Karnataka Council Polls: ಬಿಜೆಪಿ ಬಣ ರಾಜಕೀಯ ಬಹಿರಂಗ, ಸಚಿವರೆದುರೇ ಕಾರ್ಯಕರ್ತರ ಹೊಡೆದಾಟ!

By Suvarna News  |  First Published Dec 1, 2021, 8:42 AM IST

* ವಿಧಾನ ಪರಿಷತ್ ಚುನಾವಣೆಗಾಗಿ ಮಂಗಳವಾರ ಆಯೋಜಿಸಲಾಗಿದ್ದ ಬಿಜೆಪಿ ಸಭೆ 

* ಎರಡು ಗುಂಪುಗಳ ನಡುವೆ ಆರಂಭವಾದ ಮಾತಿನ ಚಕಮಕಿ ವಿಕೋಪಕ್ಕೆ

* ಸಚಿವರೆದುರೇ ಹೊಡೆದಾಡಿಕೊಂಡ ಬಿಜೆಪಿ ಕಾರ್ಯಕರ್ತರು


ಬೆಂಗಳೂರು(ಡಿ.01): ಕರ್ನಾಟಕದಲ್ಲಿ ಮುಂಬರುವ ವಿಧಾನ ಪರಿಷತ್ ಚುನಾವಣೆಗಾಗಿ (Karnataka Council Polls) ಮಂಗಳವಾರ ಆಯೋಜಿಸಲಾಗಿದ್ದ ಬಿಜೆಪಿ (BJP) ಸಭೆ ಬಿಸಿ ಬಿಸಿಯಾಗಿತ್ತು. ಎರಡು ಗುಂಪುಗಳ ನಡುವೆ ಆರಂಭವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ. ಉದ್ರಿಕ್ತರಾದ ಕಾರ್ಯಕರ್ತರು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. ಡಿಸೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಗೆ ರಾಜ್ಯ ಅಬಕಾರಿ ಸಚಿವ ಕೆ.ಗೋಪಾಲಯ್ಯ (Excise Minister K Gopalaiah) ಅವರ ನೇತೃತ್ವದಲ್ಲಿ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ (Hassan district's Arsikere) ಆಯೋಜಿಸಲಾಗಿದ್ದ ಸಭೆಯಲ್ಲಿ ಇಂತಹುದ್ದೊಂದು ಘಟನೆ ನಡೆದಿದೆ ಎಂಬುವುದು ಉಲ್ಲೇಖನೀಯ.

ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (Former CM BS Yediyurappa) ಅವರ ಮಾಜಿ ಆಪ್ತರಾಗಿದ್ದ ಎನ್.ಆರ್.ಸಂತೋಷ್ (NR Santosh) ಭಾಷಣ ಮಾಡುತ್ತಿದ್ದಾಗ ಕಾರ್ಯಕರ್ತರ ಗುಂಪು ಆಕ್ಷೇಪ ವ್ಯಕ್ತಪಡಿಸಿದೆ. ಅವರ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಅರಸೀಕೆರೆಗೆ ನೀಡಿದ ಕೊಡುಗೆಯನ್ನು ಪ್ರಶ್ನಿಸಿದ್ದಾರೆ. ಆದರೆ, ಸಚಿವ ಗೋಪಾಲಯ್ಯ (Minister K Gopalaiah) ಜನರನ್ನು ಸಮಾಧಾನ ಪಡಿಸಲು ಯತ್ನಿಸಿದರಾದರೂ ಅದನ್ನು ಒಪ್ಪಲು ಧರಣಿ ನಿರತ ಕಾರ್ಯಕರ್ತರು ಸಿದ್ಧರಿರಲಿಲ್ಲ. ಕೂಡಲೇ ಸಚಿವರು ಸ್ಥಳದಿಂದ ನಿರ್ಗಮಿಸಿದ್ದಾರೆ. ಕೆಹೀಗಿರುವಾಗ ಉಭಯ ಗುಂಪಿನ ಕಾರ್ಯಕರ್ತರ ನಡುವಿನ ಜಗಳ ತಾರಕಕ್ಕೇರಿದೆ. ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಮತ್ತೊಬ್ಬನೊಂದಿಗೆ ಥಳಿಸುವ ದೃಶ್ಯ ವಿಡಿಯೋದಲ್ಲಿ ಕಂಡು ದಾಖಲಾಗಿದೆ. ಇದೇ ವೇಳೆ ಕೆಲ ಕಾರ್ಯಕರ್ತರು ಉದ್ರಿಕ್ತರನ್ನು ಸಮಾಧಾನಪಡಿಸಲು ಯತ್ನಿಸುತ್ತಿದ್ದಾರೆ.

