
ವಿಧಾನಸಭೆ[ಮಾ.17]: ಆರಂಭದಲ್ಲಿ ವರ್ಕ್ ಇನ್ಸ್‌ಪೆಕ್ಟರ್ ಆಗಿದ್ದ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರು ಸಾವಿರಾರು ಕೋಟಿ ರು. ಆಸ್ತಿ ಗಳಿಸಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ಅವರ ಆರೋಪ ಸಾಬೀತಾದರೆ ಈ ಕ್ಷಣವೇ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ವಿಧಾನಸಭೆಯಲ್ಲಿ ಸಂವಿಧಾನದ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರ ಬಗ್ಗೆ ಯತ್ನಾಳ್ ಹಗುರವಾಗಿ ಮಾತನಾಡಿದ್ದಾರೆ. ವರ್ಕ್ ಇನ್ಸ್‌ಪೆಕ್ಟರ್ ಆಗಿದ್ದವರು ಸಾವಿರಾರು ಕೋಟಿ ರು. ಆಸ್ತಿ ಗಳಿಸಿದ್ದಾರೆ ಎಂದು ಹೇಳಿದರು. ಆಧಾರ ರಹಿತವಾಗಿ ವ್ಯಕ್ತಿಯ ತೇಜೋವಧೆಗೆ ಪ್ರಯತ್ನಿಸಬಾರದು. ಒಂದು ವೇಳೆ ನಿಮ್ಮ ಬಳಿ ಆಧಾರಗಳಿದ್ದರೆ ಸಾಬೀತುಪಡಿಸಿ. ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದರು.
1983-85ರ ಸಮಯದಲ್ಲಿ ಪಕ್ಷದ ಅಭ್ಯರ್ಥಿಯಾಗಿ ನಿಲ್ಲುವವರಿಗೆ ನಾಯಕರು 5 ಸಾವಿರ ರು. ನೀಡಿದರೆ ಸಾಕು, ಕಾಲಿಗೆ ನಮಸ್ಕರಿಸಿ ಹೋಗುತ್ತಿದ್ದರು. 2004ರಲ್ಲಿ ಚುನಾವಣೆ ನಡೆಸಲು ಎಚ್.ಡಿ. ದೇವೇಗೌಡರು ರಾಜಾಜಿನಗರದ ಬಡ್ಡಿ ಚೆನ್ನಮ್ಮನ ಬಳಿ ಖಾಲಿ ಚೆಕ್ ನೀಡಿ 5 ಲಕ್ಷ ರು. ಸಾಲ ಮಾಡಬೇಕಾಗಿ ಬಂದಿತ್ತು. ಅಂತಹ ರಾಜಕಾರಣ ಮಾಡಿಕೊಂಡು ಬಂದವರನ್ನು ಆಧಾರರಹಿತವಾಗಿ ಟೀಕಿಸುವುದು ಸರಿಯಲ್ಲ ಎಂದು ಹೇಳಿದರು.
ನಾನು ತೆಗೆದುಕೊಂಡಿದ್ದೇನೆ, ಕೊಟ್ಟಿದ್ದೇನೆ:
ಪ್ರಸ್ತುತ ಕಾಲದಲ್ಲಿ ಯಾರು ಶಾಸಕರಾಗಿ ಆಯ್ಕೆಯಾದರೂ ಹಣ ವೆಚ್ಚ ಮಾಡಿಯೇ ಗೆಲ್ಲಬೇಕು. ಗೆದ್ದ ಮೇಲೆ ಮುಂದಿನ ಐದು ವರ್ಷಗಳ ಬಳಿಕ ಬರುವ ಚುನಾವಣೆಯದ್ದೇ ಚಿಂತೆಯಾಗಿರುತ್ತದೆ. ನನ್ನನ್ನೂ ಸೇರಿ ಎಲ್ಲಾ ಪಕ್ಷಗಳ ಸದಸ್ಯರದ್ದೂ ಇದೇ ಸ್ಥಿತಿ. ಆದರೆ, ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸಾಕಷ್ಟುವ್ಯತ್ಯಾಸ ಇದೆ. ನಾನು ತೆಗೆದುಕೊಂಡಿದ್ದೇನೆ ಹಾಗೂ ಕೊಟ್ಟಿದ್ದೇನೆ. ಆದರೆ ಆಸ್ತಿ ಮಾಡಿಲ್ಲ, ಜನರೇ ನನ್ನ ಆಸ್ತಿ ಎಂದು ಹೇಳಿದರು.
