ಬಿಜೆಪಿ ಸಭಾತ್ಯಾಗ ಮಾಡಿದರೂ ಸದನದಲ್ಲೇ ಕೂತ ಎಸ್‌ಟಿಎಸ್‌!

By Kannadaprabha News  |  First Published Dec 7, 2023, 4:41 AM IST

ಮುಸ್ಲಿಮರ ಪರ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ವಾಪಸ್‌ಗಾಗಿ ಬಿಜೆಪಿ ಆಗ್ರಹಿಸಿ ವಿಧಾನಸಭೆಯಿಂದ ಸಭಾತ್ಯಾಗ ಮಾಡಿದ ಪಕ್ಷದ ಶಾಸಕರು ಎಲ್ಲರೂ ತೆರಳುತ್ತಿದ್ದರೂ ಕುರ್ಚಿ ಬಿಟ್ಟು ಹೊರಹೋಗದ ಎಸ್ ಟಿ ಸೋಮಶೇಖರ್. ಪಕ್ಷದ ನಾಯಕರು ಮನವೊಲಿಸಿದರೂ ಸಭತ್ಯಾಗ ಮಾಡದ ಸೋಮಶೇಖರ್. ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗುತ್ತಿರುವ ಶಾಸಕನ ನಡೆಯಿಂದ ಬಿಜೆಪಿ ಮುಜುಗರ ಅನುಭವಿಸುವಂತಾಯಿತು. 


ವಿಧಾನಸಭೆ (ಡಿ.7) : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಮುಸ್ಲಿಂ ಪರ ಹೇಳಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಬಿಜೆಪಿ ಸದಸ್ಯರೆಲ್ಲರೂ ಬುಧವಾರ ಸಭಾತ್ಯಾಗ ಮಾಡಿದರೂ ಕಾಂಗ್ರೆಸ್‌ಗೆ ಮರಳಲಿದ್ದಾರೆ ಎನ್ನಲಾಗುತ್ತಿರುವ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಮಾತ್ರ ಸದನದಲ್ಲೇ ಕುಳಿತಿದ್ದು ಗಮನ ಸೆಳೆಯಿತು.

ಸಭಾತ್ಯಾಗಕ್ಕೆ ಮುಂದಾದ ವೇಳೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷರ ಬಿ.ವೈ.ವಿಜಯೇಂದ್ರ ಹಾಗೂ ಇನ್ನೂ ಹಲವು ಸದಸ್ಯರು ಸದನದಿಂದ ಹೊರಗೆ ಹೋಗೋಣ ಬನ್ನಿ ಎಂದು ಖುದ್ದಾಗಿ ತೆರಳಿ ಕರೆದರೂ ಎಸ್‌.ಟಿ.ಸೋಮಶೇಖರ್‌ ತಮ್ಮ ಆಸನದಿಂದ ಏಳಲಿಲ್ಲ. ನೀವು ಹೋಗಿ ನಾನು ಬರೋದಿಲ್ಲ ಎನ್ನುವ ಮೂಲಕ ಬಿಜೆಪಿಗೆ ಇರುಸು ಮುರುಸು ಉಂಟುಮಾಡಿದರು.

