ಪ್ರಾಕೃತಿಕ ವಿಕೋಪಗಳನ್ನು ಸಮರ್ಪಕವಾಗಿ ಎದುರಿಸಲು ಎಲ್ಲ ಇಲಾಖೆಗಳ ಸಹಕಾರ ಅತಿ ಅವಶ್ಯಕ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸನ್ನದ್ಧರಾಗಬೇಕು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸೂಚಿಸಿದರು.
ಹುಕ್ಕೇರಿ (ಜೂ.22): ಪ್ರಾಕೃತಿಕ ವಿಕೋಪಗಳನ್ನು ಸಮರ್ಪಕವಾಗಿ ಎದುರಿಸಲು ಎಲ್ಲ ಇಲಾಖೆಗಳ ಸಹಕಾರ ಅತಿ ಅವಶ್ಯಕ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸನ್ನದ್ಧರಾಗಬೇಕು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸೂಚಿಸಿದರು. ಇಲ್ಲಿನ ತಾಲೂಕು ಪಂಚಾಯತಿ ಸಭಾಭವನದಲ್ಲಿ ಬುಧವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ಎಲ್ಲ ಇಲಾಖೆಯವರ ಪಾತ್ರ ಪ್ರಾಮುಖ್ಯವಾಗಿದೆ. ಸಂಭವನೀಯ ಅತಿವೃಷ್ಟಿಮತ್ತು ಅನಾವೃಷ್ಟಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಗಾ ವಹಿಸಬೇಕು ಎಂದು ಆದೇಶಿಸಿದರು.
ಜನರಿಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಸಬೇಕು. ಜಲಮೂಲಗಳನ್ನು ಪತ್ತೆ ಮಾಡಿ ಅಗತ್ಯಬಿದ್ದಲ್ಲಿ ಕೊಳವೆಭಾವಿ ಕೊರೆಯಿಸಬೇಕು. ಟ್ಯಾಂಕರ್ ಮೂಲಕವೂ ನೀರು ಸರಬರಾಜಿಗೆ ಸಿದ್ಧತೆ ಮಾಡಿಕೊಳ್ಳಬೇಕು. ಜಾನುವಾರುಗಳಿಗೆ ಅಗತ್ಯ ಮೇವು ಸಂಗ್ರಹಿಸಿಟ್ಟುಕೊಳ್ಳಬೇಕು. ದುಡಿಯುವ ಕೈಗಳಿಗೆ ಉದ್ಯೋಗ ಖಾತರಿಯಲ್ಲಿ ಕೆಲಸ ನೀಡಬೇಕು ಎಂದರು. ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿ ಬಾಕಿ ಉಳಿದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಮೃತಪಟ್ಟಜಾನುವಾರುಗಳಿಗೆ ಪರಿಹಾರ ಪ್ರಕ್ರಿಯೆ ಮತ್ತು ಬೀಜ ವಿತರಣೆಯನ್ನು ಸರಳೀಕರಣಗೊಳಿಸಬೇಕು.
ಬಜೆಟ್‌ನಲ್ಲಿ ಹೆಚ್ಚಿನ ಬದಲಾವಣೆ ಮಾಡದೇ ಹೊಸ ರೂಪ: ಡಿ.ಕೆ.ಶಿವಕುಮಾರ್
ಹಿಡಕಲ್ ಡ್ಯಾಮ್ ಹಿನ್ನೀರಿನ ಪ್ರದೇಶದಲ್ಲಿರುವ ಜಿನರಾಳ ಮತ್ತಿತರ ಹಳ್ಳಿಯ ನಿರಾಶ್ರೀತರಿಗೆ ಸೂಕ್ತ ಪುನರ್ವಸತಿ ಕಲ್ಪಿಸಬೇಕು. ಗೃಹಜ್ಯೋತಿ, ಶಕ್ತಿ, ಗೃಹಲಕ್ಷ್ಮೀ ಸೇರಿದಂತೆ ಕಾಂಗ್ರೆಸ್‌ನ ಗ್ಯಾರಂಟಿಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದರು. ತಾಲೂಕಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ತೆರವುಗೊಳಿಸಬೇಕು. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕೆಲವರ ಮೇಲೆ ಒಂದೇ ಪ್ರಕರಣ ದಾಖಲಾಗಿದ್ದರೂ ರೌಡಿಶೀಟರ್ ತೆರೆಯಲಾಗುತ್ತಿರುವ ದೂರುಗಳಿದ್ದು ಪೊಲೀಸ್ ಅಧಿಕಾರಿಗಳು ಕೂಡಲೇ ಇದನ್ನು ನಿಲ್ಲಿಸಬೇಕು. ಈ ಮೂಲಕ ಅಮಾಯಕರ ಮೇಲೆ ರೌಡಿಶೀಟರ್ ಖಾತೆ ಆಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ಸಂಜಯ ಇಂಗಳೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ, ಸಿಪಿಐ ರಮೇಶ ಛಾಯಾಗೋಳ, ಮುಖಂಡರಾದ ಕಿರಣ ರಜಪೂತ, ಮಂಜುನಾಥ ಪಾಟೀಲ, ದಸ್ತಗೀರ ಬಸ್ಸಾಪುರೆ, ಮಹಾಂತೇಶ ಮಗದುಮ್ಮ, ಇಲಿಯಾಸ್ ಇನಾಮದಾರ, ಮಲ್ಲಿಕಾರ್ಜುನ ರಾಶಿಂಗೆ ಮತ್ತಿತರರು ಉಪಸ್ಥಿತರಿದ್ದರು.
ಪೊಲೀಸ್ ಠಾಣೆಗಳು ರಾಜಿ ಸಂಧಾನ ಕೇಂದ್ರಗಳಾಗಲು ಬಿಡಲ್ಲ: ಸಚಿವ ಪರಮೇಶ್ವರ್
ಆಡಳಿತ ಯಂತ್ರಕ್ಕೆ ಚುರುಕು: ಸಚಿವರಾದ ಬಳಿಕ ಸತೀಶ ಜಾರಕಿಹೊಳಿ ಮೊಟ್ಟಮೊದಲ ಬಾರಿಗೆ ಹುಕ್ಕೇರಿಗೆ ಆಗಮಿಸಿ ತಾಲೂಕಿನ ಅಧಿಕಾರಿಗಳ ಚೊಚ್ಚಲ ಸಭೆ ನಡೆಸಿದರು. ಸಭೆಯಲ್ಲಿ ಜಿಡ್ಡುಗಟ್ಟಿದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸಕ್ಕೆ ಮುಂದಾದರು. ಲೋಕೋಪಯೋಗಿ ಇಲಾಖೆ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಹುದ್ದೆ ಜೊತೆಗೆ ಕ್ಷೇತ್ರ ಪ್ರತಿನಿಧಿಸುವ ಹುಕ್ಕೇರಿ ತಾಲೂಕಿನ ಅಭಿವೃದ್ಧಿಗೆ ಸವಾಲು ಎದುರಿಸಬೇಕಿದೆ. ಸಭೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಿದ ಜಾರಕಿಹೊಳಿ, ಪ್ರಾಕೃತಿಕ ವಿಕೋಪವನ್ನು ಸಮರ್ಥವಾಗಿ ಎದುರಿಸಬೇಕು. ತನ್ಮೂಲಕ ಹೊಸ ಶಕೆ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.