MLC Election: 'ಬಿಜೆಪಿ ಸೇರಿ ವ್ಯಕ್ತಿತ್ವ, ಮೌಲ್ಯ ಕಳೆದುಕೊಂಡ ಹೊರಟ್ಟಿ'

By Kannadaprabha News  |  First Published May 28, 2022, 7:59 AM IST

*  ಕಾಂಗ್ರೆಸ್‌ ಮುಖಂಡ ಪಿ.ಎಚ್‌. ನೀರಲಕೇರಿ, ಆರ್‌.ಎಂ. ಕುಬೇರಪ್ಪ ವಾಗ್ದಾಳಿ
*  ಯಾವುದೇ ಕಾರಣಕ್ಕೂ ಶಿಕ್ಷಕರು ಭಯ ಪಡದೇ ಮತ ಚಲಾಯಿಸಬೇಕ
*  ಬಸವರಾಜ ಗುರಿಕಾರಗೆ ಮತ ನೀಡುವ ಮೂಲಕ ಕ್ಷೇತ್ರದಲ್ಲಿ ಬದಲಾವಣೆ ತರಬೇಕೆಂದು ಮನವಿ
 


ಧಾರವಾಡ(ಮೇ.28): ಬಸವರಾಜ ಹೊರಟ್ಟಿ ಅವರು ತತ್ವ-ಸಿದ್ಧಾಂತದ ಮೇಲೆ ಜಾತ್ಯತೀತ ನಿಲುವಿನ ಮತಗಳನ್ನು ಪಡೆದು ಏಳು ಬಾರಿ ಆಯ್ಕೆಯಾಗಿ ಬಂದಿದ್ದರು. ಆ ತತ್ವ-ಸಿದ್ಧಾಂತ ಗಾಳಿಗೆ ತೂರಿ ನಿರಂತರ ಸಂಘರ್ಷ, ದೇಶವಿಭಜನೆಯ ಶಕ್ತಿ ಹೊಂದಿರುವ, ಜಾತಿ ಮತಾಂಧರ ಪಕ್ಷ (ಬಿಜೆಪಿ) ಸೇರಿ ತಮ್ಮ ವ್ಯಕ್ತಿತ್ವದ ಜತೆಗೆ ಶಿಕ್ಷಕರ ಮೇಲಿನ ಮೌಲ್ಯ ಕಳೆದುಕೊಳ್ಳುವ ಮೂಲಕ ಹೊರಟ್ಟಿಗೆ ಮೊದಲ ಸೋಲಾಗಿದೆ ಎಂದು ಕಾಂಗ್ರೆಸ್‌ ಮುಖಂಡರಾದ ಪಿ.ಎಚ್‌. ನೀರಲಕೇರಿ ಹಾಗೂ ಆರ್‌.ಎಂ. ಕುಬೇರಪ್ಪ ಹೇಳಿದರು.

ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಾ ಶಿಕ್ಷಕರ ನೂರಾರು ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿ, ನಿರಂತರವಾಗಿ ಸಮಸ್ಯೆಗಳನ್ನು ನನೆಗುದಿಗೆ ಇಟ್ಟು, ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದೆ, ಸ್ಪಂದಿಸುವ ಮನೋಭಾವ ವ್ಯಕ್ತಪಡಿಸಿ ಯಾವ ಶಿಕ್ಷಕರು ನೆಮ್ಮದಿ ಇರದಂತೆ ನೋಡಿಕೊಂಡ ಕೀರ್ತಿ ಹೊರಟ್ಟಿಗೆ ಸಲ್ಲುತ್ತದೆ ಎಂದರು.