Tap to resize

Latest Videos

ನಾನು ಸಿದ್ದರಾಮಯ್ಯರ ವಕ್ತಾರನಲ್ಲ; ಬಿಕೆ ಹರಿಪ್ರಸಾದ ಪರೋಕ್ಷ ಅಸಮಾಧಾನ

ಮುಸ್ಲಿಂ ಸಮುದಾಯದ ಅಭಿವೃದ್ಧಿ 10 ಸಾವಿರ ಕೋಟಿ ರು.ಗೆ ಆಕ್ಷೇಪ

ಅಧಿವೇಶನದ ವೇಳೆ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ 10 ಸಾವಿರ ಕೋಟಿ ರು. ಅನುದಾನ ನೀಡುವುದಾಗಿ ಸಮಾವೇಶವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸದನದಲ್ಲಿ ತೀವ್ರ ವಾಕ್ಸಮರ ನಡೆಯಿತು. ಇದೇ ವೇಳೆ ಆಡಳಿತ ಪಕ್ಷದ ಸದಸ್ಯರ ವಿರುದ್ಧ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ‘ತಾಕತ್‌’ ಪದ ಬಳಕೆ ಮಾಡಿದ್ದು ಇನ್ನಷ್ಟು ಕೋಲಾಹಲಕ್ಕೆ ಕಾರಣವಾಯಿತು. ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಅವರ ಹೇಳಿಕೆ ಬಗ್ಗೆ ಸಚಿವರು ಸಮರ್ಥನೆ ನೀಡಿದರು. ಆದರೆ, ಇದಕ್ಕೆ ಬಗ್ಗದ ಬಿಜೆಪಿ ಸದಸ್ಯರು ಸದನದಿಂದ ಸಭಾತ್ಯಾಗ ಮಾಡಿದರು.

ಇದಕ್ಕೂ ಮುನ್ನ ಬಿಜೆಪಿ ಸದಸ್ಯ ಸುನೀಲ್‌ ಕುಮಾರ್‌ ಪ್ರಶ್ನೋತ್ತರ ಅವಧಿ ಬಳಿಕ ಮುಖ್ಯಮಂತ್ರಿಗಳ ಹೇಳಿಕೆಯನ್ನು ಪ್ರಸ್ತಾಪಿಸಿದರು. ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಯಾವುದೇ ಭರವಸೆಗಳನ್ನು ನೀಡಬಾರದು ಎಂದು ನಾವೇ ನಿಯಮಗಳನ್ನು ಹಾಕಿಕೊಂಡಿದ್ದೇವೆ. ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಅಧಿವೇಶನ ಸಮಯದಲ್ಲಿ ನಿಯಮ ಉಲ್ಲಂಘಿಸಿ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ 10 ಸಾವಿರ ಕೋಟಿ ರು. ಅನುದಾನ ನೀಡುವುದಾಗಿ ಹೇಳಿದ್ದಾರೆ ಎಂದು ಮಾಧ್ಯಮದಲ್ಲಿ ಬಂದಿದೆ. ಇದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು. ಈ ವೇಳೆ ಅಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಮುಖ್ಯಮಂತ್ರಿಗಳ ಹೇಳಿಕೆಯನ್ನು ಸಮರ್ಥಿಸಿಕೊಂಡಾಗ ಕೋಲಾಹಲ ಸೃಷ್ಟಿಯಾಯಿತು.

 

ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಮಾತನಾಡಿ, ಸದಸ್ಯರಿಗೆ ಮಾಹಿತಿ ಕೊರತೆ ಇದ್ದು, ಬಜೆಟ್‌ನಲ್ಲಿ ಈಗಾಗಲೇ ಅನುದಾನ ನೀಡಲಾಗಿದೆ. ಇದನ್ನು 10 ಸಾವಿರ ಕೋಟಿ ರು.ಗೆ ಹೆಚ್ಚಳಕ್ಕೆ ಪ್ರಯತ್ನಿಸಲಾಗುವುದು ಎಂದಿದ್ದಾರೆ. ಇದರಲ್ಲಿ ತಪ್ಪೇನಿದೆ? ಸದನದ ಸಂಪ್ರದಾಯಕ್ಕೆ ಧಕ್ಕೆಯಾಗುವ ಯಾವ ಅಂಶಗಳೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಆದರೂ ಪ್ರತಿಪಕ್ಷದ ಸದಸ್ಯರು ಗಲಾಟೆಯನ್ನು ಮುಂದುವರಿಸಿದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬಿಜೆಪಿಯವರಿಗೆ ಅಲ್ಪಸಂಖ್ಯಾತರ ಮೇಲೆ ದ್ವೇಷ. ಅದಕ್ಕೆ ಮುಸ್ಲಿಮರ ಅಭಿವೃದ್ಧಿಗೆ ಹಣ ನೀಡುತ್ತೇವೆ ಎಂದಾಕ್ಷಣ ಗದ್ದಲ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಸಚಿವರಾದ ಎಂ.ಬಿ.ಪಾಟೀಲ್, ಪ್ರಿಯಾಂಕ್‌ ಖರ್ಗೆ ಸೇರಿದಂತೆ ಇತರರು, ಮುಖ್ಯಮಂತ್ರಿಯವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಸಮರ್ಥಿಸಿಕೊಂಡರು.

