ಶ್ರೀರಾಮುಲು ಮತ್ತು ಶಾಸಕ ನಾಗೇಂದ್ರ ನಡುವೆ ಟಾಕ್ ವಾರ್, ಶಾಸಕ ನಾಗೇಂದ್ರನನ್ನು ಬೆಳೆಸಿದ್ದೇ ನಾನು ಎಂದ ಶ್ರೀರಾಮುಲು. ತಾಕ್ಕತ್ತಿದ್ರೇ, ಸಹೋದರ ಸಹೋದರಿ, ಅಳಿಯನನ್ನೇಕೆ ಗೆಲ್ಲಿಸಲಾಗಲಿಲ್ಲ ಎಂದ ನಾಗೇಂದ್ರ
ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್
ಬಳ್ಳಾರಿ (ಆ.16): ಚುನಾವಣೆ ಇನ್ನೂ ಏಳೆಂಟು ತಿಂಗಳು ಬಾಕಿ ಇರೋವಾಗಲೇ ನಾಯಕರ ವಾಗ್ವಾದ ಜೋರಾಗಿದೆ. ಅದರಲ್ಲೂ ಬಳ್ಳಾರಿಯಲ್ಲಿ ಸಚಿವ ಶ್ರೀರಾಮುಲು ವರ್ಸಸ್ ಶಾಸಕ ನಾಗೇಂದ್ರ ಅವರ ವಾಕ್ಸಮರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಇದಕ್ಕೆ ಬಹುದೊಡ್ಡ ಕಾರಣವೂ ಇದೆ. ಹೌದು, ಕಳೆದ ಬಾರಿ ಅಂದ್ರೇ, 2018ರ ಚುನಾವಣೆ ವೇಳೆ ತಮ್ಮ ಸ್ವಕ್ಷೇತ್ರವನ್ನು ಬಿಟ್ಟು ಮೊಳಕಾಲ್ಮೂರಿನಿಂದ ಸ್ಪರ್ಧೆ ಮಾಡಿ ಗೆದ್ದಿದ್ದ ಸಚಿವ ಶ್ರೀರಾಮುಲು ಈ ಬಾರಿ ಮತ್ತೊಮ್ಮೆ ತಮ್ಮ ತವರು ಕ್ಷೇತ್ರಕ್ಕೆ ಮರಳುತ್ತಿದ್ದಾರೆ. ಇದಕ್ಕಾಗಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಾದ್ಯಾಂತ ಜೋರಾಗಿ ಓಡಾಡುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಹಾಲಿ ಶಾಸಕ ನಾಗೇಂದ್ರ ಅವರಿಗೆ ಒಂದಷ್ಟು ಇರುಸುಮುರಿಸಾಗಿದ್ದು, ಸತ್ಯ ಆದ್ರೇ, ಇಷ್ಟು ದಿನಗಳ ಕಾಲ ಮುಸುಕಿನ ಗುದ್ದಾಟದಂತಿದ್ದ ನಾಯಕರ ವಾಕ್ಸರ ಇದೀಗ ನೇರವಾಗಿ ಮಾದ್ಯಮಗಳ ಮುಂದೆ ವಾಗ್ವಾದ ಮಾಡೋ ಹಾಗೆ ಆಗಿದೆ. 2018ರಲ್ಲಿ ಬಿಜೆಪಿಯಲ್ಲಿ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದ ಸಚಿವ ಶ್ರೀರಾಮುಲು ಕಾರಣಾಂತರಗಳಿಂದ ತಮ್ಮ ಸ್ವಂತ ಕ್ಷೇತ್ರವಾದ ಬಳ್ಳಾರಿ ಗ್ರಾಮಾಂತರ ಕ್ಷೇತ್ರ ಬಿಟ್ಟು ಮೊಳಕಾಲ್ಮೂರಿನಿಂದ ಸ್ಪರ್ಧೆ ಮಾಡಿದ್ರು. ಇದರ ಜೊತೆ ಸಿದ್ದರಾಮಯ್ಯ ಅವರಿಗೆ ಟಕ್ಕರ್ ಕೊಡೋ ನಿಟ್ಟಿನಲ್ಲಿ ಬದಾಮಿಯಲ್ಲಿಯೂ ಪಕ್ಷ ಶ್ರೀರಾಮುಲು ಅವರನ್ನು ಕಣಕ್ಕಿಳಿಸಿತ್ತು. ಆದ್ರೇ, ಬದಾಮಿಯಲ್ಲಿ ಸೋತ ಶ್ರೀರಾಮುಲು ಮೊಳಕಾಲ್ಮೂರಿನಲ್ಲಿ ಗೆದ್ರು. ಇದೆಲ್ಲವೂ ಇದೀಗ ಇತಿಹಾಸ.
