
ಬೆಂಗಳೂರು(ಮೇ.03): ಬಿಜೆಪಿಯವರಿಗೆ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದವರ ಅಭಿವೃದ್ಧಿ ಇಷ್ಟವಿಲ್ಲ. ಹೀಗಾಗಿಯೇ ತಮ್ಮ ಅಧಿಕಾರಾವಧಿಯಲ್ಲಿ ಎಸ್‌ಸಿಪಿ/ಟಿಎಸ್‌ಪಿ ಅನುದಾನ ಬಳಕೆಯಲ್ಲಿ ಉದಾಸೀನತೆ ತೋರಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಯಾವುದೇ ಪ್ರಣಾಳಿಕೆ ಮತ ಗಳಿಕೆಯ ಸಾಧನವಲ್ಲ. ಬದಲಿಗೆ ರಾಜ್ಯದ ವಿಕಾಸ, ಜನರ ಆರ್ಥಿಕ, ಸಾಮಾಜಿಕ ಬದಲಾವಣೆಯ ಸಾಧನ. ಅಂತಹ ಪ್ರಣಾಳಿಕೆಯನ್ನು ನಾವು ಸಿದ್ಧಪಡಿಸಿದ್ದೇವೆ. ರೈತರು, ಸಾಮಾನ್ಯ ಜನರು, ದಲಿತರು, ಹಿಂದುಳಿದ ವರ್ಗದವರ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ. ಬಿಜೆಪಿಯವರಿಗೆ ಪರಿಶಿಷ್ಟಜಾತಿ/ಪಂಗಡದವರ ಏಳಿಗೆ ಬಗ್ಗೆ ಕಾಳಜಿಯಿಲ್ಲ. ಏಕೆಂದರೆ, 2023-24ನೇ ಸಾಲಿಗೆ 3.10 ಲಕ್ಷ ಕೋಟಿ ರು. ಮೊತ್ತದ ಬಜೆಟ್ ಮಂಡಿಸಲಾಗಿದ್ದು, ಅದರಲ್ಲಿ ಎಸ್‌ಸಿಪಿ/ಟಿಎಸ್‌ಪಿ ಅಡಿಯಲ್ಲಿ 28 ಸಾವಿರ ಕೋಟಿ ರು. ಮಾತ್ರ ಮೀಸಲಿಡಲಾಗಿದೆ. ಹೀಗೆ ಕಡಿಮೆ ಅನುದಾನ ನಿಗದಿ ಮಾಡಿ ಎಸ್ಸಿ/ಎಸ್ಟಿಸಮುದಾಯದವರ ಅಭಿವೃದ್ಧಿ ಕುಂಠಿತವಾಗುವಂತೆ ಮಾಡಲಾಗುತ್ತಿದೆ. ನಾವು ಅಧಿಕಾರಕ್ಕೆ ಬಂದ ನಂತರ ಎಸ್ಸಿ/ಎಸ್ಟಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಹಣ ನಿಗದಿ ಮಾಡಿ ಅವರ ಅಭಿವೃದ್ಧಿಗೆ ವ್ಯಯಿಸುತ್ತೇವೆ. ಜತೆಗೆ ಎಸ್‌ಸಿಪಿ/ಟಿಎಸ್‌ಪಿ ಕಾಯ್ದೆ ಅಡಿಯಲ್ಲಿನ 7ಡಿ ಕಲಂ ಅನ್ನು ರದ್ದು ಮಾಡಲಾಗುವುದು ಎಂದು ಹೇಳಿದರು.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ 80 ಕೋಮು ಗಲಭೆ: ಜೆ.ಪಿ.ನಡ್ಡಾ
ನಾವು ಘೋಷಿಸಿರುವ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಾರೆ. ಅವರಿಗೆ ಮಾಹಿತಿ ಕೊರತೆಯಿದೆ. ನಾನು 13 ಬಾರಿ ಬಜೆಟ್ ಮಂಡಿಸಿದ್ದು, ರಾಜ್ಯದ ಆರ್ಥಿಕ ಪರಿಸ್ಥಿತಿ ಏನು ಎಂಬುದು ನನಗೆ ತಿಳಿದಿದೆ. ನಾನು ಅಧಿಕಾರದಲ್ಲಿ ಇರುವವರೆಗೆ ರಾಜ್ಯದ ಸಾಲ 2.42 ಲಕ್ಷ ಕೋಟಿ ರು.ನಷ್ಟಿತ್ತು. ಆದರೆ, ಈಗ ಸಾಲದ ಪ್ರಮಾಣ 5.46 ಲಕ್ಷ ಕೋಟಿ ರು.ಗೆ ಹೆಚ್ಚಳವಾಗಿದೆ. ವಾರ್ಷಿಕ 56 ಸಾವಿರ ಕೋಟಿ ರು. ಅಸಲು ಮತ್ತು ಬಡ್ಡಿ ಪಾವತಿಸಬೇಕಿದೆ. ಹೀಗೆ ಸಾಲವನ್ನು ಮಾಡುವ ಬದಲು ಜನರ ಆದಾಯ ವೃದ್ಧಿ ಮಾಡಿ, ಆರ್ಥಿಕತೆ ಹೆಚ್ಚುವಂತೆ ಮಾಡಬಹುದು. ಅದರಿಂದ ಯೋಜನೆಗಳ ಅನುಷ್ಠಾನಕ್ಕೆ ಸೂಕ್ತ ಆದಾಯ ದೊರೆಯುತ್ತದೆ. ನರೇಂದ್ರ ಮೋದಿ ಅವರಿಗೆ ನಮ್ಮ ಯೋಜನೆಗಳ ಬಗ್ಗೆ ಅರಿವಿಲ್ಲ. ಅವರಿಗೆ ಗೊತ್ತಿಲ್ಲದಿದ್ದರೆ ಜನರಿಗೆ ತಪ್ಪು ಮಾಹಿತಿ ನೀಡಲು ಹೋಗಬಾರದು. ಜನರು ಬಿಜೆಪಿ ನಾಯಕರ ಮಾತು ಕೇಳಬಾರದು ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.