ಉಪ ಸಮರದ ಕುಸ್ತಿಗೆ ಬಿಜೆಪಿ ಭರ್ಜರಿ ಚಾಲನೆ : ಬಿಎಸ್‌ವೈ ಮತಯಾಚನೆ

Kannadaprabha News   | Asianet News
Published : Mar 21, 2021, 09:06 AM ISTUpdated : Mar 21, 2021, 10:10 AM IST
ಉಪ ಸಮರದ ಕುಸ್ತಿಗೆ ಬಿಜೆಪಿ ಭರ್ಜರಿ ಚಾಲನೆ  : ಬಿಎಸ್‌ವೈ ಮತಯಾಚನೆ

ಸಾರಾಂಶ

ರಾಜ್ಯದಲ್ಲಿ ಏಪ್ರಿಲ್ 17 ರಂದು ನಡೆಯುವ ಉಪ ಸಮರದ ಪ್ರಚಾರಕ್ಕೆ ಸ್ವತಃ ಸಿಎಂ ಬಿ ಎಸ್ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಬಿಜೆಪಿ ಮುಖಂಡರು ತಮ್ಮದೇ ಗೆಲುವಿನ ವಿಶ್ವಾಸದಲ್ಲಿದ್ದಾರೆ. 

ರಾಯಚೂರು (ಮಾ.21):  ರಾಜ್ಯದ ಎರಡು ವಿಧಾನಸಭೆ ಮತ್ತು ಒಂದು ಲೋಕಸಭೆ ಕ್ಷೇತ್ರಗಳಿಗೆ ಏ.17ರಂದು ನಡೆಯಲಿರುವ ಉಪಚುನಾವಣೆ ಪ್ರಚಾರಕಾರ್ಯಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಯಚೂರು ಜಿಲ್ಲೆಯ ಮಸ್ಕಿಯಿಂದ ಭರ್ಜರಿ ಚಾಲನೆ ನೀಡಿದ್ದಾರೆ. 

"

ಶನಿವಾರದಂದು ಮಸ್ಕಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಬೃಹತ್‌ ಸಮಾವೇಶದಲ್ಲಿ ನೆರೆದಿದ್ದ 35 ಸಾವಿರಕ್ಕೂ ಅಧಿಕ ಮಂದಿಯ ಮುಂದೆ ಚುನಾವಣಾ ಭಾಷಣ ಮಾಡಿದ ಅವರು, ಮಸ್ಕಿ ಕ್ಷೇತ್ರಕ್ಕೆ ಅತೀಯಾಗಿ ಅಗತ್ಯವಿರುವ ವಟಗಲ್‌ ಬಸವೇಶ್ವರ ನೀರಾವರಿ ವ್ಯವಸ್ಥೆ ಸೇರಿದಂತೆ ಏನೇನು ಕೆಲಸಗಳು ಆಗಬೇಕೋ ಅವೆಲ್ಲವನ್ನೂ ನೀಡುವುದಾಗಿ ಭರವಸೆ ನೀಡಿದರು. ಮಾತ್ರವಲ್ಲದೆ ಮಸ್ಕಿ ಕ್ಷೇತ್ರದಲ್ಲಿರುವ 6 ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಿಗೂ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ಪರಿಹರಿಸುವುದಾಗಿ ವಾಗ್ದಾನ ಮಾಡಿದರು.

'ಇನ್ನೊಂದು ತಿಂಗಳಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ರಾಜೀನಾಮೆ' ..

ಈ ಹಿಂದೆ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಮಾದಲೂರು ಕೆರೆ ತುಂಬಿಸುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ ಬಳಿಕ ಆ ಭರವಸೆಯನ್ನು ಈಡೇರಿಸಿದ್ದರು. ನೀರಾವರಿ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣಾ ಪ್ರಚಾರ ಮಾಡುವುದಾಗಿ ಈಗಾಗಲೇ ತಿಳಿಸಿರುವ ಯಡಿಯೂರಪ್ಪ ಮಸ್ಕಿಯಲ್ಲೂ ಅದೇ ವಿಷಯವನ್ನು ಇಟ್ಟುಕೊಂಡು ಮತ ಯಾಚಿಸಿದ್ದಾರೆ. ನೀವು ಮತ ಕೊಡುವುದು ಪ್ರತಾಪಗೌಡರಿಗೆ ಅಲ್ಲ, ಯಡಿಯೂರಪ್ಪಗೆ ಅಲ್ಲ, ಅಭಿವೃದ್ಧಿಗೆ ಎನ್ನುವ ಮೂಲಕ ಸಮಗ್ರ ಮಸ್ಕಿ ಅಭಿವೃದ್ಧಿ ಮಂತ್ರ ಪಠಿಸಿದರು. ಅನ್ಯರ ಬೂಟಾಟಿಕೆ ಮಾತುಗಳಿಗೆ ಮರುಳಾಗಬೇಡಿ. ಇವತ್ತು ಆಡಳಿತ ಪಕ್ಷದ ಸದಸ್ಯರಾಗಿ ಪ್ರತಾಪಗೌಡ ಅವರು ಆಯ್ಕೆಯಾದರೆ ಕ್ಷೇತ್ರಕ್ಕೇನು ಲಾಭವಾಗುತ್ತೆ ಮತ್ತು ಬೇರೆಯವರು ಆಯ್ಕೆಯಾದರೆ ಏನು ಲಾಭವಾಗುತ್ತೆ ನೀವೇ ಯೋಚನೆ ಮಾಡಿ. ನಾನು ಮಾತು ಕೊಟ್ಟಿದ್ದು ಮಾಡೇ ಮಾಡುತ್ತೇನೆ ಎಂದು ಖಂಡಾತುಂಡವಾಗಿ ಹೇಳಿದರು.