Tap to resize

Latest Videos

ನೆಚ್ಚಿನ ಕಾರಿನಲ್ಲಿ ಬಂದು ಪತ್ನಿ ಸಮೇತ ನಾಮಪತ್ರ ಸಲ್ಲಿಸಿದ Basavaraj Horatti

ಅನುದಾನರಹಿತ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕನಿಷ್ಠ ವೇತನ, ಸೇವಾಭದ್ರತೆ, ಪಿಂಚಣಿ ಸಿಗದೇ ಇರುವುದು ಬೇಸರದ ಸಂಗತಿ. ಕಳೆದ ಎರಡು ದಶಕಗಳಿಂದ ಕಾಲ್ಪನಿಕ ಬಡ್ತಿ ಸಮಸ್ಯೆ ಇನ್ನೂ ಜೀವಂತವಾಗಿದೆ. ಸದನದಲ್ಲಿ ವಿಷಯ ಪ್ರಸ್ತಾಪ ಮಾಡುವಾಗ ವ್ಯಕ್ತಿತ್ವದ ಪ್ರಚಾರಕ್ಕಾಗಿಯೇ ಮಾಡಿದ್ದಾರೆ ಹೊರತು ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಸುಮಾರು 12 ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ಪಿಂಚಣಿ ವಂಚಿತರನ್ನಾಗಿ ಮಾಡಿದ್ದಾರೆ. ಹೊಸ ಪಿಂಚಣಿಗಾಗಿ ಕರಡು ಜಾರಿಯಾದಾಗ ಹೊರಟ್ಟಿಅವರೇ ಅಧಿಕಾರದಲ್ಲಿದ್ದು ಆಕ್ಷೇಪಣೆ ಸಲ್ಲಿಸದೇ ಈಗ ಹಳೆ ಪಿಂಚಣಿ ಭರವಸೆ ನೀಡುತ್ತಿರುವುದು ಆಶ್ಚರ್ಯ. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಆಗಿರುವ ಹುದ್ದೆ ತುಂಬಲು ಹೋರಾಟ ಮಾಡುವ ಸ್ಥಿತಿಗೆ ಸಂಘಟನೆಗಳು ಬಂದಿರುವದು ದುರ್ದೈವ ಎಂದರು.

ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡು ಹೊರಟ್ಟಿ ಅವರು ಶಿಕ್ಷಕರನ್ನು ಭಯಪಡಿಸುವ ಮೂಲಕ ಮತಗಳನ್ನು ಪಡೆಯುವ ಹುನ್ನಾರ ನಡೆಸಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಪ್ರಭಾವ ಬೀರಿ ಶಿಕ್ಷಕರ ಮತಗಳನ್ನು ಈ ಹಿಂದೆಯೂ ಪಡೆದಿದ್ದು ಅದಕ್ಕೆ ನಮ್ಮ ಧಿಕ್ಕಾರವಿದೆ. ಯಾವುದೇ ಕಾರಣಕ್ಕೂ ಶಿಕ್ಷಕರು ಭಯ ಪಡದೇ ಮತ ಚಲಾಯಿಸಬೇಕು. ಶಿಕ್ಷಕರ ಸಂಘಟನೆಯೇ ಮೂಲ ಮಂತ್ರವಾಗಿಸಿಕೊಂಡಿರುವ ಬಸವರಾಜ ಗುರಿಕಾರ ಅವರಿಗೆ ಮತ ನೀಡುವ ಮೂಲಕ ಕ್ಷೇತ್ರದಲ್ಲಿ ಬದಲಾವಣೆ ತರಬೇಕೆಂದು ನೀರಲಕೇರಿ ಮನವಿ ಮಾಡಿದರು.

ಆರು ಬಾರಿ ಹೊರಟ್ಟಿ ಅವರ ಚುನಾವಣೆ ಮಾಡಿರುವ ತಮಗೆ ತಡವಾಗಿ ಹೊರಟ್ಟಿ ಅವರ ಮನೋಭಾವ ತಿಳಿದು ಇದೀಗ ಸಂಘಟನೆಯಲ್ಲಿ ಮುಂಚೂಣಿಯಲ್ಲಿರುವ ಗುರಿಕಾರ ಅವರಿಗೆ ಒಂದು ಬಾರಿ ಅವಕಾಶ ಕೊಡಿಸಲು ಪ್ರಯತ್ನಿಸುತ್ತಿದ್ದೇನೆ. ಶಾಸಕರಾಗಿ, ಮಂತ್ರಿಯಾಗಿ, ಸಭಾಪತಿಯಾಗಿ ಹೊರಟ್ಟಿಅವರನ್ನು ನೋಡಿದ್ದು ಅವರ ಮೇಲಿನ ಭರವಸೆ ಈಗ ಹೋಗಿದೆ. ಅವರಲ್ಲಿ ಈಗ ಶಿಕ್ಷಕರ ಬಗೆಗಿನ ಯಾವ ಆದರ್ಶಗಳು ಉಳಿದಿಲ್ಲ. ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಿಜೆಪಿ ಸೇರಿದ್ದರಿಂದ ನಮಗೂ ಬೇಸರವಾಗಿದೆ. ಹೊರಟ್ಟಿ ಬರೀ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಮಾತ್ರವಾದರೆ, ಗುರಿಕಾರ ಇಡೀ ರಾಜ್ಯದಲ್ಲಿ ಶಿಕ್ಷಕರ ಸಂಘಟನೆ ಕಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಗುರಿಕಾರ ಅವರನ್ನು ಬೆಂಬಲಿಸುವುದು ಒಳಿತು ಎಂಬ ಅಭಿಪ್ರಾಯವನ್ನು ಶಿಕ್ಷಕರ ಮುಖಂಡ ಆನಂದ ಕುಲಕರ್ಣಿ ವ್ಯಕ್ತಪಡಿಸಿದರು.
 

click me!