ಈ ವೇಳೆ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಮಧ್ಯಪ್ರವೇಶಿಸಿ, ಎಚ್.ಡಿ. ದೇವೇಗೌಡರು ಮಂತ್ರಿಯಾಗಲು 18-20 ವರ್ಷ ಬೇಕಾಯಿತು. ನಾನು ಸಚಿವನಾಗಲು 18 ತಿಂಗಳು ಸಾಕಾಯಿತು. ಎಚ್.ಡಿ. ಕುಮಾರಸ್ವಾಮಿ 18 ತಿಂಗಳಲ್ಲೇ ಮುಖ್ಯಮಂತ್ರಿ ಆದರು ಎಂದು ಕಾಲೆಳೆದರು.
ಎಲ್ಲವನ್ನೂ ಬಿಚ್ಚಿಡಬೇಕಾಗುತ್ತದೆ:
ನಮ್ಮ ಬಗ್ಗೆ ಆರೋಪ ಮಾಡಿದರೆ ಪ್ರಸ್ತುತ ಸರ್ಕಾರದಲ್ಲಿ ಏನಾಗುತ್ತಿದೆ ಎಂಬುದನ್ನು ಬಿಚ್ಚಿಡಬೇಕಾಗುತ್ತದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ನನಗೆ ಆಫರ್ ಕೊಟ್ಟುಕೊಂಡು ಬಂದವರನ್ನು ನಾನು ಓಡಿಸಿದ್ದೆ. ಅವರು ಇದೀಗ ಯಾವ ಹುದ್ದೆಯಲ್ಲಿದ್ದಾರೆ ಎಂಬುದರ ಮೇಲೆ ಎಲ್ಲವೂ ಅರ್ಥವಾಗುತ್ತದೆ ಎಂದು ಹೇಳಿದರು.
ಕುಟುಂಬ ರಾಜಕಾರಣ ಅನಿವಾರ‍್ಯ: ಎಚ್‌ಡಿಕೆ
ಪ್ರಾದೇಶಿಕ ಪಕ್ಷಗಳು ಉಳಿಯಬೇಕಾದರೆ ಕುಟುಂಬ ರಾಜಕಾರಣ ಅನಿವಾರ್ಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಹಲವರು ಕುಟುಂಬ ರಾಜಕಾರಣದ ಬಗ್ಗೆ ಟೀಕೆ ಮಾಡುತ್ತಾರೆ. ದೇಶದ ಸಂವಿಧಾನದ ಮೂಲ ಚೌಕಟ್ಟಿನಲ್ಲೇ ಜನಪ್ರತಿನಿಧಿ ಹೇಗೆ ಆಯ್ಕೆಯಾಗಿ ಬರಬೇಕು ಎಂಬುದಕ್ಕೆ ಅವಕಾಶ ಕಲ್ಪಿಸಲಾಗಿದೆ. ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳು ಆಗಬೇಕು ಎಂಬುದು ಅವರ ಬಯಕೆ ಅಲ್ಲ. ಬದಲಿಗೆ ಅದು ಜನರ ಬಯಕೆ. ಎಲ್ಲ ಪಕ್ಷದಲ್ಲೂ ಕುಟುಂಬ ರಾಜಕಾರಣ ಇದೆ. ಪ್ರಸ್ತುತ ವಿಧಾನಸಭೆಯಲ್ಲಿರುವ ಸದಸ್ಯರನ್ನೇ ತೆಗೆದುಕೊಂಡರೂ ಎಲ್ಲಾ ಪಕ್ಷಗಳಿಂದಲೂ ಕುಟುಂಬದ ಸದಸ್ಯರು ಬಂದಿರುತ್ತಾರೆ. ಆದರೆ ಪ್ರಾದೇಶಿಕ ಪಕ್ಷ ಉಳಿಯಲು ಕುಟುಂಬ ರಾಜಕಾರಣ ಅನಿವಾರ್ಯ. ನೆರೆಯ ಆಂಧ್ರಪ್ರದೇಶ, ತೆಲಂಗಾಣದಲ್ಲೂ ಅದೇ ಸ್ಥಿತಿ ಇದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.