undefined
ಆದ್ರೇ, ಈ ಬಾರಿ ಮೊಳಕಾಲ್ಮೂರಿನಲ್ಲಿ ವಾತವರಣೆ ಹಿತವಾಗಿಲ್ಲವೆಂದು ಶ್ರೀರಾಮುಲು ಮತ್ತೊಮ್ಮೆ ತಮ್ಮ ಸ್ವಂತ ಕ್ಷೇತ್ರವಾದ ಬಳ್ಳಾರಿ ಗ್ರಾಮಾಂತರದಲ್ಲಿ ಹೆಚ್ಚು ಹೆಚ್ಚು ಓಡಾಡುತ್ತಿದ್ದಾರೆ. ಹೀಗೆ ಓಡಾಡೋವಾಗ ಕಾರ್ಯಕ್ರಮ ವೊಂದರಲ್ಲಿ ಹಾಲಿ ಶಾಸಕ ನಾಗೇಂದ್ರ ಅವರನ್ನು ನಾನೇ ಬೆಳೆಸಿದೆ ಅವರೊಬ್ಬ ಬೀದಿಬದಿ ರಾಜಕಾರಣಿಯಾಗಿದ್ರು..ನಾಗೇಂದ್ರ ಈ ಮಟ್ಟಕ್ಕೆ ಬೆಳೆಸಿರೋದು ನಾನು ಎಂದು ಕ್ಷೇತ್ರದಲ್ಲಿ ಶ್ರೀರಾಮುಲು ಹೇಳಿದ್ದಾರೆ. ಇದು ಶಾಸಕ ನಾಗೇಂದ್ರ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ತಿರುಗೇಟು ನೀಡಿರೋ ಶಾಸಕ ನಾಗೇಂದ್ರ ಅವರು ನನ್ನ ಸ್ವಂತ ಬಲದಿಂದ ಬೆಳೆದಿದ್ದೇನೆ ಹೊರತು ಯಾರು ನನ್ನನ್ನು ಬೆಳೆಸಿಲ್ಲ ಎನ್ನುವ ಮೂಲಕ ಶ್ರೀರಾಮುಲು ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನಾವಿಬ್ಬರು ಸ್ನೇಹಿತರು ಯಾರನ್ನು ಯಾರು ಬೆಳೆಸಿಲ್ಲ: ಒಂದು ಕಾಲದಲ್ಲಿ ಎಲ್ಲರೂ ಸ್ನೇಹಿತರೇ ಆದ್ರೇ, ಕಾರಣಾಂತರಗಳಿಂದ ಪಕ್ಷಬಿಟ್ಟು ಬೇರೆ ಬೇರೆ ಪಕ್ಷದಲ್ಲಿರೋ ನಾಯಕರು ಒಂದೇ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿರೋದೇ ಈ ವೈಮನಸ್ಸಿಗೆ ಕಾರಣವಾಗಿದೆ. ಅಲ್ಲದೇ ನಮ್ಮದು ವಿದ್ಯಾವಂತ ಕುಟುಂಬ ಶ್ರೀರಾಮುಲು ನಾಲಿಗೆ ಅವರ ಸಂಸ್ಕೃತಿ ಹೇಳುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಅಲೆಕಂಡು ಶ್ರೀರಾಮುಲು ಹತಾಶರಾಗಿದ್ದಾರೆ ಎಂದು ನೇರವಾಗಿ ಶ್ರೀರಾಮುಲು ವಿರುದ್ಧ ನಾಗೇಂದ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ರಾಜಕೀಯವಾಗಿ ನನಗೇನು ಅವರು ದಾರೆ ಎರೆದು ಗೆಲಿಸಿಲ್ಲ. ಸ್ವಂತ ಶಕ್ತಿಯಿಂದ ಒಮ್ಮೆ ಬಿಜೆಪಿ ಒಮ್ಮೆ ಪಕ್ಷೇತರ ಮತ್ತು ಇದೀಗ ಕಾಂಗ್ರೆಸ್ ನಿಂದ ಗೆದ್ದಿದ್ದು, ಒಟ್ಟು ಮೂರು ಬಾರಿ ಗೆಲುವನ್ನು ಸಾಧಿಸಿದ್ದೇನೆ ಇದಕ್ಕೆ ನನ್ನ ಪರಿಶ್ರಮವೇ ಕಾರಣವೆಂದು ಹೇಳಿದ್ದಾರೆ.
