ಮತಚೋರಿ ಎಂದ ಕಾಂಗ್ರೆಸ್‌ಗೆ ಬಿಹಾರ ಮತದಾರರಿಂದ ತಕ್ಕ ಪಾಠ: ಬಿ.ವೈ.ವಿಜಯೇಂದ್ರ

Published : Nov 15, 2025, 10:18 AM IST
BY Vijayendra

ಸಾರಾಂಶ

ಬಿಹಾರ ವಿಧಾನಸಭಾ ಚುನಾವಣೆಯ ಅಭೂತಪೂರ್ವ ಜಯ, ದೇಶದ ಹೆಮ್ಮೆಯ ಪ್ರಧಾನಿ ಮೋದಿ ಅವರ ಸದೃಢ ನಾಯಕತ್ವದ ಕೊರಳನ್ನು ಅಲಂಕರಿಸಿದ ಪ್ರಜಾಪ್ರಭುತ್ವದ ವಿಜಯದ ಹಾರವಾಗಿ ವಿಜೃಂಭಿಸಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಬೆಂಗಳೂರು (ನ.15): ಬಿಹಾರ ವಿಧಾನಸಭಾ ಚುನಾವಣೆಯ ಅಭೂತಪೂರ್ವ ಜಯ, ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಸದೃಢ ನಾಯಕತ್ವದ ಕೊರಳನ್ನು ಅಲಂಕರಿಸಿದ ಪ್ರಜಾಪ್ರಭುತ್ವದ ವಿಜಯದ ಹಾರವಾಗಿ ವಿಜೃಂಭಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಪ್ರಧಾನಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ ದೇಶಕ್ಕೆ ಅನಿವಾರ್ಯ ಎಂಬ ಸಂದೇಶವನ್ನೂ ಬಿಹಾರದ ಮತದಾರರು ರವಾನಿಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟದ ಸಂಘಟಿತ ಹೋರಾಟ, ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಅವರ ಅವರ ಕಾರ್ಯತಂತ್ರ, ಮುಖ್ಯಮಂತ್ರಿ ನಿತೀಶ್‌ ಕುಮಾರ್‌ರ ದಕ್ಷ ಆಡಳಿತವನ್ನು ಮೆಚ್ಚಿ ಬಿಹಾರದ ಜನತೆ ಮತ್ತೆ ಎನ್‌ಡಿಎ ಸರ್ಕಾರವನ್ನು ನಿರೀಕ್ಷೆ ಮೀರಿದ ಐತಿಹಾಸಿಕ ದಾಖಲೆಯ ಬಹುಮತದಿಂದ ಗೆಲ್ಲಿಸಿ ಆಶೀರ್ವದಿಸಿದ್ದಾರೆ’ ಎಂದಿದ್ದಾರೆ.

