
ಬೆಂಗಳೂರು (ಅ.16): ‘ದೇಶದ ಪ್ರಗತಿಗೆ ಬೆಂಗಳೂರು ಕೊಡುಗೆ ಅಪಾರ. ಮೂಲಸೌಕರ್ಯ, ಮಾನವ ಸಂಪನ್ಮೂಲ, ನವೋದ್ಯಮ, ಅನ್ವೇಷಣೆ ಎಲ್ಲ ವಿಚಾರದಲ್ಲೂ ಬೆಂಗಳೂರಿಗೆ ಸರಿಸಮನಾದ ನಗರ ದೇಶದಲ್ಲಿ ಮತ್ತೊಂದಿಲ್ಲ. ಬೇರೆಯವರು ತಮ್ಮನ್ನು ಮಾರ್ಕೆಟಿಂಗ್ ಮಾಡಿಕೊಳ್ಳಲು ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ’ ಎಂದು ಆಂಧ್ರಪ್ರದೇಶ ಸಚಿವ ನಾರಾ ಲೋಕೇಶ್ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.
ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು ವಿಚಾರವಾಗಿ ಮಾತನಾಡಿರುವ ನಾರಾ ಲೋಕೇಶ್ ಆಗಲಿ, ಬೇರೆ ಯಾರ ಹೇಳಿಕೆಗೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಬೆಂಗಳೂರಿನಲ್ಲಿ 25 ಲಕ್ಷ ಐಟಿ ವೃತ್ತಿಪರರು, ಎರಡು ಲಕ್ಷ ವಿದೇಶಿಗರು ಕೆಲಸ ಮಾಡುತ್ತಿದ್ದಾರೆ. ದೇಶದ ಪ್ರಗತಿಯಲ್ಲಿ ಬೆಂಗಳೂರಿನ ಕೊಡುಗೆ ಅಪಾರ. ಕೇಂದ್ರ ಸರ್ಕಾರಕ್ಕೆ ಸುಮಾರು 40% ತೆರಿಗೆ ಆದಾಯ ಇಲ್ಲಿಂದಲೇ ಹೋಗುತ್ತಿದೆ. ಹೀಗಾಗಿ ಅವರು (ಲೋಕೇಶ್) ತಮ್ಮ ಬಗ್ಗೆ ಮಾರ್ಕೆಟಿಂಗ್ ಮಾಡಿಕೊಳ್ಳಲು ಮಾತನಾಡುತ್ತಾರೆ ಎಂದು ಹೇಳಿದರು.
ಬೇರೆಯವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಲ್ಲ. ಅವರು ಏನಾದರೂ ಮಾಡಿಕೊಳ್ಳಲಿ. ಅವರಿಗೆ ಕೇಂದ್ರ ಸರ್ಕಾರವೂ ಸಹಾಯ ಮಾಡಲಿ. ಆದರೆ ಬೆಂಗಳೂರಿಗೆ ಸರಿಸಮನಾಗಲು ಸಾಧ್ಯವಿಲ್ಲ. ಎಷ್ಟು ವಿದೇಶಿ ನಾಯಕರು ನನ್ನನ್ನು ಸಂಪರ್ಕಿಸುತ್ತಿದ್ದಾರೆ ಎಂದು ನಮಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು. ನಾನು ಹಾಗೂ ಐಟಿ ಸಚಿವರು, ಬೃಹತ್ ಕೈಗಾರಿಕೆ ಸಚಿವರು ಕೂತು ಚರ್ಚೆ ಮಾಡುತ್ತೇವೆ. ವಿದೇಶಿ ಕಂಪನಿಗಳು ಇಷ್ಟು ದಿನ ಬೆಂಗಳೂರಿನಲ್ಲಿ ಬಾಡಿಗೆ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಅಮೆರಿಕದಲ್ಲಿನ ಬೆಳವಣಿಗೆ ನಂತರ ಈಗ ಅವರು ಸ್ವಂತ ಜಾಗ ಖರೀದಿಗೆ ಮುಂದಾಗುತ್ತಿದ್ದಾರೆ. ತಮ್ಮದೇ ಸ್ವಂತ ಕ್ಯಾಂಪಸ್ ಹೊಂದಲು ಮುಂದಾಗಿದ್ದಾರೆ. ಇದು ಬೆಂಗಳೂರಿನ ಶಕ್ತಿ ಎಂದು ಸಮರ್ಥಿಸಿಕೊಂಡರು.
ಗೂಗಲ್ ಎಐ ಹಬ್ ಆಂಧ್ರ ಪ್ರದೇಶಕ್ಕೆ ಹೋಗಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಅವರು, ಹೋಗುವವರಿಗೆ ನಾವು ಬೇಡ ಎನ್ನಲು ಸಾಧ್ಯವೇ? ಅವರು ಹೆಚ್ಚಿನ ವಿನಾಯಿತಿ ಕೊಡುತ್ತಾರೆ ಎಂದು ಹೋಗುವುದಾದರೆ ಹೋಗಲಿ. ಅವರಿಗೂ ಎಲ್ಲ ಕಡೆ ನೋಡಿ ಅನುಭವವಾಗಲಿ ಎಂದು ಹೇಳಿದರು. ಬೆಂಗಳೂರನ್ನು ಯಾರೂ ಬಿಟ್ಟು ಹೋಗುವುದಿಲ್ಲ. ನಾವು ದೊಡ್ಡ ದೊಡ್ಡ ವಿನಾಯಿತಿ ನೀಡುತ್ತೇವೆ ಎಂದು ಜಾಹೀರಾತು ಹಾಕಿ ಯಾರನ್ನೂ ಕರೆಯುವ ಅಗತ್ಯವಿಲ್ಲ. ಬೆಂಗಳೂರಿನಲ್ಲಿರುವ ಎಲ್ಲ ಸೌಲಭ್ಯಗಳು ಹೂಡಿಕೆದಾರರನ್ನು ಆಕರ್ಷಿಸುತ್ತಿದೆ ಎಂದು ತಿರುಗೇಟು ನೀಡಿದರು. ವಿದೇಶಿ ಪ್ರತಿನಿಧಿಗಳು ನಮ್ಮನ್ನು ನಿರಂತರವಾಗಿ ಭೇಟಿ ಮಾಡುತ್ತಲೇ ಇದ್ದಾರೆ. ನ.12 ರಂದು ಸಿಂಗಾಪುರದ ಉದ್ಯಮಿಗಳ ನಿಯೋಗ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅನೇಕ ಖಾಸಗಿ ವಿವಿಗಳು, ಸಂಸ್ಥೆಗಳು ಬೆಂಗಳೂರಿನಲ್ಲಿ ತಮ್ಮ ಸಂಸ್ಥೆ ಆರಂಭಿಸಲು ಬರುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.