ಅಣ್ಣ, ತಂಗಿ ಮತ್ತು ಅಳಿಯನನ್ನೇಕೆ ಗೆಲ್ಲಿಸಲಾಗಲಿಲ್ಲ: ನನ್ನನ್ನು ರಾಜಕೀಯವಾಗಿ ಬೆಳೆಸಿದ್ದೇನೆ ಎನ್ನು ಶ್ರೀರಾಮುಲು 2018ರ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಶ್ರೀರಾಮುಲು ಸಹೋದರ ಸಣ್ಣ ಪಕೀರಪ್ಪ, ಮತ್ತು ಕಂಪ್ಲಿಯಲ್ಲಿ ಅಳಿಯ ಸುರೇಶ್ ಬಾಬು ಮತ್ತು 2019ರ ಲೋಕಸಭೆ ಉಪಚುನಾವಣೆಯಲ್ಲಿ ಸಹೋದರಿ ಜೆ. ಶಾಂತಾ ಅವರನ್ನೇಕೆ ಗೆಲ್ಲಿಸಲಾಗಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಇದೆ ಬೀದಿ ಬದಿ ರಾಜಕಾರಣಿ 2004ರಲ್ಲಿ ಶ್ರೀರಾಮುಲು ಅವರನ್ನು ಗೆಲ್ಲಿಸಿದ್ದು ಮರೆತಿದ್ದಾರೆ. ದೇಶದ ಪ್ರಧಾನಿಗಳು ಕೂಡ ಬೀದಿ ಬದಿಯಲ್ಲಿ ಟೀ ಮಾರಿದ್ದರು ಅನ್ನೊದು ಅವರಿಗೆ ತಿಳಿದಂತಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು: ಶ್ರೀರಾಮುಲು ಹೀಗೆ ಹೇಳಿದ್ಯಾಕೆ?
ನಾಗೇಂದ್ರ ವೈಲೆಂಟ್ ಆಗ್ತಿದ್ದಂತೆ ಶ್ರೀರಾಮುಲು ಸೈಲೆಂಟ್: ಮಾದ್ಯಮಗಳ ಮುಂದೆ ಶಾಸಕ ನಾಗೇಂದ್ರ ವೈಲೆಂಟ್ ಆಗ್ತಿದ್ದಂತೆ ಸೈಲೆಂಟ್ ಆದ ಶ್ರೀರಾಮುಲು ನಾನು ನಾಗೇಂದ್ರ ಬಗ್ಗೆ ಮಾತನಾಡೇ ಇಲ್ಲ ಎಂದಿದ್ದಾರೆ. ಯಾವ ಕಾರಣಕ್ಕೂ ಅವರ ಬಗ್ಗೆ ಮಾತನಾಡೋದು ಇಲ್ಲ ಇದೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ತೆಪೆ ಹಚ್ಚೋ ಕೆಲಸವನ್ನು ಮಾಡಿದ್ದಾರೆ. ಅದೇನೆ ಇರಲಿ ಒಂದು ಕಾಲದ ಸ್ನೇಹಿತರಿಗ ಬದ್ಧವೈರಿಗಳಂತೆ ಕಣದಲ್ಲಿ ಪೈಪೋಟಿ ಮಾಡಲು ಸಿದ್ದರಾಗುತ್ತಿದ್ಧಾರೆ.