ಇದೇ ವೇಳೆ ಮಸ್ಕಿಯ 5ಎ ಕಾಲುವೆಗೆ ನೀರಿನ ಲಭ್ಯತೆ ಇಲ್ಲ. ಹೀಗಾಗಿ ವಟಗಲ್‌ ಬಸವೇಶ್ವರ ನೀರಾವರಿ ನೀಡುತ್ತೇನೆ. ಇಲ್ಲಿ ಕಳೆದ 4 ತಿಂಗಳಿಂದ 5ಎ ಕಾಲುವೆಗಾಗಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಮಾತುಕತೆ ನಡೆಸುವೆ. ರೈತರು ನಡೆಸುತ್ತಿರುವ ಚಳವಳಿಯ ಬಗ್ಗೆ ಮಾಹಿತಿ ಇದ್ದು, ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಸಂಕಷ್ಟಗಳಿಗೆ ಸ್ಥಳದಲ್ಲೇ ಪರಿಹಾರ:  ಮಸ್ಕಿ ಕ್ಷೇತ್ರದಲ್ಲಿ 6 ಜಿಪಂ ಕ್ಷೇತ್ರಗಳಿದ್ದು, ಈ ಉಪಚುನಾವಣೆಯಲ್ಲಿ ನಾನು ಮತ್ತು ಸಚಿವರು, ಶಾಸಕರು, ಉಳಿದ ಮುಖಂಡರು ಅಲ್ಲಿಗೆ ಬರುತ್ತೇವೆ. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಮಸ್ಕಿ ತಾಲೂಕಿನ ಜ್ವಲಂತ ಸಮಸ್ಯೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ, ಅಲ್ಲಿಯ ಮಹಿಳೆಯರು, ಜನರನ್ನು ಭೇಟಿ ಮಾಡಿ ಅವರ ಸಂಕಷ್ಟಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು. ಬಜೆಟ್‌ ಅಧಿವೇಶನ ಮುಗಿದ ಮೇಲೆ ರಾಜ್ಯದ ಪ್ರತಿಯೊಂದು ಜಿಲ್ಲೆಗೆ ಹೋಗಲಿದ್ದು, ಅದಕ್ಕಿಂತ ಮುಂಚೆ ಮಸ್ಕಿಗೆ ಬರುವುದಾಗಿ ತಿಳಿಸಿದರು.

ಉಪಚುನಾವಣೆ ರಣಕಹಳೆ ಊದಿದ ಬಿಜೆಪಿ

ಮಸ್ಕಿ ಉಪಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಬಿಜೆಪಿ ಶನಿವಾರ ಪಟ್ಟಣದಲ್ಲಿ ಬೃಹತ್‌ ರಾರ‍ಯಲಿ ನಡೆಸುವ ಮೂಲಕ ತನ್ನ ಶಕ್ತಿ ಪ್ರದರ್ಶಿಸಿತು. ಶನಿವಾರ ನಡೆದ ಸಮಾವೇಶದಲ್ಲಿ 35000ಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು. ಪಟ್ಟಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವರಾದ ಬಿ.ಶ್ರೀರಾಮುಲು, ಕೆ.ಎಸ್‌.ಈಶ್ವರಪ್ಪ, ಸಂಸದ ಕರಡಿ ಸಂಗಣ್ಣ, ಸೇರಿದಂತೆ ಪಕ್ಷದ ಮುಖಂಡರನ್ನು ಬಸವೇಶ್ವರ ವೃತ್ತದಿಂದ ಮೆರವಣಿಗೆ ಮೂಲಕ ವೇದಿಕೆ ಸ್ಥಳಕ್ಕೆ ಕರೆ ತರಲಾಯಿತು.

ಕಹಳೆ, ಕಣಿ ಹಲಗೆ, ಡೊಳ್ಳು ಕುಣಿತ, ಸಿಂಗಾರ ಮೇಳ ಸೇರಿದಂತೆ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಸುಮಂಗಲಿಯರು ಪೂರ್ಣಕುಂಭ ಸ್ವಾಗತ ನೀಡಿದರು. ಬಿಜೆಪಿಯ ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು ದಾರಿಯುದ್ದಕ್ಕೂ ಮುಖಂಡರಿಗೆ ಹೂವಿನ ಮಳೆ ಸುರಿಸಲಾಯಿತು. ಬೃಹತ್‌ ಸಮಾವೇಶದಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚಿನ ಜನರು ಸೇರಿದ್ದರು. ಇಡೀ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಾ ಜಿ ಪರಮೇಶ್ವರ ರಾಜ್ಯದ ಸಿಎಂ ಆಗಬೇಕು, ರಾಜಕೀಯದಲ್ಲಿ ಸಂಚಲನ ಮೂಡಿಸೋ ಹೇಳಿಕೆ ಕೊಟ್ಟ ಕೇಂದ್ರ ಸಚಿವ ವಿ. ಸೋಮಣ್ಣ!
ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!