* ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ರೋಚಕ ತಿರುವು
* ಯಡಿಯೂರಪ್ಪ ಕಾರ್ಯವೈಖರಿಯನ್ನು ಹಾಡಿಹೊಗಳಿದ ನಡ್ಡಾ
* ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹೇಳಿಕೆಯಿಂದ ಸೇಫ್ ಆದ್ರಾ ಸಿಎಂ?
ಪಣಜಿ, (ಜು.25): ಇದೇ ಜು.25ಕ್ಕೆ ಹೈಕಮಾಂಡ್‌ನಿಂದ ಸಂದೇಶ ಬರುತ್ತೆ ನಾಯಕತ್ವ ಬದಲಾವಣೆ ಖಚಿತ ಅಂತೆಲ್ಲಾ ಸದ್ದಿಗಳು ಹರಿದಾಡುತ್ತಿವೆ. ಅಲ್ಲದೇ ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ ಎಂದು ಸ್ವತಃ ಬಿಎಸ್‌ವೈ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಸಿಎಂ ಯಾರು ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಆದ್ರೆ, ಇದೀಗ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ರೋಚಕ ತಿರುವು ಪಡೆದುಕೊಂಡಿದ್ದು, ನಾಯಕತ್ವ ಬದಲಾವಣೆಯನ್ನು ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಳ್ಳಿಹಾಕಿದ್ದಾರೆ.
ಹೌದು.. ಇಂದು (ಭಾನುವಾರ) ಗೋವಾದಲ್ಲಿ ಮಾತನಾಡಿದ ಜೆ.ಪಿ. ನಡ್ಡಾ, ಯಡಿಯೂರಪ್ಪ ಕಾರ್ಯವೈಖರಿಯನ್ನು ಹಾಡಿಹೊಗಳಿರುವುದು ಅಚ್ಚರಿಗೆ ಕಾರಣವಾಗಿದ್ದು, ಬಿಎಸ್ ಯಡಿಯೂರಪ್ಪ ಅವರು ಸೇಫ್ ಆದ್ರಾ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಗೋವಾದಿಂದಲೇ ಕರ್ನಾಟಕ ಸಿಎಂ ಬದಲಾವಣೆಯ ಸುಳಿವು
ಕರ್ನಾಟಕದಲ್ಲಿ ಯಾವುದೇ ರಾಜಕೀಯ ಬಿಕ್ಕಟ್ಟು ಇಲ್ಲ. ಯಡಿಯೂರಪ್ಪನವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಎರಡು ವರ್ಷ ಕರ್ನಾಟಕದಲ್ಲಿ ಉತ್ತಮ ಆಡಳಿತ ನೀಡಿದ್ದಾರೆ. ಅವರನ್ನು ಬದಲಾವಣೆ ಮಾಡಲಾಗುವುದು ಎಂದು ಎಲ್ಲಿಯೂ ಹೇಳಿಲ್ಲ ಎಂದು ಜೆಪಿ ನಡ್ಡಾ ಹೇಳಿರುವುದು ರಾಜ್ಯ ರಾಜಕೀಯಣದಲ್ಲಿ ಸಂಚಲನ ಮೂಡಿಸಿದೆ. ಅಲ್ಲದೇ ಯಡಿಯೂರಪ್ಪ ವಿರೋಧಿಗಳಿಗೆ ಭಾರೀ ಹಿನ್ನಡೆಯಾಗಿದೆ.
ನಾಯಕತ್ವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೈಕಮಾಂಡ್ ಸಂದೇಶಕ್ಕೆ ಕಾಯುತ್ತಿದ್ದಾರೆ. ಆದ್ರೆ, ಈಗ ನಡ್ಡಾ ಅವರ ಹೇಳಿಕೆ ಗಮನಿಸಿದ್ರೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಗೊಂದಲಗಳಿಗೆ ತೆರೆ ಬಿದ್ದಿದ್ದು, ಇನ್ನು ಉಳಿದ ಎರಡು ವರ್ಷ ಅವಧಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎನ್ನುವಂತಿದೆ.
ಅಲ್ಲದೇ ಜು.26ಕ್ಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡ್ತಾರೆ ಎನ್ನುವುದರ ಮಧ್ಯೆ ಯಡಿಯೂರಪ್ಪ ಅವರು ಉತ್ತರ ಕನ್ನಡ ಪ್ರವಾಹ ಪ್ರವಾಸ ಕೈಗೊಳ್ಳುವುದಾಗಿ ಹೇಳಿದ್ದು, ನಾಯಕತ್ವ ಬದಲಾವಣೆಗೆ ಟ್ವಿಸ್ಟ್ ಪಡೆದುಕೊಂಡಿದ್ಯಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.