Tap to resize

Latest Videos

undefined

ಹಾಸನದ ಬಿಜೆಪಿ ಬಣ ರಾಜಕೀಯ ಬಹಿರಂಗ 

ಇದನ್ನು ಕಂಡ ಸಚಿವರು ಎಷ್ಟೇ ಸಮಾಧಾನ ಪಡಿಸಿದರೂ, ಜಗಳಕ್ಕೆ ಇಳಿದಿದ್ದವರ ಸಿಟ್ಟು, ಆಕ್ರೋಶ ತಣಿಯಲಿಲ್ಲ. ಕಡೆಗೆ ಒಬ್ಬರ ಪರ ನಿಂತರೆ ಇನೊಬ್ಬರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಎಲ್ಲರೂ ಕಾಲಿಗೆ ಬುದ್ಧಿ ಹೇಳಿದರು. ಈ ಬೆಳವಣಿಗೆಯಿಂದ ಅರಸೀಕೆರೆ ಬಿಜೆಪಿಯಲ್ಲಿ ಬಣ ರಾಜಕೀಯ ಇರುವುದು ಬೀದಿಗೆ ಬಂದಿದೆ. ಇನ್ನೂ ಮತಯಾಚಿಸಲು ಬಂದಿದ್ದ ಅಭ್ಯರ್ಥಿ ಎಚ್.ಎಂ.ವಿಶ್ವನಾಥ್ ದಿಕ್ಕುತೋಚದೆ ವೇದಿಕೆಯಲ್ಲಿ ಕೂರಬೇಕಾಯಿತು. ಅರಸೀಕೆರೆ ಬಿಜೆಪಿಯಲ್ಲಿ ಮೂರ್ನಾಲ್ಕು ಬಣಗಳಿದ್ದು ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರಿಗೆ ಬೆಂಬಲ‌ ನೀಡಲಿದ್ದಾರೆ ಎಂಬುದು ಗೌಪ್ಯವಾಗಿದೆ.

ಘಟನೆಯಲ್ಲಿ ಸಂತೋಷ್ ನನ್ನು ಪ್ರಶ್ನಿಸಿದ ಮೋಹನ್ ನಾಯ್ಕ್ ಎಂಬುವವರಿಗೆ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗಾಗಿ ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಘಟನೆ ಕುರಿತು ಸಚಿವರು ಮತ್ತು ಸಂತೋಷ್ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ. ಇದುವರೆಗೆ ಎರಡು ಗುಂಪಿನವರು ಪೊಲೀಸರಿಗೆ ದೂರು ನೀಡಿಲ್ಲ.

ಬಿಜೆಪಿ ತೊರೆಯುತ್ತಾರಾ ಮುಖಂಡ : ಕ್ರಮಕ್ಕೆ ಬೇಸರಿಸಿ ಕಣ್ಣೀರು

ರಾಜಕೀಯ (Politics) ನಿರ್ಧಾರ ತೆಗೆದುಕೊಳ್ಳುವುದರಲ್ಲಿ ನಾನು ತಪ್ಪು ಮಾಡಿದ್ದೇನೆ. ಆದರೆ ನಿರ್ಧಾರವು ನನ್ನ ಸ್ವಹಿತಕ್ಕಾಗಿ ಅಲ್ಲ. ನನ್ನ ಕಾರ್ಯಕರ್ತರ  ಜಿಲ್ಲಾ ಜನತೆಯ  ರಕ್ಷಣೆಗೆ ಮಾತ್ರವೆಂದು ಭಾವುಕರಾದರು ಮಾಜಿ ಸಚಿವ ಎ.ಮಂಜು (A Manju),   ವಿಧಾನ ಪರಿಷತ್  ಚುನಾವಣೆ (MLC Election)  ಕುರಿತು  ಮುಂದಿನ  2-3 ದಿನದಲ್ಲಿ  ನಿರ್ಣಯ ಕೈಗೊಳ್ಳುವುದಾಗಿ ಪ್ರಕಟಿಸಿದರು. ಪಟ್ಟಣದಲ್ಲಿ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು ನಾನು  ಯಾವ ಪಕ್ಷದಲ್ಲಿದ್ದರು ದ್ರೋಹ ಬಗೆಯದೇ ಆ ಪಕ್ಷಕ್ಕಾಗಿ ಶ್ರಮಿಸುವ ವ್ಯಕ್ತಿ. ಕಾಂಗ್ರೆಸ್‌ (Congress) ನನ್ನ ಮಗನಿಗೆ ಟಿಕೆಟ್ ನೀಡಿದರೂ ನಾನು  ಮಗನ ನಾಮಪತ್ರ  ಸಲ್ಲಿಕೆಗೆ ಗೈರಾಗಿ ಬಿಜೆಪಿ  (BJP) ಅಭ್ಯರ್ಥಿ ಉಮೇದುವಾರಿಕೆ ವೇಳೆ  ಹಾಜರಿದ್ದೆ. ಆದರೆ  ರಾಜ್ಯ ಶಿಸ್ತು ಸಮಿತಿ ಕಾರಣವಿಲ್ಲದೇ ನನ್ನ ವಿರುದ್ಧ  ನೋಟಿಸ್‌ ಜಾರಿ ಮಾಡಿದ್ದು ನೋವು ತಂದಿದೆ ಎಂದರು.  

ಚುನಾವಣೆ ಯಾವಾಗ?

ಕರ್ನಾಟಕ ವಿಧಾನಮಂಡಲದ ಮೇಲ್ಮನೆ ವಿಧಾನ ಪರಿಷತ್​ಗೆ ಚುನಾವಣೆ ಘೋಷಣೆಯಾಗಿದೆ. 2022ರ ಜನವರಿ 5ರಂದು 25 ಪರಿಷತ್​ ಸದಸ್ಯರ ಅಧಿಕಾರ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ ‌10ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆ ನಡೆದು, ಫಲಿತಾಂಶ ಹೊರ ಬೀಳಲಿದೆ. ನವೆಂಬರ್ 16ರಂದು ಅಧಿಸೂಚನೆ ಹೊರಡಿಸಲಾಗುವುದು. ನವೆಂಬರ್ 23 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿತ್ತು. ಮೂರು ಪಕ್ಷಗಳ ಘಟಾನುಘಟಿ ನಾಯಕರು ಭರ್ಜರಿ ಚುನಾವಣಾ ಪ್ರಚಾರದಲ್ಲಿ ತೊಡಗಿವೆ.

click me!