ಚುನಾವಣೆಯಲ್ಲಿ ಸೋಲು ಅನುಭವಿಸಿದ ತಮ್ಮ ಸಂಪುಟ ಸಹೋದ್ಯೋಗಿಗಳಾಗಿರುವ ಡಾ.ಕೆ. ಸುಧಾಕರ್ ಮತ್ತು ವಿ. ಸೋಮಣ್ಣ ಅವರನ್ನು ಖುದ್ದಾಗಿ ಭೇಟಿ ಮಾಡಿ ಸಮಾಧಾನ ಮಾಡಿದ ಬಸವರಾಜ ಬೊಮ್ಮಾಯಿ
ಬೆಂಗಳೂರು(ಮೇ.17): ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚುನಾವಣೆಯಲ್ಲಿ ಸೋಲು ಅನುಭವಿಸಿದ ತಮ್ಮ ಸಂಪುಟ ಸಹೋದ್ಯೋಗಿಗಳಾಗಿರುವ ಡಾ.ಕೆ. ಸುಧಾಕರ್ ಮತ್ತು ವಿ. ಸೋಮಣ್ಣ ಅವರನ್ನು ಖುದ್ದಾಗಿ ಭೇಟಿ ಮಾಡಿ ಸಮಾಧಾನ ಮಾಡಿದ್ದಾರೆ.
ಮಂಗಳವಾರ ಉಭಯ ಸಚಿವರ ನಿವಾಸಕ್ಕೆ ತೆರಳಿದ ಬೊಮ್ಮಾಯಿ ಅವರು ಕೆಲಕಾಲ ಮಾತನಾಡಿ ಚುನಾವಣೆಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು. ಅಲ್ಲದೆ, ಸೋಲಿನಿಂದ ವಿಚಲಿತರಾಗದೆ ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷ ಸಂಘಟನೆ ಬಲಪಡಿಸುವತ್ತ ಗಮನಹರಿಸೋಣ ಎಂಬ ಮಾತನ್ನೂ ಹೇಳಿದರು.
ಬಿಜೆಪಿ ಸೋಲಿನ ಬಗ್ಗೆ ಆರ್‌ಎಸ್‌ಎಸ್‌ಗೆ ಬೊಮ್ಮಾಯಿ ವಿವರಣೆ
ಸೋಮಣ್ಣ ಅವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ‘ಸೋಮಣ್ಣನವರು ಯಾವಾಗ ಹಿನ್ನೆಡೆಯಾದರೂ ಮತ್ತೆ ಪುಟಿದೇಳುತ್ತಾರೆ. ಬರುವ ದಿನಗಳಲ್ಲಿ ಅವರಿಗೆ ಒಳ್ಳೆಯ ಅವಕಾಶ ಸಿಗಲಿದೆ. ನಾವು ಅವರ ಜೊತೆ ನಿಂತಿದ್ದೇವೆ’ ಎಂದರು.
‘ಸೋಮಣ್ಣ ನಮ್ಮ ಹಿರಿಯ ನಾಯಕರು. ಸುಮಾರು 40 ವರ್ಷ ಜನಸೇವೆ ಮಾಡಿದವರು. ವಸತಿ ಸಚಿವರಾಗಿ ಅವರು ಬೆಂಗಳೂರಿನ ಅಭಿವೃದ್ಧಿಗೆ ಅನೇಕ ಕೊಡುಗೆ ಕೊಟ್ಟಿದ್ದಾರೆ. ಗೋವಿಂದರಾಜ ನಗರವನ್ನು ಮಾದರಿ ಕ್ಷೇತ್ರ ಮಾಡಿದ್ದಾರೆ. ಸೋಲು ಗೆಲುವು ರಾಜಕಾರಣದಲ್ಲಿ ಇದ್ದಿದ್ದೆ. ಅದನ್ನು ಮೀರಿ ಮತ್ತೆ ಬರಬೇಕು. ಸೋಮಣ್ಣ ಮತ್ತು ಪಕ್ಷ ಎರಡು ಕೂಡ ಆ ಕೆಲಸ ಮಾಡಲಿದೆ’ ಎಂದು ನುಡಿದರು.