ಕೂಡ ಇಲ್ಲಿ ನಡೆಯುತ್ತಿದೆ.
ಸಭೆಯಲ್ಲಿ ಬಿಜೆಪಿ ಘಟಾನುಘಟಿ ನಾಯಕರ ದಂಡು
ಸಭೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಸೇರಿದಂತೆ ಜಿಲ್ಲೆಯ ಹಿರಿಯ ನಾಯಕರು ಭಾಗವಹಿಸಿದ್ದಾರೆ. ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಹಾಲಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಶಾಸಕರಾದ ಮಹೇಶ ಟೆಂಗಿನಕಾಯಿ, ವಿಠ್ಠಲ ಹಲಗೇಕರ, ಶಶಿಕಲಾ ಜೊಲ್ಲೆ ಮತ್ತು ಅಭಯ ಪಾಟೀಲ ಅವರು ಸಭೆಯಲ್ಲಿ ಉಪಸ್ಥಿತರಿದ್ದಾರೆ. ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನ ಪ್ರಭಾವಿ ನಾಯಕರು ಒಂದೇ ವೇದಿಕೆಯಲ್ಲಿ ಸೇರಿರುವುದು ವಿಶೇಷವಾಗಿದೆ.
ಮಾಜಿ ಸಂಸದರು, ಶಾಸಕರ ಉಪಸ್ಥಿತಿ; ಒಗ್ಗಟ್ಟಿನ ಪ್ರದರ್ಶನ
ಸಭೆಯಲ್ಲಿ ಯುವ ನಾಯಕ ನಿಖಿಲ್ ಕತ್ತಿ, ದುರ್ಯೋಧನ ಐಹೊಳೆ, ಮಾಜಿ ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ ಮತ್ತು ರಮೇಶ ಕತ್ತಿ ಭಾಗವಹಿಸುವ ಮೂಲಕ ಪಕ್ಷದ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ. ಅನಿಲ್ ಬೆನಕೆ, ಸುರೇಶ್ ಮಾರಿಹಾಳ, ಜಗದೀಶ ಮೆಟಗುಡ್ಡ, ವಿ.ಐ. ಪಾಟೀಲ, ಮಹಾದೇವಪ್ಪ ಯಾದವಾಡ, ಸಂಜಯ ಪಾಟೀಲ, ಮಹಾಂತೇಶ ದೊಡಗೌಡರ ಹಾಗೂ ಅರವಿಂದ ಪಾಟೀಲ ಸೇರಿದಂತೆ ಹಲವು ಮಾಜಿ ಶಾಸಕರು ಸಭೆಯಲ್ಲಿದ್ದು, ಜಿಲ್ಲೆಯ ರಾಜಕೀಯ ಚಿತ್ರಣದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.