‘ಈ ಚುನಾವಣೆಯಲ್ಲಿ ಮತಚೋರಿ ಹೆಸರಿನಲ್ಲಿ ಅಪಪ್ರಚಾರ ನಡೆಸಿ ರಾಜಕೀಯ ಚೋರತನ ಮಾಡಲು ಹೊರಟ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ಗೆ ಬಿಹಾರದ ಮತದಾರರು ತಕ್ಕ ಪಾಠ ಕಲಿಸಿ ಬಿಹಾರದ ರಾಜಕೀಯ ಭೂಪಟದಲ್ಲಿ ಕಾಂಗ್ರೆಸ್ ಗೆ ಅಸ್ತಿತ್ವಕ್ಕಾಗಿ ತಿಣುಕಾಡಬೇಕಾದ ಸ್ಥಿತಿಗೆ ತಳ್ಳಿದ್ದಾರೆ. ಆರ್‌ಜೆಡಿ ಸೇರಿದಂತೆ ಮಹಾಘಟಬಂಧನ್ ಕೂಟವನ್ನು ಬಿಹಾರದ ಜನತೆ ಸೋಲಿನ ಬಂಧನದ ರುಚಿ ತೋರಿಸಿದ್ದಾರೆ. ಪಾಳೆಗಾರಿಕೆ ರಾಜಕೀಯಕ್ಕೆ ಇನ್ನೆಂದೂ ಅವಕಾಶ ನೀಡಲಾಗದು ಎಂಬ ಉತ್ತರ ಕೊಟ್ಟಿದ್ದಾರೆ’ ಎಂದು ಕುಟುಕಿದ್ದಾರೆ.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪಪ್ರಚಾರ ನಡೆಯುವುದಿಲ್ಲ, ಅಲ್ಪಸಂಖ್ಯಾತರ ಹೆಸರಿನಲ್ಲಿ ಓಲೈಕೆಯ ಮತಬ್ಯಾಂಕ್ ರಾಜಕಾರಣಕ್ಕೆ ಭವಿಷ್ಯವಿಲ್ಲ ಎನ್ನುವುದನ್ನು ಬಿಹಾರದ ಜನತೆ ತೋರಿಸಿಕೊಟ್ಟಿದ್ದಾರೆ. ಈ ಫಲಿತಾಂಶ ಕಾಂಗ್ರೆಸ್ ಸೇರಿದಂತೆ ದೇಶದ ಇತರ ವಿರೋಧ ಪಕ್ಷಗಳಿಗೆ ನೀತಿ ಪಾಠ ಹೇಳಿದೆ. ವಿರೋಧ ಪಕ್ಷವಾಗಿ ಜವಾಬ್ದಾರಿಯಿಂದ ನಡೆದುಕೊಳ್ಳದಿದ್ದರೆ ನಿಮ್ಮನ್ನು ವಿರೋಧ ಪಕ್ಷದ ಸ್ಥಾನದಲ್ಲೂ ಕುಳ್ಳಿರಿಸಲಾಗದು ಎಂಬ ಎಚ್ಚರಿಕೆ ರವಾನಿಸಿದ್ದಾರೆ’ ಎಂದು ವಿಜಯೇಂದ್ರ ಹೇಳಿದ್ದಾರೆ. .

ಕಾಂಗ್ರೆಸ್ ಪಾಲಿಗೆ ಊರುಗೋಲು

‘ರಾಹುಲ್ ಗಾಂಧಿ ಅವರು ಬೆನ್ನತ್ತಿಹೋದ ಈ ವರೆಗಿನ ಚುನಾವಣೆಗ ಕಾಂಗ್ರೆಸ್‌ ಸರಣಿ ಪತನದ ಕಹಿಯನ್ನು ಅನುಭವಿಸಿದೆ. ಸದ್ಯ ಸೋಲಿನ ಸುಳಿಯಲ್ಲಿ ಸಿಲುಕಿಕೊಂಡು ಕಾಂಗ್ರೆಸ್ ಹಡಗು ಸಮುದ್ರದಲ್ಲಿ ಮುಳುಗುತ್ತಿದೆ. ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳು ಕಾಂಗ್ರೆಸ್ ಪಾಲಿಗೆ ಊರುಗೋಲುಗಳಾಗಿವೆ. ಇಂತಹ ಪರಿಸ್ಥಿತಿಯಲ್ಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಕಾಂಗ್ರೆಸ್‌ನ ಮುಂದಾಳುಗಳು ಜನಪರವಾಗಿ ಚಿಂತಿಸದೇ ಅಭಿವೃದ್ಧಿ ಕೆಲಸಗಳನ್ನು ಮೂಲೆಗೆ ಸರಿಸಿ, ರಾಷ್ಟ್ರಭಕ್ತ ಸಂಘಟನೆಗಳ ಕುರಿತು ಅವಿವೇಕದ ಹೇಳಿಕೆಗಳನ್ನು ನೀಡುವುದರಲ್ಲೇ ತಲ್ಲೀನರಾಗಿದ್ದಾರೆ’ ಎಂದು ವಿಜಯೇಂದ್ರ ಕಿಡಿಕಾಡಿದ್ದಾರೆ. ಬಿಹಾರದ ಚುನಾವಣೆಯ ಫಲಿತಾಂಶದಿಂದಾದರೂ ರಾಜ್ಯದ ಕಾಂಗ್ರೆಸ್ಸಿಗರು ಪಾಠ ಕಲಿಯಲಿ. ತಮ್ಮ ಉಳಿದಿರುವ ಅವಧಿಯನ್ನಾದರೂ ಜನಪರ ಕಾರ್ಯಕ್ಕಾಗಿ ಮೀಸಲಿರಿಸಿ ಮತದಾರರ ಋಣ ತೀರಿಸಲಿ ಎಂದು ವಿಜಯೇಂದ್ರ ಕಿವಿ ಮಾತು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