ಈ ನಡುವೆ, ಆಡಳಿತ ಪಕ್ಷದ ಸದಸ್ಯರು, ಬಿಜೆಪಿಯವರು ಪ್ರಸ್ತಾಪಿಸಿರುವ ವಿಷಯ ಶೂನ್ಯವೇಳೆಯಲ್ಲಿ ತೆಗೆದುಕೊಳ್ಳಲು ಬರುವುದಿಲ್ಲ ಎಂದು ಕ್ರಿಯಾಲೋಪ ಎತ್ತಿದರು.

ಮುಸ್ಲಿಮರಿಗೆ ಈ ದೇಶದ ಸಂಪತ್ತು ಹಂಚಿದ್ರೆ ತಪ್ಪೇನು? ಅಬಕಾರಿ ಸಚಿವ ಯಾಕೆ ಹಿಂಗಂದ್ರು!?

ಮೊದಲು ರೈತರಿಗೆ ಪರಿಹಾರ ನೀಡಿ: ಆರ್ ಅಶೋಕ್

ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ , ಬರದಿಂದ ಕಂಗೆಟ್ಟಿರುವ ರೈತರಿಗೆ ಒಂದು ಪೈಸೆ ಪರಿಹಾರ ಕೊಡಲು ಯೋಗ್ಯತೆ ಇಲ್ಲದವರು ಒಂದು ಸಮುದಾಯಕ್ಕೆ 10 ಸಾವಿರ ಕೋಟಿ ರು. ಕೊಡುವುದಾಗಿ ಹೇಳುವುದು ಎಷ್ಟು ಸರಿ? ಮುಖ್ಯಮಂತ್ರಿಗಳು ಕೂಡಲೇ ತಮ್ಮ ಹೇಳಿಕೆ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು. ಇದು ಆಡಳಿತ ಪಕ್ಷದವರಲ್ಲಿ ಮತ್ತಷ್ಟು ಕೋಪಕ್ಕೆ ಕಾರಣವಾಯಿತು. ತಮ್ಮ ವಿರುದ್ಧ ಹರಿಹಾಯ್ದ ಆಡಳಿತ ಪಕ್ಷದವರ ವಿರುದ್ಧ ಕಿಡಿಕಾರಿದ ಅಶೋಕ್‌, ನನಗೆ ಮಾತನಾಡಲು ಸಂವಿಧಾನ ಬದ್ಧ ಹಕ್ಕಿದೆ. ನನಗೆ ಅಡ್ಡಿಪಡಿಸಿದರೆ ನಿಮ್ಮ ನಾಯಕರಾದ ಮುಖ್ಯಮಂತ್ರಿಗಳು ಮಾತನಾಡುವಾಗ ಅಡ್ಡಿಪಡಿಸಲು ನಮಗೂ ತಾಕತ್‌ ಇದೆ. ನಾವೂ 85 ಜನ ಇದ್ದೇವೆ ಎಂದರು. ಈ ವೇಳೆ ಸದನದಲ್ಲಿ ಗದ್ದಲ ಏರ್ಪಟ್ಟಿತು.

ಸದನದಲ್ಲಿ ಕೋಲಾಹಲ, ಗದ್ದಲ ಉಂಟಾಯಿತಲ್ಲದೇ, ಸರ್ಕಾರದ ಸಮರ್ಥನೆ ಒಪ್ಪಿಕೊಳ್ಳದೆ ಪ್ರತಿಪಕ್ಷದ ಸದಸ್ಯರು ಸಭಾತ್ಯಾಗ ನಡೆಸಿದರು. ನಂತರವೂ ಕಾಂಗ್ರೆಸ್‌ ಸದಸ್ಯರು ಬಿಜೆಪಿ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

click me!