ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದಿದ್ದರೂ ಮುಖ್ಯಮಂತ್ರಿಗಳ ಪೂರ್ವ ಅನುಮತಿ ಇಲ್ಲದೆ ಇಲಾಖಾ ಹಂತದಲ್ಲೇ ಎ, ಬಿ,ಸಿ ಹಾಗೂ ಡಿ ಗ್ರೂಪ್‌ನ ಸಿಬ್ಬಂದಿಯ ವರ್ಗಾವಣೆ ಆದೇಶ ಹೊರಡಿಸುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಮುಖ್ಯಮಂತ್ರಿಗಳ ಪೂರ್ವಾನುಮತಿ ಇಲ್ಲದೆ ವರ್ಗಾವಣೆ ಆದೇಶ ಮಾಡಿದರೆ ಇಲಾಖಾ ಮುಖ್ಯಸ್ಥರನ್ನೇ ಹೊಣೆ ಮಾಡಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಬೆಂಗಳೂರು (ಸೆ.03): ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದಿದ್ದರೂ ಮುಖ್ಯಮಂತ್ರಿಗಳ ಪೂರ್ವ ಅನುಮತಿ ಇಲ್ಲದೆ ಇಲಾಖಾ ಹಂತದಲ್ಲೇ ಎ, ಬಿ,ಸಿ ಹಾಗೂ ಡಿ ಗ್ರೂಪ್‌ನ ಸಿಬ್ಬಂದಿಯ ವರ್ಗಾವಣೆ ಆದೇಶ ಹೊರಡಿಸುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಮುಖ್ಯಮಂತ್ರಿಗಳ ಪೂರ್ವಾನುಮತಿ ಇಲ್ಲದೆ ವರ್ಗಾವಣೆ ಆದೇಶ ಮಾಡಿದರೆ ಇಲಾಖಾ ಮುಖ್ಯಸ್ಥರನ್ನೇ ಹೊಣೆ ಮಾಡಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಗ್ರೂಪ್ -ಎ, ಬಿ,ಸಿ ಮತ್ತು ಡಿ ವರ್ಗದ ಅಧಿಕಾರಿ, ನೌಕರರಿಗೆ ಶೇ.6ರಷ್ಟುಮೀರದಂತೆ ಜೂ.1 ರಿಂದ ಜು.3ರವರೆಗೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖಾ ಸಚಿವರಿಗೆ ಅಧಿಕಾರ ನೀಡಲಾಗಿತ್ತು. ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದ ಬಳಿಕ ಯಾವುದೇ ವರ್ಗಾವಣೆ ಮಾಡಬೇಕಿದ್ದರೂ ಮುಖ್ಯಮಂತ್ರಿಗಳ ಅನುಮೋದನೆ ಕಡ್ಡಾಯ ಎಂದು ಮೊದಲೇ ತಿಳಿಸಲಾಗಿತ್ತು.
ಆದರೂ, ಕೆಲ ಇಲಾಖೆಗಳಲ್ಲಿ ಅಧಿಕಾರಿಗಳು ಹಾಗೂ ಸಚಿವರು ಇಲಾಖಾ ಮಟ್ಟದಲ್ಲೇ ವರ್ಗಾವಣೆ ನಡೆಸುತ್ತಿದ್ದಾರೆ. ಬಳಿಕ ಘಟನೋತ್ತರ ಅನುಮೋದನೆಗಾಗಿ ಮುಖ್ಯಮಂತ್ರಿಗಳಿಗೆ ಕಡತ ಸಲ್ಲಿಸುತ್ತಿದ್ದಾರೆ ಎಂಬ ಆರೋಪಗಳು ಹೆಚ್ಚಾಗಿತ್ತು. ಈ ಬಗ್ಗೆ ಕೆಲಸ ಶಾಸಕರು ಮುಖ್ಯಮಂತ್ರಿಗಳಿಗೆ ದೂರನ್ನೂ ನೀಡಿದ್ದರು. ಅಲ್ಲದೆ ಮುಖ್ಯಮಂತ್ರಿಗಳ ಕಚೇರಿಗೂ ವರ್ಗಾವಣೆ ಆಗಿರುವ ಆದೇಶಗಳ ಘಟನೋತ್ತರ ಅನುಮೋದನೆಗೆ ಹಲವು ಕಡತಗಳು ಬಂದಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಕಾಡನ್ನು ಉಳಿಸಿದರೆ ಕಾಡು ನಮ್ಮನ್ನು ಉಳಿಸುತ್ತದೆ: ಸಚಿವ ಮಹದೇವಪ್ಪ
ಇಲಾಖಾ ಮುಖ್ಯಸ್ಥರೇ ಹೊಣೆ: ಈ ಹಿನ್ನೆಲೆಯಲ್ಲಿ ಸೆ.1 ರಂದು ಶುಕ್ರವಾರ ಸುತ್ತೋಲೆ ಹೊರಡಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ನಿಗದಿತ ವರ್ಗಾವಣೆ ಅವಧಿ ಮುಗಿದ ಬಳಿಕ ಯಾವುದೇ ವರ್ಗಾವಣೆ ಮಾಡುವಂತಿಲ್ಲ. ಒಂದು ವೇಳೆ ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಮಾಡಬೇಕಾದರೆ ಮುಖ್ಯಮಂತ್ರಿಗಳ ಪೂರ್ವ ಅನುಮೋದನೆ ಪಡೆಯಬೇಕು. ಪೂರ್ವ ಅನುಮೋದನೆ ಪಡೆಯದೆ ಯಾವುದೇ ವರ್ಗಾವಣೆ ಮಾಡಿದರೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಇಲಾಖಾ ಮುಖ್ಯಸ್ಥರನ್ನು ನೇರ ಜವಾಬ್ದಾರರನ್ನಾಗಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.